ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಷ್ಟ್ರ ನೆನಪು

Last Updated 6 ಅಕ್ಟೋಬರ್ 2018, 20:08 IST
ಅಕ್ಷರ ಗಾತ್ರ

ಶಿಕ್ಷಕರ ದಿನ ನನಗೆ ಬಾಲ್ಯದಿಂದಲೂ ಪಾಠ ಮಾಡಿದ ಎಲ್ಲ ಮೇಷ್ಟ್ರುಗಳೂ ನೆನಪಾಗುತ್ತಾರೆ. ಪಾಠ ಮಾಡದೆಯೂ ತಮ್ಮ ಸಾಹಿತ್ಯದಿಂದ ಅಥವಾ ವೈಚಾರಿಕ ವಿದ್ವತ್ತಿನ ಮಾತುಗಳಿಂದ ನನ್ನಲ್ಲಿ ವೈಜ್ಞಾನಿಕ ಮನೋಭಾವ ರೂಪಿಸಿದ ಅನೇಕ ಬರಹಗಾರರು ನೆನಪಾಗುತ್ತಾರೆ. ಅವರೆಲ್ಲರಿಗೂ ಶಿಕ್ಷಕರ ದಿನದಂದು ನನ್ನ ಕೃತಜ್ಞತೆ ಅರ್ಪಿಸುತ್ತೇನೆ.

ನನ್ನನ್ನು ಬಹುವಾಗಿ ಕಾಡುವುದು ಕಿ.ರಂ. ನಾಗರಾಜ ಮೇಷ್ಟ್ರು. ಮೇಷ್ಟ್ರು ಅಂದರೆ ಹೀಗಿರಬೇಕು ಅನಿಸಿದ್ದು ಕಿ.ರಂ. ಅವರನ್ನು ನೋಡಿದ ಮೇಲೆಯೇ.

ಅವರ ಜೊತೆಗೆ ಸುಮಾರು ಹತ್ತು ವರ್ಷಗಳನ್ನು ಕಳೆದ ನೆನಪುಗಳು ನನ್ನನ್ನು ಸದಾ ಕಾಡುತ್ತವೆ. ಕಿ.ರಂ. ಮೇಷ್ಟ್ರು ಅನ್ನುವುದಕ್ಕಿಂತ ಅವರನ್ನು ಮಹಾನ್ ಮಾನವತಾವಾದಿ ಎನ್ನಬಹುದು. ಅವರ ಶಿಷ್ಯ ಪ್ರೇಮ ಅನುಭವಿಸದವರು ನತದೃಷ್ಟರು ಎಂದೇ ನನ್ನ ಭಾವನೆ. ಅವರ ಬಗ್ಗೆ ಹೇಳುವುದಕ್ಕೆ ಹೊರಟರೆ ಪುಸ್ತಕವೇ ಆದೀತು. ಈ ಒಂದೇ ಒಂದು ಘಟನೆ ಹಂಚಿಕೊಂಡರೆ ಸಾಕು ಕಿ.ರಂ. ಮೇಷ್ಟ್ರು ಅಂದರೆ ಏನು? ಅನ್ನುವುದು ಎಲ್ಲರಿಗೂ ಗೊತ್ತಾಗಿಬಿಡುತ್ತದೆ.

ಮೇಷ್ಟ್ರ ಮನೆ ನಮಗೆ ಬಸವಣ್ಣನವರ ಅನುಭವ ಮಂಟಪ ಇದ್ದಂತೆ. ಸದಾ ತೆರೆದ ಬಾಗಿಲು. ಅಲ್ಲಿ ನಿತ್ಯ ದಾಸೋಹ. ಚಿಂತನಾ ಗೋಷ್ಠಿ. ಎಷ್ಟೋ ಸಲ ಮಾತುಕತೆ ಮಧ್ಯರಾತ್ರಿವರೆಗೂ ನಡೆದು ಅಲ್ಲಿಯೇ ಮಲಗುತ್ತಾ ಇದ್ದದ್ದು ಉಂಟು. ಹೀಗೆ ಒಂದು ರಾತ್ರಿ ಅವರ ಮನೆಯಲ್ಲಿ ಮಾತುಕತೆಯೆಲ್ಲಾ ಮುಗಿಯುವ ಹೊತ್ತಿಗೆ ನನಗೆ ನಿದ್ದೆಯ ಜೋಂಪು ಬಂದು ಊಟ ಮಾಡದೇ ಮಲಗಿದ್ದೆ.

ರಾತ್ರಿ ಮೂರು ಗಂಟೆ ಸಮಯದಲ್ಲಿ ಕಿ.ರಂ. ಅವರು ತಟ್ಟೆಯಲ್ಲಿ ಅನ್ನ ಕಲಸಿಕೊಂಡು ಬಂದು ನನ್ನನ್ನು ಎಬ್ಬಿಸಿದರು. ‘ಏಳ್ರೀ... ಊಟ ಮಾಡದೇ ಮಲಗಬಾರದು. ಸ್ವಲ್ಪ ಅನ್ನ ತಿಂದು ಮಲಗಿಕೊಳ್ಳಿ’ ಎಂದರು. ನಾನು ಆಶ್ಚರ್ಯದಿಂದ ಅವರ ಕಡೆ ನೋಡುತ್ತಾ ಇದ್ದೆ. ಅವರು ಕೈತುತ್ತು ತಿನ್ನಿಸಿಯೇ ಬಿಟ್ಟರು. ಅವರ ಕೈಯಲ್ಲಿ ಊಟ ಮಾಡುವ ಖುಷಿಯನ್ನು ತಪ್ಪಿಸಿಕೊಳ್ಳಲು ಬಯಸದೆ ಹಾಗೇ ಮೂಕ‌ವಿಸ್ಮಿತನಾಗಿ ಊಟ ಮಾಡುತ್ತಾ ಹೋದೆ. ಅವರು ತಿನ್ನಿಸುತ್ತಾ ಹೋದರು.

ನನ್ನ ಕಣ್ಣಲ್ಲಿ ಕಣ್ಣೀರು ಸುರಿಯಲಾರಂಭಿಸಿತು. ಗದ್ಗದಿತನಾದೆ. ನಾಲ್ಕು ವರ್ಷದವನಿರುವಾಗಲೇ ಅಪ್ಪನನ್ನು ಕಳೆದುಕೊಂಡು ತಂದೆಯ ಪ್ರೀತಿ‌ ಏನು ಎಂದು ತಿಳಿಯದ ನನಗೆ ಅವರು ಆ ದಿನ ತಂದೆ ಪ್ರೀತಿಯನ್ನು ಧಾರೆಯೆರೆದರು. ಹೃದಯ ತುಂಬಿ ಬಂದ ಆ ರಾತ್ರಿಯನ್ನು ನಾನು ಎಂದಿಗೂ ಮರೆಯಲಾರೆ. ಅಷ್ಟೇ ಅಲ್ಲದೆ ನನ್ನ ಬದುಕಿನ ಅತ್ಯಂತ ಸಂಕಷ್ಟದ ದಿನಗಳಲ್ಲಿ ಆಸರೆಯಾಗಿ ಹೊಸ ಬದುಕು ಕಟ್ಟಿಕೊಳ್ಳಲು ನೆರವಾದ ಅವರ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಅವರು ಇಲ್ಲದ ಈ ದಿನ ಅವರನ್ನು ಸ್ಮರಿಸುತ್ತಾ ಅವರಿಗೆ ಈ ಮೂಲಕ ಮನ ತುಂಬಿ ಕೃತಜ್ಞತೆ ಅರ್ಪಿಸಬಹುದು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT