ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದು ಖಾರದ ನೆಲ್ಲಿ ಮೆಣಸಿನ ಕಾಯಿ

Last Updated 15 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

ನಾಗರಹೊಳೆ ಅರಣ್ಯದ ಗಿರಿಜನರು ಜೀವನೋಪಾಯಕ್ಕೆ ಕೊಡಗು ಮತ್ತು ಕೇರಳದ ಭತ್ತದ ಗದ್ದೆ, ಕಾಫಿ, ಏಲಕ್ಕಿ, ಕಾಳು ಮೆಣಸುಗಳ ತೋಟಗಳಲ್ಲಿ ದುಡಿಯಲು ವಲಸೆ ಹೋಗುತ್ತಾರೆ. ಮಾಗಿ ಚಳಿಯ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ತಮ್ಮ ಹಾಡಿಗಳನ್ನು ತೊರೆದು ಮತ್ತೆ ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಹಾಡಿಗಳ ಹಾದಿ ತುಳಿಯುತ್ತಾರೆ. ಹಾಡಿಗಳಿಗೆ ಹಿಂದಿರುಗುವಾಗ ತಮ್ಮ ಜೊತೆಯಲ್ಲಿ ಹತ್ತಾರು ತರಹದ ಗೆಣಸುಗಳ ಗಡ್ಡೆ, ಆಲಂಕಾರಿಕ ಹೂ ಗಿಡಗಳು, ತರಕಾರಿ ಬೀಜ, ಔಷಧಿ ಗಿಡಗಳ ಬೀಜ ಸಂಪತ್ತನ್ನು ತಂದು ತಮ್ಮ ಹಿತ್ತಲುಗಳಲ್ಲಿ ಬೆಳೆಸುವ ಪರಂಪರೆಯನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಹಾದಿಯೊಂದು ಸಹಜವಾಗಿ ರೂಪುಗೊಂಡಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಬೆಸೆಯುವುದು ನಾಗರಹೊಳೆ ಅಥವಾ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನದ ಕಾಡು. ಗಿರಿಜನರು ತಮ್ಮ ದಿನನಿತ್ಯದ ಆಹಾರವಾಗಿ ಬಳಸುತ್ತಿರುವ ಗಡ್ಡೆ-ಗೆಣಸು, ಅಣಬೆ, ಬೆರಕೆ ಸೊಪ್ಪುಗಳ ಮಾಹಿತಿಗಳನ್ನು ಸಂಗ್ರಹಿಸಲು ಕಾಡಿನಲ್ಲಿರುವ ಗಿರಿಜನರ ಜೊತೆ ಕೆಲಸ ಮಾಡುತ್ತಿರುವ ಪೀಪಲ್ ಟ್ರೀ ಸಂಸ್ಥೆ, ಹಾಡಿಗೆ ಹೋದಾಗ ಅವರ ಹಿತ್ತಲಿನಲ್ಲಿ ಪತ್ತೆಯಾಗಿದ್ದ ಅಪರೂಪದ ನೆಲ್ಲಿ ಮೆಣಸಿನಕಾಯಿ ಬೀಜಗಳನ್ನು ಪಡೆದು ಸಂವರ್ಧನೆ ಮಾಡಿ ಸಂಸ್ಥೆ ಕೆಲಸ ಮಾಡುತ್ತಿರುವ ರೈತರುಗಳಿಗೆ ವಿತರಿಸಿ ಸಂರಕ್ಷಣೆ ಮಾಡುತ್ತಿದೆ.

ಸೋಲನೇಸಿ ಕುಟುಂಬಕ್ಕೆ ಸೇರಿರುವ ಮೆಣಸಿನ ಕಾಯಿಗಳಲ್ಲಿ ಕಡುಖಾರದ, ಖಾರವಿಲ್ಲದ , ಸೌಮ್ಯ ಖಾರದ, ಉದ್ದನೆಯ, ಚೋಟುದ್ದದ , ಗುಂಡನೆಯ ವೈವಿಧ್ಯ ತಳಿಗಳಿವೆ. ಗಿರಿಜನರ ಹಾಡಿಯಲ್ಲಿ ಪತ್ತೆಯಾದ ಮೆಣಸಿನಕಾಯಿ ಗುಂಡಗೆ ಕಿರುನೆಲ್ಲಿಕಾಯಿ ಆಕಾರದಲ್ಲಿದ್ದು, ಸೌಮ್ಯ ಖಾರದ ಬಹುವಾರ್ಷಿಕ ತಳಿ. ಗಿಡದ ಪ್ರತಿ ಗಿಣ್ಣು, ಗಿಣ್ಣುಗಳಲ್ಲಿ ಬಿಡಿ ಕಾಯಿಗಳನ್ನು ಬಿಡುತ್ತದೆ. ನೇರವಾಗಿ ಬೀಳುವ ಬಿಸಿಲು ಮತ್ತು ಮರಗಳ ನೆರಳಿಗೆ ಹೊಂದಿಕೊಂಡು ಬೆಳೆಯುತ್ತದೆ. ನವೆಂಬರ್ ಡಿಸೆಂಬರ್ ತಿಂಗಳ ಮಾಗಿ ಚಳಿಯಲ್ಲಿ ಗಿಡದ ತುಂಬೆಲ್ಲಾ ಕಾಯಿಗಳನ್ನು ಬಿಡುತ್ತದೆ.

ಬೆಳೆಸುವ ವಿಧಾನ
ಗಿಡಗಳಲ್ಲಿ ಸಂಪೂರ್ಣವಾಗಿ ಬಲಿತ ಹಣ್ಣುಗಳನ್ನ ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿ ಶೇಖರಣೆ ಮಾಡಿಕೊಳ್ಳಬೇಕು. ಪೂರ್ವ ಮುಂಗಾರಿನ ಏಪ್ರಿಲ್, ಮೇ ತಿಂಗಳ ಭರಣಿ ಮಳೆ ಅಥವಾ ಮೇ ತಿಂಗಳ ಕೃತಿಕಾ, ರೋಹಿಣಿ ಮಳೆಗಳಲ್ಲಿ ಬೀಜಗಳನ್ನು ನೆಲದ ಮೇಲೆ ಅಥವಾ ನೆಲದ ಕುಂಡಗಳಲ್ಲಿ ಬಿತ್ತಿ ಸಸಿ ಮಡಿಗಳನ್ನು ಮಾಡಿಕೊಳ್ಳಬೇಕು. 25 ದಿವಸಗಳ ವಯಸ್ಸಿನ ಸಸಿಗಳು ನಾಟಿ ಮಾಡಲು ಸೂಕ್ತ.

ಭೂಮಿ ಸಿದ್ಧತೆ: ಒಂದೂವರೆಯಿಂದ ಎರಡು ಅಡಿ ಅಗಲದ ಮತ್ತು ಒಂದು ಅಡಿ ಆಳದ ಗುಂಡಿಗಳನ್ನು ತೆಗೆದು ಮಣ್ಣಿನ ಜೊತೆ ಮೂರರಿಂದ ನಾಲ್ಕು ಕೆ.ಜಿಗಳಷ್ಟು ಕೊಟ್ಟಿಗೆ ಗೊಬ್ಬರ ಅಥವಾ ಎರೆ ಗೊಬ್ಬರಕ್ಕೆ ಇನ್ನೂರು ಗ್ರಾಂಗಳಷ್ಟು ಬೇವಿನ ಅಥವಾ ಹೊಂಗೆ ಹಿಂಡಿ ಮಿಶ್ರಣ ಮಾಡಿ ನಾಲ್ಕರಿಂದ ಐದು ದಿವಸ ಮಾಗಲು ಬಿಡಬೇಕು. ಮೆಣಸಿನ ಸಸಿಗಳನ್ನು ಸಂಜೆ ನಾಲ್ಕು ಗಂಟೆಯ ತಂಪು ಸಮಯದಲ್ಲಿ ನೆಡಬೇಕು. ನೇರವಾಗಿ ಬೀಳುವ ಬಿಸಿಲು ಮತ್ತು ಮರಗಿಡಗಳ ನೆರಳಲ್ಲೂ ನಾಟಿ ಮಾಡಬಹುದು.

ಸಸ್ಯ ಸಂರಕ್ಷಣೆ: ಗಿಡಗಳ ಬೆಳವಣಿಗೆ ಹಂತಗಳಿಂದ ಕಾಯಿಗಳನ್ನು ಬಿಡುವ ಹಂತಗಳಲ್ಲಿ ಸಣ್ಣನೆಯ ಬಿಳಿ ನೊಣಗಳು ಎಲೆಗಳ ಕೆಳಭಾಗದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ರಸ ಕುಡಿಯುವುದರಿಂದ ಎಲೆಗಳು ಬಿಳಿಚಿಕೊಂಡು ಗಿಡಗಳ ಬೆಳವಣಿಗೆ ಕುಂಠಿತವಾಗಿ ಕಾಯಿಗಳು ಉದುರುತ್ತವೆ. ಗಿಡಗಳ ತಳಭಾಗ ಮತ್ತು ಮೇಲ್ಭಾಗಕ್ಕೆ ತಿಂಗಳಿಗೆ ಎರಡರಿಂದ ಮೂರು ಸಾರಿ ಒಲೆ ಬೂದಿಯನ್ನು ಎರೆಚಿದರೆ ಸುಲಭವಾಗಿ ಬಿಳಿ ನೊಣಗಳನ್ನು ನಿಯಂತ್ರಿಸಬಹುದು.

ತಿಂಡಿ ತಿನಿಸುಗಳು: ಸೌಮ್ಯ ಖಾರವಿರುವುದರಿಂದ ಬಜ್ಜಿ, ಉಪ್ಪಿನಕಾಯಿ ಮತ್ತು ಮಜ್ಜಿಗೆ ಮೆಣಸಿನಕಾಯಿ ಮಾಡಲು ಹೆಚ್ಚು ಸೂಕ್ತ. ಕಾಡಿನ ಗಿರಿಜನರು ಬೇಯಿಸಿದ ಮರಗೆಣಸಿಗೆ ಒಗ್ಗರಣೆ ಮಾಡಲು ನೆಲ್ಲಿ ಮೆಣಸಿನ ಕಾಯಿಯನ್ನು ಬಳಸುತ್ತಾರೆ. 

ಮನೆಯ ಹಿತ್ತಲು, ಮಹಡಿ ಮೇಲಿನ ಕುಂಡಗಳಲ್ಲಿ ಮತ್ತು ತೋಟದಲ್ಲಿ ಬಹುವಾರ್ಷಿಕವಾಗಿ ನೆಲ್ಲಿ ಮೆಣಸಿನ ಕಾಯಿಗಳನ್ನು ಬೆಳೆಸಲು ಆಸಕ್ತಿ ಇರುವವರು ಮಾದರಿ ಬೀಜಗಳಿಗೆ ಪೀಪಲ್ ಟ್ರೀ ಸಂಸ್ಥೆಯ  ಸಂಪರ್ಕಕ್ಕೆ: 9945219836.

ಜೀವಚೈತನ್ಯ ಕೃಷಿ ಕಾರ್ಯಾಗಾರ
ಜೀವಚೈತನ್ಯ ಕೃಷಿಯ ಬಗ್ಗೆ  ಆಮೂಲಾಗ್ರವಾಗಿ ತಿಳಿಸಿಕೊಡುವ ಮೂರು ದಿನಗಳ ಕಾರ್ಯಾಗಾರವನ್ನು ಇದೇ 23ರಿಂದ 25ರವರೆಗೆ ಮಾಗಡಿ (ಬೆಂಗಳೂರಿನಿಂದ 60ಕಿ.ಮೀ)ಯಲ್ಲಿ ನಡೆಸಿಕೊಡಲಾಗುತ್ತಿದೆ.

ಬೆಂಗಳೂರಿನ ‘ಇಕ್ರಾ’ ಸಾವಯವ ಕೃಷಿ ಸಂಘಟನೆ ಈ ಕಾರ್ಯಾಗಾರ ಏರ್ಪಡಿಸಿದ್ದು ಜೀವಚೈತನ್ಯ ಕೃಷಿಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ತಮಿಳುನಾಡಿನ ಜೈಸನ್ ಜೆ. ಜೆರೋಮ್ ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ಜೀವಚೈತನ್ಯ ಕೃಷಿಯ ಮೂಲ ತತ್ವಗಳು, ಜೀವಚೈತನ್ಯ ಸಿದ್ಧತೆಗಳಾದ ಬಿಡಿ 500, ಬಿಡಿ 501, ಜೀವಚೈತನ್ಯ ಗೊಬ್ಬರ, ಸಿಪಿಪಿ, ಮರಲೇಪ, ದ್ರವಗೊಬ್ಬರ ಇತ್ಯಾದಿಗಳ ಪರಿಚಯ  ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9980074679 ಅಥವಾ (080) 25283370 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT