ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸುಕು ಬದನೆಗೆ ಆಶ್ರಯ

Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ರೈತರ ಹಿತ್ತಲುಗಳಲ್ಲಿ ಕಣ್ಮರೆಯಾಗುತ್ತಿರುವ ಅಪರೂಪದ ತರಕಾರಿ ಬೆಳೆಗಳ ವೈವಿಧ್ಯ ತಳಿಗಳನ್ನು ಪತ್ತೆಮಾಡಿ ಅವುಗಳನ್ನು ಪೋಷಿಸುತ್ತಿರುವ ‘ಪೀಪಲ್ ಟ್ರೀ ಸಂಸ್ಥೆ’ ಈಗ ಮುಸುಕು ಬದನೆ ತಳಿಯೊಂದನ್ನು ಕಂಡುಹಿಡಿದಿದೆ. ರೈತರೊಬ್ಬರ ಮನೆಯಲ್ಲಿ ಸಿಕ್ಕ ಈ ಬದನೆ ತಳಿಯ ಈ ಮುಸುಕು ಬದನೆ ತಳಿ ಕಣ್ಮರೆಯಾಗುತ್ತಿರುವ ತಳಿಗಳ ಪೈಕಿ ಒಂದು. ಮಾರುಕಟ್ಟೆಯಲ್ಲಿ, ಯಾವುದೇ ಕಂಪೆನಿ– ಮಳಿಗೆಗಳಲ್ಲಿ ಸಿಗದ ಈ ತಳಿಯ ಬದನೆಗೆ ಆಶ್ರಯ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ.

ಸೊಲನೇಸಿ ಕುಟುಂಬಕ್ಕೆ ಸೇರಿರುವ ಈ ಬದನೆಯ ವೈಜ್ಞಾನಿಕ ಹೆಸರು ಸೊಲ್ಯಾನಂ ಮೆಲಾಂಜೆನಾ. ಬದನೆಯ ಹತ್ತಾರು ತಳಿಗಳಲ್ಲಿನ ಅಪರೂಪದ ವಿಶಿಷ್ಟ ತಳಿ ಇದು. ಕಾಯಿಯ ತೊಟ್ಟಿನ ಭಾಗ ಎಲೆಗಳಂತೆ ಕಾಣುವ ಐದು ಎಸಳುಗಳು ಮುಚ್ಚಿಕೊಂಡಿರುವುದರಿಂದ ಕಾಯಿ ತಕ್ಷಣಕ್ಕೆ ಗೋಚರವಾಗದೆ ಇರುವುದರಿಂದ ಎಲೆ ಮರೆ ಅಥವಾ ಮುಸುಕು ಬದನೆ ಎಂಬ ಹೆಸರುಗಳಿವೆ.

ಒಂದು ಸಾರಿ ನೆಟ್ಟು ಮುತುವರ್ಜಿಯಿಂದ ಆರೈಕೆ ಮಾಡಿದರೆ ಎರಡು ಮೂರು ವರ್ಷಗಳವರೆಗೆ ಕಾಯಿ ಬಿಡುತ್ತವೆ. ಈ ಬದನೆ ತುಂಬಾ ಮೃದುವಾಗಿರುವುದರಿಂದ ಮೊಳಕೆ ಕಾಳಿನ ಸಾಂಬಾರ್‌ಗೆ ಸೂಕ್ತ. ಬೇರೆ ತಳಿ ಬದನೆ ಗಿಡಗಳನ್ನು ಕಾಡುವ ಸುಳಿ ಕಾಂಡ, ಕಾಯಿ ಕೊರಕ ಕೀಟಗಳು ಮತ್ತು ಸೊರಗು ರೋಗದ ಬಾಧೆಯಿರುವುದಿಲ್ಲ.

ಸಸಿ ಮಡಿ ಆರೈಕೆ: ಏಪ್ರಿಲ್, ಮೇ ತಿಂಗಳಲ್ಲಿ ಬೀಜಗಳನ್ನು ಸಸಿಮಡಿಯಲ್ಲಿ 25 ದಿವಸಗಳ ಕಾಲ ಆರೈಕೆ ಮಾಡಬೇಕು. ಸಸಿ ಮಡಿಗಳನ್ನು ನೆಲದ ಮೇಲೆ ಮತ್ತು ಕುಂಡಗಳಲ್ಲಿ ಬೆಳೆಸಬಹುದು. ಬೀಜಗಳ ಪ್ರಮಾಣ ಕಡಿಮೆ ಇದ್ದಾಗ ಮತ್ತು  ಮಹಡಿ ಕೈ ತೋಟಕ್ಕೆ ಕುಂಡ ಸಸಿ ಮಡಿ ಸೂಕ್ತ. ಸಸಿ ಮಡಿಗಳಿಗೆ ಉತ್ತಮ ಗುಣ ಮಟ್ಟದ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಮಾಡಿ ಬೀಜಗಳನ್ನು ಬಿತ್ತಬೇಕು.

ನಾಟಿ ಮಾಡುವುದು: ಸಸಿ ಮಡಿಗಳಲ್ಲಿ 25 ದಿವಸಗಳ ಕಾಲ ಬೆಳೆಸಿ ಒಂದೂವರೆಯಿಂದ ಎರಡು ಅಡಿ ಅಗಲದ ಮತ್ತು ಒಂದು ಅಡಿ ಆಳದ ಗುಂಡಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಮಾಡಿ ಎರಡು ದಿವಸ ಬಿಟ್ಟು ಸಂಜೆ ನಾಲ್ಕು ಗಂಟೆಯ ತಂಪು ಸಮಯದಲ್ಲಿ ಒಂದು ಗುಂಡಿಗೆ ಮೂರು ಗಿಡಗಳನ್ನು ನೆಡಬೇಕು. ಮಹಡಿ ಕೈ ತೋಟದ ಕುಂಡಗಳಲ್ಲಿ ಬೆಳೆಸುವವರು ಒಂದು ಸಸಿಯನ್ನು ನೆಡಬೇಕು. ತಿಂಗಳಿಗೆ ಎರಡು ಸಾರಿ ಒಂದು ಭಾಗ ಸೆಗಣಿಗೆ ಎರಡು ಭಾಗ ಬೂದಿ ಮಿಶ್ರಣ ಮಾಡಿದ ದ್ರವ ಗೊಬ್ಬರವನ್ನು ಗಿಡಗಳ ಬುಡದ ಸುತ್ತಾ ಸುರಿಯಬೇಕು. ಪಟ್ಟಣಗಳಲ್ಲಿ ಮಹಡಿ ಕೈ ತೋಟ ಮಾಡುವವರು ಎರೆ ಗೊಬ್ಬರ ಕೊಡಬೇಕು.

ಬೀಜ ಸಂವರ್ಧನೆ ಶೇಖರಣೆ: ಗಿಡದಲ್ಲಿ ಕಾಯಿಗಳು ಮಾಗಿ ಹಳದಿ ಬಣ್ಣಕ್ಕೆ ತಿರುಗಿ ಹಣ್ಣುಗಳ ಮೇಲೆ ಬಿರುಕು ಮೂಡಿದಾಗ ಬೀಜಕ್ಕೆ ಸೂಕ್ತ. ಬೀಜಗಳನ್ನು  ಎರಡು ವಿಧಾನಗಳಲ್ಲಿ ಸಂಗ್ರಹಿಸಬಹುದು. ಒಂದನೇಯದು ಮಾಗಿದ ಹಣ್ಣುಗಳನ್ನು ನೀರಿನಲ್ಲಿ ಒಂದು ವಾರ ಕಳಿಸಿ ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿ ಬಿಸಿಲಿನಲ್ಲಿ  ಒಣಗಿಸಿ ಶೇಖರಣೆ ಮಾಡುವುದು. ಎರಡನೆಯದು ಹಣ್ಣನ್ನು ತಿರುಳು ಸಮೇತ ಕತ್ತರಿಸಿ ಬೂದಿ ಲೇಪನ ಮಾಡಿ ಬಿಸಿಲಿನಲ್ಲಿ ಒಣಗಿಸಿ ಶೇಖರಿಸಿಡುವುದು. ಮುಸುಕು ಬದನೆ ಬೆಳೆಸುವ ಆಸಕ್ತರು ಮಾದರಿ ಬೀಜಗಳಿಗೆ ಈ ಕೆಳಕಂಡ ಮೊಬೈಲ್ ನಂಬರನ್ನು ಸಂಪರ್ಕಿಸಬಹುದು. 9945219836.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT