ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಜಲಕ್ಷಾಮದಲ್ಲಿ ವನ್ಯಲೋಕ

ನೀರು ತುಂಬಿಸುತ್ತಿರುವ ಇಲಾಖೆ, ಎನ್‌ಜಿಒಗಳು l ಹಸ್ತಕ್ಷೇಪಕ್ಕೆ ತಜ್ಞರ ಆಕ್ಷೇಪ
Published 30 ಮಾರ್ಚ್ 2024, 22:12 IST
Last Updated 30 ಮಾರ್ಚ್ 2024, 22:12 IST
ಅಕ್ಷರ ಗಾತ್ರ

ಮಡಿಕೇರಿ: ಅದು, ಕಾವೇರಿ ವನ್ಯಧಾಮದ ಹನೂರು ವನ್ಯಜೀವಿ ವಲಯ. ಅರಣ್ಯ ಇಲಾಖೆ ನಿರ್ಮಿಸಿದ್ದ ಚೆಕ್‌ಡ್ಯಾಂ ಬೇಸಿಗೆಯ ಹೊಡೆತಕ್ಕೆ ಸಂಪೂರ್ಣ ಒಣಗಿ ಹೋಗಿದೆ. ನೀರಿದೆ ಎಂದೇ ಭಾವಿಸಿ ಬಂದ ವನ್ಯಜೀವಿಗಳು ನಿರಾಸೆಯಿಂದ ಹೋಗುತ್ತಿದ್ದವು. ಮತ್ತೆ ಕೆಲವು ಪ್ರಾಣಿಗಳು ಕೂಗಳತೆ ದೂರದಲ್ಲಿದ್ದ ರೈತರ ಜಮೀನುಗಳಿಗೆ ನುಗ್ಗುತ್ತಿದ್ದವು. ಅದನ್ನು ಕಂಡ ಕಾಡಿನಂಚಿನ ಬಂಡಳ್ಳಿಯ ನಂಜುಂಡ ಅವರು ತಮ್ಮ ಕೊಳವೆಬಾವಿಯಿಂದ 3ರಿಂದ 4 ಬಾರಿ ನೀರು ಹರಿಸಿ ಚೆಕ್‌ಡ್ಯಾಂನಲ್ಲಿ ನೀರು ನಿಲ್ಲುವಂತೆ ಮಾಡಿ, ವನ್ಯಜೀವಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ.

‘ನೀರು ಹರಿಸಿದ್ದರಿಂದ ಅವು ನೀರಿಗಾಗಿ ಜಮೀನಿನತ್ತ ಬರುವುದು ತಪ್ಪಿತು. ಸಾಕು ಪ್ರಾಣಿಗಳಿಗೆ ಕೊಡುವಂತೆ, ಅವುಗಳಿಗೂ ನೀರು ಕೊಟ್ಟಿದ್ದರಿಂದ ನನಗೂ ಸಮಾಧಾನವಾಯಿತು’ ಎನ್ನುವರು.

ಅತ್ತ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಸಾಗುವ ಕಣಿವೆ ಪ್ರದೇಶದಲ್ಲಿ, ಕೇತೇನಹಳ್ಳಿ ಅರಣ್ಯ ಹಾಗೂ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಬಳಿ ಪ್ರಾಣಿಗಳಿಗೆಂದೇ ಚಿಕ್ಕಬಳ್ಳಾಪುರದ ‘ವಾಟರ್ ಫಾರ್ ವಾಯ್ಸ್‌ಲೆಸ್‌’ ಸಂಸ್ಥೆಯ ಮಹಾಂತೇಶ್ ನೀರಿನ ತೊಟ್ಟಿಗಳನ್ನಿಟ್ಟಿದ್ದಾರೆ.

‘2018ರಲ್ಲಿ ನಾಯಿಯೊಂದು ನೀರಿಲ್ಲದೇ ಸತ್ತಿದ್ದನ್ನು ಕಂಡ ನಂತರ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ವಾರಕ್ಕೊಮ್ಮೆ ನೀರು ಕೊಡುತ್ತಿದ್ದೇನೆ. ಸ್ವಂತ ಹಣದಲ್ಲಿ ತೊಟ್ಟಿಗಳನ್ನಿಟ್ಟಿದ್ದೇನೆ. ಈಗ ಗೆಳೆಯರೂ ಕೈ ಜೋಡಿಸಿದ್ದಾರೆ. ಸ್ವಯಂಪ್ರೇರಿತರಾಗಿ ತೊಟ್ಟಿ ತುಂಬಿಸುವವರೂ ಹೆಚ್ಚಾಗುತ್ತಿ ದ್ದಾರೆ’ ಎಂದು ಮಹಾಂತೇಶ್ ಹೇಳುತ್ತಾರೆ.

ಧಾರವಾಡ ತಾಲ್ಲೂಕಿನ ದುಬ್ಬನಮರಡಿ ಗ್ರಾಮದ 12 ಎಕರೆ ಪ್ರದೇಶದ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುನಶ್ಚೇತನಗೊಳಿಸಿ, ಸುತ್ತಮುತ್ತಲಿನ ರೈತರ ಜಮೀನುಗಳ ಕೊಳವೆಬಾವಿಗಳಿಂದ ನೀರು ಪಡೆದು ಕೆರೆಗೆ ನೀರು ಹರಿಸಿದ್ದು, ಪಶು, ಪಕ್ಷಿಗಳ
ದಾಹ ನೀಗಿಸುತ್ತಿದೆ.

ಚಾಮರಾಜನಗರದ ಹನೂರಿನ ಕೌದಳ್ಳಿ ಉಪ ವಿಭಾಗದ ಗೋಪಿನಾಥಂ ಸೇರಿದಂತೆ ಐದು ಕಡೆ ಬಿಇಎಲ್‌ ಮತ್ತು ಸೆಲ್ಕೋ ಸೇರಿ ಸೌರಶಕ್ತಿಚಾಲಿತ ಕೊಳವೆ ಬಾವಿಯಿಂದ ಕಾಡಿನ ಕೆರೆಗಳಿಗೆ ನೀರು ಹರಿಸುತ್ತಿವೆ.

ಮಳೆಯ ಕೊರತೆಯ ನಡುವೆಯೇ ಮಾನವೀಯ ತೆಯ ಒರತೆ ರಾಜ್ಯದ ಎಲ್ಲೆಡೆ ಚಿಮ್ಮುತ್ತಿದೆ. ವನ್ಯಜೀವಿ ಉಪಟಳದಿಂದ ನೊಂದಿದ್ದ ರೈತರ ಎದೆಯೂ ಕರಗುತ್ತಿದೆ. ವನ್ಯಜೀವಿ ಪ್ರಿಯರು, ವಿವಿಧ ಸಂಘ, ಸಂಸ್ಥೆಗಳು ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

ಮತ್ತೊಂದೆಡೆ, ಅರಣ್ಯ ಇಲಾಖೆಯೂ ಹಲವೆಡೆ ಇಂಥದ್ದೇ ಪ್ರಯತ್ನದಲ್ಲಿದೆ.

ನೀರಿಗಾಗಿ ಪ್ರಾಣಿಗಳು ಜಮೀನಿಗೆ ನುಗ್ಗುವ ಆತಂಕ ರೈತರನ್ನು ಆವರಿಸಿರುವಾಗಲೇ, ಕಾಡಿನ ಕೆರೆ ಕಟ್ಟೆಗಳಿಗೆ ಅರಣ್ಯ ಸಿಬ್ಬಂದಿ ಟ್ಯಾಂಕರ್ ನೀರು ಹರಿಸುತ್ತಿದ್ದಾರೆ. ಕೊಳವೆಬಾವಿ ಕೊರೆದು, ಕಾಂಕ್ರೀಟ್ ತೊಟ್ಟಿಗಳನ್ನಿಟ್ಟು ನೀರು ತುಂಬಿಸುತ್ತಿದ್ದಾರೆ. ಆದರೆ, ಸನ್ನಿವೇಶ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ.

ಡಾ.ಅನಿಲ್ ಮಲ್ಹೋತ್ರಾ ಹಾಗೂ ಅವರ ಪತ್ನಿ ಪಮೇಲಾ ಮಲ್ಹೋತ್ರಾ ಅವರು ಸ್ಥಾಪಿಸಿದ್ದ, ‘ದೇಶದ ಮೊದಲ ಖಾಸಗಿ ಕಾಡು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ತೆರಾಲು ಗ್ರಾಮದ 250 ಎಕರೆಯಷ್ಟು ‘ಸಾಯ್ ಸಾಂಚ್ಯುರಿ’ (ಸೇವ್ ಅನಿಮಲ್ ಇನ್‌ಷಿವೇಟಿವ್)ಯಲ್ಲಿ ಹರಿಯುತ್ತಿದ್ದ ಜಲಧಾರೆಗಳೂ ಬತ್ತುತ್ತಿವೆ. ಮಳೆಯಾಗದಿದ್ದರೆ ತೊರೆ ಸಂಪೂರ್ಣ ಬತ್ತುವ ದಿನಗಳು ದೂರವಿಲ್ಲ.

ಬೇಸಿಗೆ ಯಾರಿಗೂ ಹೊಸತಲ್ಲ. ಆದರೆ, ಸತತ ನಾಲ್ಕು ವರ್ಷ ಬಿದ್ದ ವರ್ಷಧಾರೆಯ ನಡುವೆಯೂ ಮುಂಗಾರು ಕೈಕೊಟ್ಟು ಎಲ್ಲೆಡೆ ಕೆರೆ, ಕಟ್ಟೆಗಳು ಒಣಗಿವೆ. ವನ್ಯಜೀವಿಗಳು ವಲಸೆ ಹೋಗುತ್ತಿವೆ. ಕಾಡಂಚಿನ ಪ್ರದೇಶಗಳ ತೋಟಗಳಿಗೆ ಲಗ್ಗೆ ಇಡುತ್ತಿವೆ. ದಿನಕ್ಕೆ ಹತ್ತಿಪ್ಪತ್ತು ಕಿಲೋಮೀಟರ್‌ ಅಲೆಯುವ ಆನೆಗಳು ಕಾಡಿನಲ್ಲಿ ನೀರಿಲ್ಲದೆ ಊರಿನತ್ತ ತಿರುಗಿವೆ. ಎರಡೂವರೆ ತಿಂಗಳಿಂದ ಕಾಡಾನೆ ದಾಳಿಗೆ ಸಿಲುಕಿ ಕೊಡಗಿನಲ್ಲಿ ಮೂವರು ಮೃತಪಟ್ಟಿದ್ದರೆ, ನಾಲ್ವರು ಗಾಯಗೊಂಡಿದ್ದಾರೆ.

ಅರಣ್ಯದಲ್ಲಿ ಕಾಂಕ್ರಿಟ್‌ ತೊಟ್ಟಿ ‌

ಧಾರವಾಡ, ಹಾವೇರಿ, ವಿಜಯನಗರ, ಗದಗ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಶಿರಸಿ ಭಾಗದ ಕಾಡಿನೊಳಗೆ 28 ಕಾಂಕ್ರೀಟ್‌ ತೊಟ್ಟಿ ನಿರ್ಮಿಸಿ, ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗಿದೆ.  83 ಕೆರೆ, ಹೊಂಡಗಳಿಗೂ ನೀರು ತುಂಬಿಸಲಾಗುತ್ತಿದೆ. ‘ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಹಾಗೂ ಮುಂಡರಗಿ ತಾಲ್ಲೂಕಿನ ಅರಣ್ಯದಲ್ಲಿ 30ಕ್ಕೂ ಹೆಚ್ಚು ಕೊಳಗಳನ್ನು ನಿರ್ಮಿಸಿ, 15 ದಿನಕ್ಕೊಮ್ಮೆ ಟ್ಯಾಂಕರ್‌ ನೀರು ತುಂಬಿಸುತ್ತಿದ್ದೇವೆ. ಯಾವ ಪ್ರಾಣಿಗೂ ಕುಡಿಯುವ ನೀರಿನ ಅಭಾವವಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣನವರ ಹೇಳುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಕಾತೂರ ವಲಯ ವ್ಯಾಪ್ತಿಯ ಐದು ಕಡೆ ಹಾಗೂ ಶಿರಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆ ಕಾಂಕ್ರೀಟ್‌ ತೊಟ್ಟಿ ಅಳವಡಿಸಿ ನೀರು ತುಂಬಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 28ಕ್ಕೂ ಹೆಚ್ಚು ಕೆರೆಗಳು ಬತ್ತಿವೆ. ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಜಾರಿಯಲ್ಲಿಲ್ಲದಿದ್ದರೂ, ಚಿಂಕಾರಾ, ನರಿ, ತೋಳದಂತಹ ಪ್ರಾಣಿಗಳಿಗೆ ತೊಂದರೆಯಾಗಿಲ್ಲ‘ ಎನ್ನುತ್ತಾರೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ.

ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ ನೀರು ಹರಿಸುತ್ತಿದೆ
ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ ನೀರು ಹರಿಸುತ್ತಿದೆ
ರಾಣೇಬೆನ್ನೂರು ‌ಕೃಷ್ಣಮೃಗ ಅಭಯಾರಣ್ಯದಲ್ಲಿನ ತೊಟ್ಟಿಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿರುವುದು 
ರಾಣೇಬೆನ್ನೂರು ‌ಕೃಷ್ಣಮೃಗ ಅಭಯಾರಣ್ಯದಲ್ಲಿನ ತೊಟ್ಟಿಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿರುವುದು 
ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದ ತೊಟ್ಟಿಯಲ್ಲಿ ನವಿಲು ನೀರು ಕುಡಿಯುತ್ತಿರುವುದು
ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದ ತೊಟ್ಟಿಯಲ್ಲಿ ನವಿಲು ನೀರು ಕುಡಿಯುತ್ತಿರುವುದು
ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಜೊಯಿಡಾ ತಾಲ್ಲೂಕಿನ ಫಣಸೋಲಿ ವನ್ಯ ಜೀವಿ ವಲಯದ ಗಾಂಗೋಡಾ ಗ್ರಾಮದ ಕೆರೆಯಲ್ಲಿ ಬೇಸಿಗೆಯಲ್ಲಿಯೂ ನೀರಿದೆ
ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಜೊಯಿಡಾ ತಾಲ್ಲೂಕಿನ ಫಣಸೋಲಿ ವನ್ಯ ಜೀವಿ ವಲಯದ ಗಾಂಗೋಡಾ ಗ್ರಾಮದ ಕೆರೆಯಲ್ಲಿ ಬೇಸಿಗೆಯಲ್ಲಿಯೂ ನೀರಿದೆ
‘ಗಜರಾಜ’ನಿಗೂ ಬಿಸಿಲ ಧಗೆ....
ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು ಬಿಸಿಲ ಬೇಗೆ ಆನೆಗಳಿಗೂ ತಟ್ಟಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಕೆರೆಯಲ್ಲಿ ಆನೆಗಳು ಚಿನ್ನಾಟವಾಡುತ್ತಾ ತೆಂಪೆರೆಸಿಕೊಂಡಿದ್ದು ಹೀಗೆ. ಪ್ರಜಾವಾಣಿ ಚಿತ್ರ/ ರಂಜು ಪಿ.
‘ಗಜರಾಜ’ನಿಗೂ ಬಿಸಿಲ ಧಗೆ.... ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು ಬಿಸಿಲ ಬೇಗೆ ಆನೆಗಳಿಗೂ ತಟ್ಟಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಕೆರೆಯಲ್ಲಿ ಆನೆಗಳು ಚಿನ್ನಾಟವಾಡುತ್ತಾ ತೆಂಪೆರೆಸಿಕೊಂಡಿದ್ದು ಹೀಗೆ. ಪ್ರಜಾವಾಣಿ ಚಿತ್ರ/ ರಂಜು ಪಿ.
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಬಳಿ ಕಣ್ವ ನದಿಯಲ್ಲಿ ಕಾಡಾನೆಗಳ ನೀರಾಟ
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಬಳಿ ಕಣ್ವ ನದಿಯಲ್ಲಿ ಕಾಡಾನೆಗಳ ನೀರಾಟ
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಅರಣ್ಯ ಪ್ರದೇಶದ ಕೆರೆಗೆ ಕೊಳವೆಬಾವಿ ನೀರು ಹರಿಸುತ್ತಿರುವುದು
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಅರಣ್ಯ ಪ್ರದೇಶದ ಕೆರೆಗೆ ಕೊಳವೆಬಾವಿ ನೀರು ಹರಿಸುತ್ತಿರುವುದು
ಒಣಗಿರುವ ಬಂಡೀಪುರ ಹುಲಿ ರಕ್ಷಿತಾರಣ್ಯ
ಒಣಗಿರುವ ಬಂಡೀಪುರ ಹುಲಿ ರಕ್ಷಿತಾರಣ್ಯ
ಒಣಗಿರುವ ಬಂಡೀಪುರ ಹುಲಿ ರಕ್ಷಿತಾರಣ್ಯ
ಒಣಗಿರುವ ಬಂಡೀಪುರ ಹುಲಿ ರಕ್ಷಿತಾರಣ್ಯ
ಬೆಂಗಾಡಿನಂತಾಗಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯ
ಬೆಂಗಾಡಿನಂತಾಗಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯ
ಬೆಂಗಾಡಿನಂತಾಗಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯ
ಬೆಂಗಾಡಿನಂತಾಗಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯ
ನಾಗರಹೊಳೆಯಲ್ಲಿ ಬರಿದಾಗಿರುವ ದೊಡ್ಡಪ್ಪನ ಕಟ್ಟೆ ಕೆರೆ
ನಾಗರಹೊಳೆಯಲ್ಲಿ ಬರಿದಾಗಿರುವ ದೊಡ್ಡಪ್ಪನ ಕಟ್ಟೆ ಕೆರೆ

‘ಖಾನಾಪುರ ತಾಲ್ಲೂಕಿನ ಕಾಡಿನಲ್ಲಿ ಏಪ್ರಿಲ್‌ ಮೊದಲ ವಾರದವರೆಗೆ ನೀರು ಸಾಲಬಹುದು. ನಂತರ, ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತದೆ’ ಎಂದು ಎಸಿಎಫ್‌ ಗುರುದತ್ತ ಶೇಟ್‌ ಹೇಳುತ್ತಾರೆ.

ಬೀದರ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ವರ್ಷ 8 ಹೊಂಡಗಳನ್ನು ನಿರ್ಮಿಸಲಾಗಿದೆ. ಒಟ್ಟು 24 ಹೊಂಡಗಳಿಗೆ ಜನವರಿಯಿಂದಲೇ ಟ್ಯಾಂಕರ್‌ ನೀರು ತುಂಬಿಸಲಾಗುತ್ತಿದ್ದು, ಮಳೆಗಾಲದವರೆಗೂ ಮುಂದುವರಿಯಲಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಅರಣ್ಯ ಪ್ರದೇಶದ ಶೇರಿಭಿಕನಳ್ಳಿ ಬಳಿಯ ನಿಜಾಮ್ ಕಾಲದ ಲಾಲ್ ತಾಲಾಬನ್ನು ನವೀಕರಿಸಿದ್ದು, ಅದೇ ಕೆರೆಯ ಅಂಗಳದಲ್ಲಿ 2 ವರ್ಷದ ಹಿಂದೆ ಕೊಳವೆಬಾವಿ ಕೊರೆಸಿ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. ಕೆರೆಯ ನೀರು ಖಾಲಿಯಾದಂತೆ ಕೊಳವೆ ಬಾವಿಯಿಂದ ಹರಿಸಲಾಗುತ್ತದೆ. ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಇಲ್ಲ.

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕೆಲ ವರ್ಷಗಳ ಹಿಂದೆ ಮಳೆ ಕೊರತೆ ಉಂಟಾಗಿದ್ದ ವೇಳೆ ಕಾಂಕ್ರೀಟ್ ತೊಟ್ಟಿ ಇಟ್ಟು ನೀರು ಪೂರೈಸಲಾಗಿತ್ತು. ಆದರೆ, ಈಚಿನ ವರ್ಷದಲ್ಲಿ ಕಾಡಿನಲ್ಲಿನ ಜಲಮೂಲಗಳಲ್ಲಿ ನೀರಿರುವುದರಿಂದ ಕೃತಕ ತೊಟ್ಟಿ ಇಡುವ ಪರಿಸ್ಥಿತಿ ಇಲ್ಲ.

‘ಕೆಟಿಆರ್ ಸೂಕ್ಷ್ಮಪ್ರದೇಶವಾಗಿದ್ದರೂ ಇಲ್ಲಿನ ಅರಣ್ಯದಲ್ಲಿ ಕೆಲ ವರ್ಷಗಳ ಹಿಂದೆ ನೀರಿಗಾಗಿ ಅರಣ್ಯ ಇಲಾಖೆ ಬಾಂದಾರ ನಿರ್ಮಿಸಿತ್ತು. ಕಾಡಿನಲ್ಲಿ ಕೆರೆಗಳಿದ್ದರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ್ ದೂರುತ್ತಾರೆ.

ನಾಡಿನತ್ತ ಕೃಷ್ಣಮೃಗ ಪಡೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ‌ಕೃಷ್ಣಮೃಗ ಅಭಯಾರಣ್ಯದ ಸಣ್ಣ ಹಳ್ಳ, ಕೆರೆ ಕಟ್ಟೆಗಳು ಬರಿದಾಗಿವೆ. ಕೃಷ್ಣಮೃಗಗಳು ತುಂಗಭದ್ರಾ ನದಿ ಸಮೀಪದ ಮೇಡ್ಲೇರಿ ಐರಣಿ, ಹಿರೇಬಿದರಿ, ಬೇಲೂರು, ಹರನಗಿರಿ, ಕುದರಿಹಾಳ, ಉದಗಟ್ಟಿ, ಹೀಲದಹಳ್ಳಿ, ಚೌಡಯ್ಯದಾನಪುರದ ನೀರಾವರಿ ಜಮೀನುಗಳತ್ತ ಬರುತ್ತಿವೆ. ಆದರೆ, ತುಂಗಭದ್ರಾ ನದಿ ನೀರು ಕಡಿಮೆಯಾಗಿದ್ದರಿಂದ ರೈತರು ನೀರಾವರಿ ಪ್ರದೇಶಗಳಲ್ಲೂ ಭತ್ತ ಬೆಳೆಯದೆ, ಕೃಷ್ಣಮೃಗಗಳಿಗೆ ಮೇವಿನ ಕೊರತೆ ಕಾಡುತ್ತಿದೆ. 

ಬೆಂಗಳೂರಿನ ಆನೇಕಲ್‌ ಅರಣ್ಯ ಉಪವಲಯದಲ್ಲಿ 70 ನೀರಿನ ಸೆಲೆಗಳ ಪೈಕಿ 35ಕ್ಕೂ ಹೆಚ್ಚು ಕಡೆ ನೀರು ಬತ್ತಿದೆ. ಕಾಡಿನಲ್ಲಿ ಆನೆಗಳು ನೀರಿನ ಮೂಲಗಳನ್ನು ಚೆನ್ನಾಗಿ ಗುರುತಿಸಿಕೊಂಡಿರುತ್ತವೆ. ನೀರು ಬತ್ತಿರುವುದರಿಂದ ಕಾಡಾನೆಗಳ ಹಿಂಡೊಂದು ಈಚೆಗೆ ಆನೇಕಲ್‌ ದೊಡ್ಡ ಕೆರೆಯವರೆಗೆ ಬಂದಿತ್ತು. ಇಲ್ಲಿ, ನೀರಿನ ಮೂಲಗಳು ಏಪ್ರಿಲ್‌ವರೆಗೂ ಇರಬಹುದು. ಮಳೆ ಬಾರದಿದ್ದರೆ ಪ್ರಾಣಿಗಳಿಗೆ ಕಷ್ಟ ಹೆಚ್ಚಾಗುತ್ತದೆ.

ತುಮಕೂರು ಜಿಲ್ಲೆಯಲ್ಲೂ ಪ್ರಾಣಿಗಳು ಜನ ವಸತಿ ಪ್ರದೇಶಗಳತ್ತ ಬರುತ್ತಿವೆ. ಮಧುಗಿರಿ ತಾಲ್ಲೂಕಿನ ತಿಮ್ಮಲಾಪುರ ಕರಡಿ ಧಾಮ, ಪಾವಗಡ, ಕೊರಟಗೆರೆ ಭಾಗದಲ್ಲಿ ಕರಡಿಗಳು ತೊಂದರೆ ಎದುರಿಸುತ್ತಿವೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಚಿಂಕಾರಗಳಿಗೂ ಬಿಸಿ ತಟ್ಟಿದೆ. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಎಲ್ಲ ಕಡೆಯೂ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಣಿಗಳು ಅರಣ್ಯದಂಚಿನ ಗ್ರಾಮಗಳತ್ತ ಬರುತ್ತಿವೆ. ಕೃಷ್ಣಮೃಗಗಳ ತಾಣವಾದ ಕಡೂರು ತಾಲ್ಲೂಕಿನ ಬಾಸೂರು ಅರಣ್ಯದ ನಾಲ್ಕು ಕೆರೆಗಳಿಗೆ ಬೋರ್‌ವೆಲ್ ಪೈಪ್‌ಲೈನ್ ಹಾಕಲಾಗಿದೆ‌.

ಬಂಡೀಪುರ ಹುಲಿ ಮೀಸಲು ಪ್ರದೇಶ ವ್ಯಾಪ್ತಿಯ 13 ವಿಭಾಗಗಳ ಸುಮಾರು 363 ‌ಕೆರೆಗಳ ಪೈಕಿ, ಸುಮಾರು 47 ಕೆರೆಗಳಿಗೆ ಕೊಳವೆ ಬಾವಿಯಿಂದ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ ಮೂಲಕ ನೀರು ತುಂಬಿಸಲಾಗಿದೆ. ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲೂ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ನಾಗರಹೊಳೆಯ 269 ಕೆರೆಗಳ ಪೈಕಿ 33 ಸಂಪೂರ್ಣ ಒಣಗಿವೆ. 27 ಕೆರೆಗಳಿಗೆ ಕೊಳವೆಬಾವಿ, ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಅರಣ್ಯದೊಳಗೆ ಹರಿಯುವ ಸಾರಥಿ, ನಾಗರಹೊಳೆ ಮತ್ತು ಲಕ್ಷ್ಮಣತೀರ್ಥ ನದಿಯ ಜೌಗು ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ.

‘ನಾಗರಹೊಳೆಯಲ್ಲಿ ಪ್ರಾಣಿಗಳಿಗೆಂದು ಸೌರಶಕ್ತಿ ಚಾಲಿತ ಪಂಪ್‌ಸೆಟ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. 2024–25ನೇ ಸಾಲಿನಲ್ಲಿ ಎಂಟು ಸೌರಶಕ್ತಿ ಚಾಲಿತ ಪಂಪ್‌ಸೆಟ್ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

‘ಕಪಿಲಾ, ತಾರಕ ನದಿ ಅಣೆಕಟ್ಟೆಯ ನೀರನ್ನು ಬೇಸಿಗೆಯ ಬೆಳೆಗಳಿಗೆ ನೀಡುವುದರಿಂದ ಹಿನ್ನೀರು ಕಡಿಮೆಯಾಗಿದ್ದು, ಪ್ರಾಣಿಗಳು ವಲಸೆ ಹೋಗುತ್ತಿವೆ. ನೀರನ್ನು ಕೃಷಿಗೆ ಬಳಸದೆ ಪ್ರಾಣಿಗಳಿಗೆ ಮೀಸಲಿಟ್ಟರೆ ಕೊರತೆಯ ಒತ್ತಡ ತಗ್ಗಿಸಬಹುದು’ ಎಂದು ಹೇಳಿದರು.

ಭದ್ರಾ ವನ್ಯಜೀವಿ ಅಭಯಾರಣ್ಯವು ಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತಿದ್ದು, ನೀರಿನ ಸಮಸ್ಯೆ ಇಲ್ಲ. ಜಲಾಶಯದಲ್ಲಿ ಹಾಗೂ ಕೆರೆ ಕಟ್ಟೆಗಳಲ್ಲೂ ನೀರಿದೆ‘ ಎಂದು ಭದ್ರಾ ವನ್ಯಜೀವಿ ಅಭಯಾರಣ್ಯದ ಡಿಸಿಎಫ್ ಯಶಪಾಲ್ ಹೇಳಿದರು.

ಆದರೆ, ನೀರು ತುಂಬಿಸುವುದರಿಂದಷ್ಟೇ ಕಾಡಂಚಲ್ಲಿ ವನ್ಯಜೀವಿಗಳ ವಲಸೆಯನ್ನು ತಡೆಯಲಾಗದು. ಸಸ್ಯಾಹಾರಿ ಪ್ರಾಣಿಗಳು ಹಸಿರು ಮೇವು ಸಿಗದೆ, ಜೌಗು ಪ್ರದೇಶಗಳತ್ತ, ಜಲಾಶಯದ ಹಿನ್ನೀರಿನತ್ತ ಹೋಗುತ್ತವೆ. ಸಸ್ಯಹಾರಿ ಪ್ರಾಣಿಗಳ ಹಿಂದೆಯೇ ಮಾಂಸಹಾರಿ ಪ್ರಾಣಿಗಳು ಸಹ ಆಹಾರಕ್ಕಾಗಿ ಅಲೆದಾಡುತ್ತವೆ. ಜಲಾಶಯದ ಹಿನ್ನೀರಿನಲ್ಲಿ ನೀರು ಕಾಲಿಯಾದಾಗ ಹುಲ್ಲು ಬೆಳೆದರೂ ಲಕ್ಷಾಂತರ ಸಸ್ಯಹಾರಿಗಳಿಗೆ ಇದೆಲ್ಲಿ ಸಾಕಾದೀತು? ಮಾರ್ಚ್‌, ಏಪ್ರಿಲ್‌ನಲ್ಲಿ ಒಂದೆರಡು ಮಳೆಯಾದರೂ ಕಾಡು, ಕಾಡು ಪ್ರಾಣಿಗಳು ‘ಉಸಿರಾಡಬಹುದು‘ ಎನ್ನುವ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆಯಿದೆ.

ಪೂರಕ ಮಾಹಿತಿ: ಪ್ರಜಾವಾಣಿಯ ಜಿಲ್ಲಾ ವರದಿಗಾರರಿಂದ

ಕಾಡಿನಲ್ಲಿ ಕೃತಕವಾಗಿ ಕೆರೆ ಕಟ್ಟೆ ಕಟ್ಟಿದರೆ ತೊಂದರೆ!

‘ಪ್ರಾಣಿಗಳಿಗೆ ನೀರಿಲ್ಲವೆಂದು ಕೆರೆ ಕಟ್ಟೆಗಳನ್ನು ಕಟ್ಟಿದರೆ ಕೋಟ್ಯಂತರ ವರ್ಷಗಳಿಂದ ರೂಪುಗೊಂಡಿರುವ ಜೀವ ಪರಿಸರ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಕೆರೆ ಕಟ್ಟೆಗಳನ್ನು ಮೃಗಾಲಯದಲ್ಲಿ ನಿರ್ಮಿಸಿಕೊಳ್ಳಲಿ. ಅರಣ್ಯಗಳಲ್ಲಿ ಮಾನವ ಹಸ್ತಕ್ಷೇಪ ಮಾಡಬಾರದು’ ಎನ್ನುತ್ತಾರೆ ಗ್ರೀನ್‌ ಆಸ್ಕರ್ ಪುರಸ್ಕೃತ ವನ್ಯಜೀವಿ ತಜ್ಞ ಕೃಪಾಕರ. ‘ವನ್ಯಜೀವಿಗಳು ಎಷ್ಟೋ ಬರ ಪ್ರವಾಹಗಳನ್ನು ಕಂಡಿವೆ. ಅವುಗಳನ್ನು ಎದುರಿಸಬೇಕಾದ ಶಕ್ತಿ ಸಹಜವಾಗಿಯೇ ಬಂದಿರುತ್ತದೆ. ಬರಗಾಲದಲ್ಲಿ ನೀರಸೆಲೆಗಳನ್ನು ಹುಡುಕಿಕೊಂಡಿರುತ್ತವೆ. ಪ್ರಾಣಿಗಳಿಗೆ ಕಾಡಿನಲ್ಲಿ ನೀರಿಲ್ಲವೆಂದು ಭಾವನಾತ್ಮಕವಾಗಿ ಸ್ಪಂದಿಸಬೇಕಿಲ್ಲ’ ಎಂದು ಪ್ರತಿಪಾದಿಸುತ್ತಾರೆ. ‘ಬರಗಾಲದಲ್ಲೇ ಪ್ರಾಣಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಮಾಂಸಹಾರಿ ಪ್ರಾಣಿಗಳಿಗೆ ಹೆಚ್ಚು ನೀರು ಬೇಕಿಲ್ಲ. ಮಾಂಸದಿಂದಲೇ ಸಿಗುತ್ತದೆ. ಹೀಗಾಗಿ ಅವು ನೀರಿಗಾಗಿ ಬರುವುದು ಕಡಿಮೆ. ಸಸ್ಯಹಾರಿ ಪ್ರಾಣಿಗಳು ಜೌಗು ತೊರೆಗಳನ್ನು ಅವಲಂಬಿಸಿರುತ್ತವೆ. ನಿಸರ್ಗದತ್ತವಾಗಿ ರೂಪುಗೊಂಡ ತೊರೆಗಳ ಹರಿವು ಕೃತಕ ಕೆರೆಗಳಿಂದ ನಿಲ್ಲುತ್ತದೆ’ ಎಂಬುದು ಅವರ ವಿಶ್ಲೇಷಣೆ. ‘ಅರಣ್ಯ ಇಲಾಖೆಯು ಬೆಂಕಿ ಬೇಟೆ ಒತ್ತುವರಿಯಿಂದ ಕಾಡನ್ನು ರಕ್ಷಿಸಬೇಕು. ಬೋರ್‌ವೆಲ್‌ಗಳ ಅಳವಡಿಕೆಯೂ ಸರಿಯಲ್ಲ. ಪಂಪ್‌ಸೆಟ್‌ಗಳ ಮೋಟಾರ್‌ ಶಬ್ಧವೂ ವನ್ಯಜೀವಿಗಳಿಗೆ ತೊಂದರೆಯೇ. 1870ರಲ್ಲಿ ದೇಶದಲ್ಲಿ ಮಾನವ ಇತಿಹಾಸದಲ್ಲಿಯೇ ಅತಿ ಭೀಕರವಾದ ಬರ ಬಂದಿತ್ತು. ಜಲಕ್ಷಾಮದಿಂದ ಶೇ 50 ರಷ್ಟು ಜನಸಂಖ್ಯೆ ಇಳಿಯಿತು. ನೀರಿನ ಮೂಲಗಳನ್ನು ಅರಸಿದ ಸಮುದಾಯಗಳು ಜನರಷ್ಟೇ ಉಳಿದರು’ ಎಂದು ಸ್ಮರಿಸುತ್ತಾರೆ. ನಿಸರ್ಗದ ನಿಯಂತ್ರಣ ಸಲ್ಲದು ‘ಬೇಸಿಗೆಯಲ್ಲಿ ನಿಸರ್ಗವು ದುರ್ಬಲ ಪ್ರಾಣಿಗಳನ್ನು ಕಳೆದುಕೊಂಡು ಜೀವ ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಡಿ.ವಿ.ಗಿರೀಶ್  ‘ಕಾಡಿನೊಳಗೆ ನೀರೇ ಇಲ್ಲ ಎಂದೇನಿಲ್ಲ. ಸಣ್ಣ ಜಲಮೂಲಗಳಿರಲೇಬೇಕು. ಅಲ್ಲಿಗೆ ಪ್ರಾಣಿಗಳು ವಲಸೆ ಹೋಗುತ್ತವೆ. ಇದು ಸಹಜ ಪ್ರಕ್ರಿಯೆ. ಕಾಡಿನೊಳಗೆ ಎಲ್ಲ ಪ್ರಾಣಿಗಳಿಗೂ ನೀರು ಸಿಗುವಂತೆ ಮಾಡಲು ಅಸಾಧ್ಯ. ಮಾನವನ ನಿಯಂತ್ರಣದಿಂದ ಕಾಡು ಉದ್ಯಾನವಾಗುತ್ತದಷ್ಟೇ’ ಎನ್ನುತ್ತಾರೆ.

ಪರಿಸರ ವ್ಯವಸ್ಥೆಯ ನಾಶ: ಜೀವಸಂಕುಲಕ್ಕೆ ತೊಂದರೆ ‘ದಟ್ಟ ಅರಣ್ಯ ಫಲವತ್ತಾದ ಮಣ್ಣು ಹುಲ್ಲುಗಾವಲು ಪ್ರದೇಶ ಕುರುಚಲು ಕಾಡು ಕೆರೆ ಪ್ರದೇಶ ಇದ್ದರಷ್ಟೇ ಮಳೆ ಬೆಳೆ ಜಲ ಸಮೃದ್ಧಿಯಾಗುತ್ತದೆ. ಆದರೆ ನಮ್ಮ ಸ್ವಾರ್ಥದಿಂದ ಅವೆಲ್ಲ ನಾಶವಾಗಿವೆ. ಮಳೆ ಕೊರತೆಯಾಗಿ ಮನುಷ್ಯರೂ ಸೇರಿದಂತೆ ವನ್ಯಜೀವಿಗಳು ನೀರು ಆಹಾರಕ್ಕೆ ಪರದಾಡುವಂತಾಗಿದೆ‘ ಎಂಬುದು ಪರಿಸರವಾದಿ ಸುರೇಶ್ ಹೆಬ್ಳೀಕರ್‌ ಅವರ ವಾದ.  ‘ಕಾವೇರಿ ತುಂಗಭದ್ರಾ ಕೃಷ್ಣೆ ಕಾಳಿ ಮಲಪ್ರಭಾ ಶರಾವತಿ ಅಘನಾಶಿನಿ ಸೇರಿ ನಾಡಿನ ಬಹುತೇಕ ನದಿಗಳ ಹರಿವಿನ ಪ್ರದೇಶ ಕಡಿಮೆಯಾಗಿದೆ. ಜೀವಸಂಕುಲಕ್ಕಾಗಿ ಪಶ್ಚಿಮಘಟ್ಟದ ದಟ್ಟ ಅರಣ್ಯವನ್ನು ಉಳಿಸಿಕೊಳ್ಳಲೇಬೇಕು’ ಎನ್ನುತ್ತಾರೆ ಅವರು.  ಕಡಿಮೆಯಾದ ನೀರು ಹಿಂಗುವ ಪ್ರದೇಶ ‘ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದರಿಂದ ಮಳೆಗಾಲದಲ್ಲಿ ನೀರು ಹಿಂಗುವ ಪ್ರದೇಶಗಳು ಕಡಿಮೆಯಾಗುತ್ತಿವೆ’ ಎನ್ನುತ್ತಾರೆ ಪರಿಸರವಾದಿ ದಿನೇಶ್ ಹೊಳ್ಳ. ‘ಆಯಾ ಪ್ರದೇಶದ ಧಾರಣ ಸಾಮರ್ಥ್ಯದ ಅಧ್ಯಯನದ ಬಳಿಕವೇ ಯಾವುದೇ ಅಭಿವೃದ್ಧಿ ಯೋಜನೆ ಜಾರಿಯಾಗಬೇಕು. ಶೋಲಾ ಅರಣ್ಯದಲ್ಲಿರುವ ಜಲನಾಡಿಗಳಿಂದ ಸಣ್ಣ ತೊರೆಗಳು ಹರಿಯುತ್ತಿವೆ. ಪ್ರಾಣಿಗಳು ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ಆ ತೊರೆಗಳಿಗೆ ಅಲ್ಲಲ್ಲಿ ತಾತ್ಕಾಲಿಕವಾಗಿ ಸಣ್ಣ ತಡೆಗಳನ್ನು ಹಾಕಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಬಹುದು’ ಎಂಬುದು ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT