ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಹುಳುಗಳ ಮುಕ್ತಿಗೆ ದಾರಿ

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಅತಿ ಪ್ರಮುಖ ಹಣ್ಣು ಮಾವು. ಹಣ್ಣು ಬೆಳೆಯುವ ಒಟ್ಟು ಭೂ ಪ್ರದೇಶದ ಶೇ 35 (3.72 ಮಿಲಿಯನ್ ಹೆಕ್ಟೇರ್) ಭೂ ವಿಸ್ತೀರ್ಣದಲ್ಲಿ ಶೇ 22 (44.04 ಮಿಲಿಯನ್ ಟನ್) ರಷ್ಟು ಉತ್ಪಾದನೆಯೊಂದಿಗೆ ದೇಶದಲ್ಲಿ ಪ್ರಥಮ ಸ್ಥಾನ ಹಾಗೂ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದೆ.

ವಿವಿಧ ಆಕಾರ, ತಹರೇವಾರಿ ಬಣ್ಣ ಹಾಗೂ ರುಚಿಗಳಿರುವ ಆಲ್ಫಾನ್ಸೊ, ದಶೆಹರಿ, ಲಾಂಗ್ರಾ, ತೋತಾಪುರಿ, ಮಲಗೊಬ, ರಸಪುರಿ, ನೀಲಂ ಇತ್ಯಾದಿ ತಳಿಗಳು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿವೆ. ಉತ್ತಮ ಉದ್ಯಮ ಮತ್ತು ಮಾರುಕಟ್ಟೆಯುಳ್ಳ ಮಾವಿಗೆ ಹಣ್ಣು ನೊಣ ಬಹು ದೊಡ್ಡ ಸವಾಲಾಗಿದೆ. ಪೀಚುಕಾಯಿಗಳಿಂದ ಹಿಡಿದು ದೋರಗಾಯಿ ಹಾಗೂ ಹಣ್ಣುಗಳ ಮೇಲೂ ಈ ಹಣ್ಣು ನೊಣ ದಾಳಿ ಮಾಡುತ್ತವೆ.

ಹಣ್ಣು ನೊಣ (ಫ್ರುಟ್‌ ಫ್ಲೈ)ದ ಹುಳುಗಳು ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು ಹಾಗೂ ದೇಶದ್ಯಾಂತ ವ್ಯಾಪಕವಾಗಿ ಕಂಡು ಬಂದಿರುವುದು ವರದಿಯಾಗಿದೆ.

ಮೇಲ್ಕಂಡ ಜಿಲ್ಲೆಗಳ ಹಳ್ಳಿ, ನಗರ ಮತ್ತು ಪಟ್ಟಣಗಳಲ್ಲಿ ಕೈಗೊಂಡ ಸಮೀಕ್ಷೆ ಕಾರ್ಯಕ್ರಮದಲ್ಲಿ, ಪ್ರತಿ ಹಳ್ಳಿಗಳಲ್ಲಿ 100 ಪ್ರತಿಶತ ಮಾವಿನ ತೋಟಗಳಲ್ಲಿ ಈ ಹುಳುಗಳ ಬಾಧೆ ಕಂಡು ಬಂದಿದ್ದು, ಒಟ್ಟು ಉತ್ಪಾದನೆಯ ಸರಾಸರಿ ಶೇ 30ಕ್ಕಿಂತಲೂ ಹೆಚ್ಚು ಬೆಳೆ ನಷ್ಟವಾಗಿರುವುದು ಅಧ್ಯಯನದಿಂದ ತಿಳಿದು ಬಂದಿವೆ. ಈ ಹುಳು ತೀವ್ರಗತಿಯಲ್ಲಿ ಹರಡುತ್ತವೆ. ಅಂದಾಜಿಗಿಂತಲೂ ಇವು ಹೆಚ್ಚು ನಷ್ಟವನ್ನು ಉಂಟುಮಾಡುತ್ತಿವೆ.

ಹಣ್ಣು ನೊಣದ ಪರಿಚಯ
ವೈಜ್ಞಾನಿಕವಾಗಿ ಬ್ಯಾಕ್ಟರೊಸೆರಾ ಡಾರ್ಲಸಾಲಿಸ್ ಎಂದು ಕರೆಯಲಾಗುವ ಈ ನೊಣ, ಮಾವಿನಕಾಯಿ ಒಳಗೆ ತನ್ನ ಚೂಪಾದ ಅಂಡಪ್ರಸವಾಂಗ (ಓವಿಪಾಸಿಟರ್)ದಿಂದ ಚುಚ್ಚಿ ಮೊಟ್ಟೆಗಳನ್ನು ಕಾಯಿಯ ಒಳಗೆ ಇಡುತ್ತದೆ. ಈ ಮೊಟ್ಟೆಗಳು 2 ರಿಂದ 3 ದಿನಗಳಲ್ಲಿ ಮರಿಯಾಗುತ್ತವೆ. ಒಳಗಿನಿಂದಲೇ ಹಣ್ಣು ತಿಂದು ಬೆಳೆಯುತ್ತವೆ.

4–5 ಮಿ.ಮೀ. ಉದ್ದವಿರುವ ಚಿಕ್ಕಹುಳು ಬಿಳಿ ಅಥವಾ ಹಳದಿ ದೇಹ, ತಲೆಯ ಕಪ್ಪು ಅಥವಾ ಕೆಂಪು ಬಣ್ಣದ್ದಾಗಿರುತ್ತದೆ. ಈ ಹುಳು ಬೆಳೆಯುತ್ತಾ ಸುಮಾರು 10 ರಿಂದ 15 ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ (ಪ್ಯೂಪಾ) ಹೋಗಲು ಹಣ್ಣಿನಿಂದ ಹೊರಬಂದು ಮಣ್ಣಿನಲ್ಲಿ ಕೋಶಾವಸ್ಥೆಗೆ ಹೊಗುತ್ತದೆ. 8 ರಿಂದ 12 ದಿನಗಳ ನಂತರ ಕೋಶಾವಸ್ಥೆಯಿಂದ ವಯಸ್ಕ ನೊಣವಾಗಿ ಹೊರಬರುತ್ತದೆ.

ವಯಸ್ಕ ನೊಣದ ಕಂದು ಅಥವಾ ಕಪ್ಪು ದೇಹದ ಮೇಲೆ ತಲೆಯು ಕಂಪು ಬಣ್ಣದಿಂದ ಕೂಡಿದ್ದು, ಪಾರದರ್ಶಕ ಜೋಡಿ ರೆಕ್ಕೆಗಳನ್ನು ಹೊಂದಿರುತ್ತವೆ. ರೆಕ್ಕೆಯ ಹೊರ ಭಾಗದ ಕೊನೆ ಕಪ್ಪು ಪಟ್ಟಿಯಾಕಾರವಾಗಿರುತ್ತದೆ. ವಯಸ್ಕ ನೊಣಗಳು ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ ಮತ್ತು ತನ್ನ ಸಂಪೂರ್ಣ ಜೀವನಚಕ್ರ 25 ರಿಂದ 45 (ವಾತಾವರಣದಲ್ಲಾಗುವ ಬದಲಾವಣೆಗಳನ್ನಾಧರಿಸಿ) ದಿನಗಳಲ್ಲಿ ಮುಗಿಯುತ್ತದೆ.

ಹಾನಿಯ ಲಕ್ಷಣಗಳು
ನೊಣ ಮೊಟ್ಟೆ ಇಡಲು ಚುಚ್ಚಿದ ಸ್ಥಳದಲ್ಲಿ ಚಿಕ್ಕ ರಂಧ್ರವು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಕಾಣುತ್ತದೆ. ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳು (ಲಾರ್ವ) ಗಳು ಹಣ್ಣಿನ ಒಳ ಭಾಗವನ್ನು ತಿನ್ನುತ್ತವೆ. ಈ ತರಹದ ಹಣ್ಣು ಆರಂಭದಲ್ಲಿ ನೋಡಲು ಆಕರ್ಷಕವಾಗಿ ಹಾಗೂ ತಾಜಾತನದಿಂದ ಕೂಡಿರುವಂತೆ ಕಾಣುತ್ತದೆ. ಆದರೆ ಹಣ್ಣು ಬಾಯಿಯಲ್ಲಿಟ್ಟರೆ ಒಗರು ರುಚಿ, ಬಾಯಿಯ ತುಂಬಾ ನೂರಾರು ಚಿಕ್ಕ ಚಿಕ್ಕ ಹುಳುಗಳು ಹರಿದಾಡುತ್ತವೆ. 

ಹುಳು ಬೆಳೆಯುತ್ತ ಒಳಭಾಗ ತಿನ್ನುತ್ತಾ ತನ್ನ ತ್ಯಾಜ್ಯ ಹೊರ ಹಾಕುವುದರಿಂದ ಹಣ್ಣು ಕೊಳೆತು, ಹಣ್ಣಿನ ರಸದೊಂದಿಗೆ ಬೆರೆತು ಹೊರ ಬರಲು ಶುರುವಾಗುತ್ತದೆ ಹಾಗೂ ಕಾಯಿಗಳು ಸೊರಗಿ ಮರದಿಂದ ಕೆಳಗೆ ಬಿದ್ದು ಹೋಗುತ್ತವೆ, ಬಿದ್ದ ಹಣ್ಣುಗಳಿಂದ ಹುಳುಗಳು ಹೊರಬಂದು ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಹಣ್ಣಾದ ಮಾವಿನಲ್ಲಿ ನೊಣ ಮೊಟ್ಟೆ ಇಟ್ಟಾಗ ಹೆಚ್ಚು ಇಳುವರಿ ಇದ್ದರೂ ಮಾರುಕಟ್ಟೆಯಲ್ಲಿ ಮೌಲ್ಯವಿರುವುದಿಲ್ಲ. ಈ ನೊಣಗಳಲ್ಲಿ ಸಂತಾನಾಭಿವೃದ್ಧಿ ಅತೀ ವೇಗವಾಗಿ ನಡೆಯುವುದರಿಂದ ಅಷ್ಟೇ ವೇಗವಾಗಿ ಹಣ್ಣಿನಿಂದ ಹಣ್ಣಿಗೆ ಹರಡಿ ಹೆಚ್ಚು ಹೆಚ್ಚು ನಷ್ಟ ಉಂಟುಮಾಡುತ್ತವೆ.

ಕೀಟಗಳ ನಿರ್ವಹಣೆ
ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ. ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಕೆಳಕಂಡ ಕ್ರಮಗಳನ್ನು ಅನುಸರಿಸಿ ಕೀಟಗಳ ನಿರ್ವಹಣೆ ಮಾಡುವುದು ಒಳಿತು. ರಾಸಾಯನಿಕ ಕೀಟನಾಶಕ ಬಳಸಲೇ ಬೇಕಾದ ಅನಿವಾರ್ಯ ಇದ್ದರೆ, ಸೂಕ್ತ ಕೀಟನಾಶಕವನ್ನು ಸೂಚಿತ ಪ್ರಮಾಣದಷ್ಟು ಮಾತ್ರ ಬಳಸಬೇಕು. ಮರದ ಸುತ್ತ ಆಳವಾಗಿ ಮಣ್ಣನ್ನು ಆಗಾಗ ಅಗೆಯಬೇಕು / ಉಳುಮೆ ಮಾಡಬೇಕು.

ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ, ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ. ಮರದಿಂದ ಕೆಳಗೆ ಬಿದ್ದ ಕಾಯಿ ಅಥವಾ ಹಣ್ಣುಗಳನ್ನು 3–4 ದಿನಗಳಿಗೊಮ್ಮೆ ಆರಿಸಿ ನಾಶ ಪಡಿಸಬೇಕು. ಆಳವಾಗಿ 1.5–2 ಅಡಿಯಷ್ಟು ಗುಂಡಿ ತೆಗೆದು ಒಳಗೆ ಹಾಕಿ ಬಿದ್ದ ಕಾಯಿ/ ಹಣ್ಣುಗಳನ್ನು ಮುಚ್ಚಬೇಕು ಅಥವಾ ಬೆಂಕಿ ಹಾಕಿ ಸಂಪೂರ್ಣವಾಗಿ ಸುಡಬೇಕು.

ಮೋಹಕ  ಬಲೆ: ಖಾಲಿ ಪ್ಲಾಸ್ಟಿಕ್ ಡಬ್ಬಗಳು ಅಥವಾ ಖಾಲಿ ನೀರಿನ ಬಾಟಲಿ ಉಪಯೋಗಿಸಿ, ಅದರ ಮಧ್ಯ ಭಾಗಕ್ಕೆ 3 ರಿಂದ 4 ಸಣ್ಣ ಕಿಟಕಿಗಳನ್ನು ಕೊರೆದು ಹತ್ತಿಯ ಚಿಕ್ಕ ಉಂಡೆ ಮಾಡಿ ಅದಕ್ಕೆ ಮೀಥೇಲ್ ಯುಜೆನಾಲ್ ಹಾಕಿದರೆ ನೀವೇ ತಯಾರಿಸಿದ ಮೋಹಕ ಬಲೆ ಉಪಯೋಗಿಸಲು ಸಿದ್ಧ.

ಎಕರೆಗೆ 6 ರಿಂದ 8 ಮೋಹಕ ಬಲೆಗಳನ್ನು ಕಟ್ಟುವುದರಿಂದ ಹಣ್ಣು ನೊಣಗಳು ಈ ಬಲೆಗೆ ಬಂದು ಬಿದ್ದು ಸಾಯುತ್ತವೆ. ನಮ್ಮ ಪರಿಸರದಲ್ಲಿ ಮಾನವ/ ರೈತ ಸಹಾಯಕ ಪ್ರಾಣಿ, ಪಕ್ಷಿಗಳು, ಪರಾಗಸ್ಪರ್ಶ ಕ್ರಿಯೆ ನಡೆಸುವ ಕೀಟಗಳು, ಕೀಟ ಭಕ್ಷಕ ಕೀಟಗಳು, ಕೀಟ ಭಕ್ಷಕ ಹಕ್ಕಿ, ಪಕ್ಷಿಗಳು ಇರುತ್ತವೆ. ಹೀಗಾಗಿ ಅವುಗಳಿಗೆ ಹಾನಿಯಾಗದ ಹಾಗೆ ಕೀಟನಾಶಕಗಳನ್ನು ಬಳಸಬೇಕು. ಲೇಖಕರ ಸಂಖ್ಯೆ 9141838367.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT