ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ಯುದ್ಧ, ಕವಿ ಮತ್ತು ಕವಿತೆ

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಜಬೀವುಲ್ಲಾ ಎಂ. ಅಸದ್ ಮೊಳಕಾಲ್ಮುರು 

ಕವಿ,
ಯುದ್ಧದ ಕರಾಳ ದೃಶ್ಯಗಳನ್ನು ನೋಡಿದನು 
ಮಡಿದವರನ್ನು, ಬಲಿಯಾಗುತ್ತಿರುವರನ್ನು ಅಮಾಯಕರನ್ನು ಕಂಡು ಮರುಗಿದನು


ಬದುಕುಳಿದವರ ಯಾತನೆ, ಯಾಚನೆ, 
ನಿಟ್ಟುಸಿರು, ನೋವು 
ಎಲ್ಲವನ್ನೂ ಅನುಭವಿಸುವವನಂತೆ 
ತಾನೆ ಖುದ್ದು ನರಳಿದನು


ಲೋಕ ಕಾಣಲಾಗದ್ದನ್ನು 
ಮತ್ತು ಕೇಳಲಾಗದ್ದನ್ನೂ 
ತನ್ನ ಅರಿವಿನ ಒಳಗಣ್ಣು ತೆರೆದು
ಓದುಗರ ಮನ ಕಲಕುವಂತೆ
ಹೃದಯ ಹಿಂಡುವಂತೆ
ಯುದ್ಧದ ಭೀಕರತೆಯನ್ನು 
ಅದರ ರೌದ್ರತೆಯನ್ನು  
ಕಣ್ಣಿಗೆ ಕಟ್ಟುವಂತೆ ವರ್ಣಿಸಿ 
ಕವಿ ಕವಿತೆ ಬರೆದನು


ರಸ್ತೆಗಳ ಮೇಲೆ, ಮನೆಗಳ ಒಳಗೆ 
ಮಕ್ಕಳಾಡುವ ಬಯಲಲ್ಲಿ
ವೃದ್ಧರು ಓಡಾಡುವ ಉದ್ಯಾನಗಳಲ್ಲಿ
ಶಾಲೆ, ಆಲಯ ಎಲ್ಲೆಡೆಯಲ್ಲಿ
ರಕ್ತದ ಹೂಗಳು ಅರಳಿದ್ದನ್ನು
ನೋವಿನ ದುಂಬಿಗಳ ಝೇಂಕರಿಸಿದ್ದನ್ನು
ದುಃಖದ ಮೋಡಗಳು ಆವರಿಸಿದ್ದನ್ನು
ಭಯದ ಕತ್ತಲು ಕವಿದಿದ್ದನ್ನು
ಬರೆದನು ಎಲ್ಲವನ್ನು


ಸತ್ತವರ, ಗಾಯಗೊಂಡವರ 
ಬದುಕುಳಿದವರ 
ಇರುವ ವಾಸ್ತವವನ್ನು
ಭರವಸೆಯಿಲ್ಲದ ನಾಳೆಗಳ 
ಮಕ್ಕಳ, ದೇಶದ ಭವಿಷ್ಯವನ್ನು


ಕಳೆದುಕೊಳ್ಳುತ್ತಿರುವ
ಎಲ್ಲರನ್ನು ಕೊಲ್ಲುತ್ತಿರುವ
ಅಸಹಾಯಕತೆಯನ್ನು
ಹತ್ತಿಕ್ಕಲಾರದ
ವ್ಯವಸ್ಥೆಯ ಕ್ರೂರತೆಯನ್ನು 
ಮನ ಮುಟ್ಟುವಂತೆ
ಹೃದಗಳ ತಟ್ಟುವಂತೆ
ಕವಿ ಕವಿತೆ ಕಟ್ಟಿದನು


ಎಲ್ಲರೂ ಓದಿದರು
ನೊಂದವರ ನೋವಿಗೆ ಮಿಡಿದರು
ಸತ್ತವರ ನೆನೆದು ಕಂಬನಿ ಸುರಿಸಿದರು
ದೇವರಲ್ಲಿ ಪ್ರಾರ್ಥಿಸಿ ಸುಮ್ಮನಾದರು


ಕವಿತೆ ಗೀಚಿದ ಕವಿಯನ್ನು
ಭೇಷ್ ಎಂದು ಬೆನ್ನುತಟ್ಟಿದರು
ಶಹಬ್ಬಾಸ್ ಎಂದು ಅಲಂಗಿಸಿಕೊಂಡರು
ವಾಹ್... ವಾಹ್... ಎಂದು 
ಗುಣಗಾನ ಮಾಡಿದರು


ಆದರೆ ಯುದ್ಧದ ಹೆಸರಿನಲ್ಲಿ
ಆಕ್ರಮಣ ಜರುಗುತ್ತಲೇ ಇತ್ತು
ಶಾಂತಿಯ ಮಂತ್ರ 
ಜಪಿಸುತ್ತ ಪಾರಿವಾಳ ಮಾತ್ರ
ಪಂಜರದಲ್ಲೆ ಉಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT