ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಬ್ಬ ‘ಕೃಷಿ ತಂತ್ರಜ್ಞಾನಿ’

Last Updated 4 ಮೇ 2015, 19:30 IST
ಅಕ್ಷರ ಗಾತ್ರ

ಇವರು ಕೆ.ವಿ.ಲಕ್ಷ್ಮೀನಾರಾಯಣ ಹೆಗಡೆ. ಶಿವಮೊಗ್ಗ ಜಿಲ್ಲೆ ಸಾಗರದ ಭೀಮನಕೋಣೆ ರಸ್ತೆಯಲ್ಲಿರುವ ‘ಹೆಗಡೆ ಫಾರ್ಮ್’ ಇವರ ಕಾಯಕ ಕ್ಷೇತ್ರ. ಅವರ ಪ್ರಯೋಗಗಳಿಗೆಲ್ಲಾ ಇದೇ ಒಂದು ರೀತಿಯ ಪವಿತ್ರ ಭೂಮಿ. ದಿನದಲ್ಲಿ ಕನಿಷ್ಠ 16 ಗಂಟೆ ಇವರ ಕಾಯಕ.

ಕೆಲ ವರ್ಷಗಳ ಹಿಂದೆ ಇವರ ಹಿಂದೆ ಮುಂದೆ ಕುರಿಯ ಮಂದೆ, ಎಲ್ಲರ ಬಾಯಲ್ಲಿ ‘ಕುರಿ ಕಾಯು ವವ’ ಆಗಿದ್ದವರು. ಆದರೀಗ ಕೃಷಿ ತಂತ್ರಜ್ಞಾನ ಕ್ಷೇತ್ರದ ವಿಶೇಷ ಪ್ರಶಸ್ತಿಗಳಲ್ಲಿ ಒಂದಾಗಿರುವ ‘ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿ’ ಪುರಸ್ಕೃತ ಕೃಷಿಕ!

ಹೆಗಡೆಯವರಿಗೆ ಸುಕೃತ ಪ್ರಶಸ್ತಿ ಸಿಕ್ಕಿದ್ದು ಕೃಷಿ ಶ್ರಮವನ್ನು ಕಡಿಮೆ ಮಾಡುವ ‘ಮೋಟೊ ಕಾರ್ಟ್’ ಎಂಬ ಯಂತ್ರವನ್ನು ತಯಾರಿಸಿದ್ದಕ್ಕೆ. ಈ ಯಂತ್ರಕ್ಕೆ ವಿಶೇಷ ಮಹತ್ವವಿದೆ. ಕೃಷಿ ಕಾರ್ಮಿಕರ ಕೊರತೆ ಯನ್ನು, ಅದರ ಕಷ್ಟಗಳನ್ನು ಅನುಭವಿಸಿರುವ ಲಕ್ಷ್ಮೀನಾರಾಯಣ ಹೆಗಡೆ ಅವರು ಒಂದು ಯಂತ್ರ ಶೋಧಿಸಲು ಮುಂದಾದರು. ಹಗಲು-ರಾತ್ರಿ ಶ್ರಮಿಸಿದರು. ಆರಂಭದಲ್ಲಿ ಒಂದು ‘ಮೋಟೊ ಕಾರ್ಟ್’ಯಂತ್ರ ಸಿದ್ಧವಾಯಿತು. ಅದಕ್ಕೆ ಅವರು ಚೈನಾದ ಗೇರ್‌ಬಾಕ್ಸ್ ಬಳಸಿದ್ದರು.

ಅದೇಕೋ ಅವರಿಗೆ ಒಪ್ಪಿಗೆಯಾಗಲಿಲ್ಲ. ಮತ್ತೆ ಎರಡು ವರ್ಷಗಳ ಶ್ರಮ ಹಾಕಿ ತಮ್ಮದೇ ವಿನ್ಯಾಸದ ಗೇರ್‌ಬಾಕ್ಸ್ ಸಿದ್ಧಪಡಿಸಿಕೊಂಡು ‘ಮೋಟೊ ಕಾರ್ಟ್’  ರೂಪಿಸಿದರು. ಅದಕ್ಕೆ ಪೇಟೆಂಟ್ ಸಹ ಪಡೆದರು. ಇಂತಹ ಯಂತ್ರಗಳನ್ನೇ ರೂಪಿಸಲು ಈಗ ಅವರಿಗೆ ಎಲ್ಲಿಲ್ಲದ ಹುಮ್ಮಸ್ಸು. ಅದಕ್ಕಾಗಿಯೇ ಹೆಗಡೆ ಆಗ್ರೋ ಇಂಪೆಕ್ಸ್ ಕಂಪೆನಿ ಶುರುಮಾಡಿ ಕೊಂಡಿದ್ದಾರೆ.

ಮೋಟೊ ಕಾರ್ಟ್‌ ಉಪಯೋಗ
‘ಮೋಟೊ ಕಾರ್ಟ್’ ಉಪಯೋಗ ಬಹಳಷ್ಟಿದೆ. ಕೋಳಿ ಫಾರಂಗಳಲ್ಲಿ ಮೊಟ್ಟೆಗಳ ರಾಶಿಯೇ ಇರುತ್ತದೆ. ಆ ಮೊಟ್ಟೆಗಳನ್ನೆಲ್ಲಾ ತನ್ನ ಒಡಲೊಳಗೆ ಇಟ್ಟುಕೊಂಡೇ ಈ ‘ಮೋಟೊ ಕಾರ್ಟ್’ ಸಾಗುತ್ತದೆ. ಕಾಫಿ ಹಣ್ಣು, ಅಡಿಕೆ, ನರ್ಸರಿ ಸಸಿಗಳು, ರಬ್ಬರ್ ಶೀಟ್ಸ್, ತೆಂಗು, ಬಾಳೆ...  ಹೀಗೆ ಏನು ಬೇಕೋ ಅವೆಲ್ಲ ಬೆಳೆಗಳನ್ನು ಹೊಲ-ಗದ್ದೆ-ತೋಟಗಳಲ್ಲಿ ಇದರ ಮೂಲಕ ಸಾಗಿಸಬಹುದು.

ಕೈಚಾಲಿತ ಮತ್ತು ಮೋಟಾರ್ ಚಾಲಿತ ಯಂತ್ರವಿದು. ಗಂಟೆಗೆ ಕನಿಷ್ಠ ನಾಲ್ಕು ಕಿ.ಮೀ. ಸಾಗುತ್ತದೆ. ಗರಿಷ್ಠ ಮೂರೂವರೆ ಕ್ವಿಂಟಾಲ್‌ನಷ್ಟು ಭಾರ ಹೊರುವ ‘ಮೋಟೊ ಕಾರ್ಟ್’  ಯಂತ್ರವನ್ನು ಕೈಯಿಂದಲೇ ಅತ್ತಿತ್ತ ಎತ್ತಿಡಬಹುದು. ಈ ಯಂತ್ರವನ್ನು ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತಲೇ ಬಂದಿದ್ದಾರೆ.

ಯಂತ್ರ ಸಂಶೋಧನೆ ನಡುವೆ ಕೃಷಿಯಲ್ಲಿಯೂ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಇವರು. ನಾಟಿ ಕೋಳಿ ಸಾಕುತ್ತಿದ್ದಾರೆ. ಅಡಿಕೆ ಸಸಿಗಳ ನರ್ಸರಿ ಮಾಡುತ್ತಿದ್ದಾರೆ. ತೋಟಗಾರಿಕಾ ಇಲಾಖೆಯ ಸಹಾಯ ಪಡೆದು ಗ್ರೀನ್ ಹೌಸ್ ನಿರ್ಮಿಸಿಕೊಂಡಿದ್ದಾರೆ. ಇವರು ತಯಾರಿಸುವ ಜೈವಿಕ ಗೊಬ್ಬರಕ್ಕೆ ಗೋಮೂತ್ರವೇ ಮೂಲ. ಹಾಗಾಗಿ ಇವರ ಫಾರಂನ ಜೈವಿಕ ಗೊಬ್ಬರಕ್ಕೆ ಬೇಡಿಕೆ ಹೆಚ್ಚು.

ಜಾನುವಾರುಗಳಿಗೆ ವೈವಿಧ್ಯಮಯ ಹುಲ್ಲಿನ ತಳಿ ಬೆಳೆಸಿದ್ದಾರೆ. ಸಾವಿರಕ್ಕೂ ಹೆಚ್ಚಿನ ಮಾವಿನ ಮರಗಳಿಗೆ ಈಗ ಫಲಕಾಲ. ಹಣ್ಣು-ಹಂಪಲು, ವೈವಿಧ್ಯಮಯ ಹೂಗಳನ್ನು ನೋಡಬೇಕೆಂದರೆ ನೋಡುಗರಿಗೆ ಇಲ್ಲಿ ಹಬ್ಬ.

ಸುಮಾರು 35 ವರ್ಷಗಳಿಂದ ಅಡಿಕೆ ಹಾಳೆಗಳ ತಯಾರಿಕೆಯಲ್ಲಿದ್ದಾರೆ. ಅದಕ್ಕಾಗಿ 1981ರಲ್ಲಿಯೇ ಉದ್ಯಮ ಆರಂಭಿಸಿ ಸಂಶೋಧನೆ ಕೈಗೊಂಡಿದ್ದಾರೆ.

ಹಸಿರು ಹೊನ್ನು
ತಮ್ಮ ಸಂಶೋಧನೆ ಮತ್ತು ಕೃಷಿಯಲ್ಲಿಯೇ ಮುಳುಗಿ ಬೀಳದೇ ಸಾಮಾಜಿಕ ಕೆಲಸಗಳಲ್ಲೂ ಇವರದು ಹೆಜ್ಜೆಗುರುತುಗಳಿವೆ. 1996ರಲ್ಲಿ ಮೂರು ದಿನಗಳ ಕಾಲ ‘ಹಸಿರು ಹೊನ್ನು’ ಎಂಬ ಸಾರ್ವಜನಿಕ ಪ್ರದರ್ಶನವನ್ನು ಹಬ್ಬದಂತೆ ಆಚರಿಸಿದರು. ಅಲ್ಲಿ ಕೃಷಿಗೆ ಸಂಬಂಧಿಸಿದ ಅತಿ ಅಪರೂಪದ ವಸ್ತುಗಳ ಪ್ರದರ್ಶನ ನಡೆಯಿತು. ಈ ಪ್ರದರ್ಶನ ನೋಡಲೆಂದು ಬಂದವರು 50ಸಾವಿರಕ್ಕೂ ಅಧಿಕ ಮಂದಿ. ಇಂಥ ಮತ್ತೊಂದು ಹಸಿರು ಹೊನ್ನು ವಸ್ತು ಪ್ರದರ್ಶನವನ್ನು ಅವರು ಹಮ್ಮಿಕೊಂಡಿದ್ದು 2001ರಲ್ಲಿ.

ಆಗ ಅಲ್ಲಿಗೆ ಬಂದ ನೋಡುಗರು ಸುಮಾರು ಒಂದು ಲಕ್ಷ ಜನ. ಕೃಷಿಗೆ ಸಂಬಂಧಿಸಿದಂತೆ ವಿವಿಧೆಡೆ ನಡೆಯುವ ವಿಚಾರ ಸಂಕಿರಣಗಳಿಗೆ ಇವರಿಗೆ ಆಹ್ವಾನ ಇದ್ದೇ ಇರುತ್ತದೆ.

2007ರಲ್ಲಿ ಇವರು ಮಾವಿಗೆ ಸಂಬಂಧಿಸಿದಂತೆ ‘ಮಿಡಿಮಾವು’ ಹೆಸರಿನಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದರು.  500ಕ್ಕಿಂತ ಹೆಚ್ಚಿನ ಮಿಡಿ-ಮಾವುಗಳನ್ನು ಇಲ್ಲಿ ಜನ ನೋಡುವಂತಾಯಿತು. ಹಾಗೆಯೇ, ಕೃಷಿ ಪರಿಕರಗಳ ವಸ್ತುಪ್ರದರ್ಶನ ಕೂಡ ಹೆಗಡೆ ಫಾರ್ಮ್‌ನಲ್ಲಿ ನಡೆದಿದೆ. ‌

ಸಾಧನೆಗೆ ಸಂದ ಗೌರವ
ಲಕ್ಷ್ಮೀನಾರಾಯಣ ಅವರಿಗೆ 1997ರಲ್ಲಿ ‘ಪ್ಲಾಸ್ಟ್ ಇಂಡಿಯಾ’ ಪ್ರಶಸ್ತಿ, 2000ರಲ್ಲಿ ‘ಅಳಸಿಂಗ’ ಪ್ರಶಸ್ತಿ, 2001ರಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿ ಲಭಿಸಿವೆ. ಈ ಬಾರಿಯ ‘ಸುಕೃತ’ ಪ್ರಶಸ್ತಿ ಪಡೆದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ.

ಆತ್ಮಹತ್ಯೆಯ ದಾರಿಯಲ್ಲಿರುವ ಕೃಷಿಕರು ಇವರನ್ನೊಮ್ಮೆ ಕಂಡು ಮಾತನಾಡಿಸಿದರೆ ಯಶಸ್ಸಿನ ದಾರಿಯತ್ತ ತೆರಳಲು ಖಂಡಿತ ಅನುಕೂಲ ಆದೀತು. ಸಂಪರ್ಕಕ್ಕೆ ೯೬೩೨೨ ೨೬೪೦೪, (೦೮೧೮೩)-೨೨೯೩೬೩.

ಅಕ್ಷರದ ಬೆನ್ನೇರಿ...
ಕಡುಬಡತನದಲ್ಲಿ ಹುಟ್ಟಿರುವ ಲಕ್ಷ್ಮೀನಾರಾಯಣ ಹೆಗಡೆ ಅವರಿಗೆ ಅಪ್ಪನಿಂದ ಬಳುವಳಿಯಾಗಿ ಬಂದಿದ್ದು ಕುರಿ ಕಾಯುವ ಕೆಲಸ. ಆದರೆ ಕಣ್ಣಮುಂದೆ ಅಕ್ಷರ ಕಲಿಯುವ ದಾಹವಿತ್ತು. ಆದರೆ ಶಾಲೆಗೆ ಹೋಗಲು ಬಡತನದ ಅಡ್ಡಿ. ಯಾರ್‍ಯಾರಿಂದ ಸಾಧ್ಯವೋ ಅವರಿಂದೆಲ್ಲಾ ಅಕ್ಷರ ದಾನ ಪಡೆದರು. ಶಾಲೆ ಮುಂದೆ ನಿಂತು ಶಾಲೆಯಿಂದ ಹೊರಬರುತ್ತಿದ್ದ ಹುಡುಗರಿಂದ ಪಾಠ ಹೇಳಿಸಿಕೊಂಡ ಉದಾಹರಣೆಗಳೂ ಇವೆ. ಹೀಗೆ ಮುಂದುವರಿದ ಅವರ ಅಕ್ಷರ ಜ್ಞಾನ ಮೈಸೂರು ವಿಶ್ವವಿದ್ಯಾಲಯದಲ್ಲಿ ಜೀವ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆಯುವವರೆಗೆ ಮುಂದುವರಿಯಿತು. ಪದವಿ ಪಡೆದ ನಂತರ ಪುನಃ ಸಾಗರದತ್ತ ಮುಖಮಾಡಿದರು. ಕೃಷಿಯಲ್ಲಿ ತೊಡಗಿಸಿಕೊಂಡು ಬಂದ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟುತ್ತಾ ಒಂದರ ಮೇಲೊಂದು ಸಾಧನೆ ಮಾಡುತ್ತಲೇ ಸಾಗಿದರು, ಈ ನಿಟ್ಟಿನಲ್ಲಿ ಅವರ ಪ್ರಯೋಗಗಳು ಸಾಗುತ್ತಲೇ ಇದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT