ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗದ ಬಿತ್ತನೆ

ಮಾನವ ಸಂಬಂಧಗಳ ಬೆಲೆ ಪ್ರತಿಯೊಬ್ಬರಿಗೂ ಅರ್ಥವಾಗಬೇಕು
Last Updated 24 ಆಗಸ್ಟ್ 2015, 19:36 IST
ಅಕ್ಷರ ಗಾತ್ರ

ಕೃಷಿಕರ ಬದುಕಿನಲ್ಲಿ ಮುಖ್ಯವಾದ ಪ್ರಕ್ರಿಯೆ ಎಂದರೆ, ಬಿತ್ತನೆ. ಬೆಳೆಗಾಗಿ ಬಿತ್ತನೆ; ಬಿತ್ತನೆಯಿಂದ ಬೆಳೆ. ಬಿತ್ತನೆಯು ರೈತರಿಗೆ ಸೀಮಿತವಲ್ಲ; ಅಗೋಚರ ಬಿತ್ತನೆ ಎಂಬುದಿದೆ. ಅದು ಅಂತರಂಗದ ಬಿತ್ತನೆ. ಸತ್ಪುರುಷರು ಬಿತ್ತನೆಯ ಕಾರ್ಯವನ್ನು ತಮ್ಮ ಬದುಕಿನುದ್ದಕ್ಕೂ ಕೈಗೊಳ್ಳುತ್ತಲೇ ಇರುತ್ತಾರೆ. ಬಿತ್ತನೆಯನ್ನು ಮೂರು ಭಾಗವಾಗಿ ವಿಂಗಡಿಸಬಹುದು.

1. ಭ್ರಾಂತಿಯ ಬಿತ್ತನೆ:  ಬ್ರಹ್ಮಾಂಡದಲ್ಲಿ ಅನಂತ ಲೋಕಗಳು. ಅದರಂತೆ ಮಾನವನ ಆಂತರ್ಯದಲ್ಲಿಯೂ ಅನೇಕ ಲೋಕಗಳು. ಅವುಗಳಲ್ಲಿ ಭ್ರಮಾಲೋಕವೂ ಒಂದು. ಭ್ರಮೆ ಎಂದರೆ, ಹುಚ್ಚರ ಲೋಕವೆಂದು ಭಾವಿಸಬಾರದು. ಭ್ರಮೆಗೆ ಭ್ರಾಂತಿಯೆಂತಲೂ ಕರೆಯಲಾಗುವುದು. ಊಹಾತ್ಮಕವಾದುದು. ಇಲ್ಲದುದನ್ನು ಇದೆಯೆಂದು ಭಾವಿಸುವುದು. ಭಾವನೆಯ ಅತಿರೂಪವೇ ಭ್ರಾಂತಿ. ಮಾಟ-ಮಂತ್ರ ಮಾಡುವವರು, ಭವಿಷ್ಯವನ್ನು ನುಡಿಯುವವರು ಹೆಚ್ಚಾಗಿ ಭ್ರಾಂತಿಯನ್ನು ಬಿತ್ತುತ್ತಾರೆ. ಬುದ್ಧಿವಂತರು ಭ್ರಾಂತಿಗೆ ಒಳಗಾಗುವುದಿಲ್ಲ; ಮುಗ್ಧರನ್ನು ಬೇಗನೆ ಭ್ರಾಂತರನ್ನಾಗಿಸಬಹುದು. ಕೆಲವರು ಪೂರ್ವಾಪರವನ್ನು ತಿಳಿದುಕೊಂಡು, ಅವರ ಬದುಕಲ್ಲಿ ನಡೆದಿರಬಹುದಾದ ಘಟನೆಗಳ ಕುರಿತು ಹೇಳುತ್ತ ಹೋಗುತ್ತಾರೆ. ಇಂಥವರಿಗೆ ವಶೀಕರಣ ವಿದ್ಯೆ ಬಲ್ಲವರೆಂದು ಹೇಳಲಾಗುತ್ತದೆ.

ದುರ್ಬಲ ಮತ್ತು ಮುಗ್ಧ ವ್ಯಕ್ತಿಯ ಸರ್ವ ಸಂಗತಿಯನ್ನು ತಿಳಿದುಕೊಂಡು ತಾವು ಹೇಳಿದಂತೆ ಕೇಳುವಂತೆ ಮಾಡಲಾಗುತ್ತದೆ. ಅದನ್ನೇ ವಶೀಕರಣವೆಂದು ಕರೆಯಲಾಗುತ್ತದೆ. ದುರ್ಬಲ ವ್ಯಕ್ತಿಗೆ ಒಂದಿಲ್ಲೊಂದು ಸಲಹೆ ನೀಡುತ್ತ ಅವರ ಮೇಲೆ ವಶೀಕರಣ ವಿದ್ಯೆಯನ್ನು ಪ್ರಯೋಗಿಸಲಾಗುತ್ತದೆ. ರಾತ್ರಿವೇಳೆ ಹಗ್ಗವನ್ನು ನೋಡಿದವರು ಅಥವಾ ತುಳಿದವರು ಹಾವೆಂದು ಭಾವಿಸುತ್ತಾರೆ. ಕತ್ತಲಲ್ಲಿ ಹಗ್ಗವನ್ನು ಹಾವೆಂದು ಭಾವಿಸಿದಂತೆ, ಭವಿಷ್ಯಕಾರರು ಹೇಳುವುದನ್ನು ಸತ್ಯವೆಂದು ನಂಬುತ್ತಾರೆ. ಇಂಥವರಿಗೆ ಭ್ರಾಂತಿಯೇ ಆಧಾರ. ಮುಗ್ಧರೆ ಬಂಡವಾಳ.

ದೆವ್ವ, ಭೂತ ಇತ್ಯಾದಿ ಪೀಡೆಯಿದೆ ಎಂದು ನಂಬಿಸಿ, ಅದರ ವಿಮೋಚನೆಗಾಗಿ ಒಂದಿಲ್ಲೊಂದು ಪೂಜೆ. ಅದರ ಹೆಸರಲ್ಲಿ ಶಾಂತಿಯನ್ನು ಮಾಡಿಸುವಂತೆ ಪ್ರಚೋದನೆ. ಅತ್ಯಂತ ಚಿಕ್ಕವಯಸ್ಸಿನಲ್ಲಿ ಭೂತ-ಪ್ರೇತಗಳ ಬಗ್ಗೆ ಭಯವನ್ನು ಮೂಡಿಸಲಾಗುತ್ತದೆ. ಸತ್ತವರಲ್ಲಿ ಕೆಲವರು ದೆವ್ವ ಆಗುತ್ತಾರೆ. ಪ್ರೇತಾತ್ಮವಾಗಿ ಬಂದು ಕಾಡುತ್ತಾರೆಂದು ನಂಬಿಸಲಾಗುತ್ತದೆ. ಮನೆಯಲ್ಲಿ ಏನಾದರೂ ಕಷ್ಟ-ನಷ್ಟ ಮತ್ತು ಕಾಯಿಲೆ ಸಂಭವಿಸಿದರೂ ಭೂತಚೇಷ್ಟೆ ಅಥವಾ ದೆವ್ವದ ಕಾಟವೆಂದು ಹೆದರಿಸಲಾಗುತ್ತದೆ.

ಅಮಾವಾಸ್ಯೆ ಇಲ್ಲವೆ ಹುಣ್ಣಿಮೆಯ ರಾತ್ರಿ ಸಮಾಧಿಯಿಂದ ಹೊರಬಂದ ದೆವ್ವ ಅಥವಾ ಭೂತವು ಭೂಮಿಯಿಂದ ಆಕಾಶದವರೆಗೂ ನಿಂತುಕೊಂಡಿತ್ತೆಂದು ಅತಿರಂಜಕವಾಗಿ ವರ್ಣಿಸುತ್ತಾರೆ ಕೆಲವರು. ಇದನ್ನು ಕೇಳಿಸಿಕೊಂಡ ದುರ್ಬಲ ವ್ಯಕ್ತಿಗಳು ಒಬ್ಬರೇ ಹೋಗುವಾಗ ಬರುವಾಗ ಅದನ್ನು ಭಾವಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಭಾವನೆಯು ಭಯವಾಗಿ ಭಯವು ಭ್ರಾಂತಿಯಾಗಿ ಕಾಡಲು ಶುರುವಾದಾಗ ಕೈಕಾಲು ತಣ್ಣಗಾಗುವುದು, ಬೆವರುವುದು, ನಾಲಗೆ ಒಣಗುವುದು, ಒಮ್ಮೊಮ್ಮೆ ಮೂರ್ಛೆ ಹೋಗುವುದು ಉಂಟು.

ಇಂಥದ್ದನ್ನೆಲ್ಲ ನಂಬದಿರಲು ಬೇಕು ಪ್ರಬಲವಾದ ವಿಚಾರಶಕ್ತಿ; ಬುದ್ಧಿಶಕ್ತಿ. ಅದರಿಂದ ಎಂಥ ಪೀಡೆಯನ್ನಾದರೂ ಬಿಡಿಸಬಹುದು. ನಿರ್ಭಯದ ಬದುಕನ್ನು ನಡೆಸಬಹುದು. ‘ಭ್ರಾಂತಿ ಮೂಲಮಿದಂ ಜಗತ್’ ಅನ್ನುವುದನ್ನು ತೊಡೆದುಹಾಕಿ, ‘ನಿರ್ಭ್ರಾಂತಿ-ನಿರ್ಭಯ ಮೂಲಮಿದಂ ಜಗತ್’ ಎಂಬುದನ್ನು ಬಿತ್ತಬೇಕು. ಆಗಲೇ ಎಲ್ಲ ಭೂತ-ಪ್ರೇತ-ದೆವ್ವಗಳ ಸಮಾಧಿ. ಇಲ್ಲದಿದ್ದರೆ ಅವುಗಳು ಕೆಡಿಸುತ್ತವೆ ಮುಗ್ಧರ ನೆಮ್ಮದಿ.

2. ಜಾತಿಯ ಬಿತ್ತನೆ : ಭ್ರಾಂತಿಗಿಂತಲೂ ಅಪಾಯಕಾರಿ ಜಾತಿಯ ಭಾವನೆ. ಜನನ ನಿಸರ್ಗದತ್ತವಾದುದು. ಇಂಥಿಂಥದೇ ಜಾತಿಯಲ್ಲಿ ಹುಟ್ಟಿಬರಬೇಕೆಂದು ಕೇಳಿಕೊಂಡು ಅಥವಾ ವರ ಪಡೆದುಕೊಂಡು ಬಂದಿರುವುದಿಲ್ಲ. ಅದು ಎಂದಿಗೂ ಸಾಧ್ಯವಿಲ್ಲ. ಯಾವುದೇ ಮಗು ಜನಿಸಿದಾಕ್ಷಣ, ಅದನ್ನು ಜಾತಿಯ ಬಂಧನದಿಂದ ಬಿಗಿಯಲಾಗುತ್ತದೆ. ಅದು ಪ್ರಥಮ ಬಂಧನ. ಅವರವರ ಜಾತಿ ಅವರವರಿಗೆ ಶ್ರೇಷ್ಠ.

ಹಾಗೆಂದು ಇನ್ನೊಂದು ಜಾತಿಯನ್ನು ಕನಿಷ್ಠವಾಗಿ ಕಾಣುವುದು ಸರಿಯಲ್ಲ. ಪಂಪನಂಥ ಮಹಾನುಭಾವಿಗಳು ಹತ್ತಾರು ಶತಮಾನಗಳ ಹಿಂದೆ - ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಸಾರಿದರು. ಡಾರ್ವಿನ್ ವಾದದಂತೆ ಒಂದು ಹೆಣ್ಣು ಒಂದು ಗಂಡು. ಮಂಗನಿಂದ ಮಾನವ ಸಂತತಿ ಶುರುವಾಗಿದೆ. ನಮ್ಮ ಆದಿಪುರುಷ ಅಥವಾ ಮೂಲಪುರುಷ ಮಂಗನೇ ಆಗಿದ್ದಾನೆ. ಎಷ್ಟೇ ಜಾತಿಗಳನ್ನು ಸೃಷ್ಟಿಸಿಕೊಂಡರೂ ಮಾನವಜಾತಿ ಒಂದೇ. ಹೆಣ್ಣೊಂದು ಜಾತಿ, ಗಂಡೊಂದು ಜಾತಿ ಎಂದು ಕೆಲವರು ವಿಭಜಿಸುತ್ತಾರೆ. ಹೆಣ್ಣು ಇಲ್ಲದಿದ್ದರೆ ಗಂಡು ಹುಟ್ಟಿತಾದರೂ ಹೇಗೆ? 

ಆಂತರ್ಯದಲ್ಲಿ ಜಾತಿಯನ್ನು ಇಟ್ಟುಕೊಂಡು, ಬಹಿರಂಗದಲ್ಲಿ ಧರ್ಮವನ್ನು ಬಡಬಡಿಸುವ ಆಷಾಢಭೂತಿಗಳು, ಸ್ವಜಾತಿಯನ್ನೇ ವಿಶ್ವವೆಂದು ಭಾವಿಸುವ ಮತಾಂಧರು ಇರುವವರೆಗೆ ಜಾತಿಯ ಬಿತ್ತನೆ ನಡೆಯುತ್ತಲೇ ಇರುತ್ತದೆ. ಮಾನವ ತಾನು ಇಂಥ ವ್ಯತ್ಯಾಸಗಳನ್ನು ತಿದ್ದಿಕೊಳ್ಳದಿದ್ದರೆ, ನಿಸರ್ಗವೇ ಮುಂದಾಗಿ ಜಾತಿವಿನಾಶ ಮಾಡುವ ದಿನಗಳು ದೂರವಿಲ್ಲ. ಈ ಮಾತಿಗೆ ಪುಷ್ಟಿ ಎಂಬಂತೆ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇಂಥ ಬೆಳವಣಿಗೆಯಿಂದಾಗಿ ವಿಶ್ವವೇ ಒಂದು ಮನೆ ಆಗುವ ಸಾಧ್ಯತೆ ಇದೆ. ಇಂದಿನ ವಯಸ್ಕರು ಮುಂದಿನ ವೃದ್ಧರು. ಅವರ ಕಾಲವು ಮುಗಿಯುತ್ತ ಹೋದಂತೆ ಹೊಸಯುಗವು ಆರಂಭವನ್ನು ಪಡೆದುಕೊಳ್ಳುತ್ತದೆ. ಆ ಯುಗಕ್ಕೆ ಪರಸ್ಪರ ಪ್ರೀತಿಯೇ ಆಧಾರ.

3. ಪ್ರೀತಿಯ ಬಿತ್ತನೆ: ಪ್ರಾಣಿ ಪ್ರೀತಿ, ಪುಸ್ತಕ ಪ್ರೀತಿ, ಪ್ರಕೃತಿ ಪ್ರೀತಿ ಮುಂತಾದ ಪ್ರೀತಿಯನ್ನು ತೋರ್ಪಡಿಸುವ ಮಾನವ, ಮಾನವಪ್ರೀತಿಯನ್ನು ಮರೆಯುತ್ತಿದ್ದಾನೆ. ಅದಿಲ್ಲದವರು ತಮ್ಮವರನ್ನು ಮಾತ್ರ ಪ್ರೀತಿಸುತ್ತಾರೆ. ಅವರದು ಜಾತಿಯ ಪ್ರೀತಿ. ಜಾತಿಯ ಪ್ರೀತಿಯಿಂದ ಮಾನವ ಪ್ರೀತಿಯತ್ತ ಬರುವುದು ಎಲ್ಲರ ಮುಂದಿರುವ ಸವಾಲು. ಜಾತಿಯ ಒಳಗಿದ್ದು, ಅದನ್ನು ಮೀರುವ ಸಾಹಸ ಮಾಡಬೇಕಾಗಿದೆ. ಅವನೇ ವಿಶ್ವಮಾನವ. 

ಎಲ್ಲ ಜಾತಿ, ಸಮುದಾಯಗಳಲ್ಲೂ ಪ್ರತಿಭಾವಂತರಿದ್ದಾರೆ. ಪ್ರತಿಭೆ ತೋರಿಸಲು ಎಲ್ಲರಿಗೂ  ಅವಕಾಶ  ಸಿಗಬೇಕು. ತಮ್ಮ ಜಾತಿಗೆ ಸೇರಿದವರನ್ನು ಅದರಲ್ಲೂ ರಕ್ತಸಂಬಂಧಿಗಳನ್ನು ತಮ್ಮ ಸುತ್ತ ಇಟ್ಟುಕೊಂಡು ಅಧಿಕಾರ ನಡೆಸುವ ಹಲವಾರು ನಿದರ್ಶನಗಳಿವೆ. ಕೆಲ ಧಾರ್ಮಿಕ ಕೇಂದ್ರಗಳಲ್ಲೂ ಇದೇ ವ್ಯವಸ್ಥೆ. ವಿಜಾತಿಯವರನ್ನು ಸೇರಿಸುವುದು ದೂರ ಉಳಿಯಿತು. ಸಮಕಾಲೀನ ಸಂದರ್ಭಗಳಲ್ಲಿ ಇಂಥ ಬೆಳವಣಿಗೆ.

‘ನಿಮ್ಮ ಶರಣರು ಶೋಷಿತವರ್ಗಕ್ಕೆ ಸೇರಿದ ವ್ಯಕ್ತಿಗೆ ತಮ್ಮ ಬಳಿ ಇರಲು ಅವಕಾಶ ಮಾಡಿಕೊಟ್ಟಿದ್ದಾರಲ್ಲ!’ ಎಂದು ಒಬ್ಬ ಗಣ್ಯರು, ಶ್ರೀಮಠದ ಕಾರ್ಯಕರ್ತರನ್ನು ಕೇಳಿದರಂತೆ. ಅವರು ನನ್ನ ಬಳಿ ಅದನ್ನು ಪ್ರಸ್ತಾಪಿಸಿದಾಗ- ‘ಅಮಂಗಲವನ್ನು ತೊಡೆದು ಹಾಕಲು ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದರಲ್ಲವೆ?’ ಎಂದು ಕೇಳಿದೆ. ಮಾನವ ಪ್ರೀತಿ ತೋರಿಸಲು ಇಂಥ ಪ್ರಯತ್ನ ನಡೆಯಬೇಕಾಗುತ್ತವೆ. ಮಾನವ ಸಂಬಂಧದ ಬೆಲೆ ಅರ್ಥವಾಗಬೇಕು. ಅದರ ಅರಿವು ಆಗುತ್ತಲೇ ಮಾನವ ಪ್ರೀತಿಯು ಹೃದಯದಲ್ಲಿ ಹರಿದಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT