ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಲು ಕಲಿಯಿತು ಟಿಂಕು

Last Updated 21 ಜುಲೈ 2018, 19:30 IST
ಅಕ್ಷರ ಗಾತ್ರ

ಒಂದು ಮರದಲ್ಲಿ ತಂದೆ ಹಕ್ಕಿ ಮತ್ತು ತಾಯಿ ಹಕ್ಕಿ ಗೂಡು ಕಟ್ಟಿಕೊಂಡು ಸಂತೋಷದಿಂದ ಬಾಳುತ್ತಿದ್ದವು. ಅವರಿಬ್ಬರ ಪ್ರೀತಿಯ ದ್ಯೋತಕವಾಗಿ ತಾಯಿ ಹಕ್ಕಿ ಬೆಳ್ಳಿಯಂತೆ ಹೊಳೆಯುವ ಮೂರು ಮೊಟ್ಟೆಗಳನ್ನಿಟ್ಟಿತು. ಅವುಗಳನ್ನು ಕಂಡು ತಾಯಿ ಹಕ್ಕಿಯ ಹೃದಯ ಸಂತೋಷದಿಂದ ಕುಣಿಯುತ್ತಿತ್ತು.

ತಾಯಿ ಹಕ್ಕಿ ಮೊಟ್ಟೆಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಮುಂದೆ ಅವುಗಳಿಂದ ಮರಿಗಳು ಹೊರಬಂದ ಮೇಲೆ ಅವುಗಳಿಗೆ ತಿನ್ನಲು ಆಹಾರವಿರಲಿಲ್ಲ. ತಂದೆ ಹಕ್ಕಿಯನ್ನು ಕರೆದು, ‘ನೀನು ಈ ಮೊಟ್ಟೆಗಳಿಗೆ ಕಾವು ಕೊಡುತ್ತಿರು. ನಾನು ಅವುಗಳಿಗೆ ಆಹಾರ ತರುತ್ತೇನೆ. ದುಷ್ಟರು ಯಾರಾದರು ಬಂದಾರು ಜೋಕೆ’ ಎಂದು ಎಚ್ಚರಿಸಿ ಅಲ್ಲಿಂದ ಹಾರಿತು. ಹುಳು ಹುಪ್ಪಟೆಗಳೇನಾದರು ಸಿಕ್ಕಾವೋ ಎಂದು ಹುಡುಕಿತು. ಸಿಕ್ಕ ಹುಳು ಹುಪ್ಪಟೆಗಳನ್ನು ತನ್ನ ಚಿಕ್ಕ ಕೊಕ್ಕಿನಲ್ಲಿ ಹಿಡಿದುಕೊಂಡು ಗೂಡಿಗೆ ತಂದು ಸಂಗ್ರಹಿಸಿಟ್ಟಿತು. ತಾಯಿ ಹಕ್ಕಿಯ ಮುಂಜಾಗೃತೆಯ ಕಂಡ ತಂದೆ ಹಕ್ಕಿ ತಲೆದೂಗಿತು.

ಕೆಲ ಸಮಯದ ನಂತರ ಎರಡು ಮೊಟ್ಟೆಗಳು ಒಡೆದು ಮರಿಗಳು ಹೊರಬಂದವು. ಮುದ್ದಾದ ಎರಡು ಮರಿಗಳನ್ನು ಕಂಡು ತಂದೆ–ತಾಯಿ ಹಕ್ಕಿಗಳು ಆನಂದದಿಂದ ಕುಪ್ಪಳಿಸಿದವು. ಆ ಮರಿಗಳಿಗೆ ‘ಚಿಂಟು’, ‘ಪಿಂಟು’ ಎಂದು ನಾಮಕರಣ ಮಾಡಿದವು. ಆದರೆ ಅವುಗಳಲ್ಲಿದ್ದ ಒಂದು ಮೊಟ್ಟೆ ಮಾತ್ರ ಒಡೆದಿರಲಿಲ್ಲ. ತಾಯಿ ಹಕ್ಕಿ ಎದೆಗುಂದಲಿಲ್ಲ. ಕೆಲವು ಮೊಟ್ಟೆಗಳು ತಡವಾಗಿ ಒಡೆದು ಮರಿಗಳು ಹೊರಬರುತ್ತವೆ ಎಂಬುದು ಅದಕ್ಕೆ ಗೊತ್ತಿತ್ತು.

‘ಏಯ್ ಚಿಂಟು, ಪಿಂಟು ಆ ಮೊಟ್ಟೆಗೆ ತೊಂದರೆ ಕೊಡಬೇಡಿ’ ಎಂದು ತಾಯಿ ಹಕ್ಕಿ ಎಚ್ಚರಿಕೆ ನೀಡಿತು. ಚಿಂಟು, ಪಿಂಟು ಬೇಗನೆ ಬೆಳೆದವು. ಅವು ಗೂಡ ಬಿಟ್ಟು ಹಾರಲು ತಯಾರಾಗಿದ್ದವು. ಒಂದು ದಿನ ಚಿಂಟು ಇದ್ದಕ್ಕಿದ್ದ ಹಾಗೆ ಕೂಗಿಕೊಂಡಿತು. ‘ಅಮ್ಮಾ ಅಮ್ಮಾ, ಇಲ್ಲಿ ಏನೋ ನಡೆಯುತ್ತಾ ಇದೆ’ ಎಂದು ಗಾಬರಿಯಿಂದ ಕೂಗಿತು.

‘ನಾನೇನೂ ಮಾಡಿಲ್ಲಮ್ಮ’ ಎಂದು ಪಿಂಟು ಕೂಗುತ್ತಿತ್ತು. ಅಷ್ಟರಲ್ಲಿ ತಾಯಿ ಹಕ್ಕಿ ಗೂಡಿನೊಳಕ್ಕೆ ಹೋಗಿ ನೋಡಿದಾಗ, ಮೂರನೆಯ ಮೊಟ್ಟೆ ನಿಧಾನವಾಗಿ ಸೀಳು ಬಿಡುತ್ತಿತ್ತು. ಅಂತೂ ಈಗಲಾದರೂ ಮೊಟ್ಟೆ ಒಡೆದು ಕೆಂಪಾದ ಮರಿ ಹೊರ ಬರತೊಡಗಿದೆ. ಎಂದು ತಾಯಿ ಖುಷಿಪಟ್ಟಿತು. ಮುದ್ದಾದ ಮರಿ ಕಂಡು ಚಿಂಟು, ಪಿಂಟು ರೆಕ್ಕೆ ಬಡಿದು ಕುಣಿದಾಡಿದವು. ಚಿಕ್ಕಮರಿ ಹೊರ ಬರುತ್ತಿದ್ದಂತೆ, ಅದು ಕೆಂಪು ಕೆಂಪಾಗಿರುವುದನ್ನು ಕಂಡು ‘ಓಹ್! ಇದು ನೋಡಲಿಕ್ಕೆ ಏಲಿಯನ್ ತರ ಕಾಣುತ್ತಿದೆ’ ಎಂದಿತು ಚಿಂಟು. ‘ಚಿಂಟು ಹಾಗೆನ್ನಬೇಡ. ಮೊಟ್ಟೆಯಿಂದ ಹೊರ ಬಂದಾಗ ನೀನು ಕೂಡ ಹಾಗೇ ಇದ್ದೆ’ ಎಂದಿತು ತಾಯಿ. ಇದನ್ನ ಕೇಳಿದ ಪಿಂಟು ಕೊಕ್ ಎಂದು ನಕ್ಕಿತು.

ಮುದ್ದಾದ ಆ ಮರಿಹಕ್ಕಿಗೆ ‘ಟಿಂಕು’ ಎಂದು ನಾಮಕರಣ ಮಾಡಿದವು. ‘ಓಹ್! ಎಷ್ಟು ಮುದ್ದಾದ ಹೆಸರು’ ಎಂದು ಎಲ್ಲರೂ ಅದನ್ನು ‘ಟಿಂಕು ಟಿಂಕು’ ಎಂದು ಕರೆಯಲಾರಂಭಿಸಿದವು.

ಮರಿಹಕ್ಕಿ ಮಂದಗತಿಯಲ್ಲಿ ಬೆಳೆಯತೊಡಗಿತು. ತಾಯಿ ಹಕ್ಕಿ ಟಿಂಕುವಿನ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಿತು. ತಾಯಿ ಹಕ್ಕಿ ಎಲ್ಲಿಂದಲೋ ಆಹಾರ ತರುತ್ತಿತ್ತು. ತನ್ನ ಮರಿಗೆ ಕೊಡುತ್ತಿತ್ತು. ಬರುಬರುತ್ತ ಟಿಂಕು ಹಾರಲು ಕಲಿಯಲಿಲ್ಲ. ಇದನ್ನು ಕಂಡು ತಾಯಿ ಹಕ್ಕಿಗೆ ಬೇಸರವಾಗತೊಡಗಿತು. ಮರಿಹಕ್ಕಿಗೆ ಹಾರುವುದನ್ನು ತಾನೇ ಕಲಿಸಲು ಯತ್ನಿಸಿದರೂ ಅದು ಬೇಗ ಕಲಿಯುತ್ತಿರಲಿಲ್ಲ. ಬೇಸಿಗೆ ಆರಂಭವಾಗಿತ್ತು. ಬಿಸಿಲಿನ ಝಳ ಏರುತ್ತಿತ್ತು. ಬಿಸಿಗಾಳಿ ಬೀಸುತ್ತಿತ್ತು. ಅದು ಹಾರಲು ಸರಿಯಾದ ಸಮಯ ಎಂದುಕೊಂಡಿತು ತಾಯಿ ಹಕ್ಕಿ. ‘ನೋಡು ಟಿಂಕು ನೀನು ಹಾರಲು ಕಲಿಯುವ ಸಮಯ ಬಂದಿದೆ. ನೀನು ತಯಾರಾಗು’ ಎಂದಿತು ತಾಯಿ.

‘ಅಮ್ಮಾ ಆಯ್ತು’ ಎಂದ ಟಿಂಕು ಗೂಡಿನಿಂದ ನಿಧಾನವಾಗಿ ಹೊರ ಬಂದಿತು. ‘ರೆಕ್ಕೆಯನ್ನು ಅರಳಿಸು, ರೆಕ್ಕೆ ಬಡಿ’ ಎಂದಿತು ತಾಯಿ. ರೆಕ್ಕೆ ಬಡಿಯುವುದನ್ನು ಕಂಡ ತಾಯಿ ಹಕ್ಕಿ ‘ಈಗ ಹಾರು, ಹಾರು, ಹಾರ್ತಾ ಹಾರ್ತಾ ರೆಕ್ಕೆ ಬಡಿ.’

‘ಆಯ್ತಮ್ಮಾ’ ಎಂದು ಹಾರ್ತಾ ಹಾರ್ತಾ ರೆಕ್ಕೆ ಬಡಿಯತೊಡಗಿತು ಟಿಂಕು. ನಂತರ, ‘ಅಯ್ಯೋ ಅಮ್ಮಾ ಈ ಟೊಂಗೆಯಿಂದ ಕೆಳಗೆ ಬಿದ್ದು ಬಿಡ್ತೀನಿ, ಹಾರಲಾರೆ ಕಣಮ್ಮ’ ಎಂದಿತು. ‘ಹಾರುವುದನ್ನು, ರೆಕ್ಕೆ ಬಡಿಯುವುದನ್ನು ಕಲಿಯದಿದ್ದರೆ ಹೇಗೆ, ನೋಡು ನಾನು ನಿನ್ನನ್ನ ಟೊಂಗೆ ಮೇಲಿಂದ ಕೆಳಕ್ಕೆ ನೂಕುತ್ತೇನೆ’ ಎಂದಿತು ತಾಯಿ.

‘ಅಯ್ಯೋ ಬೇಡಮ್ಮಾ’ ಅನ್ನುವಷ್ಟರಲ್ಲಿ ಅದನ್ನು ತಾಯಿ ಹಕ್ಕಿ ನೂಕಿಯೇ ಬಿಟ್ಟಿತು. ಟೊಂಗೆಯಿಂದ ಕೆಳಗೆ ಬೀಳತೊಡಗಿತು ಟಿಂಕು. ಆಗ ತಾಯಿ ಹಕ್ಕಿ ಸುಮ್ಮನಿರದೆ ‘ನಿನ್ನ ಎರಡೂ ರೆಕ್ಕೆಗಳನ್ನು ಅಗಲಿಸು, ಆಮೇಲೆ ಅವುಗಳನ್ನು ಬಡಿ’ ಎಂದು ಕೂಗುತ್ತಲೇ ಇತ್ತು.

ಮರಿಹಕ್ಕಿ ಟಿಂಕು ‘ಬೀಳ್ತೇನೆ ಸಹಾಯ ಮಾಡಿ, ಸಹಾಯ ಮಾಡಿ’ ಎಂದು ಚೀರುತ್ತಲೇ ಇತ್ತು. ತಾಯಿ ಹಕ್ಕಿ ಮನಸ್ಸು ತಡೆಯದೆ ಅದರೊಂದಿಗೆ ಹಾರುತ್ತಾ ಬಂತು. ಅದರ ಪಕ್ಕದಲ್ಲಿಯೇ ಹಾರುತ್ತ ನಿಂತು, ‘ರೆಕ್ಕೆಗಳನ್ನು ಹರಡಿಕೋ ರೆಕ್ಕೆ ಬಡಿಯುವುದನ್ನು ಆರಂಭಿಸು’ ಎಂದು ಸಾರಿ ಸಾರಿ ಹೇಳುತ್ತಿತ್ತು.

ಇನ್ನೇನು ನೆಲಕ್ಕೆ ಅಪ್ಪಳಿಸಬೇಕು ಅನ್ನುವಷ್ಟರಲ್ಲಿ ಟಿಂಕು ರೆಕ್ಕೆ ಅರಳಿಸಿತು. ಬಡಿಯಲಾರಂಭಿಸಿತು. ಗಾಳಿಯಲ್ಲಿ ನಿಧಾನವಾಗಿ ಮೇಲೇರತೊಡಗಿತು. ತಾಯಿ ಹಕ್ಕಿ ಕೂಡ ಮೇಲೇರಿ ಟೊಂಗೆಯ ಮೇಲೆ ಕುಳಿತಿತು. ಮರಿಹಕ್ಕಿ ಟಿಂಕು ಕೂಡ ತನ್ನ ತಾಯಿಯನ್ನು ಅನುಕರಿಸಿತು. ಆದರೆ ಒಂದೇ ಬಾರಿಗೆ ಟೊಂಗೆಯ ಮೇಲೆ ಕೂರಲು ಆಗದೆ ಟೊಂಗೆಗೆ ಡಿಕ್ಕಿ ಹೊಡೆದು ಕೆಳಗೆ ಬೀಳಲಾರಂಭಿಸಿತು. ಮತ್ತೆ ತಾಯಿ ಹಕ್ಕಿ ಅದರೊಂದಿಗಿದ್ದು ‘ರೆಕ್ಕೆ ಬಡಿ, ರೆಕ್ಕೆ ಬಡಿ ಟಿಂಕು. ನಿನ್ನೆರಡು ರೆಕ್ಕೆಗಳನ್ನು ಬಿಡಿಸಿಕೋ ಅವುಗಳನ್ನು ಜೋರಾಗಿ ಬಡಿ’ ಎಂದಿತು. ಆದರೆ ಅದಕ್ಕೆ ಆಗದೇ ‘ಅಮ್ಮಾ, ನನ್ನಿಂದ ಆಗುತ್ತಿಲ್ಲ. ರೆಕ್ಕೆ ಬಡಿಯಲು ಆಗುತ್ತಿಲ್ಲ, ನೆಲಕ್ಕೆ ಇಳಿಯಲು ಆಗುತ್ತಿಲ್ಲ’ ಎಂದು ಚೀರುತ್ತಾ ಬಿದ್ದುಬಿಟ್ಟಿತು.

‘ಹಾರುವುದನ್ನು ಕಲಿಯಲೇ ಬೇಕು. ನಿನ್ನಿಂದ ಆಗುತ್ತೆ ಟಿಂಕು, ಪ್ರಯತ್ನಿಸು’ ಎಂದಿತು ತಾಯಿ ಹಕ್ಕಿ.

ಟಿಂಕು ಇದ್ದಕ್ಕಿದ್ದಂತೆ ರೆಕ್ಕೆ ಬಡಿಯತೊಡಗಿತು. ನಿಧಾನವಾಗಿ ಮೇಲೇರಿತು. ಗಿರ ಗಿರ ತಿರುಗಲಾರಂಭಿಸಿತು. ಟೊಂಗೆ ಮೇಲೆ ನಿಧಾನವಾಗಿ ಕುಳಿತುಕೊಳ್ಳಲಾಗದೇ ದೇಹವನ್ನು ಟೊಂಗೆಗೆ ಬಡಿದುಕೊಂಡಿತು.

ಪುನಃ ಹಾರುವುದನ್ನು ಪ್ರಯತ್ನಿಸಿತು ಟಿಂಕು. ನಿಧಾನವಾಗಿ ಮೇಲೇರಿ ಟೊಂಗೆಯ ಮೇಲೆ ಕುಳಿತಿತು. ಟಿಂಕು ಖುಷಿಯಾಗಿ ‘ಅಮ್ಮಾ ನಾನು ಹಾರುವುದ ಕಲಿತುಬಿಟ್ಟೆ’ ಎಂದು ಟೊಂಗೆ ಮೇಲೆ ನಿಂತು ಖುಷಿಯಾಗಿ ಕುಣಿಯಿತು. ಆಗ ಆಯ ತಪ್ಪಿ ಬಿದ್ದುಬಿಟ್ಟಿತು. ತಕ್ಷಣವೇ ತನ್ನೆರಡೂ ರೆಕ್ಕೆಗಳನ್ನು ಅರಳಿಸಿಕೊಂಡು ಬಡಿಯಿತು. ನಿಧಾನವಾಗಿ ನೆಲದ ಮೇಲೆ ಇಳಿದು ಕುಳಿತಿತು. ಪುನಃ ಅಲ್ಲಿಂದ ಮೇಲಕ್ಕೆ ಹಾರಿತು. ತಾಯಿ ಹಕ್ಕಿ ಖುಷಿಯಿಂದ ‘ನನ್ನ ಪುಟ್ಟಮರಿ ಟಿಂಕು ಹಾರಲು ಕಲೀತು’ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT