ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಕ್ಷರಿಯ ಲಕ್ಷ ಗಳಿಕೆಯ ಕೃಷಿ

Last Updated 8 ಜೂನ್ 2015, 19:30 IST
ಅಕ್ಷರ ಗಾತ್ರ

ಶಾಲೆ ಮೆಟ್ಟಿಲು ಹತ್ತಿಲ್ಲ. ಓದು ಎನ್ನುವವರಿರಲಿಲ್ಲ. ಸ್ವಂತ ತಿಳಿವಳಿಕೆಯಿಂದ ಶಾಲೆಗೆ ಹೋಗುವಷ್ಟು ಬುದ್ಧಿ ಪಕ್ವವಾಗಿರಲಿಲ್ಲ. ಶಿಕ್ಷಣದಿಂದ ದೂರವೇ ಉಳಿಯಬೇಕಾಯಿತು. ಬಯಲು ಗದ್ದೆಗಳಲ್ಲಿ ದನ ಮೇಯಿಸುವ ಕೆಲಸ ಅನಿವಾರ್ಯವಾಯ್ತು. ಸಮವಯಸ್ಕರು ನೀಟಾಗಿ ಸಮವಸ್ತ್ರ ಧರಿಸಿ ಬ್ಯಾಗನ್ನು ಬೆನ್ನಿಗೇರಿಸಿ ಶಾಲೆಗೆ ಹೊರಟರೆ, ಕೈಗೆ ಸಿಕ್ಕಿದ ಬಟ್ಟೆ ತೊಟ್ಟು ಹೆಗಲಿಗೊಂದು ಟವೆಲ್ ಏರಿಸಿ ಕೈಯಲ್ಲೊಂದು ಕೋಲು ಹಿಡಿದು ದನ ಮೇಯಿಸಲು ಹೋಗಬೇಕಾಗಿತ್ತು. ಶಾಲೆಯಲ್ಲಿ ಪಾಠ ಕಲಿತು ಸಾಯಂಕಾಲ ಮನೆ ಸೇರಿದ ಮಕ್ಕಳೊಂದಿಗೆ ದನ ಕೊಟ್ಟಿಗೆಗೆ ಸೇರಿಸಿ ಆಟಕ್ಕೆ ಜೊತೆಯಾಗುತ್ತಿದ್ದುದನ್ನು ನೆನಪಿಸಿಕೊಂಡು ಕೃಷಿಯಲ್ಲಿನ ಖುಷಿಯನ್ನು ಬಿಚ್ಚಿಟ್ಟರು ರೇವಣಸಿದ್ದಪ್ಪ ಅಣಜೇರ್.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮದ ರೇವಣ ಸಿದ್ದಪ್ಪ ಅಕ್ಷರ ಜ್ಞಾನವಿಲ್ಲದಿದ್ದರೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಕೃಷಿಗಿಳಿಯುವ ಮುನ್ನ
ಹದಿನೆಂಟು ವಯಸ್ಸು ತುಂಬಿದಾಗಿನಿಂದ ಟ್ರಾಕ್ಟರ್ ಚಲಾಯಿಸುವ ಕೆಲಸ ಮಾಡತೊಡಗಿದರು. ಎಂಟು ವರ್ಷ ಡ್ರೈವರ್ ಆಗಿ ಕೆಲಸ ಮಾಡಿದ್ದಾರೆ. ದಿನಕ್ಕೆ ನೂರು ರೂಪಾಯಿ ದುಡಿಮೆ. ಖರ್ಚಿಗೆ ಸಾಲುತ್ತಿರಲಿಲ್ಲ. ಮುಂದಿನ ಜೀವನಕ್ಕಾಗಿ ಕೂಡಿಟ್ಟಿದ್ದು ಏನೂ ಇಲ್ಲ. ಅಂದಿನ ದುಡಿಮೆ ಅಂದಿಗೇ ಸರಿ ಹೋಗುತ್ತಿತ್ತು. ಹೀಗಾದಲ್ಲಿ ಜೀವನ ನಡೆಸುವುದು ಕಷ್ಟ. ಆಕಸ್ಮಿಕ ಅವಘಡಗಳಾದಲ್ಲಿ ನಮಗೆ ಧನ ಸಹಾಯ ಮಾಡುವವರಾರು? ಚಿಂತಿಸತೊಡಗಿದ ರೇವಣಸಿದ್ದಪ್ಪರಿಗೆ ಆತಂಕ ಎದುರಾಯಿತು. ಡ್ರೈವಿಂಗ್ ಕೆಲಸ ತೊರೆದು ಕೃಷಿ ಭೂಮಿಯಲ್ಲಿ ದುಡಿಯಲು ನಿರ್ಧರಿಸಿದರು.

   ವರ್ಷಕ್ಕೆ ಇಂತಿಷ್ಟು ಹಣ ಕೊಡಿ ಎಂದು ಲಾವಣಿ ನೀಡಿದ ಭೂಮಿಯನ್ನು ವಾಪಸ್ಸು ಪಡೆದು ರೈತನಾಗಲು ಹೊರಟರು. ಮಳೆಯಾಶ್ರಯದಲ್ಲಿ ಬೆಳೆ ಬೆಳೆಯುತ್ತೇನೆಂದುಕೊಂಡರೆ ಒಂದು ಬೆಳೆ ಬೆಳೆದು ಬೇರೆಯವರ ಕೂಲಿಗೆ ಹೋಗಬೇಕು. ಹಾಗಾಗಬಾರದು ಎಂದುಕೊಂಡು ಬೋರ್‌ವೆಲ್ ಕೊರೆಯಿಸಲು ನಿರ್ಧರಿಸಿದರು. ಹಣಕಾಸಿನ ತೊಡಕುಂಟಾಯಿತು.  ಎಲ್ಲಿಯೂ ಕಾಸು ಹುಟ್ಟಲಿಲ್ಲ. ಗಟ್ಟಿ ಮನಸ್ಸು ಮಾಡಿ ಅರ್ಧ ಎಕರೆ ಜಮೀನು ಮಾರಿದರು. 70000 ರೂಪಾಯಿ ಹಣ ದೊರೆಯಿತು. ಬಂದ ಹಣ ಬಳಸಿ ಬೋರ್‌ವೆಲ್ ಕೊರೆಸಿದರು. ನೀರು ಧಾರಾಕಾರವಾಗಿ ಉಕ್ಕಿತು. ಬದುಕು ಬದಲಾಯಿತು.

ಕೃಷಿ ಏನಿದೆ?
ಅಲ್ಪಾವಧಿಯಲ್ಲಿ ನಿರಂತರ ಆದಾಯ ತರಬಲ್ಲ ಬೆಳೆ ಬೆಳೆಯಲು ನಿರ್ಧರಿಸಿದರು. ಕೊಕ್ಕನೂರು ಗ್ರಾಮದ ರೈತರೊಬ್ಬರ ಹೊಲಕ್ಕೆ ಭೇಟಿ ನೀಡಿ ವೀಳ್ಯ ಕೃಷಿ ಬಗ್ಗೆ ಮಾಹಿತಿ ಕಲೆ ಹಾಕಿದರು. ಆ ರೈತನಿಂದಲೇ ವೀಳ್ಯದ ಗೆಣ್ಣುಗಳನ್ನು ಖರೀದಿಸಿ ನಾಟಿಗೆ ಅಣಿಯಾದರು. ಆರಂಭದಲ್ಲಿ ಮುಕ್ಕಾಲು ಎಕರೆ ಜಮೀನನ್ನು ವೀಳ್ಯ ಕೃಷಿಗೆ ಪರಿವರ್ತಿಸಿದರು. ಟ್ರಾಕ್ಟರ್ ಸಹಾಯದಿಂದ ಭೂಮಿಯನ್ನು ಆಳವಾಗಿ ಉಳುಮೆ ಮಾಡಿಸಿ ಕಾಂಪೋಸ್ಟ್‌ ಗೊಬ್ಬರ ಸೇರಿಸಿದರು.

ಗಿಡದಿಂದ ಗಿಡ ಹಾಗೂ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರದಲ್ಲಿ ಆಸರೆ ಗಿಡಗಳನ್ನು ಬೆಳೆಸಲು ಗುಣಿ ತೆಗೆಯಿಸಿದರು. ಎರಡು ಚೊಗಚೆ, ಎರಡು ನುಗ್ಗೆ, ಎರಡು ಬೋರಲು ಬೀಜಗಳನ್ನು ಒಂದೊಂ ಗುಣಿಯಲ್ಲಿ ಬಿತ್ತಿ ಮಣ್ಣು ಮುಚ್ಚಿದರು. ಎಂಟು ದಿನಕ್ಕೆ ಮೊಳಕೆ ಬರಲಾರಂಭಿಸಿತು. ಇಪ್ಪತ್ತು ದಿನಕ್ಕೆ ಮೂರು ಅಡಿ ಎತ್ತರ ಬೆಳೆದು ನಿಂತವು. ಈ ಸಮಯದಲ್ಲಿ ವೀಳ್ಯದ ನಾಟಿಗೆ ಸಿದ್ಧತೆ ನಡೆಸಿದರು.

ನಾಟಿಗಾಗಿ ಬಳಸುವ ವೀಳ್ಯದ ಗೆಲ್ಲುಗಳು ಮೂರು ಗೆಣ್ಣುಗಳನ್ನು ಒಳಗೊಂಡಿರುತ್ತದೆ. ಒಂದು ಗುಣಿಗೆ ಮೂರು ಗೆಲ್ಲುಗಳನ್ನು ನಾಟಿ ಮಾಡಿದ್ದಾರೆ. ಭೂಮಿಯ ಒಳಗೆ ಎರಡು ಗೆಣ್ಣು ಹಾಗೂ ಒಂದು ಗೆಣ್ಣು ಭೂಮಿಯ ಮೇಲ್ಭಾಗಕ್ಕೆ ಬರುವಂತೇ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಹದಿನೈದು ದಿನಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿದ್ದಾರೆ. ನಾಟಿ ಮಾಡಿದ ಒಂದು ವರ್ಷದಲ್ಲಿ ಇಳುವರಿ ಆರಂಭವಾಗಿದೆ.

ಆಸರೆ ಗಿಡಗಳಿಗೆ ತಾಗಿಕೊಂಡಂತೆ 1500 ಗುಣಿ ವೀಳ್ಯ ನಾಟಿ ಮಾಡಿದ್ದಾರೆ. ಮೊದಲ ವರ್ಷದಲ್ಲಿ ಒಂದು ಪೆಂಡಿ ಎಲೆ ಮಾರಾಟಕ್ಕೆ ಸಿಕ್ಕಿತ್ತು. (ಒಂದು ಪೆಂಡಿಯಲ್ಲಿ 120 ಕಟ್ಟುಗಳಿರುತ್ತವೆ. ಒಂದು ಕಟ್ಟಿನಲ್ಲಿ 100ಎಲೆಗಳಿರುತ್ತವೆ) 6೦೦೦ ರೂಪಾಯಿ ಆದಾಯ ಕೈಸೇರಿತ್ತು. ಮುಖದಲ್ಲಿ ನಗು ಅರಳಿತ್ತು. ‌

ವೀಳ್ಯವನ್ನು ತಿಂಗಳಿಗೊಮ್ಮೆ ಕಟಾವು ಮಾಡುತ್ತಾರೆ. ತಿಂಗಳ ಆರಂಭದಲ್ಲಿ ಕಟಾವು ಮಾಡತೊಡಗಿದರೆ ಒಂದು ವಾರದವರೆಗೂ ಕಟಾವಿನ ಕೆಲಸ ಮುಂದುವರಿದೇ ಇರುತ್ತದೆ. ಪ್ರತೀ ದಿನ 7-8 ಪಿಂಡಿ ಎಲೆ ಕಟಾವಿಗೆ ಸಿಗುತ್ತದೆ. ಹರಿಹರ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.

ವೀಳ್ಯದಿಂದ ತಿಂಗಳಿಗೆ 45ಸಾವಿರ ರೂಪಾಯಿಯವರೆಗೆ ಆದಾಯ ಸಿಗುತ್ತದೆ. ಕೂಲಿ ಮತ್ತಿತರ ವೆಚ್ಚಗಳನ್ನು ತೆಗೆದರೂ 35 ರೂಪಾಯಿ ಆದಾಯ ಪ್ರತೀ ತಿಂಗಳು ಕೈ ಸೇರುತ್ತದೆ. ವರ್ಷಕ್ಕೊಮ್ಮೆ ವೀಳ್ಯದ ಬಳ್ಳಿ ಇಳಿಸುತ್ತಾರೆ. ಸಿಂಬೆ ಸುತ್ತಿ ಗುಣಿ ತೆಗೆದು ಮಣ್ಣು ಮುಚ್ಚುತ್ತಾರೆ.

ಪುನಃ ಹೊಸ ಚಿಗುರು ಆರಂಭವಾಗಿ ಎಲೆಗಳು ಕೊಯ್ಲಿಗೆ ತಯಾರಾಗುತ್ತದೆ. ಜನವರಿಯಲ್ಲಿ ಬಳ್ಳಿ ಇಳಿಸುವ ಕೆಲಸ ಮಾಡುತ್ತಾರೆ. ಈ ಒಂದು ತಿಂಗಳು ಹೊರತುಪಡಿಸಿ ಉಳಿದ ದಿನ ಕೊಯ್ಲಿಗೆ ಎಲೆ ಸಿಗುತ್ತದೆ.

ಎಲೆ ತೋಟಕ್ಕೆ ವರ್ಷಕ್ಕೊಮ್ಮೆ ಗೊಬ್ಬರ ಹಾಕುತ್ತಾರೆ. ಪ್ರತೀ ವರ್ಷದ ಫೆಬ್ರುವರಿಯಲ್ಲಿ ಹತ್ತು ಲೋಡ್ ಕಾಂಪೋಸ್ಟ್‌ ಗೊಬ್ಬರ, ಎರಡು ಲೋಡ್ ಕುರಿಗೊಬ್ಬರ ಹಾಕುತ್ತಾರೆ. ನಿಯಮಿತವಾಗಿ ನೀರು ಹಾಯಿಸುತ್ತಾರೆ. ವೀಳ್ಯ ಕೃಷಿಯಿಂದ ವಾರ್ಷಿಕ 4ರಿಂದ 4.50 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇವರು ವೀಳ್ಯ ಕೃಷಿ ಆರಂಭಿಸಿ ಎಂಟು ವರ್ಷಗಳಾಗಿವೆ. ನಾಲ್ಕು ವರ್ಷದ ಹಿಂದೆ ಅರ್ಧ ಎಕರೆ ವೀಳ್ಯ ತೋಟದಲ್ಲಿ ಎಂಟು ಅಡಿಗೆ ಒಂದರಂತೆ ಅಡಿಕೆ ಗಿಡ ನಾಟಿ ಮಾಡಿದ್ದರು. ಅದು 8–10 ಕ್ವಿಂಟಾಲ್ ಫಸಲು ಕೊಡುತ್ತಿದೆ.

ಅಂತರ ಬೇಸಾಯ
ಚಿಕ್ಕ ಅವಧಿಯಲ್ಲೂ ಹಣ ಗಳಿಸಿಕೊಡಬಲ್ಲ  ಅಂತರ ಬೇಸಾಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಕಳೆದ ವರ್ಷ ಅಡಿಕೆ ತೋಟದಲ್ಲಿ ತರಕಾರಿ ಕೃಷಿ ಮಾಡಿ ಜೇಬು ತುಂಬಿಸಿಕೊಂಡಿದ್ದರು. ಟೊಮೆಟೊ, ಬದನೆ, ಮೆಣಸು ಗಿಡಗಳು 15-20ಸಾವಿರ ರೂಪಾಯಿ ಆದಾಯ ತಂದುಕೊಟ್ಟಿತ್ತು.

ಮೂರು ವರ್ಷದ ಹಿಂದೆ ಖಾಲಿ ಇರುವ ಮುಕ್ಕಾಲು ಎಕರೆಯಲ್ಲಿ 500 ಅಡಿಕೆ ಗಿಡ ನಾಟಿ ಮಾಡಿದ್ದರು. ಅಂತರ ಬೇಸಾಯವಾಗಿ ಜೋಳ ಕೃಷಿ ಮಾಡಿದ್ದರು. 6-7 ಕ್ವಿಂಟಾಲ್ ಇಳುವರಿ ಕಟಾವಿಗೆ ಸಿಗುತ್ತಿತ್ತು. ಎರಡು ವರ್ಷ ಜೋಳ ಕೃಷಿ ಮಾಡಿದ್ದಾರೆ. ಅಡಿಕೆ ಗಿಡಗಳ ಸಾಲಿನ ನಡುವೆ ಎರಡು ಸಾಲುಗಳಲ್ಲಿ ಬದನೆ ನಾಟಿ ಮಾಡಿದ್ದು, ತಿಂಗಳಲ್ಲಿ 8 ಸಾವಿರ ಆದಾಯ ತಂದುಕೊಟ್ಟಿದೆ.

ತಮ್ಮ ಜಮೀನಿನ ಹೊರತಾಗಿ ಸುಮಾರು ಒಂದೂವರೆ ಎಕರೆ ಜಮೀನನ್ನು ಲಾವಣಿ ಪಡೆದು ಭತ್ತ ಕೃಷಿ ಮಾಡುತ್ತಿದ್ದಾರೆ. ಎರಡು ಬೆಳೆ ಬೆಳೆದು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸಂಪರ್ಕ ಸಂಖ್ಯೆ: 8495086794.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT