ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಳಿ ಹುಳಕ್ಕೆ ಸರಳ ಉಪಾಯ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ (ಮಾವು ಪ್ರಥಮ ಸ್ಥಾನ). ಭಾರತದಲ್ಲಿ ವಾರ್ಷಿಕ ಸುಮಾರು 14 ರಿಂದ 15 ಮಿಲಿಯನ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ. ವರ್ಷವಿಡೀ ಲಭ್ಯ ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿರುವುದು ವಿಶೇಷ.

ಈ ವರ್ಷ ಹವಾಮಾನ ವೈಪರೀತ್ಯಗಳಿಂದಾಗಿ ಬಾಳೆ ಬೆಳೆಯಲ್ಲಿ ಎಲೆ ಸುರುಳಿ ಹುಳುಗಳ ಹಾವಳಿ ಹೆಚ್ಚಾಗಿದೆ. ಎರಿನೋಟ ಥ್ರಾಕ್ಸ್ (ಬನಾನ ಸ್ಕಿಪ್ಪರ್) ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಕೀಟಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಕೊಡಗು ಮುಂತಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬಂದಿವೆ. ಈ ಮೊದಲು, ಇದೇ ಪ್ರಾಂತ್ಯದಲ್ಲಿ ತೆಂಗು ಬೆಳೆಯಲ್ಲಿ ಸಹ ಎಲೆ ಸುರುಳಿಹುಳು ಕಾಣಸಿಕ್ಕ ಉದಾಹರಣೆಗಳಿವೆ.

ಮೇಲ್ಕಂಡ ಜಿಲ್ಲೆಗಳ ಹಳ್ಳಿ, ನಗರ ಮತ್ತು ಪಟ್ಟಣಗಳಲ್ಲಿ ಕೈಗೊಂಡ ಸಮೀಕ್ಷೆ (ರೋವಿಂಗ್ ಸರ್ವೇ) ಕಾರ್ಯಕ್ರಮದಲ್ಲಿ, ಪ್ರತಿ ಹಳ್ಳಿಗಳಲ್ಲಿ 100 ಪ್ರತಿ ಶತ ಬಾಳೆ ತೋಟಗಳಲ್ಲಿ ಈ ಎಲೆ ಸುರುಳಿ ಹುಳುಗಳ ಬಾಧೆ ಕಂಡು ಬಂದಿದ್ದು, ಸರಾಸರಿ ಪ್ರತಿಶತ 20 ಕ್ಕಿಂತಲೂ ಹೆಚ್ಚು ಬೆಳೆ ಹಾನಿ ಹಾಗೂ ಬೆಳೆ ನಷ್ಟವಾಗಿರುವುದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ. ನಗರ ಮತ್ತು ಪಟ್ಟಣಗಳ ಮನೆಯ ಕೈತೋಟಗಳಲ್ಲಿರುವ ಒಂದೆರಡು ಗಿಡಗಳಲ್ಲಿಯೂ ಈ ಎಲೆ ಸುರುಳಿಹುಳುಗಳು ಕಂಡು ಬಂದಿವೆ. ಈ ಹುಳು ತೀವ್ರಗತಿಯಲ್ಲಿ ಹರಡುತ್ತಿದ್ದು, ಬೆಳೆ ಹಾನಿ ಹಾಗೂ ಬೆಳೆ ನಷ್ಟ ಇನ್ನು ಹೆಚ್ಚಾಗುವ ಸಂಭವವಿದೆ.

ಬಾಳೆ ಎಲೆ ಸುರುಳಿಹುಳು (ಎರಿನೊಟ ಥ್ರಾಕ್ಸ್)
ಈ ಹುಳು ಎಲೆಯನ್ನು ಸುರುಳಿಯಾಕಾರವಾಗಿ ಸುತ್ತಿ ಸುರುಳಿಯ ಒಳಗೆ ವಾಸಿಸುತ್ತದೆ. ಇದು 2 ರಿಂದ 3 ಇಂಚು ಉದ್ದವಿದ್ದು, ಕಂದು ಅಥವಾ ಹಳದಿ ಬಣ್ಣದ ದೇಹದ ಮೇಲೆ ಬಿಳಿ ಮೇಣದ ಪರದೆಯಿಂದ ಕೂಡಿರುತ್ತದೆ. ತಲೆಯ ಭಾಗ ಕಪ್ಪು ಬಣ್ಣವಾಗಿರುತ್ತದೆ  (ಚಿತ್ರ 1). ಈ ಹುಳು ಬೆಳೆಯುತ್ತಾ ಸುಮಾರು 22 ರಿಂದ 25 ದಿನಗಳಲ್ಲಿ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ (ಪ್ಯೂಪಾ) ಹೋಗುತ್ತದೆ (ಚಿತ್ರ 2). ಕೋಶಾವಸ್ಥೆಯ 6 ರಿಂದ 7 ದಿನಗಳ ನಂತರ ಚಿಟ್ಟೆಯಾಗಿ ಹೊರಬರುತ್ತದೆ.

   ಚಿಟ್ಟೆ (ಚಿತ್ರ 3) ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿದ್ದು, ಮೊದಲ ಜೋಡಿ ರೆಕ್ಕೆಯ ತುದಿ ಹಾಗೂ ಮಧ್ಯಭಾಗದಲ್ಲಿ ಹಳದಿ ಮತ್ತು ಬಿಳಿ ಬಣ್ಣದ ಗುರುತುಗಳಿರುತ್ತವೆ. ತಲೆಯು ಕಪ್ಪು ಬಣ್ಣದಿಂದ ಕೂಡಿದ್ದು, ಎದುರಿನಿಂದ ನೋಡಿದಾಗ ಹೃದಯದಾಕಾರವಾಗಿ ಕಾಣಿಸುತ್ತದೆ. ಹೊರಬಂದ ಚಿಟ್ಟೆಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿ ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುತ್ತವೆ (ಚಿತ್ರ 4). ಎಲೆ ಸುರುಳಿಹುಳದ ಜೀವನಚಕ್ರವನ್ನು ಚಿತ್ರ 5 ರಲ್ಲಿ ಕಾಣಬಹುದು.

ಬೆಳೆ ಹಾನಿಯ ಲಕ್ಷಣಗಳು
ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳುಗಳು (ಕ್ಯಾಟರ್‌ಪಿಲ್ಲರ್/ಲಾರ್ವ) ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ನಂತರ ಹುಳು ಬೆಳೆಯುತ್ತ ಎಲೆಯ ತುದಿಭಾಗವನ್ನು ಕತ್ತರಿಸಿ, ಸುರುಳಿ ಸುತ್ತುತ್ತದೆ. ಒಂದೇ ಎಲೆಯಲ್ಲಿ ಸುಮಾರು 10 ರಿಂದ 20 ಹುಳುಗಳು ಈ ರೀತಿ ಎಲೆಯ ತುದಿಭಾಗವನ್ನು ಕತ್ತರಿಸಿ ಸುರುಳಿ ಸುತ್ತುವುದರಿಂದ, ಬಾಳೆ ಎಲೆ ತನ್ನ ಪೂರ್ಣ ಆಕಾರವನ್ನು ಕಳೆದುಕೊಳ್ಳುತ್ತದೆ (ಚಿತ್ರ 7), ಇದರಿಂದಾಗಿ ಬೆಳೆಯಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆಗೆ ಧಕ್ಕೆಯುಂಟಾಗಿ ಸಸ್ಯದ ಬೆಳವಣಿಗೆಗೆ ಬೇಕಾಗುವ ಆಹಾರ ಉತ್ಪಾದನೆಯಾಗದೆ ಗಿಡದ ಬೆಳವಣಿಗೆ ಸಂಪೂರ್ಣ ಕುಂಠಿತವಾಗುತ್ತದೆ, ಸರಿಯಾಗಿ ಕಾಯಿ ಕಟ್ಟುವುದಿಲ್ಲ, ಕಟ್ಟಿದ ಕಾಯಿಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ ಮತ್ತು ಕಾಯಿಯ ಗಾತ್ರ ಚಿಕ್ಕದಾಗಿರುತ್ತದೆ.

ಇದರಿಂದಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. ಈ ತರಹದ ಬಾಳೆಗೆ ಮಾರುಕಟ್ಟೆಯಲ್ಲಿ ಮೌಲ್ಯವಿರುವುದಿಲ್ಲ. ಬಾಳೆಎಲೆಯು ಬಹು ಉಪಯೋಗಿಯಾಗಿದ್ದು, ಆಹಾರ ಸೇವನೆಗೆ, ದೇವತಾಕಾರ್ಯಗಳಲ್ಲಿ, ತರಕಾರಿ, ಸೊಪ್ಪು, ವೀಳ್ಯದೆಲೆ ಇತ್ಯಾದಿಗಳನ್ನು ಬಹು ದಿನಗಳವರೆಗೆ ಕೆಡದ ಹಾಗೆ ತಾಜಾವಾಗಿಡಲು ಮತ್ತು ದೂರದ ಊರುಗಳಿಗೆ ಸಾಗಿಸಲು ಬಾಳೆಎಲೆಗಳಿಂದ ಕಟ್ಟಿ ಕಳಿಸಲಾಗುತ್ತದೆ. ಆದರೆ, ಈ ಹುಳುಗಳು ಎಲೆಯನ್ನು ಸಂಪೂರ್ಣ ಹಾನಿಮಾಡುವುದರಿಂದ ಗುಣಮಟ್ಟದ ಬಾಳೆಎಲೆಗಳು ಸಿಗುವುದಿಲ್ಲ.

ಕೀಟಗಳ ನಿರ್ವಹಣೆ
ಪ್ರಕೃತಿಯಲ್ಲಿ ಸಾಮಾನ್ಯವಾಗಿ ಕೀಟ ಭಕ್ಷಕ ಕೀಟಗಳು, ಕೀಟ ಭಕ್ಷಕಪಕ್ಷಿಗಳು (ಚಿತ್ರ 6) ಇರುತ್ತವೆ, ಹೀಗಾಗಿ ಅವುಗಳಿಗೆ ಹಾನಿಯಾಗದ ಹಾಗೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಕೀಟಗಳ ನಿರ್ವಹಣೆ ಮಾಡಬೇಕು. ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ.

l ಬೇಸಿಗೆಯಲ್ಲಿ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ, ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ. ಎಲೆಯ ಸುರುಳಿ ಒಳಗೆ ಸಿಗುವ ಹುಳುಗಳನ್ನು ಹಿಡಿದು ನಾಶಪಡಿಸುವುದು.

ಈ ಹುಳುಗಳು ಎಲೆಯ ಕೆಳಭಾಗದಲ್ಲಿ ಗುಂಪಾಗಿ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು.
ಟ್ರೈಕೋಗ್ರಾಮ ಎಂಬ ಪರಾವಲಂಬಿ ದುಂಬಿಗಳು ಟ್ರೈಕೋಕಾರ್ಡ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಎಕರೆಗೆ 1.5 ಸಿ.ಸಿ ಕಾರ್ಡ್‌ಗಳನ್ನು ಗಿಡಗಳಿಗೆ ಕಟ್ಟಬಹುದು. ಟ್ರೈಕೋಗ್ರಾಮ ದುಂಬಿಯು, ಬಾಳೆ ಎಲೆ ಸುರುಳಿ ಹುಳುಗಳ ಮೊಟ್ಟೆಯ ಒಳಗೆ ತನ್ನ ಮೊಟ್ಟೆಯಿಡುತ್ತವೆ ಹಾಗೂ ಟ್ರೈಕೋಗ್ರಾಮ ಮೊಟ್ಟೆಯಿಂದ ಹೊರಬಂದ ಮರಿ ದುಂಬಿ ಹುಳುಗಳು ಎಲೆ ಸುರುಳಿ ಹುಳುಗಳ ಮೊಟ್ಟೆಯನ್ನು ಒಳಗಿನಿಂದಲೇ ತಿಂದು ಬೆಳೆಯುತ್ತವೆ. ಹಾಗಾಗಿ ಬಾಳೆ ಎಲೆ ಸುರುಳಿ ಹುಳುಗಳ ಮೊಟ್ಟೆ ನಾಶವಾಗುತ್ತದೆ ಮತ್ತು ಸ್ವಾಭಾವಿಕವಾಗಿ ಈ ಕೀಟಗಳ ನಿಯಂತ್ರಣವಾಗುತ್ತದೆ.  

ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ 5–10 ಮೀ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ಕ್ವೀನಾಲ್ಫಾಸ್ ಅಥವಾ ಕ್ಲೋರೋಫೈರಿಫಾಸ್ ಅಥವಾ ಡೈಕೋರೋವಾಸ್ ಯಾವುದಾದರೂ ಒಂದನ್ನು 2 ಮೀ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT