ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರದ `ತೂಗಾಡುವ ತೋಟ'

Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಇದ್ದ ಜಾಗ ಸಂಕುಚನಗೊಳಿಸುತ್ತಿದೆಯೇ, ಉಸಿರುಗಟ್ಟಿಸುತ್ತಿದೆಯೇ? ಸರಿ, ಹಾಗಾದರೆ ಆಕಾಶಕ್ಕೆ ಏಣಿ ಹಾಕಿ, ಮೇಲೆ ಹತ್ತಿ ವಿರಾಮವಾಗಿ ಉಸಿರಾಡಿ..! ಈ ಪರಿಹಾರ ವಿಚಿತ್ರವಾಗಿ ತೋರಿದರೂ ಇಂದಿನ ನಾಜೂಕು ಆಹಾರ ಸರಬರಾಜು ವ್ಯವಸ್ಥೆಗೆ ಇದೇ ಮದ್ದು. ಅಂದ ಹಾಗೇ ಈ ಮದ್ದಿನ ಹೆಸರು `ವರ್ಟಿಕಲ್ ಫಾರ್ಮಿಂಗ್' ಅಥವಾ `ಶೃಂಗ ಬೇಸಾಯ ಪದ್ಧತಿ' ಎಂದು.

ತೀವ್ರಗತಿಯ ನಗರೀಕರಣದ ಫಲವಾಗಿ ದೇಶದುದ್ದುಕ್ಕೂ ಬೇಸಾಯ ಭೂಮಿ ಸಂಕುಚಿತಗೊಳ್ಳುತ್ತಿದ್ದು, ಆ ಜಾಗವನ್ನೆಲ್ಲ ನಗರಗಳು ಅತಿಕ್ರಮಿಸುತ್ತಿವೆ. ಕ್ಷೀಣಿಸುತ್ತಿರುವ ಕೃಷಿಭೂಮಿ, ಕೃಷಿಕರ ಕೊರತೆಯಿಂದಾಗಿ ಆಹಾರ ಸಮಸ್ಯೆ ಒಂದೆಡೆಯಾದರೆ ನಗರವಾಸಿಗಳ ವೃಕೋದರದ ಹಸಿವು ಇನ್ನೊಂದೆಡೆ. ಇದಕ್ಕೆ ಹೊಸ ಪರಿಹಾರವಾಗಿ ಈ ಪದ್ಧತಿ ಇತ್ತೀಚೆಗೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಶೃಂಗ ಬೇಸಾಯ ಪದ್ಧತಿಯಲ್ಲಿ ಸಾಂಪ್ರದಾಯಿಕ ಕೃಷಿಗೆ ಬೇಕಾಗುವಷ್ಟು ಭೂಮಿಯ ಅವಶ್ಯಕತೆಯಿಲ್ಲ, ಕೆಲಸಗಾರರೂ ಕಡಿಮೆ ಸಾಕು. ವರ್ಷಾವಧಿ ಇಳುವರಿ ಪಡೆಯಬಹುದಲ್ಲದೇ, ಒಮ್ಮೆ ಬಂಡವಾಳ ಹೂಡಿದರೆ ಮುಂದೆ ಬಹು ಸಮಯದವರೆಗೆ ಆದಾಯ ಉಂಟು. ಸಾಂಪ್ರದಾಯಿಕ ಪದ್ಧತಿಗಿಂತ ಅಷ್ಟೇ ಜಾಗ, ಅಷ್ಟೇ ಪೋಷಕಾಂಶಗಳಲ್ಲಿ ಐದು ಪಟ್ಟು ಹೆಚ್ಚು ಉತ್ಪನ್ನ ಶೃಂಗ ಬೇಸಾಯದಿಂದ ಸಾಧ್ಯ.

ಇಂಥ ಶೃಂಗ ಬೇಸಾಯದ ಯಶಸ್ವಿ ಯೋಜನೆಯೊಂದು ಸಿಂಗಪುರದಲ್ಲಿ ಸಂಚಲನ ಉಂಟುಮಾಡುತ್ತಿದೆ. ಸಿಂಗಪುರದ ಲಿಮ್ ಚು ಕಾಂಗ್‌ನಲ್ಲಿರುವ `ಸ್ಕೈ ಗ್ರೀನ್ ಫಾರ್ಮ್ಸ', ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವಿಶಿಷ್ಟ ಹೊಲ. ಇದರ ಒಳ ಹೊಕ್ಕರೆ ನಮ್ಮ-ನಿಮ್ಮೂರಿನಂತೆ ಕಣ್ಣುದ್ದ ಹಾಯಿಸುವಷ್ಟು ತರಕಾರಿ ಓಳಿಗಳು ಕಾಣುವುದಿಲ್ಲ, ಬದಲಾಗಿ ಕಣ್ಣೆತ್ತರ ಹಾಯಿಸಿ, ಇಂಗ್ಲಿಷ್ ಭಾಷೆಯ `ಎ' ಆಕಾರದ ಚೌಕಟ್ಟಿನ ಮೇಲೆ ಹರಡಿರುವ ಹಸಿರು ಓಳಿಗಳಿಗೆ `ಹಾಯ್' ಎನ್ನಬೇಕು. `ಹೈಡ್ರೋಪೋನಿಕ್ಸ್' ಅಥವಾ `ಜಲಮಾಧ್ಯಮ' ಪದ್ಧತಿಯಲ್ಲಿ ನೀರಿನಲ್ಲಿ ಕರಗಿದ ಸತ್ವಾಂಶಗಳನ್ನು ಹಾಗೂ ಧಂಡಿಯಾಗಿರುವ ಗಾಳಿ ಬೆಳಕನ್ನು ಹೀರಿ ಬೆಳೆಯುವ `ನ್ಯೂ ಏಜ್' ಸಸ್ಯಗಳು ಇವು.

ಶೃಂಗ ಗೋಪುರ
ಹಸಿರು ಮನೆಗಳ ನಿಯಂತ್ರಿತ ವಾತಾವರಣದಲ್ಲಿ, ಖನಿಜಪೂರಿತ ನೀರನ್ನು ಬಳಸಿ ಗಿಡಗಳನ್ನು ಬೆಳೆಸುವ ತಂತ್ರಜ್ಞಾನ ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಇಂದು ಚಾಲ್ತಿಯಲ್ಲಿದೆಯಾದರೂ, ಬಹುತೇಕ ಕಡೆ ಕೃತಕ ಬೆಳಕೇ ಗಿಡಗಳಿಗೆ ಆಧಾರ.

ಜೊತೆಗೆ ವಿಸ್ತಾರವಾದ ಜಾಗವೂ ಈ ಹಸಿರು ಮನೆಗಳಿಗೆ ಬೇಕು. ಆದರೆ `ಸ್ಕೈ ಗ್ರೀನ್'ನ ವಿಶಿಷ್ಟತೆ ಇರುವುದು ಆ ಗಿಡಗಳಿಗೆ ಆಧಾರವಾಗಿರುವ ಶೃಂಗ ಗೋಪುರಗಳಲ್ಲಿ. `ಎ-ಗೋ-ಗ್ರೋ' (ಎಜಿಜಿ) ಎಂಬ ಹೆಸರಿನ ಈ ಒಂದೊಂದು ಗೋಪುರವೂ ಒಂಬತ್ತು ಮೀಟರ್ ಎತ್ತರವಿದ್ದು, ಗೋಪುರದ ಎರಡೂ ಕಾಲುಗಳ ಮೇಲೆ ಮೆಟ್ಟಿಲು ಓಳಿಗಳಿವೆ. ಮೆಟ್ಟಿಲು ಓಳಿಗಳ ಮೇಲೆ ಪುಟ್ಟ ಪುಟ್ಟ ರಟ್ಟಿನ ತಟ್ಟೆಗಳಲ್ಲಿ ನೆಟ್ಟಿ ಮಾಡಿದ ಸೊಪ್ಪು.

ಈ ಮೆಟ್ಟಿಲು ಓಳಿಗಳನ್ನು ಜಲಾಧಾರಿತ ಗಡಗಡೆಯ ಸಹಾಯದಿಂದ ತಿರುಗಿಸಬಹುದಾಗಿದ್ದು, ಬೆಳೆ ಆಧರಿಸಿ ಪ್ರತಿ 8-10 ಗಂಟೆಗೊಮ್ಮೆ ಓಳಿಗಳು ಒಂದು ಸುತ್ತು ತಿರುಗುತ್ತವೆ. ಹೀಗೆ ಮಾಡುವುದರಿಂದ ಪ್ರತಿ ಓಳಿಗೂ ನಿರ್ದಿಷ್ಟ ಅವಧಿಯವರೆಗೆ ವಿಪುಲವಾಗಿ ಸೂರ್ಯನ ಬೆಳಕು ಲಭ್ಯ. ಅಲ್ಯುಮಿನಿಯಂ ಗೋಪುರದ ಅಡಿಯಲ್ಲಿ ಖನಿಜಪೂರಿತ ನೀರಿನ ಅಗಲ ಕಟ್ಟೆ, ಪ್ರತಿ ಓಳಿ ನೆಲಮಟ್ಟಕ್ಕೆ ಬಂದಾಗಲೂ, ಈ ಕಟ್ಟೆಯೊಳಗೆ ನಿಂತು, ಖನಿಜ ಹಾಗೂ ನೀರನ್ನು ಹೀರಿಯೇ ಮುಂದೆ ಸಾಗುವುದು.

ಪ್ರತಿ ಬೆಳೆಯನ್ನೂ ಬೀಜ ಮಡಿಗಳಲ್ಲಿ 10-15 ದಿನ ಕಳೆದ ನಂತರ, ಮೆಟ್ಟಿಲು ಓಳಿಗಳ ತಟ್ಟೆಗಳಲ್ಲಿ ನೆಡಲಾಗುತ್ತದೆ. ಮುಂದೆ ಮೂರು ವಾರಗಳಲ್ಲಿ ಬೆಳೆ ಕೊಯ್ಲಿಗೆ ಸಿದ್ಧ. 

`ಸ್ಕೈ ಗ್ರೀನ್ ಫಾರ್ಮ್ಸ'ನಲ್ಲಿ ವಿದ್ಯುತ್ ಹಾಗೂ ನೀರು ಎರಡರದ್ದೂ ಬಳಕೆ ಮತ್ತು ಖರ್ಚು ಮಿತವಾಗಿದೆ. 1.7 ಟನ್ ತೂಕದ ಈ ಮೆಟ್ಟಿಲುಗಳ ಚಲನೆಗೆ ಕೇವಲ ಅರ್ಧ ಲೀಟರ್ ನೀರು ಹಾಗೂ 60 ವ್ಯಾಟ್ ವಿದ್ಯುಚ್ಚಕ್ತಿ (ಒಂದು ಬಲ್ಬ್ ಉರಿಯುವಷ್ಟು) ಸಾಕು' ಎನ್ನುತ್ತಾರೆ ಇಲ್ಲಿನ ಉಪ ಪ್ರಧಾನ ವ್ಯವಸ್ಧಾಪಕ ರೋಲ್ಯಾಂಡ್ ವೀ.

ಪ್ರಸ್ತುತ ವಾಣಿಜ್ಯ ಉತ್ಪಾದನೆಯ ಮಟ್ಟದಲ್ಲಿ ಕೇವಲ ವಿವಿಧ ಸೊಪ್ಪುಗಳನ್ನಷ್ಟೇ ಬೆಳೆಯಲಾಗುತ್ತಿದೆಯಾದರೂ, ಪ್ರಯೋಗಾತ್ಮಕವಾಗಿ ಟೊಮೆಟೊ, ಗೆಣಸು, ಬತ್ತ ಇವುಗಳನ್ನು ಯಶಸ್ವಿಯಾಗಿ ಬೆಳೆಯಲಾಗಿದೆ. ಆದರೆ ಹೆಚ್ಚಿನ ಇಳುವರಿ ಹಾಗೂ ಸಮಯ, ಜಾಗ ಅನುಕೂಲತೆ ಸೊಪ್ಪಿನ ಬೇಸಾಯದಲ್ಲಿದೆ ಎನ್ನುತ್ತಾರೆ `ಸ್ಕೈ ಗ್ರೀನ್ ಫಾರ್ಮ್ಸ'ನ ಒಡೆಯ ಜಾಕ್ ಞ. `ಸ್ಥಳೀಯ ಉತ್ಪನ್ನಕ್ಕೆ ಸಿಂಗಪುರದ ಜನರ ಪ್ರತಿಕ್ರಿಯೆ ಅಮೋಘವಾಗಿದೆ' ಎನ್ನುವ ಅವರು `2000 ಗೋಪುರಗಳಲ್ಲಿ ಬೇಸಾಯ ಶುರು ಮಾಡಿದರೆ ದೇಶದ ಶೇ 50ರ ಬೇಡಿಕೆಯನ್ನು ಪೂರೈಸಬಹುದು' ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ. ಮುಂದಿನ ದಿನಗಳಲ್ಲಿ ಸ್ಟ್ರಾಬೆರ‌್ರಿ, ಬಟರ್ ಹೆಡ್ ಲೆಟ್ಯುಸ್ ಅನ್ನು ಕೂಡ ವಾಣಿಜ್ಯ ಮಟ್ಟದಲ್ಲಿ ಬೆಳೆಯುವ ಯೋಜನೆ ಇದೆ.

ಜಾಕ್ ಞ ಅವರೇ ತೋಟದ ಒಟ್ಟಾರೆ ವಿನ್ಯಾಸ ಹಾಗೂ ಎಜಿಜಿ ಗೋಪುರ ನಿರ್ಮಾಣದ ಸೂತ್ರಧಾರರು. ವೃತ್ತಿ ಹಾಗೂ ವಿದ್ಯೆಯಿಂದ ಎಂಜಿನಿಯರ್ ಆಗಿದ್ದ ಇವರು, ಸಮಾಜದ, ಮುಖ್ಯವಾಗಿ ಹಿರಿಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಕಾಲಿಟ್ಟವರು. ಜೊತೆಗೆ ಇಲ್ಲಿನ ಬಹುತೇಕ ನಾಗರಿಕರಂತೆ ಸ್ಧಳೀಯ ಉತ್ಪನ್ನಗಳ ಬಳಕೆ, ಇಂಗಾಲ ಹೆಜ್ಜೆಗುರುತಿನ ಕಡಿತದಂತಹ ಪರಿಸರ ಕಾಳಜಿಗಳಿದ್ದುವು. ಸಿಂಗಪುರದಲ್ಲಿನ ಜಾಗದ ಕೊರತೆ, ವರ್ಷಾವಧಿ ಬಿಸಿಲು-ಮಳೆಯ ಸದುಪಯೋಗ, ವಿದ್ಯುತ್ ಮಿತಬಳಕೆ ಇವುಗಳನ್ನು ಗಮನಲ್ಲಿಟ್ಟುಕೊಂಡು ಅವರು ಹಲವು ಪ್ರಯತ್ನದ ನಂತರ 2009ರಲ್ಲಿ `ಎಜಿಜಿ' ವಿನ್ಯಾಸವನ್ನು ಯಶಸ್ವಿಯಾಗಿ ರೂಪಿಸಿದರು. 
 
`ಸುರಕ್ಷಿತ, ಆರೋಗ್ಯವರ್ಧಕ ಹಾಗೂ ಜವಾಬ್ದಾರಿಯುತ ಆಹಾರದ ಪೂರೈಕೆ ನಮ್ಮ ಉದ್ದೇಶ. ನಾವು ಕೃತಕ ರಾಸಾಯನಿಕ ಅಥವಾ ಪ್ರಚೋದಕಗಳನ್ನು ಬಳಸುತ್ತಿಲ್ಲ. ಆದರೆ ತಂತ್ರಜ್ಞಾನದ ಬಳಕೆ ಮಾಡುತ್ತಿದ್ದೇವೆ' ಎನ್ನುತ್ತಾರೆ ಅವರು. `ಎಜಿಜಿ'ಯ ವಿಶಿಷ್ಟ ವಿನ್ಯಾಸಕ್ಕಾಗಿ 2011ರಲ್ಲಿ ಸಿಂಗಪುರ ಸರ್ಕಾರದ ಮೆರಿಟ್ ಪ್ರಶಸ್ತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT