ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಪೀಡಿಸುವ ಜಿಗಿಹುಳು

Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸುಮಾರು 44 ದಶಲಕ್ಷ ಹೆಕ್ಟೇರ್ ಭೂ ವಿಸ್ತೀರ್ಣದೊಂದಿಗೆ ವಿಶ್ವದಲ್ಲೇ ಪ್ರಥಮ ಸ್ಥಾನ ಮತ್ತು 141.1 ದಶಲಕ್ಷ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಭತ್ತದ ಬೆಳೆ.
ನಮ್ಮ ದೇಶದಲ್ಲಿ ಸಿಗುವ ನೀರಿನ ಸಂಪನ್ಮೂಲದ ಶೇ 50 ರಿಂದ 60 ರಷ್ಟು ನೀರನ್ನು ನಾವು ಬೆಳೆಯುವ ಭತ್ತಕ್ಕೆ ಉಪಯೋಗಿಸುತ್ತಿದ್ದೇವೆ. ಇಷ್ಟು ಸಂಪನ್ಮೂಲದ ಜೊತೆಗೆ ಹೆಚ್ಚು ಪೋಷಕಾಂಶ ಬೇಡುವ ಭತ್ತದ ಬೆಳೆಗೆ ಕಂದು ಜಿಗಿಹುಳು ಒಂದು ದೊಡ್ಡ ಸವಾಲು. ಈ ಕೀಟ ಶೇ 20 ಕ್ಕಿಂತಲೂ ಹೆಚ್ಚು ಬೆಳೆ ನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತಿದೆ.

ಭತ್ತದ ಕಂದು ಜಿಗಿಹುಳು
ಭತ್ತದ ಕಂದು ಜಿಗಿಹುಳುವನ್ನು ವೈಜ್ಞಾನಿಕವಾಗಿ ನೀಲಪರ್ವತ ಲುಗೆನ್ಸ್ (ಬ್ರೌನ್ ಪ್ಲಾಂಟ್ ಹಾಪರ್) ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಭತ್ತ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವ ಅತ್ಯಂತ ಹಾನಿಕಾರಕ ಕೀಟ. ಈ ಕೀಟವು 1960ರಿಂದ ಇಂದಿನವರೆಗೂ ಭತ್ತ ಬೆಳೆಯುವ ರೈತರನ್ನು ಕಾಡುತ್ತಲೇ ಇದೆ. ಬಹುಮುಖ್ಯವಾಗಿ ಏಷ್ಯಾ ಖಂಡದ ಜಪಾನ್, ಕೊರಿಯಾ, ಚೈನಾ ಹಾಗೂ ಭಾರತದಲ್ಲಿ ಇದರ ಹಾವಳಿ ಹೆಚ್ಚು.

ಕೀಟದ ಜೀವನ ಪರಿಚಯ
ಮೊಟ್ಟೆಯೊಡೆದು ಹೊರ ಬಂದ ಚಿಕ್ಕ ಮರಿಹುಳುಗಳು (ನಿಂಪ್ಸ್) 0.6 ಮಿ. ಮೀ. ಉದ್ದವಿದ್ದು, ದೇಹ ಬಿಳಿ ಬಣ್ಣದ್ದಾಗಿರುತ್ತದೆ, ನಂತರ ಬೆಳೆಯುತ್ತ ಸುಮಾರು 15 ರಿಂದ 18 ದಿನಗಳ 5 ಹಂತಗಳಲ್ಲಿ 3 ರಿಂದ 4 ಇಂಚು ಉದ್ದವಾಗಿ ತನ್ನ ಪ್ರೌಢಾವಸ್ಥೆಯಿಂದ ವಯಸ್ಕ ಕೀಟವಾಗುತ್ತದೆ. ವಯಸ್ಕ ಕೀಟ ಕಡು ಹಳದಿ ಅಥವಾ ಕಂದು ಬಣ್ಣದ ಹೊಂದಿದ್ದು, ದೇಹವು 4 ರಿಂದ 5 ಇಂಚು ಉದ್ದವಾಗಿರುತ್ತದೆ. ಈ ವಯಸ್ಕ ಕೀಟಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ ಮತ್ತು 5 ರಿಂದ 7 ದಿನಗಳು ಬದುಕುತ್ತವೆ. ಹೆಣ್ಣು ಕೀಟ ಸುಮಾರು 250 ರಿಂದ 350 ಮೊಟ್ಟೆಗಳನ್ನು ಸಾಲಾಗಿ ಇಟ್ಟು, ಅವುಗಳನ್ನು ತನ್ನ ದೇಹದಿಂದ ಸ್ರವಿಸಿದ ಮೇಣದಂಥ ವಸ್ತುವಿನಿಂದ ಗೋಪುರಾಕಾರದ ಟೊಪ್ಪಿಗೆ ಹಾಕಿ ಮುಚ್ಚುತ್ತದೆ. ಈ ರೀತಿ ಮುಚ್ಚಲಾದ ಮೊಟ್ಟೆಗಳು ಭಕ್ಷಕ ಕೀಟಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆ. ಮೊಟ್ಟೆಯಿಟ್ಟ 6 ರಿಂದ 9 ದಿನಗಳಲ್ಲಿ ಮರಿಹುಳುಗಳು ಮೊಟ್ಟೆಯಿಂದ ಹೊರಬರುತ್ತವೆ.

ಬೆಳೆ ಹಾನಿಯ ಲಕ್ಷಣಗಳು
ಎಲ್ಲಾ ಹಂತದ ಮರಿಹುಳುಗಳು ಹಾಗೂ ವಯಸ್ಕ ಕೀಟಗಳು ಗಿಡದ ಬುಡದಲ್ಲಿ, ಅಂದರೆ ಗದ್ದೆಯಲ್ಲಿ ನೀರುನಿಲ್ಲುವ ಮಟ್ಟದಲ್ಲಿ ಕುಳಿತು ಗಿಡದ ಕಾಂಡದಿಂದ ರಸ ಹೀರಲು ಆರಂಭಿಸುತ್ತವೆ.
ರಸ ಹೀರಿದ ಸ್ಥಳದಲ್ಲಿ ಹಳದಿ ಚುಕ್ಕೆಗಳಾಗುತ್ತವೆ, ಕ್ರಮೇಣ ಅತಿಯಾದ ರಸ ಹೀರುವಿಕೆಯಿಂದ ಗಿಡ ಬೆಳವಣಿಗೆಯಾಗದೆ, ಸಂಪೂರ್ಣ ಬಾಡಿ ಒಣಗಿಹೋಗುತ್ತದೆ. ಕೀಟಗಳು ಗುಂಪಾಗಿ ಗದ್ದೆಯ ಕೆಲ ತಾಣಗಳಲ್ಲಿ ದಾಳಿಮಾಡುತ್ತವೆ, ಈ ರೀತಿಯಾದ ದಾಳಿಯಿಂದ ಒಣಗಿದ ತಾಣಗಳನ್ನು ನಿರ್ಮಿಸುತ್ತವೆ, ಈ ರೀತಿಯ  ಹಾನಿಯ ಲಕ್ಷಣವನ್ನು ‘ಹಾಪರ್ ಬರ್ನ್’ ಎಂದು ಕರೆಯುತ್ತಾರೆ.

ಈ ಕೀಟಗಳು ಮೋಡಕವಿದ ವಾತಾವರಣ, ನೆರಳು, ಬೆಳಕು ಮತ್ತು ಹೆಚ್ಚು ಆರ್ದ್ರತೆ ಇಷ್ಟಪಡುತ್ತವೆ. ಈ ರೀತಿಯ ವಾತಾವರಣವು ಸಂತಾನಾಭಿವೃದ್ಧಿಗೆ ಅತ್ಯಂತ ಹಿತಕರವಾಗಿರುತ್ತದೆ ಮತ್ತು ಹೆಣ್ಣು ಕೀಟಗಳು ಹೆಚ್ಚು ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಕೀಟಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಹಾನಿಯ ಪ್ರಮಾಣ ಹೆಚ್ಚಾಗುತ್ತದೆ. ಕೀಟಗಳು ಇಡೀ ಗದ್ದೆಯಲ್ಲಿ ಹರಡಿ, ಬೆಳೆಯು ಸಂರ್ಪೂಣ ಸೊರಗಿ ಬಾಡಿ ಒಣಗಿಹೋಗುತ್ತದೆ. ಇದರಿಂದಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. 

ಕಳೆದ 10 ವರ್ಷಗಳ ನಮ್ಮ ಅಧ್ಯಯನದ ಪ್ರಕಾರ, ದಾವಣಗೆರೆ, ಹರಿಹರ, ಬಳ್ಳಾರಿ, ಸಿರುಗುಪ್ಪ, ಗಂಗಾವತಿ, ಸಿಂಧನೂರು, ಮಾನ್ವಿ, ಮಸ್ಕಿ, ಲಿಂಗಸೂಗೂರು, ಯಾದಗಿರಿ, ಸುರಪುರ, ಶಹಾಪುರ ತಾಲ್ಲೂಕಿನ ಹಳ್ಳಿಗಳಲ್ಲಿ, ಪ್ರತಿ ವರ್ಷವೂ ಈ ಕಂದು ಜಿಗಿಹುಳು ಕಾಣಸಿಕ್ಕಿವೆ ಮಾತ್ರವಲ್ಲದೆ, ಶೇ 15 ರಿಂದ 30 ರಷ್ಟು ಬೆಳೆ ಹಾನಿ ಮತ್ತು ನಷ್ಟದ ಪ್ರಮಾಣ ದಾಖಲಾಗಿದೆ. ಈ ಪ್ರದೇಶದಲ್ಲಿ, ಭತ್ತದ ಹುಲ್ಲು ಜಾನುವಾರುಗಳಿಗೆ ಪ್ರಮುಖ ಮೇವಿನ ಬೆಳೆ, ಆದರೆ ಈ ಕೀಟಗಳ ಹಾನಿಯಿಂದಾಗಿ ಪಶುಗಳಿಗೆ ಗುಣಮಟ್ಟದ ಮೇವು ಕೂಡ ಸಿಗುವುದಿಲ್ಲ. ಗಂಗಾವತಿ ಭಾಗದಲ್ಲಿ, ಭತ್ತದ ನಾಟಿ ಸುಮಾರು 15 ರಿಂದ 20 ಮುಂಚಿತವಾಗಿ ನಡೆಯುವುದರಿಂದ ಈ ಕೀಟದ ಹಾವಳಿಯಿಂದ ಸ್ವಲ್ಪಮಟ್ಟಿಗೆ ಬೆಳೆ ಹಾನಿಯಿಂದ ಪಾರಾಗುತ್ತದೆ.

ಕೀಟಗಳ ನಿರ್ವಹಣೆ
*ಭತ್ತದ ಕಟಾವಿನ ನಂತರ, ಗದ್ದೆಯ ಬದುವಿನಲ್ಲಿ ಮತ್ತು ನೀರಿನ ಕಾಲುವೆಗುಂಟ ಬೆಳೆದ ಭತ್ತದ ಜಾತಿಯ ಕಳೆ ಅಥವಾ ಹುಲ್ಲನ್ನು ನಾಶಪಡಿಸಬೇಕು. ಏಕೆಂದರೆ, ಕೀಟಗಳು ಭತ್ತದ ಜಾತಿಯ ಕಳೆ ಅಥವಾ ಹುಲ್ಲಿನ ಮೇಲೆ ಬಂದು ಸೇರುತ್ತವೆ ಮತ್ತು ಮುಂದಿನ ಬೆಳೆಯ ನಾಟಿಯ ತನಕ ಪರ್ಯಾಯವಾಗಿ ಜೀವಿಸುತ್ತವೆ.
*ಬೇಸಿಗೆಯಲ್ಲಿ ಗದ್ದೆಯನ್ನು ಒಣಗಲು ಬಿಡಬೇಕು ಮತ್ತು ಆಳವಾಗಿ ಉಳುಮೆ ಮಾಡಬೇಕು (ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ, ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ).
*ಕಂದು ಜಿಗಿಹುಳು ನಿರೋಧಕ ಭತ್ತದ ತಳಿಗಳನ್ನು ಬಿತ್ತನೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ.
*ಗಿಡದಿಂದ ಗಿಡಕ್ಕೆ ಕನಿಷ್ಠ ಒಂದು ಅಡಿ ಅಂತರಕ್ಕೆ ಕಿತ್ತು ಸಾಲಿನಿಂದ ಸಾಲಿಗೆ 1.5 ಅಡಿಗೆ ನಾಟಿ ಮಾಡಬೇಕು.
*ಕೀಟಗಳು ಕಾಣಿಸಿಕೊಂಡ ತಕ್ಷಣ, ಗದ್ದೆಯಲ್ಲಿ ನಿಂತ ನೀರನ್ನು 3 ರಿಂದ 4 ದಿನ ಬಸಿದು ಹಾಕಬೇಕು, ನೀರು ನಿಲ್ಲಬಾರದು.
*ಈ ಕೀಟಗಳು ಎಲೆಯ ಸಂದುಗಳಲ್ಲಿ ಸಾಲಾಗಿ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು.
*ಸಾರಜನಕಯುಕ್ತ (ಯೂರಿಯಾ) ರಸಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಸಾರಜನಕ ಹೆಚ್ಚಾದರೆ, ಭತ್ತದ ಗಿಡಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ.
*ಪ್ರಕಾಶಮಾನವಾದ ಬಲ್ಬ್ (ಲೈಟ್ ಟ್ರಾಫ್) ಗಳನ್ನು ಅಳವಡಿಸಿ, ಕೆಳಗೆ ನೀರಿನ ತೊಟ್ಟಿಯಲ್ಲಿ ಸೀಮೆಎಣ್ಣೆ ಅಥವಾ ಯಾವುದಾದರೂ ಕೀಟನಾಶಕ ಹಾಕಬೇಕು, ರಾತ್ರಿ ವೇಳೆಯಲ್ಲಿ ಕೀಟಗಳು ಬೆಳಕಿಗೆ ಆಕರ್ಷಿತವಾಗುತ್ತವೆ ಮತ್ತು ಕೆಳಗಿರುವ ನೀರಿಗೆ ಬಿದ್ದು ಸಾಯುತ್ತವೆ.
*ಪ್ರಕೃತಿಯಲ್ಲಿ ಸಾಮಾನ್ಯವಾಗಿ ಕೀಟ ಭಕ್ಷಕಕೀಟಗಳು, ಕೀಟ ಭಕ್ಷಕಪಕ್ಷಿಗಳು ಇರುತ್ತವೆ, ಈ ಭಕ್ಷಕಕೀಟಗಳು ಕಂದು ಜಿಗಿಹುಳುವನ್ನು ಉತ್ತಮವಾಗಿ ನಿರ್ವಹಣೆ ಮಾಡಬಲ್ಲವು.
*ಸುಮಾರು 15ಕ್ಕೂ ಹೆಚ್ಚು ಬಗೆಯ ಪರಾವಲಂಬಿ ಕೀಟಗಳು, ಭಕ್ಷಕ ಪಕ್ಷಿಗಳು ಹಾಗೂ 3 ಬಗೆಯ ಜೇಡರ ಹುಳುಗಳು ಈ ಕಂದು ಜಿಗಿಹುಳುವಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ.
ಹೀಗಾಗಿ ಅವುಗಳಿಗೆ ಹಾನಿಯಾಗದ ಹಾಗೆ ಅತ್ಯಂತ ಕಡಿಮೆ ರಾಸಾಯನಿಕಗಳನ್ನು ಬಳಸಿ ಕೀಟಗಳ ನಿರ್ವಹಣೆ ಮಾಡಬೇಕು. ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ.

ನಾವು ನಮ್ಮ ಅಧ್ಯಯನದಲ್ಲಿ, ಬೇವಿನ ಎಣ್ಣೆ, ಹೊಂಗೆ ಎಣ್ಣೆ ಮತ್ತು ಮೀನಿನ ಎಣ್ಣೆಗಳ ಒಂದು ಕರಾರುವಕ್ಕಾದ ಮಿಶ್ರಣ ತಯಾರಿಸಿ, ಕೆಲವಾರು ರಾಸಾಯನಿಕ ಕೀಟನಾಶಕಗಳೊಂದಿಗೆ ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಿ ನೋಡಿದಾಗ, ಅಸಿಫೇಟ್ 0.75 ಗ್ರಾಂ ನೊಂದಿಗೆ 2 ಮಿ.ಲೀ. ಎಣ್ಣೆಗಳ ಮಿಶ್ರಣ ಮತ್ತು ಡೈಕ್ಲೋರೋವಾಸ್ 1 ಮಿ.ಲೀ.ಯೊಂದಿಗೆ 2 ಮಿ.ಲೀ. ಎಣ್ಣೆಗಳ ಮಿಶ್ರಣ ಅತ್ಯುತ್ತಮ ಮತ್ತು ಪರಿಣಾಮಕಾರಿಯಾದ ಕೀಟ ನಿಯಂತ್ರಣ ಕ್ರಮ ಎಂದು ಕಂಡುಬಂದಿದೆ. ಈ ರೀತಿಯ ಮಿಶ್ರಣಕ್ಕೆ ಕಳೆದ ಕೆಲ ವರ್ಷಗಳ ನಮ್ಮ ಅಧ್ಯಯನದಲ್ಲಿ, ಕೀಟಗಳು, ರಾಸಾಯನಿಕ ಕೀಟನಾಶಕಗಳಿಗೆ ಪ್ರತಿರೋಧ (ನಿರೋಧಕತೆ) ತೋರಿದ ಉದಾಹರಣೆ ಕಡಿಮೆಯೆಂದು ಹೇಳಬಹುದು. ಲೇಖಕರ ಸಂಪರ್ಕ ಸಂಖ್ಯೆ 9141838367.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT