ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜೂರ ಹಣ್ಣೊಳಗೆ ಕೀಟಗಳ ಕೋಲಾಹಲ

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಂಶೋಧನೆ
Last Updated 5 ಜೂನ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಜೂರ ಕೇವಲ ಹಣ್ಣಲ್ಲ. ಅದು ಕೆಲವು ಕೀಟಗಳನ್ನು ಬೆಳೆಸುವ ಸುಂದರ ಉದ್ಯಾನವನ ಕೂಡ. ಸುಮಾರು 2,000 ಹೂಗಳಿಂದ ಕೂಡಿರುವ ‘ಸೈಕೊನಿಯಂ’ ಎಂಬ ಅಂಜೂರದ ಹಣ್ಣು, ಸಾವಿರಾರು ಕೀಟಗಳಿಗೆ ಆತಿಥ್ಯ ಒದಗಿಸುತ್ತದೆ.

ಈ ಕೀಟಗಳು ಹಣ್ಣಿನ ಒಳಗೆ ತೆಪ್ಪಗೆ ವಾಸ ಮಾಡುವುದಿಲ್ಲ. - ಅವುಗಳ ನಡುವಿನ ಕಿತ್ತಾಟ ಎಷ್ಟು ಜೋರಾಗಿರುತ್ತದೆ ಎಂದರೆ, ಹಣ್ಣು ಪಕ್ವವಾಗಲು ಬೇಕಾಗುವ ಸಮಯವನ್ನು ಕೂಡ ನಿರ್ಧರಿಸಬಲ್ಲದು!

ಭಾರತೀಯ ವಿಜ್ಞಾನ ಸಂಸ್ಥೆಯ  ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ಅನುಷಾ ಕೃಷ್ಣನ್ ಮತ್ತು ರೆನೀ ಬೋರ್ಜ್ಸ್ ಅವರು ಅಂಜೂರದಲ್ಲಿ ನಡೆಯುತ್ತಿರುವ ಈ ಕೋಲಾಹಲವನ್ನು ಅಭ್ಯಸಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಅವರು ಸೈಕೊನಿಯಂ ಹಣ್ಣನ್ನು ಪ್ರವೇಶಿಸುವ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಿದರು. ಅವರು ಈ ಸಂಶೋಧನೆಯನ್ನು ‘ಜರ್ನಲ್ ಆಫ್ ಇಕಾಲಜಿ’ಯಲ್ಲಿ ಪ್ರಕಟಿಸಿದ್ದಾರೆ.

‘ವಾಸ್ಪ್’ಗಳು ಅಂಜೂರದ ಹಣ್ಣಿನೊಳಗೆ ಮೊಟ್ಟೆಯಿಟ್ಟು  ಪರಾಗಸ್ಪರ್ಶದ ಮೂಲಕ ಸಸ್ಯದ ಸಂತತಿ ಬೆಳೆಯಲು ಸಹಾಯ ಮಾಡುತ್ತವೆ. ‘ಸೈಕೊನಿಯಂ’ ಅಂಜೂರದ ಬೀಜಗಳಿಗೂ ಮತ್ತು ಪರಾಗಸ್ಪರ್ಶಕ ವಾಸ್ಪ್ ಗಳಿಗೂ ಬೆಳೆಯಲು ಸೂಕ್ತವಾದ ಪರಿಸರ ಒದಗಿಸುತ್ತದೆ.

ಮತ್ತೊಂದು ಅಂಜೂರದ ಮರದಿಂದ ಪರಾಗವನ್ನು ಹೊತ್ತು ತರುವ ಹೆಣ್ಣು ಪರಾಗಸ್ಪರ್ಶಕಗಳು ತಮಗಾಗಿಯೇ ಇರುವ ವಿಶೇಷ ರಂಧ್ರದಿಂದ ಸೈಕೊನಿಯಂ ಹಣ್ಣನ್ನು ಪ್ರವೇಶಿಸುತ್ತವೆ. ಇಲ್ಲಿ ಇವು ಪರಾಗಸ್ಪರ್ಶ ಮಾಡಿ ಮೊಟ್ಟೆಗಳನ್ನು ಇಡುತ್ತವೆ. ಪ್ರತಿಯೊಂದು ‘ಸೈಕೊನಿಯಂ’ ತೋಟದಲ್ಲೂ ಸಾವಿರಕ್ಕೂ ಹೆಚ್ಚು ಪರಾಗಸ್ಪರ್ಶಕ ವಾಸ್ಪ್ ನ ಮರಿಗಳು ಬೆಳೆಯಬಹುದು ಎಂದು ಅವರು ಹೇಳುತ್ತಾರೆ.

‘ಮೇಲ್ನೋಟಕ್ಕೆ ಇದು ಹಿತವಾದ ಪರಿಸರದಂತೆ ಕಂಡರೂ, ಪರಾಗಸ್ಪರ್ಶ ವಾಸ್ಪ್ ಗಳು ಹಲವು ಸವಾಲುಗಳನ್ನು ಎದುರಿಸಬೇಕು. ಪರಾವಲಂಬಿ ವಾಸ್ಪ್ ಗಳು (parasitic wasps) ಸೈಕೊನಿಯಂ ಹಣ್ಣಿನ ಮೇಲ್ಮೈ ಅನ್ನು ಕೊರೆದು ಒಳಗಿನ ಹೂದೋಟದಲ್ಲಿ ಮೊಟ್ಟೆ ಇಡುತ್ತವೆ. ಈ ಕೀಟಗಳು ಪರಾಗಸ್ಪರ್ಶ ಮಾಡುವುದಿಲ್ಲ. ಅಲ್ಲದೇ, ಒಳಗಿರುವ ಹೂಗಳನ್ನೂ ಕೂಡ ಆಕ್ರಮಿಸಿಕೊಳ್ಳುತ್ತವೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಗಾಲ್ಲರ್ ವಾಸ್ಪ್ ಈ ಹೂದೋಟದ ಮೇಲೆ ದಾಳಿ ಮಾಡುವ ಮತ್ತೊಂದು ಕೀಟ. ಇವುಗಳು ಪ್ರವೇಶಿಸಿದ ಮೇಲೆ ಮುಂಚಿನಿಂದಲೂ ವಾಸವಾಗಿದ್ದ ಪರಾಗಸ್ಪರ್ಶಕ ವಾಸ್ಪ್ ಗಳು ಹೊಸ ಕೀಟಗಳ ಜೊತೆ ಆಹಾರಕ್ಕೆ ಸ್ಪರ್ಧಿಸಬೇಕಾಗುತ್ತದೆ. ಮೊಟ್ಟೆ ಯೊಡೆದು ಮರಿಗಳಾದ ಮೇಲೆ  ಗಾಲ್ಲರ್ ಮತ್ತು ಪರಾಗಸ್ಪರ್ಶಕ ವಾಸ್ಪ್ ನ ಮರಿಗಳು ಪರಾವಲಂಬಿ ವಾಸ್ಪ್ ನ ಮರಿಗಳ ಆಹಾರವಾಗುತ್ತವೆ. ಅಹಾರಕ್ಕಷ್ಟೇ ಅಲ್ಲದೆ, ಬೇರೆ ಬೇರೆ ಕಾರಣಗಳಿಗೂ ನಡೆಯುವ ಈ ತಿಕ್ಕಾಟ ಅವುಗಳು ಹಂಚಿಕೊಂಡಿರುವ ತೋಟದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ’ ಎಂದು ಅವರು ಹೇಳುತ್ತಾರೆ.

‘ಅಂಜೂರದ ಹಣ್ಣು ಪಕ್ವವಾಗಲು ಬೇಕಾಗುವ ಸಮಯ ಮುಖ್ಯವಾದದ್ದು.  ವಿವಿಧ ವಾಸ್ಪ್ ಗಳು ಹಣ್ಣಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಮೊಟ್ಟೆ ಇಡುತ್ತವೆ. ಹಣ್ಣಿನ ಪ್ರಾಯದಲ್ಲೇ ಮೊಟ್ಟೆ ಇಟ್ಟ ಕೀಟಗಳು ತಮ್ಮ ಮರಿಗಳು ಬೇರೆ ಮರಿಗಳಿಗೆ ಆಹಾರವಾಗುವುದನ್ನು ತಪ್ಪಿಸಲು  ಮರ ಬೇಗ ಬೆಳೆಯುವುದನ್ನು ಬಯಸುತ್ತವೆ.

ಹಾಗೆಯೇ ಸ್ವಲ್ಪ ತಡವಾಗಿ ಮೊಟ್ಟೆ ಇತ್ತ ಕೀಟವು  ತನ್ನ ಮರಿಗೆ ಬೆಳೆಯಲು ಸಾಕಷ್ಟು ಸಮಯ ಸಿಗಲಿ ಎಂಬ ಕಾರಣದಿಂದ  ಮರ ನಿಧಾನವಾಗಿ ಬೆಳೆಯಲೆಂದು ಬಯಸುತ್ತದೆ. ಕೆಲವು ಘಟನೆಗಳು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಯದಿದ್ದರೆ, ಹಲವು ಜೀವಿಗಳಿಂದ ತುಂಬಿ ತುಳುಕುತ್ತಿರುವ ಈ ಹೂದೋಟ ಒಂದು ಸಮಾಧಿಯಾಗಿ ಪರಿವರ್ತನೆಗೊಳ್ಳಬಹುದು’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಗಂಡು ಮತ್ತು ಹೆಣ್ಣು ಪರಾಗಸ್ಪರ್ಶ ವಾಸ್ಪ್ ಗಳು ಬೆಳೆದ ಮೇಲೆ ತಮ್ಮ ಸಂಗಾತಿಗಳೊಡನೆ ಕೂಡುತ್ತವೆ. ಹೆಣ್ಣು ಕೀಟವು ತಾನು ಇರುವ ಹಣ್ಣಿನ ಪರಾಗವನ್ನು ಮತ್ತೊಂದು ಹಣ್ಣಿಗೆ ಸ್ಪರ್ಶಿಸಿ  ಮೊಟ್ಟೆಯಿಟ್ಟು  ತನ್ನ ಮತ್ತು ಸಸ್ಯದ ಸಂತತಿ ಬೆಳೆಯುವಂತೆ ಮಾಡುತ್ತದೆ. ಹೆಣ್ಣಿನ ಸಂಗ ಮಾಡುವುದನ್ನು ಬಿಟ್ಟರೆ ಗಂಡು ಕೀಟಗಳಿಗೆ ಒಂದೇ ಕೆಲಸವಿರುವುದು:  ಹಣ್ಣಿನ ಗಟ್ಟಿಯಾದ ಒಳ ಗೋಡೆಯನ್ನು ತಿಂದು, ಒಳಗಿರುವ ವಾಸ್ಪ್ ಗಳನ್ನು ಬಿಡುಗಡೆ ಮಾಡುವುದು. ವಿಶೇಷವೆಂದರೆ, ಈ ಕೆಲಸವನ್ನು ಗಂಡು ಪರಾಗಸ್ಪರ್ಶ ವಾಸ್ಪ್ ಗಳು ಮಾತ್ರ ಮಾಡಲು ಸಾಧ್ಯ’ ಎಂದು ಅವರು ತಿಳಿಸುತ್ತಾರೆ.

‘ಒಳಗೆ ಬೆಳೆದಿರುವ ಕೀಟಗಳಿಗೆ ಹೊರಗೆ ಹೋಗಲು ಒಂದೇ ದಾರಿ ಇರುವುದು. ಈ ಸಂದರ್ಭದಲ್ಲೇ, ಅವುಗಳಿಗೆ ಹಣ್ಣಿನ ಬೆಳವಣಿಗೆ ಜೀವನ್ಮರಣದ ವಿಷಯವಾಗುವುದು. ಹಣ್ಣು ಬಹಳ ಬೇಗ ಪಕ್ವವಾದರೆ  ಗೋಡೆಯ ಒಳಗೆ ಸಿಲುಕಿರುವ ಕೀಟಗಳನ್ನು ಬಂಧಮುಕ್ತಗೊಳಿಸುವ ಗಂಡು ಪರಾಗಸ್ಪರ್ಶ ವಾಸ್ಪ್ ಗಳು ಇನ್ನೂ ಪ್ರಬುದ್ಧತೆಗೆ ಬಂದಿರುವುದಿಲ್ಲ.

ಇದರಿಂದ ಈ ವಾಸ್ಪ್‌ಗಳು  ಗೋಡೆಯಿಂದ ಹೊರಬರುವ ಮೊದಲೇ ಅಂಜೂರ ತಿನ್ನುವ ಬಾವಲಿ, ಹಕ್ಕಿ , ಕೋತಿ ಮುಂತಾದ
ಪ್ರಾಣಿಗಳ ಹೊಟ್ಟೆ ಸೇರಬೇಕಾಗುತ್ತದೆ. ಹಾಗೆಂದು ಹಣ್ಣು ಪಕ್ವವಾಗುವುದು ಬಹಳ ನಿಧಾನವಾದರೆ  ಪರಭಕ್ಷಕ ಜೀವಿಗಳು ಬಂದು ದಾಳಿ ಮಾಡುವ ಸಾಧ್ಯತೆ ಜಾಸ್ತಿಯಾಗುತ್ತದೆ’ ಎಂದು ಅವರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT