ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಔಷಧ `ಪಾಚಿ'

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಬಹುತೇಕ ಮಂದಿ ಕಳೆ ಎಂದು ಭಾವಿಸುವ ಪಾಚಿ, ಮಾನವನ ಜೀವಕ್ಕೆ ಆಧಾರ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ? ಇದು ನಂಬಲು ಕಷ್ಟವಾದರೂ ಸತ್ಯ. ಪಾಚಿಯಲ್ಲಿ 56ಕ್ಕಿಂತ ಹೆಚ್ಚು ಜೀವಸತ್ವಗಳಿವೆ. ಆದ್ದರಿಂದಲೇ ಇದನ್ನು ವಿಜ್ಞಾನಿಗಳು `ಸೂಪರ್ ಫುಡ್' ಎಂದು ಕರೆಯುತ್ತಾರೆ.

ಪ್ರಪಂಚದ ಅತ್ಯಂತ ಹಳೆಯ ಆಹಾರ ಪದ್ಧತಿಯಲ್ಲಿ ಒಂದು ಈ ಪಾಚಿ. 1960ರಲ್ಲಿ ಪಾಚಿಯ ಮೇಲೆ ಫ್ರೆಂಚರು ಸಂಶೋಧನೆಯನ್ನು ಕೈಗೊಂಡು 1969ರಲ್ಲಿ ಪಾಚಿಯನ್ನು ಬೆಳೆಯುವ ಕೇಂದ್ರವನ್ನೂ ತೆರೆದಿದ್ದಾರೆ. ನಂತರದ ದಿನಗಳಲ್ಲಿ ಇಂತಹ ಯೋಜನೆಗಳು ಜಪಾನ್, ಥೈಲೆಂಡ್‌ಗೆ ವ್ಯಾಪಿಸಿ ನಂತರದ ದಿನಗಳಲ್ಲಿ ಭಾರತಕ್ಕೂ ಕಾಲಿಟ್ಟಿದೆ. 1974ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪಾಚಿಯು ಮಾನವ ಜನಾಂಗಕ್ಕೆ ಉತ್ತಮ ಆಹಾರವೆಂದು ಘೋಷಿಸಿದೆ.

ಇದರ ಪ್ರಯೋಜನವನ್ನು ಅರಿತಿರುವ ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ಮಹಾಮನಿ ಮಠವು ಪಾಚಿ ಬೆಳೆಯುವುದಕ್ಕಾಗಿ ಕೇಂದ್ರವೊಂದನ್ನು ಆರಂಭಿಸಿದೆ. ಮಠದ ಸ್ವಾಮಿಜಿಗಳು ರಾಜ್ಯ ಮಾತ್ರವಲ್ಲದೇ ಕೇರಳ, ತಮಿಳುನಾಡು ಹಾಗೂ ಇತರೆಡೆ ಸಂಚಾರ ನಡೆಸಿ ಅನುಭವ ಪಡೆದುಕೊಳ್ಳುವ ಮೂಲಕ ಇದನ್ನು ಸ್ಥಾಪನೆ ಮಾಡಿದ್ದಾರೆ.

ಪಾಚಿಯಿಂದ ಹಲವು ಬಗೆಯ ಮಾತ್ರೆಗಳನ್ನು ಕೂಡ ತಯಾರು ಮಾಡಲಾಗುತ್ತಿದ್ದು, ಇವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೊಂದಿದೆ. ಈ ಮಾತ್ರೆ ನೈಸರ್ಗಿಕ ವಿಧಾನದಿಂದ ತಯಾರು ಮಾಡುವ ಕಾರಣ, ಇದರ ಸೇವನೆಯಿಂದ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಇಲ್ಲ ಎಂಬ ಕಾರಣಕ್ಕೆ ಭಾರಿ ಬೇಡಿಕೆ. ವಿವಿಧ ರೀತಿಯ ಕಾಯಿಲೆಗಳು ಇದರಿಂದ ವಾಸಿಯಾಗುತ್ತವೆ.

ಪಾಚಿ ಬೆಳೆಯುವುದು ಹೇಗೆ?
ದೊಡ್ಡ ದೊಡ್ಡ ಟ್ಯಾಂಕುಗಳಲ್ಲಿ ಮೊದಲು ನೀರನ್ನು ಸಂಗ್ರಹಿಸಬೇಕು. ಆ ನೀರಿಗೆ ಸೋಡಾ, ಯೂರಿಯಾ, ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಸೋಡಿಯಂ ಮತ್ತು ಸಲ್ಫ್ಯೂರಿಕ್ ಆಸಿಡ್ ಬೆರೆಸಿ ಕಲುಕಬೇಕು. 2ರಿಂದ 3 ದಿನಗಳಿಗೆ ಒಮ್ಮೆ ಇದೇ ರೀತಿ ಮಾಡಬೇಕು. ಸುಮಾರು 7ದಿನಗಳ ಅವಧಿಯಲ್ಲಿ ನೀರಿನ ಮೇಲೆ ಪಾಚಿ ಬೆಳೆದಿರುತ್ತದೆ. ನಂತರ ಅದನ್ನು ನೀರಿನಿಂದ ಬೇರ್ಪಡಿಸಿ, ಒಣಗಿಸಿ, ಪೌಡರ್ ಮಾಡಲಾಗುತ್ತದೆ. ನಂತರ ಅದನ್ನು ಮಾತ್ರೆಗಳಿಗೆ ತುಂಬಿ ಮಾರಾಟ ಮಾಡಲಾಗುತ್ತದೆ.

ಪಾಚಿ ಪರಿಸರಕ್ಕೆ ಹೆಚ್ಚು ಆಮ್ಲಜನಕ ಪೂರೈಸುತ್ತದೆ. ಇದೇ ಕಾರಣಕ್ಕೆ ಗಗನಯಾತ್ರಿಗಳು ಮತ್ತು ಸಾಗರ ಯಾತ್ರಿಗಳು ಮುಖ್ಯವಾಗಿ ಇದನ್ನು ಔಷಧಿಯಾಗಿ ಬಳಸುತ್ತಾರೆ. ಪಾಚಿಯನ್ನು ಸೇವನೆ ಮಾಡುವುದರಿಂದ ಹೃದಯ, ಯಕೃತ್, ಮೂತ್ರಪಿಂಡ, ನರಕೋಶ, ಅಂಡಾಶಯ, ಡಿಎನ್‌ಎ ಮತ್ತು ಕಣ್ಣುಗಳ ಮೇಲೆ ಆಗುವ ಹಾನಿಯನ್ನು ತಡೆಗಟ್ಟಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದನ್ನು ಬೆಳೆಯಲು ಹೆಚ್ಚು ಹಣ ಬೇಕಾಗಿಲ್ಲ. ಸ್ವಲ್ಪ ತರಬೇತಿ ಅಗತ್ಯ ಅಷ್ಟೇ. ಇದನ್ನು ಬೆಳೆದರೆ ಕಡಿಮೆ ಬಂಡವಾಳದಿಂದ ಹೆಚ್ಚಿನ ಹಣ ಪಡೆಯಲು ಸಾಧ್ಯ ಎನ್ನುವುದು ಮಠದ ಸ್ವಾಮೀಜಿ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT