ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಬದುಕು ನೀಡಿದ ‘ಪ್ರೇರಣಾ’

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಹದಿನೆಂಟು ವರ್ಷ ಮೀರಿದ ಅಂಗವಿಕಲ ಹೆಣ್ಣು ಮಕ್ಕಳಿಗೆ ಜೀವನ ಕೌಶಲ ಕಲಿಸಿ, ದುಡಿಮೆಯ ದಾರಿ ತೋರಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ  ಗೊರಗುಂಟೆಪಾಳ್ಯದ ‘ಪ್ರೇರಣಾ ರಿಸೋರ್ಸ್‌ ಸೆಂಟರ್‌’.

ಅಲ್ಲಿ ಎಲ್ಲ ರೀತಿಯ ಅಂಗವಿಕಲ ಹೆಣ್ಣುಮಕ್ಕಳಿದ್ದಾರೆ. ಆದರೆ, ಅವರೆಲ್ಲರೂ ಯಾರ ಸಹಾಯವೂ ಇಲ್ಲದೆ ತಮ್ಮ ಕೆಲಸಗಳನ್ನು ತಾವೇ ಮಾಡುತ್ತಿದ್ದಾರೆ.  ನಾಲ್ಕೈದು  ಹುಡುಗಿಯರು ಬಾಡಿಗೆ ಮನೆಯಲ್ಲಿದ್ದುಕೊಂಡು  ಹೊರಗೆ ಕೆಲಸಕ್ಕೆ ಹೋಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದು ಸಾಧ್ಯವಾದದ್ದು ಪ್ರೇರಣಾದಿಂದ.

ಗೊರಗುಂಟೆಪಾಳ್ಯದ ‘ಪ್ರೇರಣಾ ರಿಸೋರ್ಸ್ ಸೆಂಟರ್‌’ನಲ್ಲಿ ಇವರೆಲ್ಲ ತರಬೇತಾಗಿದ್ದಾರೆ.  ರಾಜ್ಯದ ನಾನಾ ಭಾಗಗಳಿಂದ ಬಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಅಂಗವಿಕಲ ಯುವತಿಯರಿಗೆ ಇಲ್ಲಿ  ಪುನರ್ವಸತಿ ಕಲ್ಪಿಸಲಾಗಿದೆ.

ಕಾಲಿಲ್ಲದವರು, ದೃಷ್ಟಿದೋಷ, ಶ್ರವಣದೋಷ ಇರುವವರಿಗೆ ಕೌಶಲ ತರಬೇತಿ ನೀಡಿ ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥರೂ, ಸಂಪೂರ್ಣ ಅಂಗವಿಕಲರಾದವರೂ ಕೂಡಾ ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ತರಬೇತಿ ನೀಡುತ್ತಿದ್ದಾರೆ.

ಹೀಗೆ  ಅಂಗವಿಕಲರಾಗಿದ್ದೂ ಎಲ್ಲರಂತಾಗಲು ಪ್ರೇರಣೆಯಾದವರು ಮೇಘನಾ ಜೋಯಿಸ್. ಪ್ರತಿಷ್ಠಿತ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿದ್ದ ಮೇಘನಾ ಕೆಲಸಕ್ಕೆ ಗುಡ್‌ಬೈ ಹೇಳಿ ಅಂಗವಿಕಲರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಇದಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

‘18ರಿಂದ 45 ವರ್ಷ ವಯೋಮಾನದವರು ಇಲ್ಲಿ ಆಶ್ರಯ ಪಡೆದಿದ್ದಾರೆ. ಪ್ರೇರಣಾಕ್ಕೆ ಬರುವ ಎಲ್ಲ ಯುವತಿಯರನ್ನು ಮೊದಲು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ತಯಾರು ಮಾಡಲಾಗುತ್ತದೆ. ಮನೆ ನಿರ್ವಹಣೆ, ಅಡುಗೆ ಮಾಡುವುದು, ನಂತರ ಸ್ವಂತ ದುಡಿಮೆಗೆ ಪೂರಕವಾಗುವ ತರಬೇತಿಗಳನ್ನು ನೀಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಆಯಾಗಳು ಇಲ್ಲ’ ಎಂದು ಮೇಘನಾ ವಿವರಿಸುತ್ತಾರೆ.

‘ಇಲ್ಲಿ ಕೆಲಸ ಕಲಿಸುವುದು ಮಾತ್ರವಲ್ಲ, ಅವರಿಗೆ ಇಷ್ಟ ಇರುವ ಕಲೆಯನ್ನು ಕಲಿಸಲಾಗುತ್ತದೆ. ಕೆಲವರಿಗೆ ಸಂಗೀತದಲ್ಲಿ  ಆಸಕ್ತಿ ಇದೆ. ಕಣ್ಣು ಕಾಣದಿರುವ ಗೌರಿಗೆ ಸಂಗೀತ ಇಷ್ಟ. ಅವಳಿಗೆ ಸಂಗೀತ ಕಲಿಸಲಾಗಿದೆ. ಕೈ ಕಾಲು ಪೊಲಿಯೊ ಪೀಡಿತಳಾಗಿರುವ ಅನಿತಾಗೆ ನೃತ್ಯವೆಂದರೆ ಪ್ರಾಣ.

ಹಾಗಾಗಿ ಅವಳಿಗೆ ಶಾಸ್ತ್ರೀಯ ನೃತ್ಯ ತರಬೇತಿ ನೀಡಲಾಗಿದೆ. ಆಕೆ ಎರಡು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ’ ಎಂದು  ಹೇಳುವಾಗ ಮೇಘನಾ ಮುಖದಲ್ಲಿ ಸಂತೃಪ್ತಿ ಸುಳಿದಾಡುತ್ತದೆ.

ಹದಿನೆಂಟು ವರ್ಷಗಳವರೆಗೂ ಪೋಷಣೆ ಮಾಡುವ ಸರ್ಕಾರಿ,  ಸರ್ಕಾರೇತರ ಸಂಸ್ಥೆಗಳು ನಂತರ ಅಂಗವಿಕಲರನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಸ್ವತಂತ್ರವಾಗಿ ಬದುಕಬೇಕು, ಇಲ್ಲಾ ಮನೆಯವರು ಕರೆದೊಯ್ಯಬೇಕು. ಆದರೆ, ಅಂಥ ಸ್ಥಿತಿ ನಮ್ಮ ಸಮಾಜದಲ್ಲಿ ಇಲ್ಲ.

ಪ್ರೇರಣಾ ಅಂಥವರಿಗೆ ತನ್ನ ತೆಕ್ಕೆಯಲ್ಲಿ ಆಶ್ರಯ ನೀಡಿದೆ. ತಮ್ಮ ಸಂಸ್ಥೆಗೆ ಬಂದ ನಾನಾ ಬಗೆಯ ಅಂಗವಿಕಲತೆ ಇರುವ ಯುವತಿಯರಿಗೆ ಹೆಚ್ಚಿನ ಕೌಶಲ ಅಗತ್ಯವಿಲ್ಲದ ಕೆಲಸಗಳಾದ ಪ್ಯಾಕಿಂಗ್, ಕಚೇರಿಗಳಲ್ಲಿ ಅರ್ಜಿ ವಿತರಿಸುವುದು, ದೂರವಾಣಿ ಕರೆ ನಿರ್ವಹಣೆ ಮುಂತಾದ 60 ಬಗೆಯ ಕೆಲಸಗಳನ್ನು ಗುರುತಿಸಿ ಕಾರ್ಖಾನೆಗಳಲ್ಲಿ, ಗಾರ್ಮೆಂಟ್ಸ್‌ಗಳಲ್ಲಿ ಉದ್ಯೋಗ ಕೊಡಿಸುತ್ತಿದ್ದಾರೆ.

ಉದ್ಯೋಗ ಪಡೆದ ಯುವತಿಯರು ಸ್ವತಂತ್ರವಾಗಿ ಬದುಕುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ   ಭಿನ್ನ ಅಂಗವಿಕಲತೆ ಇರುವ  ಐದರಿಂದ ಆರು ಮಂದಿಯ ಗುಂಪುಗಳನ್ನು ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸಲು  ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರೆಲ್ಲ ಒಂದೊಂದು ಕೆಲಸಗಳನ್ನು ಹಂಚಿಕೊಂಡು ಸ್ವತಂತ್ರವಾಗಿ ಬದುಕುವಷ್ಟು ಸಬಲರಾಗಿದ್ದಾರೆ.

ಈವರೆಗೆ ಸಂಸ್ಥೆಯು 1 ಸಾವಿರಕ್ಕೂ  ಹೆಚ್ಚು ಅಂಗವಿಕಲರಿಗೆ ವಿವಿಧ ಕಡೆ ಉದ್ಯೋಗ ಕೊಡಿಸಿದ್ದಾರೆ. 26 ಯುವತಿಯರಿಗೆ ಮದುವೆ ಮಾಡಿಸಿದ್ದಾರೆ. ಉದ್ಯೋಗ, ಮದುವೆ ಇವೆರಡೂ ಸಾಧ್ಯವಾಗದ 120 ಯುವತಿಯರಿಗೆ ಪ್ರೇರಣಾದಲ್ಲಿ ಆಶ್ರಯ ನೀಡಿ ಪೋಷಿಸುತ್ತಿದ್ದಾರೆ.

ಹೊರಗೆ ಹೋಗಿ ದುಡಿಯಲು ಸಾಧ್ಯವಾಗದ ಯುವತಿಯರಿಗೆ ಪೇಪರ್‌ ಬ್ಯಾಗ್‌, ಪ್ಲಾಸ್ಟಿಕ್‌ ಹೂಮಾಲೆ, ಬಟ್ಟೆಯ ಮ್ಯಾಟ್‌ ಮುಂತಾದ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಿ ಚಟುವಟಿಕೆಯಿಂದ ಇರುವಂತೆ ಮಾಡುತ್ತಿದ್ದಾರೆ.  ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಮಾಡುತ್ತಾರೆ.
ಸ್ವಂತ ನಿವೇಶನ, 11 ಕೊಠಡಿಗಳ ವ್ಯವಸ್ಥಿತ ಕಟ್ಟಡದಲ್ಲಿ ಪ್ರೇರಣಾ ಕಾರ್ಯನಿರ್ವಹಿಸುತ್ತಿದೆ. 

ಪ್ರೇರಣಾದ ಕೆಲಸಕ್ಕೆ ದಾನಿಗಳ ಸಹಕಾರ ನಿರಂತರವಾಗಿದೆ.  60 ಜನ ಕಾಯಂ ದಾನಿಗಳಿದ್ದಾರೆ. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾನ ಮಾಡುವವರೂ ಇದ್ದಾರೆ. ಕೆಲವರು ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದ ಹೆಸರಿನಲ್ಲಿ ದಾನ ಮಾಡುತ್ತಾರೆ. ಅವರೆಲ್ಲರನ್ನು ಮೇಘನಾ ಸ್ಮರಿಸುತ್ತಾರೆ.

ಪ್ರೇರಣಾ ಇತಿವೃತ್ತ
ಪ್ರೇರಣಾ ಸಂಸ್ಥೆಯನ್ನು 1994ರಲ್ಲಿ ಪ್ರಶಾಂತಾ ಅವರ ಮನೆಯಲ್ಲಿಯೇ ಆರಂಭಿಸಿದರು. ಇವರ ಪುತ್ರಿ ಮೇಘನಾ ಜೋಯಿಸ್ ಪ್ರತಿಷ್ಠಿತ ಬಾಷ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಅಮ್ಮನ ಅನಾರೋಗ್ಯ ತೀವ್ರವಾದಾಗ (2007ರಲ್ಲಿ) ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ‘ಪ್ರೇರಣಾ’ ಚಟುವಟಿಕೆಗೆ ಸಮರ್ಪಿಸಿಕೊಂಡರು.

ಮೊಬೈಲ್: 9740290891

*
ನನ್ನೂರು ಚಿಂತಾಮಣಿ. 21 ವರ್ಷ. ಕಳೆದ ಹನ್ನೊಂದು ವರ್ಷದಿಂದ ಪ್ರೇರಣಾದಲ್ಲಿ ಆಶ್ರಯ ಪಡೆದಿದ್ದೇನೆ. ಅಪ್ಪ–ಅಮ್ಮ ಇಲ್ಲ. ತಾತ ಅಜ್ಜಿ ಇದ್ದಾರೆ. ಪೊಲಿಯೊದಿಂದ ಕೈ– ಕಾಲು ಸ್ವಾಧೀನದಲ್ಲಿ ಇಲ್ಲ. ಇಲ್ಲಿ ಬೊಂಬೆ, ಬೊಕೆ ಮತ್ತು ಬಟ್ಟೆಯಿಂದ ಮ್ಯಾಟ್‌ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ. ನೃತ್ಯವನ್ನೂ ಕಲಿತಿದ್ದೇನೆ.
–ಅನಿತಾ, ಚಿಂತಾಮಣಿ

*
ನನ್ನೂರು ಸಕಲೇಶಪುರ. ನಾನು ಪೊಲಿಯೊ ಪೀಡಿತೆ. 12 ವರ್ಷದಿಂದ ಇಲ್ಲಿದ್ದೇನೆ. ಬೊಕೆ, ಬೊಂಬೆ, ಮ್ಯಾಟ್‌ ತಯಾರಿಸುತ್ತೇನೆ. ಕಂಪೆನಿಗಳಿಗೆ ಹೋಗಿ ಮಾರಾಟ ಮಾಡುತ್ತೇನೆ.
–ಸುನಂದಾ, ಸಕಲೇಶಪುರ

*
ಆರು ವರ್ಷದ ಹಿಂದೆ ಪ್ರೇರಣಾದ ಬಗ್ಗೆ ರೇಡಿಯೊದಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಆ ಮಾಹಿತಿ ಅನುಸರಿಸಿ ಇಲ್ಲಿಗೆ ಬಂದೆ. ನನಗೆ 18 ವರ್ಷವಿದ್ದಾಗ ಕಣ್ಣು ಕಾಣದಾಯಿತು. ಇಲ್ಲಿ ಬಂದು ಅಗರಬತ್ತಿ ತಯಾರಿಸುವುದನ್ನು ಕಲಿತಿದ್ದೇನೆ. ಯಾರ ಸಹಾಯವೂ ಇಲ್ಲದೆ ಪಕ್ಕದ ಗಾರ್ಮೆಂಟ್ಸ್‌ಗೆ ಹೋಗಿ ಕೆಲಸ ಮಾಡುತ್ತೇನೆ.
–ಗೌರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT