ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದನೆಗೆ ‘ಕೊರಕ’ದ ಕಾಟ

Last Updated 9 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬದನೆ ಬೆಳೆಯುವ ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದ ಸರಾಸರಿ ಉತ್ಪಾದನೆ ಕಡಿಮೆ. ಇದಕ್ಕೆ ಪ್ರಮುಖ ಕಾರಣ ರೋಗ ಹಾಗೂ ಕೀಟ ಬಾಧೆ. ಅದರಲ್ಲೂ ಕಾಂಡ ಮತ್ತು ಕಾಯಿ ಕೊರಕ ಹುಳು ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತವೆ.

ಈ ಹುಳುಗಳು 15-20 ದಿನಗಳ ಗಿಡದಿಂದ ಹಿಡಿದು ಕೊನೆಯ ಕಾಯಿ ಕೊಯ್ಲಿಗೆ ಬರುವವರೆಗೂ ಕಾಡುತ್ತದೆ. ವರ್ಷ ಪೂರ್ತಿ ಇದರ ಹಾವಳಿ ಇರುತ್ತದೆ. ಎಲ್ಲ ಋತುಗಳಲ್ಲೂ ಕಾಡುವ ಕಾಂಡ ಮತ್ತು ಕಾಯಿ ಕೊರಕ ಹುಳುವಿನಿಂದಾಗಿ ಪ್ರತಿದಿನ ಚರ್ಚೆಯಲ್ಲಿರುವ ಬದನೆಯಲ್ಲಿ ಕೀಟ ನಿರೋಧಕ ಕುಲಾಂತರಿ ತಳಿಗಳು ನಮ್ಮ ಆಹಾರ ಬೆಳೆಯಲ್ಲಿ ಬೇಕೇ ಬೇಡವೇ ಎಂಬ ಜಿಜ್ಞಾಸೆ ಮೂಡಿಸಿದೆ.

ಬದನೆ ಕಾಂಡ ಮತ್ತು ಕಾಯಿ ಕೊರಕ ಹುಳುಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಗಳಾದ್ಯಂತ ವ್ಯಾಪಕವಾಗಿ ಕಂಡು ಬಂದಿವೆ. ಒಟ್ಟು ಉತ್ಪಾದನೆಯ ಶೇ 20 ರಿಂದ 40 ಸರಾಸರಿ ಬೆಳೆ ನಷ್ಟವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಹುಳುವಿನ ಪರಿಚಯ
ವೈಜ್ಞಾನಿಕವಾಗಿ ಲೂಸಿನೊಡೆಸ್ ಅರ್ಬೊಲಿಸ್ ಎಂದು ಕರೆಯಲಾಗುವ ಕಾಂಡ ಮತ್ತು ಕಾಯಿ ಕೊರಕ ಹುಳುವಿನ  ಪತಂಗಗಳು ಕಂದು ಮತ್ತು ಕೆಂಪು ಚುಕ್ಕೆಗಳಿರುವ ಆಕರ್ಷಕ ಬಿಳಿ-ಹಳದಿ ರೆಕ್ಕೆಗಳನ್ನು ಹೊಂದಿರುತ್ತವೆ. ಇವುಗಳ ಚಲನ-ವಲನ ಮುಂಜಾನೆ ಮತ್ತು ಸಂಜೆಯ ವೇಳೆ ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಹೆಣ್ಣು ಮತ್ತು ಗಂಡು ಪತಂಗಗಳು ಒಂದನ್ನೊಂದು ಆಕರ್ಷಿಸುತ್ತವೆ, ಈ ಮೂಲಕ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ಹೆಣ್ಣು ಪತಂಗ ಗಿಡದ ಮೇಲ್ಭಾಗದ ಎಳೆಯ ಕಾಂಡಗಳ ಮೇಲೆ ಮತ್ತು ಬದನೆ ಕಾಯಿಗಳ ಮೇಲೆ ಒಂದೊಂದಾಗಿ ಮೊಟ್ಟೆಗಳನ್ನು ಇಡುತ್ತವೆ. ಇದು ತನ್ನ ಜೀವಿತಾವಧಿಯಲ್ಲಿ 250 ಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ. 3 ರಿಂದ 5 ದಿನಗಳಲ್ಲಿ ಮರಿಗಳು ಹೊರಬರುತ್ತವೆ.

ಹೊರ ಬಂದ ಚಿಕ್ಕಹುಳು ಸುಮಾರು 2–4 ಮಿ.ಮೀ. ಉದ್ದವಿರುವ ಗುಲಾಬಿ ದೇಹ ಮತ್ತು ಕಡುಗೆಂಪು ಬಣ್ಣದ ತಲೆ ಹೊಂದಿರುತ್ತವೆ. ಹುಳುಗಳು ಬೆಳೆಯುತ್ತಾ ಸುಮಾರು 18 ರಿಂದ 20 ಮಿ.ಮೀ. ಉದ್ದವಾಗಿ ಪ್ರೌಢಾವಸ್ಥೆಯಿಂದ ಕೋಶಾವಸ್ಥೆ (ಪ್ಯೂಪಾ)ಗೆ ಹೋಗುತ್ತದೆ. ತನ್ನ ದೇಹದ ಸುತ್ತ ರೇಷ್ಮೆಯಂತಹ ವಸ್ತುವನ್ನು ಸ್ರವಿಸಿ ಗಟ್ಟಿಯಾದ ಗೂಡನ್ನು ಎಲೆಯ ಹಿಂಭಾಗದಲ್ಲಿ ಕಟ್ಟಿ ಅದರೊಳಗೆ ಕೋಶಾವಸ್ಥೆಗೆ ಹೋಗುತ್ತದೆ. 8 ರಿಂದ 12 ದಿನಗಳ ನಂತರ ಕೋಶಾವಸ್ಥೆಯಿಂದ ಪತಂಗವಾಗಿ ಹೊರ ಬರುತ್ತದೆ. ತನ್ನ ಸಂಪೂರ್ಣ ಜೀವನಚಕ್ರ 4 ರಿಂದ 6 ವಾರಗಳಲ್ಲಿ (ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳನ್ನಾಧರಿಸಿ) ಪೂರೈಸುತ್ತದೆ.

ಹಾನಿಯ ಲಕ್ಷಣಗಳು
ಮೊಟ್ಟೆಯಿಂದ ಹೊರ ಬಂದ ಹುಳಗಳು ತಕ್ಷಣ ಗಿಡದ ಮೇಲ್ಭಾಗದ ಎಳೆಯ ಕಾಂಡ, ಹೂ ಅಥವಾ ಕಾಯಿಗಳನ್ನು ತಮ್ಮ ಮೊನಚಾದ ಹಲ್ಲುಗಳಿಂದ ರಂಧ್ರ ಕೊರೆದು ಒಳ ಸೇರಿದ ನಂತರ ಆ ರಂಧವನ್ನು ತನ್ನ ತ್ಯಾಜ್ಯದಿಂದ ಮುಚ್ಚುತ್ತದೆ. ಕಾಂಡದೊಳಗೆ ಸೇರಿದ ಹುಳು ಒಳಭಾಗ ತಿನ್ನುತ್ತಾ ಕಾಂಡವನ್ನು ಟೊಳ್ಳಾಗಿ ಮಾಡುತ್ತವೆ.  ಟೊಳ್ಳಾದ ಕಾಂಡದಲ್ಲಿ ಹುಳದ ತ್ಯಾಜ್ಯ ತುಂಬಿಕೊಳ್ಳುತ್ತದೆ. ಗಿಡದ ಈ ಭಾಗ ಬಾಡಿ ನಂತರ ಒಣಗಿ ಹೋಗುತ್ತದೆ. ಹೀಗೆ ಹಾನಿಯಾದ ಗಿಡದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಗಿಡದಲ್ಲಿ ಹೂ ಬಿಡುವುದು ಮತ್ತು ಕಾಯಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹೊಸದಾಗಿ ಬೇರೆ ಕಾಂಡ ಬಂದರೂ ಅವುಗಳ ಮೇಲೂ ಕೀಟಗಳು ದಾಳಿಯಿಡುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗೆ ಹೊಸದಾಗಿ ಬೇರೆ ಕಾಂಡ ಬಂದು, ಕಾಯಿ ಕಟ್ಟಿ ಬಲಿಯಲು ಹೆಚ್ಚು ಸಮಯ ಬೇಕಾಗುತ್ತದೆ. ಬೆಳೆಯ ಕೊಯಿಲು ಏರುಪೇರಾಗುತ್ತದೆ. ತಡವಾಗಿ ಕಟ್ಟಿದ ಕಾಯಿಗಳ ಬೆಳವಣಿಗೆ ಒಂದೇ ಸಮನಾಗಿರುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯ ಸಿಗುವುದಿಲ್ಲ.

ಗಿಡದಲ್ಲಿ ಹೂಗಳನ್ನು ಕೊರೆದು ತಿನ್ನುವುದರಿಂದ ಇಂಥ ಹೂಗಳಿಂದ ಕಾಯಿ ಕಟ್ಟುವುದಿಲ್ಲ ಅಥವಾ ಕಾಯಿ ಬಿಟ್ಟ ತಕ್ಷಣ ಅವುಗಳ ಮೇಲೆ ದಾಳಿಮಾಡುವ ಹುಳಗಳು ರಂಧ್ರ ಕೊರೆದು ಒಳ ಸೇರಿ ಕಾಯಿಯ ಒಳಭಾಗ ತಿನ್ನುತ್ತಾ, ಹೆಚ್ಚು ಹೆಚ್ಚು ತ್ಯಾಜ್ಯ ಹೊರಹಾಕುತ್ತದೆ ಮತ್ತು ಹೆಚ್ಚಾದ ತ್ಯಾಜ್ಯ ಕೊರೆದ ರಂಧ್ರದಿಂದ ಹೊರ ಬರುತ್ತದೆ. ಸಂತಾನಾಭಿವೃದ್ಧಿಯನ್ನು ತೀವ್ರಗತಿಯಲ್ಲಿ ನಡೆಸುವ ಹುಳಗಳು, ಅಷ್ಟೇ ವೇಗವಾಗಿ ಕಾಯಿಯಿಂದ ಕಾಯಿಗೆ ಹರಡುತ್ತವೆ. ಈ ಕೀಟ ಬದನೆ ಬೆಳೆಗೆ ಮಾತ್ರ ಸೀಮಿತವಾಗಿದೆ.

ನಿಯಂತ್ರಣ ಹೀಗೆ
ಇಂದಿನ ದಿನಗಳಲ್ಲಿ ಈ ಕೀಟಗಳು ಎಂತಹುದೇ ರಾಸಾಯನಿಕ ಕೀಟನಾಶಕಗಳಿಗೂ ನಿರೋಧಕ ಶಕ್ತಿ ಪಡೆದುಕೊಳ್ಳುತ್ತಿವೆ. ಹೀಗಾಗಿ ರಾಸಾಯನಿಕ ಕೀಟನಾಶಕಗಳನ್ನು ಹೆಚ್ಚು ಬಳಸದೆ ಕೆಳಕಂಡ ಕ್ರಮಗಳನ್ನು ಅನುಸರಿಸಿ ಕೀಟಗಳ ನಿರ್ವಹಣೆ ಮಾಡುವುದು ಒಳಿತು.

*ನೆಟ್‌ಹೌಸ್ ಅಥವಾ ಪಾಲಿ ಹೌಸ್‌ಗಳಲ್ಲಿ ಬದನೆ ಬೆಳೆದರೆ ಈ ಹುಳುವಿನ ಪರಿಣಾಮಕಾರಿ ನಿಯಂತ್ರಣ ಸಾಧ್ಯ.
*ಬದನೆ ಜೊತೆ ಅಂತರ ಬೆಳೆಯಾಗಿ ಕೊತ್ತಂಬರಿ 2:1ರ ಅನುಪಾತದಲ್ಲಿ ಬೆಳೆದರೆ ಈ ಹುಳುವಿನಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಪಡೆಯಬಹುದು.
*ನಾಟಿ ಮಾಡಿದ 20 ದಿನಗಳ ನಂತರ 100 ರಿಂದ 120 ಕೆ.ಜಿ. ಬೇವಿನ ಹಿಂಡಿ ಹಾಕುವುದರಿಂದ ಕೀಟಗಳ ಹಾವಳಿ ಕಡಿಮೆಯಾಗುತ್ತದೆ.
*ಗಿಡದಲ್ಲಿ ಕಾಣಿಸುವ ಹುಳುಕು ಕಾಂಡ, ಹೂವು, ಕಾಯಿಗಳನ್ನು ಕಿತ್ತು ಜೊತೆಗೆ ಕೆಳಗೆ ಬಿದ್ದ ಕಾಯಿಗಳನ್ನು ಸಹ 6–8 ದಿನಗಳಿಗೊಮ್ಮೆ ಆಯ್ದು ನಾಶಪಡಿಸಬೇಕು. 2 ಅಡಿಯಷ್ಟು ಗುಂಡಿಯಲ್ಲಿ ಇದನ್ನು ಮುಚ್ಚಬೇಕು ಇಲ್ಲವೆ ಬೆಂಕಿ ಹಾಕಿ ಸುಡಬೇಕು).
*ಪ್ಲಾಸ್ಟಿಕ್‌ನಿಂದ ತಯಾರಿಸಿದ (ಮಾರುಕಟ್ಟೆಯಲ್ಲಿ ಲಭ್ಯವಿರುವ) ಬಲೆಗಳನ್ನು ಎಕರೆಗೆ 40 ರಂತೆ ಅಳವಡಿಸಿ ನೀರು ತುಂಬಿಸಿ. ಪತಂಗಗಳು ಆಕರ್ಷಿತವಾಗಿ ಈ ಬಲೆಯಲ್ಲಿರುವ ನೀರಿಗೆ ಬಂದು ಬಿದ್ದು ಸಾಯುತ್ತವೆ.
*ಮಾರುಕಟ್ಟೆಯಲ್ಲಿ ಲಭ್ಯವಿರುವ ಗಂಡು ಮೋಹಕ (ಪೆರಮೊನ್ ಟ್ರಾಪ್) ಬಲೆಗಳನ್ನು ಎಕರೆಗೆ 4 ರಿಂದ 6 ಕಡೆ ಅಳವಡಿಸಿದರೆ ಗಂಡು ಪತಂಗಗಳು ಆಕರ್ಷಿತವಾಗಿ ಬಲೆಗೆ ಬಿದ್ದು ಸಾಯುತ್ತವೆ. ಇದರಿಂದ ಸಂತಾನಾಭಿವೃದ್ಧಿಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ. ಲೇಖಕರ ಸಂಪರ್ಕ ಸಂಖ್ಯೆ 9141838367.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT