ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಿಕೇಳ ಗಣಪ

Last Updated 27 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಒಬ್ಬರು ಒಣಗಿದ ತೆಂಗಿನ ಕಾಯಿ ಮೇಲೆ (ಸಿಪ್ಪೆ ಸಹಿತ) ಸ್ಕೆಚ್‌ ಪೆನ್‌ನಿಂದ ಸುಂದರವಾದ ಚಿತ್ರವೊಂದನ್ನು ಬಿಡಿಸಿದರು. ಮತ್ತೊಬ್ಬರು ಬಿಡಿಸಿದ ಚಿತ್ರದ ಗೆರೆಯ ಮೇಲೆ ಚಾಕುವಿನಿಂದ ಕತ್ತರಿಸಿದರು. ಕತ್ತರಿಸಿದ ಭಾಗದಿಂದ, ಸಿಪ್ಪೆ, ನಾರು ತೆಗೆಯುತ್ತಿದ್ದಂತೆ ಆ ಭಾಗದಲ್ಲಿ ಗಣೇಶನ ಆಕಾರದ ಚಿತ್ರ ಕಾಣಿಸಿತು. ‘ಇದೇ ನೋಡಿ’ ನಾರಿಕೇಳ ಗಣಪ’ ಎಂದರು’ ಚಿತ್ರ ಬಿಡಿಸುತ್ತಿದ್ದವರು‌ !

ಧಾರವಾಡದ ಶಾಂತಾ ಘಡ್ಕರ್ ತೆಂಗಿನ ಕಾಯಿಯಲ್ಲಿ ಗಣಪನನ್ನು ಚಿತ್ರಿಸುವ ಪರಿ ಇದು. ರೇಖಾಚಿತ್ರ ಬಿಡಿಸುವಲ್ಲಿ ಪರಿಣತರಾಗಿರುವ ಪುತ್ರಿ ಚೈತ್ರಾ ಫಡ್ಕರ್, ತೆಂಗಿನ ಕಾಯಿ ಮೇಲೆ ಗಣೇಶನ ಚಿತ್ರ ಬರೆದರೆ, ಇವರು ‘ಗಣೇಶ’ನನ್ನು ಅರಳಿಸುತ್ತಾರೆ. ನಂತರ, ಒಂದಷ್ಟು ಅಲಂಕಾರದ ಮೂಲಕ ಚಿತ್ರಕ್ಕೆ ಮತ್ತಷ್ಟು ಜೀವ ತುಂಬುತ್ತಾರೆ. ಆ ಕಲಾಕೃತಿಗೆ ‘ನಾರಿಕೇಳ ಗಣಪ’ ಎಂದು ಹೆಸರಿಟ್ಟಿದ್ದಾರೆ. ಅದೇ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆ ಮಾಡುತ್ತಿದ್ದಾರೆ.

ತರಬೇತಿ ಮತ್ತು ಸ್ವ ಉದ್ಯೋಗ
ಶಾಂತಾ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ (ಎಸ್‌ಕೆಆರ್‌ಡಿಪಿ) ಸೇರುವ ಶ್ರೀಸಾಯಿ ಸ್ವಸಹಾಯ ಸಂಘದ ಸದಸ್ಯೆ. ಒಮ್ಮೆ ಸಂಸ್ಥೆಯವರು ಕರಕುಶಲ ಕಲೆ ಕಲಿಕಾ ಶಿಬಿರ ಆಯೋಜಿಸಿದ್ದರು. ಕಲೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇದ್ದ ಶಾಂತಾ, ಶಿಬಿರ ಸೇರಿದರು. ಕಲಾವಿದ ಜಗದೀಶ್ ಬಡಿಗೇರ್, ಶಿಬಿರದಲ್ಲಿ ತೆಂಗಿನ ಕಾಯಿಯ ಮೇಲೆ ಚಿತ್ರಗಳನ್ನು ಕೆತ್ತುವ ಕುರಿತು ತರಬೇತಿ ನೀಡಿದರು. ಅಂದು ಅಲ್ಲಿ ಹವ್ಯಾಸಕ್ಕಾಗಿ ಕಲಿತ ಕಲೆ, ಸ್ವ ಉದ್ಯೋಗಕ್ಕೆ ದಾರಿ ಮಾಡಿಕೊಳ್ಳಲು ಉತ್ತೇಜಿಸಿತು. ಮೊದಲ ಪ್ರಯತ್ನವಾಗಿ, ಮನೆ ಬಳಕೆಗಾಗಿ ತಂದ ಕಾಯಿಯನ್ನೇ ವಿವಿಧ ಕೋನಗಳಲ್ಲಿ ಸೂಕ್ಷ್ಮವಾಗಿ ಕತ್ತರಿಸುತ್ತಾ, ಗಣಪತಿ ಸೇರಿದಂತೆ ಬೇರೆ ಬೇರೆ ಚಿತ್ರಗಳನ್ನು ಕೆತ್ತಿದರು. ಅದೇ ಉತ್ಸಾಹದಲ್ಲೇ ಗಣೇಶ ಮೂರ್ತಿ ಕೆತ್ತುವುದನ್ನೂ ಕಲಿತರು.

‘ಈ ಕಲೆ ನನಗಷ್ಟೇ ಸಿಕ್ಕರೆ ಸಾಕೇ, ಸಂಘದ ಸದಸ್ಯರಿಗೂ ಸಿಗಬಾರದೇ’ ಎಂದು ಯೋಚಿಸಿದರು ಆಕೆ. ನಂತರ ನಾಲ್ಕು ಸ್ವ ಸಹಾಯ ಸಂಘಗಳ 10 ರಿಂದ 15 ಸದಸ್ಯರನ್ನು ಸೇರಿಸಿ ಗುಂಪು ರಚಿಸಿ, ಅವರಿಗೆ ತರಬೇತಿ ನೀಡಿದರು. ಜತೆಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ. ಮನೆಯನ್ನೇ ಕಾರ್ಯಾಗಾರವನ್ನಾಗಿಸಿಕೊಂಡು ಕರಕುಶಲ ವಸ್ತುಗಳ ತಯಾರಿಕೆ ಆರಂಭಿಸಿದ್ದಾರೆ. ಪ್ರಕಾಶ್ ಬಳ್ಳಾರಿ, ರತ್ನಾಕರ್ ಬಾಂದೇಕರ್, ಫರೀದಾ ಶೇಖ್, ಶೈನಾಝ್ ತಂಡದ ಸದಸ್ಯರಾಗಿ ಸಾಥ್ ನೀಡಿದ್ದಾರೆ.

ಹಲವು ಹಂತಗಳ ಕಾರ್ಯ
ಸದಸ್ಯರಲ್ಲಿ ಒಂದು ತಂಡ ತೆಂಗು ಬೆಳೆಯುವ ಊರುಗಳಿಗೆ ಹೋಗಿ ತೆಂಗಿನಕಾಯಿಗಳನ್ನು ಖರೀದಿಸಿ ತರುತ್ತಾರೆ. ಇನ್ನೊಂದು ತಂಡ ತೆಂಗಿನಕಾಯಿಗಳನ್ನು ಸ್ವಚ್ಛಗೊಳಿಸಿ, ಮಾರ್ಕಿಂಗ್ ಮಾಡಲು ಅಣಿಮಾಡಿಕೊಡುತ್ತದೆ. ಶಾಂತಾ ಹಾಗೂ ಚೈತ್ರಾ ಕಾಯಿಯ ಮೇಲೆ ಮಾರ್ಕರ್‌ನಿಂದ ಸೂಕ್ಷ್ಮವಾಗಿ ಗಣೇಶನ ರೇಖಾ ಚಿತ್ರ ಬಿಡಿಸುತ್ತಾರೆ. ಸಂಘದ ಉಳಿದ ಸದಸ್ಯರು ಕಾಯಿಗಳನ್ನು ಮನೆಗೆ ಕೊಂಡೊಯ್ಯದು, ಮಾರ್ಕಿಂಗ್ ಮಾಡಿದ ರೀತಿಯಲ್ಲಿ ಕತ್ತರಿಸಿ ತಂದು ವಾಪಸ್ ನೀಡುತ್ತಾರೆ. ಮುಂದಿನ ಹಂತದಲ್ಲಿ ಇಬ್ಬರು ಪರಿಣತ ಮಹಿಳಾ ಸದಸ್ಯರು ಕಾಯಿಯ ಮೇಲಿನ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಿ, ಅಲಂಕಾರ ಮಾಡುತ್ತಾರೆ. ಹೀಗೆ ನಾಲ್ಕೈದು ಹಂತಗಳಲ್ಲಿ ನಾರಿಕೇಳ ಗಣಪತಿ ಸಿದ್ಧವಾಗಿ, ಮಾರುಕಟ್ಟೆಗೆ ಹೊರಡಲು ಅಣಿಯಾಗುತ್ತದೆ.

ವರ್ಷಪೂರ್ತಿ ಬೇಡಿಕೆ
‘ಮಾರ್ಕಿಂಗ್ ಮಾಡಿದ ಕಾಯಿಯ ಕೆತ್ತನೆ ಕೆಲಸಕ್ಕೆ ₹ 40 ರಿಂದ ₹ 50 ನಿಗದಿ. ಪೂರ್ಣಕಾಲಿಕವಾಗಿ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಸದಸ್ಯರಿಗೆ ವಿಶೇಷವಾಗಿ ಒಂದು ಗಣಪತಿಗೆ ₹ 150 ಕಮಿಷನ್. ಹೀಗೆ ತಯಾರಾಗುವ ಪ್ರತಿ ಗಣಪತಿ ₹350 ರಿಂದ ₹ 400 ವರೆಗೆ ಮಾರಾಟವಾಗುತ್ತಿದೆ. ಈ ನಾರಿಕೇಳ ಗಣಪತಿಗೆ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಹೆಚ್ಚು ಬೇಡಿಕೆ ಇದೆ.

‘ಸ್ವಹಾಯ ಸಂಘಗಳ ಒಕ್ಕೂಟದಲ್ಲೂ ಮಾರಾಟ ಮಾಡಲಾಗುತ್ತಿದೆ. ಗಣಪತಿ ಹಬ್ಬದಲ್ಲಷ್ಟೇ ಅಲ್ಲದೇ, ವರ್ಷ ಪೂರ್ತಿ ಬೇಡಿಕೆ ಇದೆ. ಹಾಗಾಗಿ ಸಂಘದ ಸದಸ್ಯರಿಗೆ ನಿರಂತರವಾಗಿ ಉದ್ಯೋಗ ಸಿಕ್ಕಂತಾಗಿದೆ’ ಎನ್ನುತ್ತಾರೆ ಶಾಂತಾ ಘಡ್ಕರ್. ಬೇಡಿಕೆ ಗಮನಿಸಿರುವ ಸಂಘದವರು, ಮುಂದೆ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶಿರಸಿ, ಗೋಕರ್ಣ, ಇಡಗುಂಜಿ, ಹಟ್ಟಿಯಂಗಡಿ ಹಾಗೂ ಮುರುಡೇಶ್ವರ ದೇವಾಲಯಗಳಲ್ಲಿ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ಶಾಂತಾ ಅವರ ಸಂಪರ್ಕಕ್ಕೆ : 7411516421

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT