ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಪಯಣ

Published 7 ಅಕ್ಟೋಬರ್ 2023, 23:29 IST
Last Updated 7 ಅಕ್ಟೋಬರ್ 2023, 23:29 IST
ಅಕ್ಷರ ಗಾತ್ರ

ಜೂನ್ ತಿಂಗಳು ಬಾರದ ಮಳೆಗೆ ಇನ್ನಿಲ್ಲದಂತೆ ಹಂಬಲಿಸುವಾಗಲೇ ಜುಲೈನಲ್ಲಿ ಬಿಟ್ಟು ಬಿಡದೆ ಹುಯ್ಯುತ್ತಾ ಗೋಳಿಟ್ಟಾಗ ಮಾತ್ರ ಬೇಸರ ಹುಟ್ಟಿಕೊಂಡಿತ್ತು. ಇದೇ ವೇಳೆಯಲ್ಲಿಯೇ ಬೆಂಗಳೂರಿನ ಸಾಹಿತ್ಯಕ ಕಾರ್ಯಕ್ರಮವೊಂದು ಕೈಬೀಸಿ ಕರೆದಿತ್ತು. ಜೊತೆಗೆ ನನ್ನ ಅಕ್ಕರೆಯ ಅಕ್ಕನ ಸಕ್ಕರೆಯಂತಹ ಮಗಳು ಅದಿತಿಯ “ಆಂಟಿ ನೀ ಬೆಂಗಳೂರಿಗೆ ಬಂದ್ರ ನನ್ನ ಮನೀಗೆ ಬಾ. ನಾ ಆಫೀಸಿಗೆ ಹೋದ್ರೂ ಇಲ್ಲೆ ನಿನಗ ಒಬ್ಬಾಕಿಗೆ ಎಲ್ಲಾಕಡೆ ಓಡ್ಯಾಡಾಕ ಅನುಕೂಲ ಐತಿ” ಪ್ರೀತಿಯ ಕರೆಯೋಲೆ ಎಲ್ಲವೂ ಸೇರಿ ಬೆಂಗಳೂರಿಗೆ ಹೋಗುವುದೆಂದು ನಿರ್ಧರಿಸುವಾಗಲೇ ಎಡದೇ ಬಿಡದೆ ಒಂದೇ ಸಮನೆ ಬೀಳುವ ಮಳೆ ನನ್ನಾಸೆಗೆ ತಡೆಯೊಡ್ಡಿತ್ತು. ಹಾಗಾಗಿಯೇ ಟ್ರೇನ್ ಟಿಕೆಟ್ ಬುಕ್ ಮಾಡಲಿಲ್ಲ.

ಆದರೆ ಹೊರಡುವ ದಿನ ಮಾತ್ರ ಸೂರ್ಯದೇವ ಕೃಪೆತೋರಿ ಮಬ್ಬುಗಟ್ಟಿದ್ದ ಜಗಕೆ ಬೆಳಕು ನೀಡಿದ್ದ. ಬಿಸಿಲನ್ನು ಕಂಡು ಒಂದು ಬಗೆಯ ಅಹಲ್ಲಾದತೆ ಹುಟ್ಟಿಕೊಂಡಿತು. ಅದರೊಟ್ಟಿಗೆ ಬೆಂಗಳೂರಿನ ಹಂಬಲವೂ ಹೆಚ್ಚಾಯಿತು.

ಕೈಬಿಟ್ಟ ಪ್ರಯಾಣವನ್ನು ಮತ್ತೆ ಆತುರವಾಗಿ ಪ್ರಾರಂಭಿಸಿದಾಗ ಸಹಜವಾಗಿಯೇ ಗಡಿಬಿಡಿ ಎನ್ನಿಸಿತ್ತು. ಅದರಲ್ಲಿಯೂ ಅವಸರವಾಗಿ ಆಫೀಸು ಕೆಲಸ ಮುಗಿಸಿ ಪ್ರಯಾಣಕ್ಕೆ ಸಿದ್ಧವಾಗುವ ಹೊತ್ತಿಗೆ ಸುಸ್ತಾಗಿತ್ತು. ಓಡೋಡಿ ಬಂದು ಏಕಾಂತವಾಗಿ ಬಸ್ಸಿನ ಆ ಡಬಲ್ ಸೀಟಿನ ಮೇಲೆ ಪವಡಿಸಿದಾಗ, ಆಯಾಸವೆಲ್ಲವೂ ಮಾಯವಾಗಿತ್ತು. ಅದರಲ್ಲಿಯೂ ಕಟಕಿಯಾಚೆ ಆಗಸದಲ್ಲಿ ಮೂಡಿದ ಚಂದ್ರ ನನ್ನೊಟ್ಟಿಗೆ ಚಲಿಸತೊಡಗಿದಾಗ ಮನಸ್ಸು ಅರಳಿತು.

ಬೆಳಗಾವಿ ದಾಟಿದ ನಂತರ ನನ್ನ ಪಕ್ಕದ ಸೀಟಿನಲ್ಲಿ ಯಾರ ಸುಳಿವೂ ಕಾಣದಾದಾಗ, ಎರಡೂ ಸೀಟು ನನ್ನವೇ ಬೆಳಗಿನವರೆಗೂ ಯಾರ ಅಡಚಣೆ ಇಲ್ಲದೆ ಪಯಣಿಸಬಹುದು ಎಂದುಕೊಂಡು ಸರ್ವಸ್ವತಂತ್ರದಿಂದ ಎರಡೂ ಸೀಟಿನ ಮೇಲೆ ಹೊರಳಾಡಿದೆ. ನಾನು ಟಿಕೆಟ್ ಬುಕ್ ಮಾಡುವಾಗ ಎರಡೂ ಸೀಟುಗಳು ಖಾಲಿ ಇದ್ದದ್ದನ್ನು ಮತ್ತು ಅದು ಕೂಡ ಈ ದಿನವೇ ಮಧ್ಯಾಹ್ನ ಮಾಡಿದ್ದನ್ನು ನೆನಪಿಸಿಕೊಂಡು ನನ್ನ ನಂತರ ಯಾರೂ ಟಿಕೆಟ್‌ ಬುಕ್ ಮಾಡಿರಲಾರರು ಎಂದುಕೊಂಡು ಮತ್ತಷ್ಟು ನಿರಾಳಾದೆನಾದರೂ ಸಂಶಯ ಬೇಡವೆಂದು ಬಸ್ಸಿನ ಹುಡುಗನನ್ನು “ಇಲ್ಲೆ ಮತ್ತ ಯಾರೂ ಬರೂದಿಲ್ಲಲ್ಲ?” ಎಂದು ಪ್ರಶ್ನಿಸಿದೆ. ಆತ “ಯಾರೂ ರಿಜರ್ವ ಮಾಡಿಲ್ಲರಿ ಆದ್ರ ಹಂಗ ಯಾರರ ಬಂದ್ರ ಖಾಲಿ ಸೀಟು ಕೊಡತೀವಿರಿ” ಎಂದ, ಬೆಂಗಳೂರು ತಲುಪುವವರೆಗೂ ಮತ್ತೆ ಯಾರೂ ಬರದಿರಲಿ ಭಗವಂತ ಎಂದುಕೊಳ್ಳುತ್ತಿರುವಾಗಲೇ ಧಾರವಾಡದಿಂದ ಕೆಲವೊಂದಿಷ್ಟು ಹೆಂಗಳೆಯರು ಬಸ್ ಹತ್ತಿದರೂ ನನ್ನ ಪಕ್ಕದ ಸೀಟಿಗೆ ಬರಲಿಲ್ಲ. ಆಗ ನನಗೆ ಮತ್ತಷ್ಟು ಖುಷಿ ಎನ್ನಿಸಿತು.

ಆದರೆ, ಹುಬ್ಬಳ್ಳಿ ಬಂದು ಹೆಣ್ಣುಮಗಳೊಬ್ಬಳು ತನ್ನ ಎರಡು ವರ್ಷದ ಮಗುವಿನೊಂದಿಗೆ ಪ್ರತ್ಯಕ್ಷವಾದಾಗ, ದಂಗುಬಡಿದುಹೋದೆ. ಅಷ್ಟು ಹೊತ್ತಿನವರೆಗೂ ನನ್ನದೇ ಸಾಮ್ರಾಜ್ಯವೆಂದು ಬಗೆದಿದ್ದ ಭಾವನೆಗೆ ಪೆಟ್ಟುಬಿದ್ದಿತ್ತು. ಅಷ್ಟೇ ಜಾಗದಲ್ಲಿ ಆ ಹೆಣ್ಣು ಮಗಳು ಮಗು ಹಾಗೂ ನಾನು ಹೇಗೆ ಮಲಗುವುದು? ಆಯಿತು ಇನ್ನು ಈ ದಿನ ನಿದ್ರಿಸುವುದು ಕನಸಿನ ಮಾತು ಎನ್ನಿಸಿತು. ಇಡೀ ರಾತ್ರಿ ನಿದ್ರಿಸದಿದ್ದಾಗ, ಮರುದಿನ ಕಣ್ಣು ಉರಿಯೂತ, ಆಯಾಸವೆಲ್ಲವನ್ನೂ ನೆನಪಿಸಿಕೊಂಡು ಬೇಸರವಾಯಿತು. ಅದರಲ್ಲಿಯೂ ನಮ್ಮ ಸಾಹಿತ್ಯಕ ಕಾರ್ಯಕ್ರಮದಲ್ಲಿ ನಾವು ಲೇಖಕಿಯರೆಲ್ಲ ಸೇರಿ ತೆಗೆದುಕೊಳ್ಳುವ ಗ್ರುಫ್ ಫೋಟೊದಲ್ಲಿ ಮುಖ ಕಳಾಹೀನವಾಗುವುದೆಂದು ಅಂದಾಜಿಸಿದಾಗಲಂತೂ ಮತ್ತಷ್ಟು ಕೆಡುಕೆನ್ನಿಸಿತು.

ಪಕ್ಕದಲ್ಲಿ ಮಗುವನ್ನು ಮಲಗಿಸಿ ತಾನು ಫೋನಿನಲ್ಲಿ ಸಂಭಾಷಣೆಯಲ್ಲಿ ತೊಡಗಿದ ಆ ಹೆಣ್ಣು ಮಗಳನ್ನು ಕಂಡು ಕೋಪ ಉಕ್ಕಿತು. ಆದರೆ ಏನು ಅನ್ನಲು ಆಡಲು ಸಾಧ್ಯ? ಡಬಲ್ ಸೀಟಿನಲ್ಲಿ ಬುಕ್ ಮಾಡಿದ್ದು ನನ್ನದೇ ತಪ್ಪು ಎಂದುಕೊಂಡು ತೆಪ್ಪಗೆ ಕಣ್ಣು ಮುಚ್ಚಿ ಮಲಗಲು ಪ್ರಯತ್ನಿಸುವಾಗ ಊಟದ ನೆನಪಾಯಿತು. ಮೊಬೈಲನಲ್ಲಿ ಸಮಯ ನೋಡಿ “ಅಯ್ಯೊ ಊಟಕ್ಕ ಬಸ್ಸ ನಿಲ್ಲಸಲಿಲ್ಲಾ” ಎಂದು ಗೊಣಗಿದೆ. ಆ ಹೆಣ್ಣುಮಗಳು “ಯಾವಾಗ ನಿಂದ್ರಸ್ತಾರ ಅಂತ ಹೇಳಾಕ ಬರೂದಿಲ್ಲರಿ ಮೇಡಮ್. ನೀವು ಡಬ್ಬಿ ತರಲಿಲ್ಲರಿ?” ಎಂದು ಪ್ರಶ್ನಿಸಿದಳು. “ಇಲ್ಲವಾ ಭಾಳ ಗಡಿಬಿಡಿ ಆತು ಹ್ಯಾಂಗೂ ರಾತ್ರಿ ಊಟಕ್ಕ ನಿಂದ್ರಸ್ತಾರಲ್ಲ ಆಗ ಉಂಡರಾತು ಅಂತ ಹಂಗ ಬಂದೀನಿ” ಎಂದುತ್ತರಿಸಿ, ಮುಂದೇನು ಮಾಡುವುದು ಎಂದು ಯೋಚಿಸುತ್ತಲೇ ನನ್ನ ಬ್ಯಾಗಿಗೆ ಕೈಹಾಕಿ ಅದಿತಿಗೆಂದು ತೆಗೆದುಕೊಂಡು ಬಂದಿದ್ದ ಚುರುಮುರಿ ಚೂಡಾದ ಚೀಲ ಬಿಚ್ಚಿ “ಚೂಡಾ ಚುನಮರಿ ತಿಂತಿಯವಾ” ಎನ್ನುತ್ತಲೇ ಹಸಿದ ಹೊಟ್ಟೆಗೆ ಚುರುಮರಿ ತೂರತೊಡಗಿದೆ. ಆಕೆ “ಏ ಬ್ಯಾಡ್ರಿ ನೀವ ತಿನ್ನರಿ. ನಾ ಊಟಾ ಮಾಡಕೊಂಡ ಬಂದೀನಿ”

“ಮತ್ತ ಪಾಪು? ಏನ ಇವನ ಹೆಸರು?” ಪ್ರಶ್ನಿಸಿದೆ. ಆಕೆ ತಡವರಿಸುತ್ತಲೇ “ಹಾಂ, ಇವನ ಹೆಸರರಿ ಅ .. ಅಲೋಕ” ಎಂದಳು. ಮುಂದೆ ಹಾಗೇ “ನೀವು ಎಲ್ಲಿಗೆ ಹೋಗುವಾರವಾ?” ಕೇಳಿದಾಗ “ಬೆಂಗಳೂರಿಗಿರಿ ಎಂದು ಹೇಳಿ ತನ್ನ ಮೊಬೈಲ್ನಲ್ಲಿ ಮಗ್ನಳಾದಳು. ನಾನು ಚುರುಮುರಿ ತಿಂದು ನೀರು ಕುಡಿದು ಆರಾಮಾಗಿ ಹಿಂದೆ ಒರಗಿ ಕುಳಿತುಕೊಂಡ ನಂತರವಷ್ಟೇ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಸರಿಯಾಗಿ ಗಮನಿಸಿದೆ. ಮಗು ಬಂದಾಗಿನಿಂದಲೂ ಮಲಗಿಯೇ ಇತ್ತು. ಅದಕ್ಕೆ ಮೈತುಂಬಾ ಬಟ್ಟೆ ಏನೋ ಇತ್ತು. ಆದರೆ ಮೇಲೆ ಏನನ್ನೂ ಹೊದಿಸಿರಲಿಲ್ಲ. ಅದನ್ನು ಕಂಡು “ಅವಗ ಹೊದಸಬೇಕಿಲ್ಲವಾ?” ಎಂದೆ ಕಾಳಜಿಯಿಂದ. “ಅಯ್ಯೊ ಗಡಿಬಿಡ್ಯಾಗ ಹಂಗ ಬಂದೀನಿರಿ ಅವಾ ಭಾಳ ಬೆವರತಾನಾ ಇರಲಿ ಬಿಡ್ರಿ” ಎಂದಾಗ, ಮಗುವಿಗೆ ನನ್ನದೇ ಶಾಲು ಹೊದಿಸಲು ಪ್ರಯತ್ನಿಸುವಾಗಲೇ ಆಕೆ ತನ್ನ ಮೈಮೇಲಿನ ವೇಲು ತೆಗೆದು ಹೊದಿಸಿದಳು. ಆಕೆಗೆ ನನ್ನ ಮೇಲೆ ಸಂಪೂರ್ಣ ನಂಬುಗೆ ಬಂದಿತೇನೊ ಆರಾಮವಾಗಿ ಮಾತನಾಡತೊಡಗಿದಳು. ಹಾಗೇ ಮಾತನಾಡುತ್ತ ನನ್ನ ಬಗ್ಗೆ ಎಲ್ಲವನ್ನೂ ಕೇಳಿ ಅದರಲ್ಲಿಯೂ ನಾನು ಲೇಖಕಿ ಎಂದು ತಿಳಿದು ಮತ್ತಷ್ಟು ಗೌರವದಿಂದ ಮಾತಾಡತೊಡಗಿದಳು. ಒಂದಿಷ್ಟು ಹೊಗಳಿ ಅಟ್ಟಕ್ಕೂ ಏರಿಸಿದಳು. ಹಾಗೇ ಅಭಿಮಾನದಿಂದ ನನ್ನ ಫೋನ್ ನಂಬರ್ ಕೂಡ ಪಡೆದಳು.

ಆದರೆ ತಾನು ಮಾತ್ರ ತನ್ನ ಪರಿಚಯವನ್ನು ಸರಿಯಾಗಿ ಹೇಳಲೇ ಇಲ್ಲ. ತನ್ನ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಕೊಡಲಿಲ್ಲ. ಒಂದೆರಡು ಬಾರಿ ಆಕೆಯ ಫೋನ್ ಸದ್ದು ಮಾಡಿತು. ಆದರೆ ಆಕೆ ಕಾಲ್ ತೆಗೆದುಕೊಳ್ಳದೆ ಕಟ್ ಮಾಡಲು ಯತ್ನಿಸಿದಳು ನಾನು “ಯಜಮಾನರದಾ?” ಎಂದು ಕೇಳಿದೆ. ಆಕೆ “ಆ ಆ.. ಹುಂ ಹೌದ್ರಿ” ಎಂದಳು. “ಮಾತಾಡ ಮತ್ಯಾಕ ಕಟ್ ಮಾಡತಿ?”

“ನಿಮಗ ಡಿಸ್ಟರ್ಬ ಆಕ್ಕತಿರಿ” ಎಂದ ನಂತರ ಏನೋ ಟೈಪ್ ಮಾಡಿ ಮೆಸೇಜ್ ಕಳುಹಿಸತೊಡಗಿದಳು.

“ಮದವಿ ಆಗಿ ಎಷ್ಟ ವರ್ಷ ಆತವಾ?”

“ಒಂದೂವರೆ ವರ್ಷರಿ”

“ಹಾಂ?”

“ಅಲ್ಲಲ್ಲ ಎರಡೂವರಿ ವರ್ಷರಿ”

ಇನ್ನು ಆಕೆಗೆ ಮಾತನಾಡುವುದು ಬೇಡವೆನ್ನಿಸಿತೇನೊ. ಆಕೆ ಕಣ್ಣುಮುಚ್ಚಿ ಮಲಗಿದಳು. ಆ ಮಬ್ಬು ಕತ್ತಲೆಯಲ್ಲಿಯೇ ಆಕೆಯ ಕತ್ತು ಗಮನಿಸಿದೆ. ಕೊರಳಲ್ಲಿ ತಾಳಿ ಕಾಣಿಸಲಿಲ್ಲ. ಈಗಿನ ಹುಡುಗಿಯರೇ ಹೀಗೆ ಎನ್ನಿಸಿತು.

ನನಗೂ ನಿಧಾನವಾಗಿ ನಿದ್ದೆ ಆವರಿಸತೊಡಗಿತು. ಕುಳಿತವಳು ಮಲಗಿದೆ. ಸ್ವಲ್ಪ ಇಕ್ಕಟ್ಟು ಎನ್ನಿಸಿತು. ಆದರೆ ಮಗುವಿನ ಪಕ್ಕ ಹೊರಳಿದಾಗ, ಹಿತವೆನ್ನಿಸಿತು. ಆ ಹುಡುಗಿಯಂತೂ ಮಗನ ಇರುವಿಕೆಯನ್ನೇ ಗಮನಿಸದಂತಿದ್ದಳು. ಆಕೆ ಮಗುವಿಗೆ ಬೆನ್ನು ಮಾಡಿ ಮಲಗಿದಾಗ, ನಾನು ಮಗುವಿನತ್ತ ಮುಖ ಮಾಡಿ ಮಲಗಿ ಅದರ ಮೇಲೆ ಕೈಹಾಕಿ ಮತ್ತಷ್ಟು ನನ್ನ ಪಕ್ಕಕ್ಕೆಳೆದುಕೊಂಡಾಗ ಬೆಚ್ಚಗೆ ಹಿತವೆನ್ನಿಸಿತು. ಮಗ ವಿನಯನನ್ನು ಆತ ಮಗುವಿರುವಾಗ ತಬ್ಬಿಹಿಡಿದು ಮಲಗಿದ್ದು ನೆನಪಾಗಿ ಪುಳಕಗೊಂಡು ಆ ಮಗು ವಿನಯನೇ ಎಂದು ಭಾವಿಸಿ ಆ ಮಗುವನ್ನು ತಬ್ಬಿಕೊಂಡೆ ಮತ್ತಷ್ಟು ಹಿತವೆನ್ನಿಸಿತು. ಆ ಕಡೆಗೆ ಮುಖಮಾಡಿ ಮಲಗಿದ್ದ ಆಕೆ ನಿದ್ರೆಗೆ ಜಾರಿದ್ದಳೆನೊ. ನನಗೂ ನಿಧಾನವಾಗಿ ನಿದ್ದೆ ಆವರಿಸಿತ್ತು.

“ಹತ್ತ ನಿಮಿಷ ಟೈಮ್‌ ಐತಿ ನೋಡ್ರಿ. ಊಟಾ ಮಾಡುವಾರು ಮಾಡಿ ಬರ್ರಿ” ಎಂದು ಬಸ್ಸಿನ ಹುಡುಗ ಕೂಗಿದಾಗ ಇಬ್ಬರಿಗೂ ಎಚ್ಚರವಾಯಿತು. ಬಸ್ಸು ಜೋರಾಗಿ ಸದ್ದು ಮಾಡುವುದರೊಂದಿಗೆ ದೊಡ್ಡ ಲೈಟಿನ ಬುಡದಿ ನಿಂತಾಗ, ಆ ಬೆಳಕು ಕಣ್ಣು ಕುಕ್ಕಿಸಿತು. ಸಮಯ ನೋಡಿದೆ ಹನ್ನೆರಡುವರೆಯಾಗಿತ್ತು. ಇದು ಊಟದ ಸಮಯವೇ? ಎನ್ನಿಸಿತು. ಏನಾದರಾಗಲಿ ಟಾಯಲೆಟ್ಟಿಗಾದರೂ ಹೋಗಿ ಬಂದರಾಯಿತೆಂದು ನಿಧಾನವಾಗಿ ಮಗುವಿನಿಂದ ಬೇರ್ಪಟ್ಟು ಅದಕ್ಕೆ ಧಕ್ಕೆಯಾಗದಂತೆ ಮೇಲೆದ್ದೆ. ಆಕೆಗೂ ಎಚ್ಚರವಾಗಿ “ಮೇಡಮ್‌ ನೀವು ಟಾಯಲೆಟ್ಟಿಗೆ ಹೋಗಿ ಬರತಿದ್ರ ಹೋಗಿ ಬರ್ರಿ. ನೀವು ಹೋಗಿ ಬಂದ ಮ್ಯಾಲೆ ನಾ ಹೊಕ್ಕಿನಿ” ಎಂದಳು.

ನಾನು ಟಾಯಲೆಟ್ಟಿಗೆ ಹೋಗಿ ಬಂದು ಮಗುವನ್ನು ನೋಡಿಕೊಳ್ಳತೊಡಗಿದೆ. ಆ ಲೈಟಿನ ಬೆಳಕಿನಲ್ಲಿ ಮಗು ಸಂಪೂರ್ಣವಾಗಿ ಕಾಣಿಸಿತು. ಒಳ್ಳೆಯ ಮುದ್ದು ಕೃಷ್ಣನಂತಿತ್ತು. ಮಗುವಿನ ಹತ್ತಿರಕ್ಕೆ ಮುಖ ತಂದು ಜೋರಾಗಿ ಮುತ್ತನ್ನು ಕೊಟ್ಟಾಗ, ಮಗು ಕೊಸರಾಡಿ ಕಣ್ಣು ಮುಚ್ಚಿಯೇ ಅಳತೊಡಗಿತು. ನಾನು ಇದೇನು ಬಂತು ಫಜೀತಿ ಎಂದುಕೊಳ್ಳುತ್ತಲೇ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಟ್ಟತೊಡಗಿದೆ. ಅಷ್ಟರಲ್ಲಿ ಆಕೆ ಬಂದು “ಎದ್ದಾನರಿ?” ಎನ್ನುತ್ತ ಗಾಬರಿಪಟ್ಟಳು. ಮಗು ಮತ್ತೆ ಹಾಗೇ ನಿದ್ದೆಗೆ ಜಾರಿತು. ಆಕೆ ಹೇಳುವ ಮುಂಚೆಯೇ ನಿಧಾನವಾಗಿ ಕೆಳಕ್ಕೆ ಮಲಗಿಸಿ ನಾನೂ ಮಲಗಿದೆ.

ಸ್ವಲ್ಪ ಸಮಯದ ನಂತರ, ಆಕೆ ಮಗುವಿಗೆ ಹೊದಿಸಿದ್ದ ತನ್ನ ವೇಲಿನ ಭಾಗವೊಂದನ್ನು ತನ್ನ ಮುಖ ಸಂಪೂರ್ಣವಾಗಿ ಮುಚ್ಚುವಂತೆ ಹೊದ್ದುಕೊಂಡು ಮೊಬೈಲ್‌ ನೋಡುತ್ತಿದ್ದಳು. ಆಕೆ ಫಿಲ್ಮ ಅಥವಾ ಸಿರಿಯಲ್‌ ನೋಡುತ್ತಿರಬಹುದೆಂದು ಭಾವಿಸಿದೆ. ಆದರೆ ಆಕೆ ಮುಸುಕಿನಲ್ಲಿಯೇ ಟೈಪ್‌ ಮಾಡುತ್ತಿದ್ದಳು. ನಿಧಾನವಾಗಿ ತನ್ನ ಮುಸುಕು ಸರಿಸಿಕೊಂಡು ನನ್ನತ್ತ ಓರೆ ನೋಟದಿಂದ ಗಮನಿಸುತ್ತಿದ್ದಳು. ನಾನು ಎಚ್ಚರವಾಗಿರುವ ಯಾವುದೆ ಸುಳಿವು ನೀಡದಾದಾಗ, ನಾನು ಮಲಗಿರುವೆನೆಂದು ಭಾವಿಸಿದಳು ಎನ್ನಿಸುತ್ತದೆ. ಹಾಗಾಗಿ ನನಗೆ ಕೇಳಿಸದಷ್ಟು ಸಣ್ಣಧ್ವನಿಯಲ್ಲಿ ಫೋನಿನಲ್ಲಿ ಪಿಸುಗುಟ್ಟತೊಡಗಿದಳು. ಮುಂದೆ ಆಕೆಗೆ ಇಲ್ಲಿಯೇ ಮಾತನಾಡಲು ಸರಿ ಹೋಗಲಿಲ್ಲವೇನೊ ಸದ್ದು ಮಾಡದೆ ಮೇಲೆದ್ದು ಓಡಾಡುತ್ತ ಮಾತಾಡತೊಡಗಿದಳು.

ಇಲ್ಲಿ ಯಾಕೊ ಯಾವುದೂ ಸರಿ ಇಲ್ಲವೆನ್ನಿಸಿತು. ಗಮನ ನನ್ನ ಪರ್ಸಿನ ಮೇಲೆ ಹೋಯಿತು. ಅದು ಸುರಕ್ಷಿತವಾಗಿದೆಯೆ ಎಂಬುದನ್ನು ಗಮನಿಸಿದೆ. ಡಿಜಿಟಲ್ ಪೇಮೆಂಟ್ ಪ್ರಾರಂಭವಾದ ನಂತರ ಹಣವನ್ನು ಹೆಚ್ಚಿಗೆ ತೆಗೆದುಕೊಂಡು ಓಡಾಡುತ್ತಿರಲಿಲ್ಲ ಆದರೆ ಈ ಫೋನಿನಲ್ಲಿಯ ಹಣ ನಂಬಿ ಹಣ ತರದೆ ಅದೆಷ್ಟೊ ಬಾರಿ ಗೋಳಾಡಿದ್ದಿದೆ. ಹಾಗಾಗಿ ಒಂದಿಷ್ಟಂತೂ ತೆಗೆದುಕೊಂಡು ಬಂದಿದ್ದೆ. ಆ ಹಣದ ಪರ್ಸ ಮೇಲೆ ಕೈಯಿಟ್ಟು ಮಲಗಿದೆ. ತಕ್ಷಣವೇ ನಾನು ಆಕೆಯನ್ನು ನಂಬಿ ಟಾಯಲೆಟ್ಟಿಗೆ ಹೋಗುವಾಗ ಆ ಪರ್ಸನ್ನು ಅಲ್ಲಿಯೇ ಬಿಟ್ಟು ಹೋದದ್ದು ನೆನಪಾಗಿ ಗಾಬರಿ ಹುಟ್ಟಿತು. ಪರ್ಸಿನಲ್ಲಿಯ ಹಣವನ್ನು ಒಂದು ಬಾರಿ ನೋಡಿಕೊಳ್ಳುವುದು ಒಳ್ಳೆಯದೆನ್ನಿಸಿತು. ಆಕೆ ಎಲ್ಲಿರುವಳೆಂದು ಇಣುಕಿ ನೋಡಿದೆ. ಬಸ್ಸಿನ ಡ್ರಾಯವರನನ್ನು ಏನೋ ವಿಚಾರಿಸುತ್ತಿರುವಂತೆ ತೋರಿತು. ಕೂಡಲೇ ಪರ್ಸಿನ ಒಳ ಜಿಪ್ ತೆಗೆದು ಆ ಮಂದ ಬೆಳಕಿನಡಿ ಸರಿಯಾಗಿ ಕಾಣಿಸದಿದ್ದರೂ ಇದ್ದಷ್ಟೇ ಇರಬಹುದು ಎನ್ನಿಸಿತಾದರೂ ಮತ್ತೆ ಅಸಲಿ ನೋಟಿನ್ನು ತೆಗೆದುಕೊಂಡು ನಕಲಿ ನೋಟು ಇಟ್ಟು ಮೋಸ ಮಾಡಿದ ಉಧಾಹರಣೆ ಕಣ್ಮುಂದೆ ಸುಳಿದಾಗ, ಬಲು ಬೇಗನೇ ಆಕೆ ಬರುವ ಮುಂಚೆ ಮೊಬೈಲಿನ ಲೈಟ್ ಆನ್ ಮಾಡಿ ನೋಡಿದಾಗ ಐನೂರರ ನೋಟುಗಳು ಸ್ಪಷ್ಟವಾಗಿ ಕಾಣಿಸಿ ಅದೇ ವೇಗದಲ್ಲಿ ಪರ್ಸನ್ನು ಮತ್ತಷ್ಟು ಜೋಪಾನವಾಗಿ ಇಟ್ಟೆ. ಹಾಗೇ ನನ್ನ ಆಯ್ ಫೋನ್ ನನ್ನ ಕೈಯಲ್ಲಿಯೇ ಇದೆ ಅಲ್ಲವೇ ಎಂದುಕೊಂಡು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡಾಗ ನನ್ನ ವಿಚಾರ ನನಗೆ ನಗೆ ಉಕ್ಕಿಸಿತು.

ಈಗಂತೂ ನಿದ್ದೆ ಮಂಗಮಾಯವಾಗಿತ್ತು. ಮಗುವಿನ ಮೇಲೆ ದೃಷ್ಟಿಹರಿದಾಗ, ಸರಿಯಾದ ಬಂಗಿಯಲ್ಲಿ ಮಲಗಿಲ್ಲವೆನ್ನಿಸಿ ಮಗುವನ್ನು ಸರಿಯಾಗಿ ಮಲಗಿಸಿ ನನ್ನ ಶಾಲನ್ನು ಅದಕ್ಕೆ ಹೊದಿಸಿದೆ. ಬಂದಾಗಿನಿಂದಲೂ ಅದು ಮಲಗಿಯೇ ಇತ್ತು. ಈ ವಯಸ್ಸಿನ ಮಕ್ಕಳು ಮೇಲಿಂದ ಮೇಲೆ ಎದ್ದು ಅತ್ತು ಹಾಲು ಕುಡಿದು ಮಲಗುತ್ತವೆ. ಆದರೆ ಇದು ಒಂದು ಬಾರಿ ಮಾತ್ರ ಎದ್ದಿತ್ತು. ಏಳುವುದೆಂದರೇನು? ಕಣ್ಣು ಕೂಡ ತೆರೆದಿರಲಿಲ್ಲ. ಅಥವಾ ಅದು ಅಂಗವಿಕಲ ಮಗುವೇ? ಹಾಗೆಂದುಕೊಂಡಾಗ ಮಗುವನ್ನು ಅಡಿಯಿಂದ ಮುಡಿವರೆಗೆ ಮತ್ತೊಮ್ಮೆ ಪರೀಕ್ಷಾ ದೃಷ್ಟಿಯಿಂದ ನೋಡಿದೆ. ಹಾಗೇನೂ ಅನ್ನಿಸಲಿಲ್ಲ. ಆದರೆ ಎಲ್ಲ ಅವಯವಗಳೂ ಸರಿಯಾಗಿ ಕಾಣಿಸಿದರೂ ಕೆಲಸ ಮಾಡುವುದಿಲ್ಲ. ಅದರಲ್ಲಿಯೂ ಬುದ್ಧಿಮಾಂಧ್ಯ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಆ ತಾಯಿ ಈ ಮಗುವಿನ ಮೇಲೆ ಮೋಹ ತೋರದೆ ಇರುವುದಕ್ಕೆ ಇದೆ ಕಾರಣ ಇರಬಹುದೆ? ಎನ್ನಿಸದೆಯೂ ಇರಲಿಲ್ಲ.

ಆದರೆ ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಗಾದೆ ನೆನಪಾಗಿ ಹಾಗೆ ವಿಚಾರ ಮಾಡುತ್ತಿರುವುದು ತಪ್ಪು ಎನ್ನಿಸಿತು. ಏನಾದರಾಗಲಿ ಆಕೆ ಬಂದ ನಂತರ ಇನ್ನಷ್ಟು ಆಕೆಯ ಬಗ್ಗೆ ವಿಚಾರಿಸಿದರಾಯಿತು. ಅಕಸ್ಮಾತ್ ಆಕೆ ಏನಾದರೂ ದೊಡ್ಡ ದರೋಡೆಕೋರಳಾಗಿದ್ದಲ್ಲಿ ಅದನ್ನು ನಾನು ಕಂಡುಹಿಡಿದು ಕೊಟ್ಟಲ್ಲಿ ದರೋಡೆಕೋರರ ಗುಂಪನ್ನು ಹಿಡಿದುಕೊಟ್ಟ ಧೀರೆ ಎಂಬ ಪಟ್ಟ ದೊರಕುವುದು. ಅಷ್ಟೇ ಅಲ್ಲ ಬರಹಗಾರ್ತಿಯಾಗಿ ಬರವಣಿಗೆಯಿಂದ ಸಮಾಜವನ್ನು ತಿದ್ದುವುದಲ್ಲದೇ ಈ ಲೇಖಕಿ ಪ್ರತ್ಯಕ್ಷವಾಗಿಯೇ ಸಮಾಜವನ್ನು ತಿದ್ದುವುದರಲ್ಲಿ ಭಾಗಿಯಾಗಿದ್ದಾಳೆ ಎಂಬ ಹೆಸರು ಬರುವುದು ಎನ್ನಿಸಿತು. ಒಡನೆಯೇ ಮಕ್ಕಳು “ನಿನಗಂತೂ ಒಂದೀಟೂ ಏನೂ ಕಂಡಹಿಡಿಯಾಕ ಬರೂದಿಲ್ಲಾ ಯಾವ ಲೋಕದಾಗ ಇರತಿ ಯಾರಿಗೆ ಗೊತ್ತು” ಎನ್ನುವುದರೊಂದಿಗೆ ನನ್ನ ದೌರ್ಬಲ್ಯವನ್ನು ಮತ್ತೆ ಮತ್ತೆ ತೋರಿಸಿಕೊಡುವುದು, ಹಾಗೇ ಊರಲ್ಲಿ ಏನಾದರೂ ಅಹಿತಕರ ಘಟನೆ ನಡೆದು ಅದರ ಅರಿವು ನನಗಾಗದೇ ಓರಗಿತ್ತಿಯರು ಚರ್ಚಿಸುತ್ತಿರುವಾಗ, ನಾನು ಆಶ್ಚರ್ಯದಿಂದ ಆಲಿಸುತ್ತರುವಾಗ, “ಏನವಾ ನೀ ಬೇಕಾದಂಗ ಪಂಚಾಯ್ತಿಯೊಳಗ ಇರತಿ ಸುದ್ದಿ ನಿನಗ ಮೊದಲ ತಿಳೀಬೇಕು. ಅದು ಬಿಟ್ಟ ನಾವ ನಿನಗ ಸುದ್ದಿ ಹೇಳಬೇಕು” ಎನ್ನುತ್ತಿರುವುದನ್ನು ಜೊತೆಗೆ ಈ ಸಾಹಸದ ಕತೆಯನ್ನು ಅವರಿಗೆ ಹೇಳಿದರೆ ಎಂಬುದನ್ನು ನೆನಪಿಸಿಕೊಂಡಾಗ, ನಗು ಬಂತು.

ನಾನು ಹೊಸದಾಗಿ ಮದುವೆಯಾಗಿ ಗಂಡನಮನೆಗೆ ಬಂದಾಗ, ನನ್ನ ಓರಗಿತ್ತಿ ಜಲಜಕ್ಕನೊಂದಿಗೆ ವಾಕಿಂಗ್ ಹೋದಾಗ, ನಮ್ಮ ಮುಂದೆಯೇ ಹತ್ತಿಪ್ಪತ್ತು ಎಮ್ಮೆಗಳ ಹಿಂಡು ಬಂದು ಜಲಜಕ್ಕ ಅವುಗಳನ್ನು ತೋರಿಸುತ್ತಾ, “ಹುಂ, ಇದರೊಳಗ ನಮ್ಮ ಎಮ್ಮಿ ಯಾವುದಂತ ಕಂಡಹಿಡಿ ನೋಡುಣ. ನೀ ಏನಾರ ನಮ್ಮ ಎಮ್ಮಿ ಗುರುತಿಸಿದಿ ಅಂದ್ರ ನೀ ಕೇಳಿದ್ದನ್ನ ನಾ ಕೊಡತೀನಿ” ಎಂದಿದ್ದಳು. ನಾನು ಹುಲ್ಲು ಮೇಯುತ್ತ ಸಾಗುತ್ತಿದ್ದ ಆ ಎಮ್ಮೆಗಳನ್ನು ಪರೀಕ್ಷಾ ದೃಷ್ಟಿಯಿಂದ ನೋಡಿದೆ. ಎಲ್ಲವೂ ಒಂದೇ ತರಹ ಕಂಡು ಇಲ್ಲ ಎನ್ನುವ ಬದಲು ಬೆರಳುಮಾಡಿ ಪೆಚ್ಚುಪೆಚ್ಚಾಗಿ “ಇದು” “ಅದು” ಎಂದು ತೋರಿಸಿದೆ. ಜಲಜಕ್ಕ ಮನೆ ಬರುವವರೆಗೂ ನಕ್ಕಿದ್ದಳು. ಆ ಘಟನೆಯನ್ನು ನೆನಪಿಸಿಕೊಂಡ ಮೇಲೆ ಜೋರಾಗಿಯೇ ನಕ್ಕಿದ್ದೆ. ಅದನ್ನು ಕಂಡು ಆಕೆ “ಯಾಕ್ರಿ ನಿದ್ದಿ ಬರಲಿಲ್ಲ?” ಎಂದು ಕೇಳಿದಾಗ ನಾನು ಗೋಣು ಅಲ್ಲಾಡಿಸಿದೆ. “ನಮ್ಮ ಪಾಪು ಆದಿತ್ಯನ ಸಮಂದ ಜಾಗಾ ಇಕ್ಕಟ್ಟಾಗಿರಬೇಕ”

“ಏನು? ನಿನ್ನ ಮಗನ ಹೆಸರ ಆದಿತ್ಯಾ?”

“ಹುಂ ಹಂಗೂ ಕರೀತೀವಿರಿ. ತವರ ಮನಿಯೊಳಗ ಅಲೋಕ ಅಂತ, ಗಂಡನ ಮನಿಯೊಳಗ ಆದಿತ್ಯಾ ಅಂತ ಕರೀತೀವಿ”

“ನಿಮ್ಮ ತವರೂರು ಯಾವುದು? ಮತ್ತ ಗಂಡನ ಮನಿ?” ಆಕೆಗೆ ಮಾತು ಮುಂದುವರೆಸುವುದು ಇಷ್ಟವಾಗಲಿಲ್ಲವೇನೊ ಜೊತೆಗೆ ಜೋರಾಗಿ ನಿದ್ದೆ ಬಂದಿರಬಹುದು. ಆಕಳಿಸುತ್ತಾ ಹಾಗೇ ಮಲಗಿದಳು. ಮುಂದೆ ಹತ್ತು ಹದಿನೈದು ನಿಮಿಷದಲ್ಲಿ ಅದ್ಯಾವುದೋ ಹೊಟೆಲ್ ಮುಂದೆ ಬಸ್ಸು ನಿಲ್ಲಿಸಿ “ಟಾಯಲೆಟ್ಟಿಗೆ ಹೋಗುವಾರು ಹೋಗಿ ಬರ್ರಿ ಒಂದ ಐದ ನಿಮಿಷ ಟೈಮ್ ಐತಿ ನೋಡ್ರಿ” ಎಂಬ ಜೋರಾದ ಧ್ವನಿಗೆ ಎಚ್ಚರಗೊಂಡೆ. ಎಚ್ಚರಗೊಂಡೆ ಎನ್ನುವುದಕ್ಕಿಂತ ಎಚ್ಚರವಾಗಿಯೇ ಇದ್ದೆ ಎನ್ನುವುದು ಸರಿ ಏನೊ.

ಆಕೆ “ಮೇಡಮ್ಮಾರ ಟಾಯಲೆಟ್ಟಿಗೆ ಹೊಕ್ಕಿರಿ?” ಎಂದು ಕೇಳಿದಳು. ನನ್ನ ಆಯ್‌ ಫೋನ್ ಹಾಗೂ ಹಣದ ನೆನಪಾಗಿ ಬಸ್ಸಿನಿಂದ ಇಳಿಯುವುದೇ ಬೇಡವೆನ್ನಿಸಿತು. ಹೋಗಬೇಕೆಂದಿದ್ದರೆ ಈ ಬಾರಿ ಅವೆರಡನ್ನೂ ಎತ್ತಿಕೊಂಡೇ ಹೋಗುತ್ತಿದ್ದೆ. ಆದರೆ ನನಗೆ ಹೋಗಬೇಕೆನ್ನಿಸಲಿಲ್ಲ. ಹಾಗಾಗಿ ನಾನು “ಇಲ್ಲ” ಎಂದು ಹೇಳಿದೆ. ಆಕೆ “ಹಂಗಾರ ನೀವು ಹೋಗಲೀಕ ಈ ಹುಡುಗನ್ನ ನೋಡಕೋರಿ” ಎಂದು ನನ್ನ ಉತ್ತರಕ್ಕೂ ಕಾಯದೆ ಬಸ್ಸಿನಿಂದ ಕೆಳಗಿಳಿದಾಗ, ನಾನು ಮನಸ್ಸಿನಲ್ಲಿಯೇ “ನೋಡಕೊಂತಿನಿ ಬಿಡವಾ ನೀ ಬಸ್ಸ ಹತ್ತಿದಾಗಿಂದ ನಾನ ಆ ಹುಡುಗನ್ನ ನೋಡಕೊಳ್ಳಾಕತ್ತೀನಿ” ಎಂದುಕೊಂಡೆ.

ಮಗು ಹಾಗೇ ಜಗತ್ತಿನ ಪರಿವೆ ಇಲ್ಲದಂತೆ ‌ ಮಲಗೇ ಇತ್ತು. ಯಾಕೋ ಇನ್ನು ಆ ಮಗುವಿನ ಸಹವಾಸವಾಗಲಿ, ಮಗುವಿನ ಅಮ್ಮನೆಂದು ಹೇಳಿಕೊಂಡ ಆಕೆಯ ಸಹವಾಸವಾಗಲಿ ಬೇಡವೆನ್ನಿಸಿತು. ಹಾಗೇ ಕಿಟಕಿ ಆಚೆ ದೃಷ್ಟಿ ಹೋದಾಗ, ಆಕೆ ಫೋನಿನಲ್ಲಿ ಮಾತನಾಡುತ್ತಿರುವುದು ಕಾಣಿಸಿತು. ಅಷ್ಟರಲ್ಲಿ ಬಸ್ಸು ಸದ್ದು ಮಾಡತೊಡಗಿದಾಗ, ಆಕೆ ಏದುಸಿರುಬಿಡುತ್ತಾ ಬಸ್ಸು ಹತ್ತಿ ಬಂದಳು.

ಆಕೆ ಬಂದ ನಂತರ ಈ ಮೊದಲೇ ನಿರ್ಧರಿಸಿದಂತೆ ಕಿಟಕಿಯಾಚೆ ಮುಖಮಾಡಿ ನನ್ನ ಆಯ್ ಫೋನ್ ಹಾಗೂ ಪರ್ಸನ್ನು ಗಟ್ಟಿಯಾಗಿ ಹಿಡಿದು ಮಲಗಿದೆ.‌ ಆದರೆ ಮತ್ತೂ ಆ ಮಗುವಿನ ಸೆಳೆತ ಬಿಡದೆ ಅದಕ್ಕೆ ಮತ್ತೆ ಮತ್ತೆ ಶಾಲು ಹೊದೆಸುವುದು ಸರಿಯಾಗಿ ಮಲಗಿಸುವುದು ಮಾಡುತ್ತಿದ್ದೆ.

ಕನಸಲ್ಲಿ ಎಂಬಂತೆ ಯಾರು ಯಾರೋ ಜೋರಾಗಿ ಕಿರುಚಿದಂತೆನ್ನಿಸಿತು. ಬರ ಬರುತ್ತ ಆ ಸದ್ದು ಹತ್ತಿರವೇ ಬಂದಂತೆನ್ನಿತು. ಹಾಗೇ ಸ್ವಲ್ಪ ಎಚ್ಚವಾಗಿ ಬಸ್ಸು ನಿಂತಿದೆ ಎನ್ನಿಸಿತು. ಬಸ್ಸಿನ ಜನರೆಲ್ಲ ಏನೇನೊ ಮಾತಾಡುತ್ತಿದ್ದದ್ದು ಅರಿವಿಗೆ ಬಂದು ಕಣ್ಣುಬಿಟ್ಟು ನೋಡಿದೆ. ಪಕ್ಕದಲ್ಲಿ ಆ ಹೆಣ್ಣುಮಗಳಿಲ್ಲ. ಆದರೆ ಮಗು ಹಾಗೇ ಮಲಗಿತ್ತು. ನನ್ನ ಆಯ್ ಫೋನಿಗಾಗಿ ಕೈಯಾಡಿಸಿದೆ. ಫೋನು ಪರ್ಸು ಸುರಕ್ಷಿತವಾಗಿಯೇ ಇದ್ದವು. ಪಕ್ಕದಲ್ಲಿ ಮಗು ಕೂಡ ಸುಖವಾಗಿಯೇ ನಿದ್ರಿಸುತ್ತಿತ್ತು. ಆಕೆ ಮತ್ತೆ ಕೆಳಗಿಳಿದಿರಬಹುದು ಎಂದುಕೊಂಡೆ. ಮುಂದೆ ಒಮ್ಮೆಲೇ ಖಾಕಿ ಡ್ರೆಸ್ಸಿನವರು ನನ್ನ ಸೀಟಿನ ಮುಂದೆ ಬಂದು ಸೀಟಿನ ಅಂಚಿಗೆ ಲಾಠಿಯಿಂದ ಬಾರಿಸಿ, ಬಸ್ಸಿನ ಹುಡುಗ ಪರದೆ ಸರಿಸಿದಾಗ, ತಬ್ಬಿಬ್ಬಾದೆ. ಅವರು ನೇರವಾಗಿಯೇ ನನ್ನ ಮೇಲೆ ದಾಳಿ ಮಾಡತೊಡಗಿದರು. “ಯಾರರಿ ಮೇಡಂ ನೀವು? ಈ ಕೂಸು ಯಾರದು?” ಏನೆಂದು ಹೇಳಲಾಗದೇ ತಡವರಿಸಿದೆ. “ಹೇಳ್ರಿ ಯಾದರ ಈ ಮಗು?”

“ಅದು ನಂದಲ್ಲರಿ ಸರ್”

“ನಿಮ್ಮದಲ್ಲಾ ಅಂದ್ರ ಇದು ಇಲ್ಯಾಕ ಬಂತು?”

ಇಷ್ಟರಲ್ಲಾಗಲೇ ನಾನು ಸುಧಾರಿಸಿಕೊಂಡಿದ್ದೆ. “ನೋಡ್ರಿ ಸರ್, ಇಲ್ಲೆ ನನ್ನ ಪಕ್ಕಕ್ಕ ಈ ಹುಡುಗನ್ನ ಅವ್ವಾ ಅಂತ ಹೇಳಿ ಒಬ್ಬಾಕಿ ಬಂದಿದ್ದಳು. ಕೇಳ್ರಿ ಬೇಕಾದ್ರ ಬಸ್ಸಿನಾರನ್ನ”

ಬಸ್ಸಿನ ಹುಡುಗನಲ್ಲದೇ ಬಸ್ಸಿನ ಅಕ್ಕಪಕ್ಕದ ಸೀಟಿನ ಜನರು ಹೌದೆಂದಾಗ, “ಎಲ್ಲೆ ನಿಮ್ಮ ಟಿಕೇಟ್ ಚಾಟ್ ತುಗೊಂಡ ಬಾ” ಹುಡುಗ ತಂದು ಕೊಟ್ಟ. “ಹುಂ, ಟಿಕೇಟ್ ನಂಬರ್ ಲೋವರ್ ಮೂರು ಪ್ರತಿಭಾ ನೀವ ಏನ್ರಿ?”

“ಹೌದು”

“ನಿಮ್ಮ ಬಾಜುಕ ನಿರ್ಮಲಾ ಅಂತ ಇದ್ದರಾ?”

“ಹೌದು ಹಂಗ ಅಂತ ಹೇಳಿದ ನೆನಪು”

ಆಕೆಯ ಫೋನಿಗೆ ಪ್ರಯತ್ನಿಸಿ ಸೋತುಹೋದ ಪೋಲಿಸ್ ಅಧಿಕಾರಿ “ಅಲ್ರಿ ಮೇಡಮ್ ನಿಮ್ಮ ಪಕ್ಕಕ್ಕ ಮಗುವಿನ ಕಳ್ಳತನಾ ಮಾಡಿದಾಕಿ ಕುಂತಾಗ ನಿಮಗ ಅನುಮಾನಾ ಬರಲಿಲ್ಲಾ?”

“ಬಂತು. ಆದರ ನಾ ಏನ ಮಾಡಬೇಕರಿ? ಯಾರಿಗೆ ಹೇಳಬೇಕು?”

“ಅಲ್ರಿ ಈ ಕೂಸಿನ್ನ ನೋಡಿ ಆದ್ರೂ ನಿಮಗ ಅದನ್ನ ಕಾಪಾಡಬೇಕ ಅನ್ನಸಲಿಲ್ಲಾ? ಸಾಮಾಜಿಕ ಜವಾಬ್ದಾರಿ ಎಲ್ಲಾರಿಗೂ ಇರಬೇಕು. ಪಾಪ ಇದರ ಅವ್ವಾ ಅಪ್ಪಾ ಜೀವಂತ ಶವಾ ಆಗ್ಯಾರಾ”

“ಏನ್ರಿ? ನೀವ ಏನ ಹೇಳಾಕತ್ತೀರಿ? ಈ ಮಗು ಬಂದಾಗಿಂದ ನಾನ ನೋಡಕೊಳ್ಳಾಕತ್ತೀನಿ. ನಾ ನೋಡಕೊಂಡಿನಿ ಅಂತನ ಇದು ಇನ್ನ ಜೀವಂತ ಐತಿ. ಅಲ್ರಿ ಇವಾ ಕಳ್ಳತನಾ ಆಗುಮಟಾ ಅಪ್ಪಾ ಅಮ್ಮಾ ಮಕ್ಕೊಂಡಿದ್ರಾ? ನೀವಂತೂ ಎಲ್ಲಾ ಮುಗದ ಮ್ಯಾಲೆ ಎನ್ಕ್ವಾಯರಿಗೆ ಬರತೀರಿ. ನಮ್ಮ ಜವಾಬ್ದಾರಿ ಪ್ರಶ್ನಿಸುವಾರು ನೀವ ಏನ ಮಾಡಾಕತ್ತಿದ್ರಿ ಸಾಹೇಬ್ರ?” ನನ್ನ ಏರು ಧ್ವನಿಗೆ ನಾನೇ ಭಯಪಟ್ಟೆ. ಮುಂದೆ ಸುಧಾರಿಸಿಕೊಂಡು ನನ್ನ ಪರಿಚಯ ಹೇಳಿ ನಡೆದುದ್ದರ ಸಂಕ್ಷಿಪ್ತ ವರದಿ ಒಪ್ಪಿಸಿದಾಗ, ಆವರು, “ಸಾರಿರಿ ಮೇಡಮ್, ನಾವು ತಮಗ ಫೋನ್ ಮಾಡಿದಾಗ ದಯವಿಟ್ಟು ಮಾತಾಡ್ರಿ” ಎಂದರು ಗೌರವದಿಂದ.

ಮಗುವನ್ನು ಎತ್ತಿಕೊಡುವಾಗ, “ಅದು ಏನಾರ ಇರಲಿ ಮೊದಲ ಈ ಕೂಸಿನ್ನ ದವಾಖಾನೆಕ್ಕ ಒಯ್ಯರಿ. ಆ ಪುಣ್ಯಾತಿಗಿತ್ತಿ ಇದಕ್ಕ ನಿದ್ದಿ ಗುಳಗಿ ಕೊಟ್ಟಾಳೊ ಏನೊ. ಬೇಕಾದ್ರ ನಾ ಬಾ ಅಂದ್ರ ಬರತೀನಿ” ಎಂದಾಗ, “ಏ ಬ್ಯಾಡ್ರಿ ಮೇಡಮ್, ನಾವು ಇದನ್ನ ದವಾಖಾನೆಗೆ ತೋರಿಸಿಕೊಂಡ ತುಗೊಂಡ ಹೊಕ್ಕಿವಿ” ಎಂದಾಗ ನಿರಾಳವಾದೆ. ಹೊರಗಡೆ ಚಳಿಯಲ್ಲಿ ಮಗು ನಡುಗುವುದೆಂದು ಮಗುವಿಗೆ ನನ್ನದೇ ಶಾಲು ಹೊದಿಸುವಂತೆ ಎತ್ತಿಕೊಟ್ಟೆ.


ಅದಿತಿಗೆ ಸಂಕ್ಷಿಪ್ತವಾಗಿ ಕತೆ ಹೇಳಿ ಸ್ವಲ್ಪ ಮಲಗಿ ಸುಧಾರಿಸಿಕೊಂಡೆ. ಆಕೆ ನನಗೆ ಎಲ್ಲವನ್ನೂ ಹೇಳಿಕೊಟ್ಟು ಆಫೀಸಿಗೆ ಹೋದಳು.

ಅಂತೂ ನಾನು ಸಾಹಿತ್ಯಕ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ. ನನ್ನ ಆತ್ಮೀಯರೆಲ್ಲ ಅಷ್ಟೊಂದು ದೂರದ ಬೆಳಗಾವಿಯಿಂದ ಬಂದ ನನ್ನನ್ನು ಪ್ರೀತಿಯಿಂದ ಹಾಗೂ ಅಭಿಮಾನದಿಂದ ಕಂಡರು. ಅವರೊಟ್ಟಿಗೆ ಈ ವಿಷಯವನ್ನು ಚರ್ಚಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದವರು ಈ ಕುರಿತಾಗಿಯೇ ವಿಚಾರ ಸಂಕಿರಣವೊಂದನ್ನು ಏರ್ಪಡಿಸುವುದಾಗಿಯೂ ಅದಕ್ಕೆ ನಾನೇ ಪ್ರಮುಖ ಭಾಷಣಕಾರ್ತಿಯಾಗಿ ಬರಬೇಕೆಂದು ಆಹ್ವಾನವಿತ್ತರು.

ಎಲ್ಲರೂ ಸೇರಿ ಗ್ರುಫ್ ಫೋಟೊ ತೆಗೆದುಕೊಂಡೆವು. ನಾನೂ ನನ್ನ ಆಯ್ ಫೋನಿನಿಂದ ಎಲ್ಲರೊಟ್ಟಿಗೆ ಸೆಲ್ಫಿ ತೆಗೆದುಕೊಂಡೆ. ಫೋಟೊ ತುಂಬಾ ಚೆನ್ನಾಗಿಯೇ ಬಂತು.

ಘಟನೆಯನ್ನು ಹೆಚ್ಚುಕಡಿಮೆ ಮರೆತಂತಾಗಿತ್ತು. ಇದ್ದಕ್ಕಿದ್ದಂತೆ ನನಗೊಂದು ಅಪರಿಚಿತ ನಂಬರಿನಿಂದ ಮೆಸೇಜ್ ಬಂತು. “ಮೇಡಮ್ ನಮಸ್ಕಾರ. ಮೊದಲು ಮಗುವನ್ನು ಕಾಪಾಡಿದ್ದುದಕ್ಕೆ ಧನ್ಯವಾದಗಳು. ನಾನು ಮಾಡಿದ್ದು ನಿಜವಾಗಿಯೂ ಅಪರಾಧ. ಆದರೆ ನನಗದು ಅನಿವಾರ್ಯವಾಗಿತ್ತು. ಮಗುವಿನ ಪ್ರಾಣ ತೆಗೆಯುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಕಟುಕರಿಗೆ ಮಗುವನ್ನು ಸಾಗಿಸಲು ನಾನು ನಿಯೋಜಿಸ್ಪಟ್ಟಿದ್ದೆ. ಮಗುವನ್ನು ಒಂದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಪ್ರಯತ್ನಿಸಿದೆ. ಆಗ ಸಿಕ್ಕಿದ್ದು ನಿಮ್ಮ ಮಡಿಲು. ಈಗ ಮಗು ಸುರಕ್ಷಿತವಾಗಿ ತಲುಪಿದೆ. ಮತ್ತೊಮ್ಮೆ ಧನ್ಯವಾದಗಳು” ಮೆಸೇಜ್ ನೋಡಿ ತಕ್ಷಣವೇ ಆ ನಂಬರಿಗೆ ಕಾಲ್ ಮಾಡಲು ಪ್ರಯತ್ನಿಸಿದೆ. ಆದರೆ ನಾಟ್ ಎಕ್ಷಿಸ್ಟೆಡ್ ಎಂದು ತಿಳಿದು ತೆಪ್ಪಗಾದೆ. ಆದರೂ ಆ ಮಗು ತಂದೆ ತಾಯಿಯರನ್ನು ಸೇರಿದ್ದು, ಹಾಗು ಅದು ನನ್ನ ಬಳಿ ಇರುವಷ್ಟು ಹೊತ್ತು ಕಾಳಜಿಯಿಂದ ನೋಡಿಕೊಂಡೆ ಎಂಬ ವಿಷಯ ಮನಸ್ಸಿಗೆ ನೆಮ್ಮದಿಯನ್ನು ಎರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT