ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಃಕರಣ ಬೆಳಗಿದ ಪ್ರಧಾನ ಕವಿಗೋಷ್ಠಿ

Last Updated 2 ಅಕ್ಟೋಬರ್ 2014, 6:35 IST
ಅಕ್ಷರ ಗಾತ್ರ

ಮೈಸೂರು: ಕಣ್ಣು ಕೋರೈಸುವ ದಸರಾ ಬೆಳಕಿನಲ್ಲಿ ಕೈ ದೀವಿಗೆಯಾಗಿ, ಅಂತಃಕರಣ ಬೆಳಗುವ ಬೆಳಕಾದುದು ಬುಧವಾರ ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಪ್ರಧಾನ ಕವಿಗೋಷ್ಠಿ.

ಇದಕ್ಕೂ ಮುನ್ನ ಎಲ್ಲ ಕವಿಗಳನ್ನು ಪೂಜಾ ಕುಣಿತದ ಮೂಲಕ ಸ್ವಾಗತಿಸಲಾಯಿತು. ನಂತರ 30 ಕವಿಗಳು ಕವಿತೆಗಳನ್ನು ವಾಚಿಸಿದರು. ಇದರಲ್ಲಿ ಉರ್ದು, ತುಳು, ಕೊಂಕಣಿ ಕವಿಗಳೂ ಸೇರಿದ್ದರು. ಇದೇ ಮೊದಲ ಬಾರಿಗೆ ಅರೆಭಾಷೆಗೂ ಅವಕಾಶ ನೀಡಲಾಗಿತ್ತು.

ಬಾನು ಮುಷ್ತಾಕ್‌ ಅವರು ತಮ್ಮ ಬದುಕು– ಬರಹ ಕುರಿತು ಪಿಎಚ್‌.ಡಿ ಮಾಡುತ್ತಿದ್ದ ಸಂಶೋಧಕಿ ಶ್ರುತಿ ಹತ್ಯೆಯಾದ ಕುರಿತು ಪದ್ಯ ವಾಚಿಸಿ, ‘ಹಸಿರಕ್ತದ ವಾಸನೆ ಗಮಲು ಬೀಸಿತ್ತು’ ಎಂದು ನೋವಿನಿಂದ ಹೇಳಿದರು.

‘ಎರಡು ದೇಶಗಳ, ಎರಡು ಗಡಿಗಳ ಗಡಿಯಾರದ ಮುಳ್ಳೆರಡರ ನಡುವೆ ಎಚ್ಚರಿಕೆಯ ಗಂಟೆಯಾಗಿ, ನಿತ್ಯ ಗಸ್ತು ಹೊಡೆಯುತ್ತಿದ್ದಾನೆ ಮಂಟೊ’ ಎಂದು ಪಾಕಿಸ್ತಾನದ ಕವಿ ಸಾದತ್ ಹಸನ್‌ ಮಂಟೊ ಕುರಿತು ಸತೀಶ ಕುಲಕರ್ಣಿ ಕವಿತೆ ಓದಿದರು. ಹೀಗೆ ಮಂಟೊ ಕುರಿತ ಕವಿತೆ ಕೇಳಿದ ಶೂದ್ರ ಶ್ರೀನಿವಾಸ್‌ ಅವರು ಸ್ಫೂರ್ತಿಗೊಂಡು ಭಾರತ ಹಾಗೂ ಪಾಕಿಸ್ತಾನ ನಡುವೆ ಇರುವ, ಸಾಕಷ್ಟು ರಕ್ತಸಿಕ್ತ ಕಂಡ ರಾವಿ ನದಿ ಕುರಿತು ಪದ್ಯ ಓದಿದರು.

ಸೀರೆ ಉಡಲು ಬರುವುದಿಲ್ಲ ಎಂದು ಬಿಪಾಶಾ ಬಸು ಹೇಳಿದ ದಿನದಂದು ಬರೆದ ಕವಿತೆಯನ್ನು ಓದಿದ ಪ್ರತಿಭಾ ನಂದಕುಮಾರ್‌, ‘ಬೆತ್ತಲಾದವರೆಲ್ಲ ಸೂಳೆಯರಲ್ಲ, ಸೀರೆ ಉಟ್ಟವರೆಲ್ಲ ಗರತಿಯರಲ್ಲ’ ಎಂದು ಗಮನ ಸೆಳೆದರು. ಧರಣೇಂದ್ರ ಕುರಕುರಿ ಅವರು ರೈತರ ಕನಸುಗಳು ನುಚ್ಚು ನೂರಾಗುತ್ತವೆ ಎನ್ನುವುದನ್ನು ಕನ್ನಡಿ ಪ್ರತಿಮೆ ಮೂಲಕ ಅನಾವರಣಗೊಳಿಸಿದರು.

ಕಾಶೀನಾಥ ಅಂಬಲಗಿ ಅವರು ‘ಈ ಸಮಯದ ದಾಹ ಮಿತಿ ಮೀರಿದೆ, ಅಂತಿಮ ಶಾಂತಿಗೆ ಬಾ ಇನ್ನು ಹತ್ತಿರ’ ಎನ್ನುವ ಘಜಲ್‌ ಓದಿದರು. ಡಾ.ಸಿದ್ದನಗೌಡ ಪಾಟೀಲ ಅವರು ‘ಮೂರಂಕದ ಸ್ವತಂತ್ರ ಕವನ’ ಎನ್ನುವ ಕವಿತೆ ಮೂಲಕ ದೇಶದ ಇಂದಿನ ಸ್ಥಿತಿ ಕುರಿತು ‘ಹೂಡಬನ್ನಿ, ಹಾಡಬನ್ನಿ, ಓ ಭಾರತ ಭಾಗ್ಯ ವಿಧಾತರೆ, ಕೆಂಪುಕೋಟೆಯ ವಾಣಿ ಇದು, ವಿಶ್ವ ವಾಣಿಜ್ಯ ಬಾಂಧವರೆ, ಹೂಡಬನ್ನಿ, ಹಾಡಬನ್ನಿ ‘ಮೇಡಿನ್ನಿಂಡಿಯಾ’ ಹೇಳಬನ್ನಿ, ‘ಡಿಜಿಟಲ್ ಇಂಡಿಯಾ’ ಮಾಡಬನ್ನಿ’ ಎಂದು ವ್ಯಂಗ್ಯವಾಡಿದರು.

ಮೊಗಳ್ಳಿ ಗಣೇಶ್‌ ಅವರು ‘ಯೋನಿ ಪ್ರಾರ್ಥನೆ’ ಕವಿತೆ ಮೂಲಕ ‘ಕೊಡು ತಾಯೆ ಕೊಡು, ನಿನ್ನ ಮೋಹದ ಕೆಂದಾವರೆಯ ಯೋನಿ ಕುಂಡವ ಕೊಡು’ ಎಂದು ಪ್ರಾರ್ಥಿಸುತ್ತ ಕೊನೆಗೆ ‘ಕೊಡು ತಾಯಿ ಕೊಡು ಕಾಲಾತೀತ, ನಿನ್ನ ಯೋನಿ ಮಂಡಲವೆ ನನ್ನ ಸೂರ್ಯ ಮಂಡಲ’ ಎನ್ನುವ ಭಿನ್ನ ಕವಿತೆ ಓದಿ ಸಹೃದಯರ ಮೆಚ್ಚುಗೆ ಗಳಿಸಿದರು.

ಎಂ.ಆರ್. ಕಮಲಾ ಅವರು ‘ಹಾಗಾದರೆ ಮಾರಿಬಿಡಿ’ ಎನ್ನುವ ಕವಿತೆಯಲ್ಲಿ ‘ದೇಹ ಮಾರುವುದು ಕಾನೂನುಬದ್ಧಗೊಳಿಸಿ ಎಂದು ಯಾರೋ ಕೂಗುತ್ತಾರೆ, ಮಾರಬಹುದೆ ಅವಳ ಘನತೆಯನ್ನು?’ ಎಂದು ಕೇಳಿದರು. ‘ಬದುಕೆಂಬ ಹುಚ್ಚರ ಸಂತೆಯಲಿ, ನಡೆದಾಡುವ ಶವಗಳ ನಡುವೆ, ನಾನೊಂದು ಶವವಾದ ಮೇಲೆ, ಸಾವು ನನ್ನನ್ನು ಕಾಡುವುದಿಲ್ಲ. ಕಾಡುತ್ತಲೇ ಇಲ್ಲ’ ಎಂದು ಗಟ್ಟಿ ನಿರ್ಧಾರವನ್ನು ಡಾ.ಎನ್‌. ಜಗದೀಶ್ ಕೊಪ್ಪ ನೀಡಿದರು.

ತಮಿಳುನಾಡಿನಲ್ಲಿ ದಲಿತ ಹುಡುಗನೊಬ್ಬ ವಾಚು ಕಟ್ಟಿದ್ದನೆಂಬ ಕಾರಣಕ್ಕೆ ಆತನ ಕೈಯನ್ನೇ ಕತ್ತರಿಸಿದ ಘಟನೆಯನ್ನು ನೆನೆದ ಸುಬ್ಬು ಹೊಲೆಯಾರ್‌ ಅವರು, ಆ ಹುಡುಗನಿಗೆ ತಮ್ಮ ಪದ್ಯ ಅರ್ಪಿಸಿ, ‘ಪ್ರಾರ್ಥಿಸುತ್ತೇನೆ ನನ್ನ ಹೊಡೆದವರ ಕೈ ನೋವಾಗದಿರಲಿ ಎಂದು, ನಾನು ಮಾತ್ರ ಇರುವೆ ಈ ನೆಲದ ಹೂವಾಗಿ’ ಎಂದು ನೋವಿನ ರಾಗದ ಹಾಡನ್ನು ಕಟ್ಟಿಕೊಟ್ಟರು.

ಹೊರೆಯಾಲ ದೊರೆಸ್ವಾಮಿ ಅವರು ಬಡವರ ಒಡಲು ಸೇರಲು ತವಕಿಸುವ ಅಕ್ಕಿಯ ಕುರಿತು ‘ಒಂದು ಅಕ್ಕಿ ಕಾಳಿನ ಕಥೆ’ ಎನ್ನುವ ಆಡುಮಾತಿನ ಕವಿತೆಯನ್ನು ಸೊಗಸಾಗಿ ಕಟ್ಟಿಕೊಟ್ಟರು. ಹೀಗೆ ಮಂಜುನಾಥ್‌ ಲತಾ, ನಟರಾಜ ಬೂದಾಳು, ವಿನಯಾ ಒಕ್ಕುಂದ ಕವಿತೆಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT