ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಲ್‌, ನಾವೆಲ್ಲಿ ಆಟ ಆಡೋದು?

ಸಂಜಯನಗರದಲ್ಲಿ ‘ಪ್ರಜಾವಾಣಿ’ ಜನ­ಸ್ಪಂದನ: ಅಹವಾಲು ಹೇಳಿಕೊಂಡ ಸಾರ್ವಜನಿಕರು
Last Updated 28 ಮಾರ್ಚ್ 2015, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಕಲ್‌, ಈ ವಾರ್ಡ್‌ನಲ್ಲಿ ನಾಲ್ಕೈದು ಪಾರ್ಕ್‌ಗಳಿವೆ. ಆದ್ರೆ, ನಮಗೆ ಆಡೋಕೆ ಇರೋದು ಇದೊಂದೇ ಮೈದಾನ. ಇವಾಗ ನೋಡಿದ್ರೆ ಇಲ್ಲಿ ವಾಕಿಂಗ್‌ ಟ್ರ್ಯಾಕ್ ಮಾಡೋಕೆ ಹೊರಟವ್ರೆ.  ಕೆಲವರು ಇಲ್ಲೇ ಕುಡ್ದು, ತಿಂದು ಮಾಡಬಾರದೆಲ್ಲ ಮಾಡ್ತಾರೆ. ಹಿಂಗಾದ್ರೆ ನಾವೆಲ್ಲಿ ಆಡೋದು ಹೇಳಿ. ಪ್ಲೀಸ್‌, ಈ ಮೈದಾನ ನಮಗೆ ಉಳಿಸಿಕೊಡಿ’

ಸಂಜಯನಗರದ ಆದಿತ್ಯ, ಯತಾರ್ಥ, ಅನುರಾಗ ಅವರು ಸ್ನೇಹಿತರೊಂದಿಗೆ  ಬಂದು ತುಂಬಿದ ಸಭೆಯ ಎದುರು  ತಮ್ಮ ಅಹವಾಲು ಹೇಳಿಕೊಂಡರು. ಭಾವಿ ಪ್ರಜೆಗಳ ಮನವಿಗೆ ಸ್ಪಂದಿಸಿದ ಶಾಸಕರು ಮಕ್ಕಳ ಬಳಕೆಗಾಗಿ ಮೈದಾನವನ್ನು ಮೀಸಲಿಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಆಗ ಸಭೆಯ ಕರತಾಡನ ಮುಗಿಲು ಮುಟ್ಟಿತು.

ಸಂಜಯನಗರದ ಅಮರಜ್ಯೋತಿ ಬಡಾವಣೆಯಲ್ಲಿರುವ ಬಿಬಿಎಂಪಿ ಮೈದಾನದಲ್ಲಿ ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಜನ­ಸ್ಪಂದನ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂತು. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ್ ಕುಮಾರ್,  ಕ್ಷೇತ್ರದ ಭಾಗಗಳಾದ ರಾಧಾಕೃಷ್ಣ ಟೆಂಪಲ್‌ (ವಾರ್ಡ್‌ ನಂ–18ರ) ಪಾಲಿಕೆ ಸದಸ್ಯ ಡಿ.ವೆಂಕಟೇಶ್‌, ಸಂಜಯನಗರದ (ವಾರ್ಡ್‌ ನಂ –19ರ) ಪಾಲಿಕೆ ಸದಸ್ಯ ಎನ್‌.ಎಂ.ಕೃಷ್ಣಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಈ ‘ಜನಸ್ಪಂದನ’ದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಜಗದೀಶ್ ಕುಮಾರ್ ಅವರು ಸಮಸ್ಯೆಗಳನ್ನು ಆದ್ಯತೆ ಮೆರೆಗೆ ಬಗೆಹರಿಸಲು ಆಶ್ವಾಸನೆ ಇತ್ತರು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ, ಬೀದಿ ನಾಯಿ ಕಾಟ ಹೆಚ್ಚಾಗಿದೆ, ಹೊಸ ಬಸ್‌ ಓಡಿಸಿ, ಒಳಚರಂಡಿ ಸ್ವಚ್ಛಗೊಳಿಸಿ, ಉದ್ಯಾನ ಸೊರಗಿದೆ, ಪಾದಚಾರಿ ಮಾರ್ಗ ಅತಿಕ್ರಮಣ ತೆರವುಗೊಳಿಸಿ,  ಬೀದಿದೀಪ ವೇಳೆಗೆ ಸರಿಯಾಗಿ ಬೆಳಗಿಸಿ... ಹೀಗೆ ಜನರಿಂದ ಕೇಳಿಬಂದ ದೂರುಗಳಿಗೆ ಅಧಿಕಾರಿಗಳೊಂದಿಗೆ ಶಾಸಕರು ಸೇರಿ ಶೀಘ್ರದಲ್ಲಿ ಪರಿಹರಿಸುವ ವಚನವಿತ್ತರು.

ಅಧಿಕಾರಿಗಳು ನೀಡುತ್ತಿದ್ದ ಉತ್ತರಗಳಿಗೆ ತೃಪ್ತರಾಗದ ಕೆಲ ಹಿರಿಯ ನಾಗರಿಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ತಮ್ಮ ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯನ್ನು ವೇದಿಕೆ­ಯಲ್ಲಿಯೇ ಘೋಷಿಸಬೇಕೆಂದು ಪಟ್ಟು ಹಿಡಿದು ಕೆಲವರು ಅಧಿಕಾರಿಗಳಲ್ಲಿ ಭಯ ಮೂಡಿಸಿದರು.

ಜನಪ್ರತಿನಿಧಿ ಮತ್ತು ಅಧಿಕಾರಿಗಳ ದೂ.ಸಂಖ್ಯೆ: ಜಗದೀಶ್ ಕುಮಾರ್, ಶಾಸಕ– 9844260906, ಡಿ.ವೆಂಕಟೇಶ್‌, ವಾರ್ಡ್‌ 18ರ ಪಾಲಿಕೆ ಸದಸ್ಯ – 9243446179, ಎನ್‌.ಎಂ.ಕೃಷ್ಣಮೂರ್ತಿ, ವಾರ್ಡ್‌ 19ರ ಪಾಲಿಕೆ ಸದಸ್ಯ – 9480454138, ಎಸ್‌.ನರಸಿಂಹಯ್ಯ, ಸಂಜಯನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ – 9448616334, ಟಿ.ಎಂ.ಸತೀಶ್, ಬಿಎಂಟಿಸಿ (ಉತ್ತರ) ಡಿಪೋ ಮ್ಯಾನೇಜರ್ – 7760991410, ಕೆ.ಬಿ.ರಾಮಕೃಷ್ಣ ರೆಡ್ಡಿ, ಬಿಎಂಟಿಸಿ ವಿಭಾಗೀಯ ಸಂಚಾರ ಅಧಿಕಾರಿ – 7760991333, ಹರೀಶ್‌ಕುಮಾರ್‌ ಡಿ., ಬಿಬಿಎಂಪಿ ಸಹಾಯಕ ಎಂಜಿನಿಯರ್ – 968668­2555,

ರಾಜಶೇಖರಪ್ಪ, ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – 9845444025, ಕೃಷ್ಣಪ್ಪ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – 9449844644, ಬೆಸ್ಕಾಂ ಸೇವಾ ಕೇಂದ್ರ – 9449844696, ಎಂ.ಎಸ್.ಬಿರಾದಾರ್, ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – 9740826690, ದಾವಲ್, ಜಲಮಂಡಳಿ ಸಹಾಯಕ ಎಂಜಿನಿಯರ್‌ – 9900171178, ಎಸ್‌.ಪ್ರಭಾಕರ್, ಬಿಬಿಎಂಪಿ ಆರೋಗ್ಯಾಧಿಕಾರಿ –9739448723

ಸಮಸ್ಯೆ ಗಮನಕ್ಕೆ ತನ್ನಿ
ಇಡೀ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಉಪಯೋಗದ ನಿವೇಶನಗಳನ್ನು (ಸಿ.ಎ. ಸೈಟ್) ಕಬಳಿಸಿರುವ ಭ್ರಷ್ಟರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೇನೆ. ಮುಂದಿನ ವಾರ ಈ ಬಗ್ಗೆ ಲೋಕಾಯುಕ್ತ, ಬಿಡಿಎ ಮತ್ತು ಬಿಬಿಎಂಪಿಗೆ ದೂರು ನೀಡುತ್ತೇನೆ.

ನಾಗರಿಕರ ಸಮಸ್ಯೆಗಳು ಅನೇಕ ಇವೆ. ಆದರೆ, ನಾಗರಿಕರು ಮುಂದೆ ಬಂದು ಹೇಳಿಕೊಳ್ಳುತ್ತಿಲ್ಲ. ನಾಗರಿಕ ಸಂಘಟನೆಗಳು ಸಭೆ ಸೇರಿ ನನ್ನನ್ನು ಕರೆದು ಸಮಸ್ಯೆ ಗಮನಕ್ಕೆ ತಂದರೆ ಬಗೆಹರಿಸಲು ಪ್ರಯತ್ನಿಸುತ್ತೇನೆ.

ಈ ಜನಸ್ಪಂದನದಲ್ಲಿ ಅಧಿಕಾರಿಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದು ನೀಡಿರುವ ಆಶ್ವಾಸನೆಗಳು ಈಡೇರದಿದ್ದರೆ ನನ್ನ ಗಮನಕ್ಕೆ ತನ್ನಿ. ಖುದ್ದಾಗಿ ನಾನೇ ಸ್ಥಳಕ್ಕೆ ಬಂದು ಕೆಲಸ ಮಾಡಿಸಿಕೊಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ನಾಗರಿಕರು ಸಹ ಕೈಜೋಡಿಸಬೇಕು.
ಜಗದೀಶ್ ಕುಮಾರ್, ಶಾಸಕ

ನಾಗರಿಕರ ದೂರುಗಳೇನು?
ನೀರಿನ ಸಮಸ್ಯೆ
ನಮ್ಮ ಕಾಲೋನಿಗೆ 2005ರಲ್ಲಿ 27 ಸಾವಿರ ಲೀಟರ್‌ ನೀರು ಪೂರೈಕೆಯಾಗುತ್ತಿತ್ತು. ಅದರ ಪ್ರಮಾಣ ಇದೀಗ ಏಳು ಸಾವಿರ ಲೀಟರ್‌ಗೆ ಇಳಿದಿದೆ. ಜತೆಗೆ ಹಲವರು ನೀರಿನ ಸಂಪರ್ಕ ಮಾರ್ಗಕ್ಕೆ ನೇರವಾಗಿ ಪಂಪ್‌ ಜೋಡಿಸಿ ನೀರು ಪಡೆಯುತ್ತಿದ್ದಾರೆ. ಇದರಿಂದ ಎತ್ತರ ಪ್ರದೇಶದ ನಾಗರಿಕರಿಗೆ ನೀರಿನ ತೊಂದರೆ ಕಾಡುತ್ತಿದೆ.
ಎಸ್‌.ಎನ್‌. ಶೆಣೈ, ಪೋಸ್ಟಲ್‌ ಕಾಲೋನಿ

ಕಾರ್ಪೋರೇಟರೇ ಮಾಯ
ನಮ್ಮ ಕಾಲೋನಿ ಎರಡನೇ ಅಡ್ಡರಸ್ತೆಯಲ್ಲಿ ನೀರು ಪಡೆಯಬೇಕಾದರೆ ನೀರುಗಂಟಿಗೆ ಪ್ರತಿ ಮನೆಯಿಂದ ₨100 ಲಂಚ ನೀಡಬೇಕು. ಈ ಕುರಿತು ದೂರು ಹೇಳೋಣವೆಂದರೆ ನಮ್ಮ ಕಾರ್ಪೋರೇಟರೇ ಮಾಯ. ಫೋನ್‌ ಸಂಪರ್ಕಕ್ಕೂ ಸಿಗುವುದಿಲ್ಲ. ಅಧಿಕಾರಿಗಳದ್ದು ಇದೇ ಕತೆ. ಎಲ್ಲರನ್ನೂ ಒಂದೇ ವೇದಿಕೆಯಡಿ ತಂದ ಪತ್ರಿಕೆಗಳಿಗೆ ಧನ್ಯವಾದಗಳು.
ಉಷಾ, ಆರ್‌.ಎಂ.ಎಸ್‌ ಬಡಾವಣೆ

ಅಸಡ್ಡೆ ಏಕೆ?

ನಮ್ಮ ಕಾಲೋನಿಯಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಎಷ್ಟು ಬಾರಿ ಮನವಿ ಮಾಡಿಕೊಂಡರೂ  ಪ್ರಯೋಜನವಾಗಿಲ್ಲ. ಅದೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮನೆ ಸುತ್ತ ರಸ್ತೆಗಳು ಹೊಳೆಯುತ್ತವೆ. ದಲಿತರೆಂದರೆ ಇಷ್ಟೇಕೆ ಅಸಡ್ಡೆ.  ಮತಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬರಬೇಕು ಎಂಬುದು ಮರೆಯಬೇಡಿ.
ಕೋದಂಡರಾಮ, ಕೆ.ಇ.ಬಿ. ಕಾಲೋನಿ

ನಾಯಿ ಕಾಟ

ನಮ್ಮ ಬೀದಿಯಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ನಮ್ಮ ಓಣಿಯೊಂದರಲ್ಲಿಯೇ 18 ಬೀದಿ ನಾಯಿಗಳಿವೆ. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯವಾಗುತ್ತದೆ.
ದಿವ್ಯಾ ಪ್ರಕಾಶ್, ಆರ್‌.ಎಂ.ಎಸ್‌ ಬಡಾವಣೆ

ಒಳಚರಂಡಿ ಸಮಸ್ಯೆ

ನಮ್ಮ ಬಡಾವಣೆಯಲ್ಲಿ ಒಳಚರಂಡಿ ಸಮಸ್ಯೆಯಿಂದ ಕಕ್ಕಸು ನೀರು ಮನೆಯೊಳಗೆ ನುಗ್ಗುತ್ತಿದೆ. ಒಂದು ಬಾರಿ ಅದನ್ನು ಸ್ವಚ್ಛಗೊಳಿಸಬೇಕಾದರೆ ಸಾವಿರ ರೂಪಾಯಿ ಖರ್ಚಾಗುತ್ತದೆ. ಇದಕ್ಕೆ ಯಾರು ಹೊಣೆ?
ಗಿರಿರಾಜ್‌, ಗೌಡರ ಕಾಲೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT