ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯವಾಗದ ಕೆಪಿಎಸ್‌ಸಿ ಕರ್ಮಕಾಂಡ

Last Updated 18 ಮೇ 2016, 19:30 IST
ಅಕ್ಷರ ಗಾತ್ರ

ಇಂದು ನಮ್ಮ ರಾಜ್ಯವನ್ನು ಕಾಡುತ್ತಿರುವ ಪ್ರಮುಖ ಪಿಡುಗುಗಳೆಂದರೆ ದುರಾಡಳಿತ ಮತ್ತು ನಿರಾಡಳಿತ. ಭ್ರಷ್ಟಾಚಾರದಿಂದ ಕೂಡಿದ ಸರ್ಕಾರಿ ಅಧಿಕಾರಿ ವರ್ಗ ಒಂದು ಸಮಸ್ಯೆಯಾದರೆ, ಅನೇಕ ಹುದ್ದೆಗಳಲ್ಲಿ, ಅದರಲ್ಲೂ ಪ್ರಮುಖ ಜವಾಬ್ದಾರಿಯುತ ಹುದ್ದೆಗಳಲ್ಲಿ ಸೂಕ್ತ ಮತ್ತು ಪೂರ್ಣಾವಧಿ ಅಧಿಕಾರಿಗಳಿಲ್ಲದಿರುವುದು ಇನ್ನೊಂದು ಸಮಸ್ಯೆ. ಇಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಪ್ರಮುಖ ಕಾರಣ ನಮ್ಮ ರಾಜ್ಯದ ಲೋಕಸೇವಾ ಆಯೋಗ ಮತ್ತದರ ಅಕ್ರಮಭರಿತ ಕಾರ್ಯವೈಖರಿ.

ರಾಜ್ಯದ ಸಣ್ಣ ಜಿಲ್ಲೆಗಳಲ್ಲಿ ಉತ್ತರದ ದಿಕ್ಕಿನಲ್ಲಿರುವ ಬೀದರ್ ಸಹ ಒಂದು. 16 ಲಕ್ಷ ಜನಸಂಖ್ಯೆಯ, ಐದು ತಾಲ್ಲೂಕುಗಳ ಈ ಜಿಲ್ಲೆಯಲ್ಲಿ 9 ಕೆಎಎಸ್ ದರ್ಜೆಯ ಹುದ್ದೆಗಳಲ್ಲಿ ಕೇವಲ ನಾಲ್ಕು ಜನ ಮಾತ್ರ ಆ ದರ್ಜೆಯ ಅಧಿಕಾರಿಗಳು. ಐವರು ತಹಶೀಲ್ದಾರರಲ್ಲಿ ಮೂವರು ಮಾತ್ರ ಕೆಎಎಸ್ ನೇರ ನೇಮಕಾತಿಯವರು. ಜಿಲ್ಲೆಯಲ್ಲಿ ತಮ್ಮ ಹುದ್ದೆಯ ಜೊತೆಗೆ ಇತರ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿರುವವರೇ 400ಕ್ಕಿಂತ ಹೆಚ್ಚು ಮಂದಿ ಇದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ಪೂರ್ಣಾವಧಿ ಲೆಕ್ಕಪತ್ರಾಧಿಕಾರಿ ಇಲ್ಲದೆ ಐದು ವರ್ಷ ಆಗಿದೆ. ಹುಮನಾಬಾದ್ ತಾಲ್ಲೂಕು ಪಶು ಸಂಗೋಪನಾ ಅಧಿಕಾರಿ ತಮ್ಮ ಹುದ್ದೆಯ ಜೊತೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ, ಜಿಲ್ಲಾ ಪಶು ಸಂಗೋಪನಾ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 3 ಲಕ್ಷ ಜನಸಂಖ್ಯೆಯ ಔರಾದ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಇಬ್ಬರು ಎಂಬಿಬಿಎಸ್ ವೈದ್ಯರಿದ್ದಾರೆ ಮತ್ತು ಒಬ್ಬರೂ ಪ್ರಸೂತಿ ತಜ್ಞರಿಲ್ಲ. ಜಿಲ್ಲೆಯಲ್ಲಿ 650 ಶಿಕ್ಷಕರು ಮತ್ತು ಶಿಕ್ಷಣ ಅಧಿಕಾರಿ ಹುದ್ದೆಗಳು ಖಾಲಿ ಇವೆ; ಅದೂ ಕಳೆದ 11  ವರ್ಷಗಳಿಂದ.

ಇಡೀ ರಾಜ್ಯದಲ್ಲಿ 2.70 ಲಕ್ಷ ಸರ್ಕಾರಿ ನೌಕರಿಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಭ್ರಷ್ಟ ಮಾರ್ಗಗಳಿಂದ ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿ ಬಂದು ಇಂದು ಉನ್ನತ ಹುದ್ದೆಗಳಲ್ಲಿರುವ ಒಂದು ದೊಡ್ಡ ಅಧಿಕಾರಿ ವರ್ಗವೇ ನಮ್ಮಲ್ಲಿದೆ. ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ತಾಂಡವವಾಡುತ್ತಿರುವುದರಲ್ಲಿ ಇವರ ಪಾಲು ದೊಡ್ಡದಿದೆ. ಯಾವುದೇ ಅಕ್ರಮ ಎಸಗದೆ ಪ್ರಾಮಾಣಿಕ ಮಾರ್ಗದಲ್ಲಿ ಸರ್ಕಾರಿ ನೌಕರರಾದವರೇ ಪ್ರಾಮಾಣಿಕವಾಗಿ, ದಕ್ಷರಾಗಿ ಉಳಿಯಲಾಗದ ವ್ಯವಸ್ಥೆ ನಮ್ಮಲ್ಲಿರುವಾಗ ಇನ್ನು ‘ತಾಳಿಭಾಗ್ಯ’, ಲಂಚ, ಸ್ವಜನಪಕ್ಷಪಾತ, ಶಿಫಾರಸುಗಳ ಮೂಲಕ ಅಧಿಕಾರಿಗಳಾಗಿರುವವರು ಪ್ರಾಮಾಣಿಕರಾಗಿ ಹೇಗೆ ತಾನೇ ಉಳಿದಾರು?
1998, 1999, 2004ರ ಕೆಎಎಸ್ ಮತ್ತಿತರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆದಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನಾ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ.

ಆಗ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ರಾಜ್ಯ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ ಮೇಲೆ ನಡೆದ ಸಿಐಡಿ ತನಿಖೆ ಮತ್ತು ಸತ್ಯಶೋಧನಾ ಸಮಿತಿಯ ವರದಿಗಳಲ್ಲಿ ಆ ಮೂರು ವರ್ಷಗಳ ಒಟ್ಟಾರೆ 729 ಅಧಿಕಾರಿಗಳಲ್ಲಿ 484 ಜನ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಪ್ರಕರಣ ಇತ್ತೀಚೆಗೆ ಗಂಭೀರ ಸ್ವರೂಪ ಪಡೆದಿದ್ದು, ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಅಂತಿಮ ವಿಚಾರಣೆ ನಡೆಯುತ್ತಿದೆ. ಇನ್ನೊಂದು ತಿಂಗಳಿನಲ್ಲಿ ತೀರ್ಪು ಬರುವ ಸಾಧ್ಯತೆಯಿದೆ.

2011ರ ಕೆಪಿಎಸ್‌ಸಿ ನೇಮಕಾತಿ ಹಗರಣ ಇಡೀ ರಾಜ್ಯದ ಗಮನ ಸೆಳೆಯಿತು.   ಉನ್ನತ ಸರ್ಕಾರಿ ಹುದ್ದೆಗಳನ್ನು ಮಾರಾಟಕ್ಕಿಟ್ಟು, ಅಕ್ರಮಗಳನ್ನು ನಡೆಸಲಾಗಿದೆ ಎಂದು ಅನ್ಯಾಯಕ್ಕೊಳಗಾದ ಅಭ್ಯರ್ಥಿಯೊಬ್ಬರು ಹೋರಾಟ ಆರಂಭಿಸಿದರು.  ಅದೇ ತಾನೆ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಸಿಐಡಿ ತನಿಖೆಗೆ ಆದೇಶಿಸಿದರು. ರಾಜ್ಯ ಪೊಲೀಸ್ ಇಲಾಖೆ ಹೆಮ್ಮೆ ಪಡುವ ರೀತಿಯಲ್ಲಿ ತನಿಖೆ ನಡೆಸಿದ ತನಿಖಾ ತಂಡ, ಬೆಚ್ಚಿಬೀಳಿಸುವ ವಿವರಗಳನ್ನೊಳಗೊಂಡ ಮಾಹಿತಿಯನ್ನು ತನ್ನ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಒಪ್ಪಿಸಿತು. ಸರ್ಕಾರ ಆಗ ಸುಮ್ಮನೆ ಕುಳಿತಿದ್ದ ಸಮಯದಲ್ಲಿ ಆ ಗೋಪ್ಯ ಮಧ್ಯಂತರ ವರದಿಯನ್ನು ಆಧರಿಸಿ ‘ಪ್ರಜಾವಾಣಿ’ 2013ರ ಅಕ್ಟೋಬರ್ ಸುಮಾರಿನಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿ ಕೆಪಿಎಸ್‌ಸಿ ಆಯ್ಕೆಯಲ್ಲಿ ನಿಜಕ್ಕೂ ಆಗುವುದೇನು ಎಂಬುದನ್ನು ಅನಾವರಣಗೊಳಿಸಿತು.

ಯಾವೊಂದು ರಾಜಕೀಯ ಪಕ್ಷವೂ ಈ ಹಗರಣದ ವಿರುದ್ಧ ಮಾತನಾಡಲು ಇಷ್ಟಪಡದೇ ಇದ್ದ ಸಮಯದಲ್ಲಿ ಈ ವಿಷಯವನ್ನು  ಕೈಗೆತ್ತಿಕೊಂಡ ಲೋಕಸತ್ತಾ ಪಕ್ಷ ಹೋರಾಟಗಳ ಮೂಲಕ ಜನಜಾಗೃತಿ ಮೂಡಿಸಿತು.  ಕಡೆಗೂ 10,500 ಪುಟಗಳ ಆರೋಪಪಟ್ಟಿ ಹಾಕಿದ ಸಿಐಡಿ, ಗೋನಾಳ್ ಭೀಮಪ್ಪ ಆದಿಯಾಗಿ ಮಿಕ್ಕ ಎಲ್ಲಾ ಸದಸ್ಯರನ್ನು ಆರೋಪಿಗಳನ್ನಾಗಿಸಿತು. ಈ ಮಧ್ಯೆ ಅಕ್ರಮಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಕೆಪಿಎಸ್‌ಸಿಯ ಭ್ರಷ್ಟ ಸದಸ್ಯರು ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವ ಅಹಂಕಾರವನ್ನು ತೋರಿದರು. ಆದರೆ ಆ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡುವ ದಿಟ್ಟ ಮತ್ತು ಭ್ರಷ್ಟಾಚಾರ ವಿರೋಧಿ ತೀರ್ಮಾನವನ್ನು 2014ರ ಆಗಸ್ಟ್ 7ರಂದು ಸರ್ಕಾರ ತೆಗೆದುಕೊಂಡಿತು. ಹೀಗಾಗಿ ಆ ವರ್ಷ ಭರ್ತಿಯಾಗಬೇಕಿದ್ದ 362 ಹುದ್ದೆಗಳೂ ಖಾಲಿ ಉಳಿದವು.

ಇದಾದ ನಂತರ ಕೆಪಿಎಸ್‌ಸಿಯನ್ನು  ಶುದ್ಧೀಕರಣಗೊಳಿಸುವ ಮೊದಲೇ ಅದೇ ಭ್ರಷ್ಟ ಕೆಪಿಎಸ್‌ಸಿ ಸದಸ್ಯರನ್ನಿಟ್ಟುಕೊಂಡೇ 464 ಅಧಿಕಾರಿಗಳ ನೇಮಕಾತಿಗೆ ಸರ್ಕಾರ ಮುಂದಾಯಿತು. ಒಂದು ಕಡೆ ಮೂರು ವರ್ಷಗಳಿಂದ ಕೆಪಿಎಸ್‌ಸಿಗೆ ಅಧ್ಯಕ್ಷರಿಲ್ಲ. ಮಂಗಳಾ ಶ್ರೀಧರ್ ಅಮಾನತಿನ ನಂತರ, ಸಿಐಡಿಯ ಅಂತಿಮ ವರದಿಯನ್ನು ಆಧರಿಸಿ, ಅಕ್ರಮಗಳಲ್ಲಿ ಭಾಗಿಯಾಗಿದ್ದ ಮಿಕ್ಕ ಐವರು ಸದಸ್ಯರನ್ನೂ ಅಮಾನತು ಮಾಡಬೇಕೆಂದು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿ ವರ್ಷದ ಮೇಲೆ ಆಯಿತು.

ಆದರೆ, ಬಹುಶಃ ಅಮಾನತಿಗೆ ಒಳಗಾದ ಸದಸ್ಯರೆಲ್ಲರೂ ಬಿಜೆಪಿ ಆಡಳಿತದ ಅವಧಿಯಲ್ಲಿ ನೇಮಕ ಆಗಿರುವ ಕಾರಣದಿಂದಾಗಿ ಆ ಭ್ರಷ್ಟ ಸದಸ್ಯರು ಹಾಲಿ ರಾಜ್ಯಪಾಲರಿಂದ ಅಮಾನತು ಆಗಲೇ ಇಲ್ಲ. ಅವರಲ್ಲಿ ರಂಗಮೂರ್ತಿ ಈಗಾಗಲೇ ನಿವೃತ್ತರಾಗಿದ್ದು, ಮಿಕ್ಕ ನಾಲ್ವರು ಆರೋಪಿಗಳಾದ ಡಾ.ಎಂ. ಮಹದೇವ, ವಿ. ಪಾರ್ಶ್ವನಾಥ್, ಎಸ್. ದಯಾಶಂಕರ್ ಮತ್ತು ಎಚ್.ಡಿ. ಪಾಟೀಲ್ ಈಗಲೂ ಸದಸ್ಯರಾಗಿ ಮುಂದುವರೆಯುತ್ತಿದ್ದಾರೆ.

ಬೇಜವಾಬ್ದಾರಿಯೋ, ಇನ್ನೇನು ಒಳಒಪ್ಪಂದಗಳೋ, ರಾಜ್ಯಪಾಲರ ಜೊತೆ ಗಂಭೀರವಾಗಿ ಕುಳಿತು, ಚರ್ಚಿಸಿ, ವಿಷಯದ ಗಹನತೆಯನ್ನು ವಿವರಿಸಿ, ಅವರಿಂದ ಅಮಾನತಿಗೆ ಸಹಿ ಮಾಡಿಸುವ ಯಾವೊಂದು ಗಂಭೀರ ಪ್ರಯತ್ನವನ್ನೂ ಸಿದ್ದರಾಮಯ್ಯನವರು ಮಾಡಲಿಲ್ಲ. ಈ ಮಧ್ಯೆ ಕೆಪಿಎಸ್‌ಸಿಗೆ ತನ್ನ ಕೋಟಾ ತುಂಬಿಸುವ ಬಗ್ಗೆಯೇ ಹೆಚ್ಚು ಗಮನ ಕೊಟ್ಟ ಕಾಂಗ್ರೆಸ್ ಸರ್ಕಾರ, ವಿ.ಆರ್. ಸುದರ್ಶನ್‌ರನ್ನು ಅಧ್ಯಕ್ಷರನ್ನಾಗಿ ಶಿಫಾರಸು ಮಾಡಿ ರಾಜ್ಯಪಾಲರಿಂದ ಮುಖಭಂಗಕ್ಕೀಡಾಯಿತು. ಪರಿಣಾಮವಾಗಿ ಆರೋಪಿಗಳಲ್ಲಿ ಒಬ್ಬರಾಗಿ, ಅಮಾನತಿನ ಶಿಫಾರಸನ್ನೂ ಎದೆಯ ಮೇಲೆ ಧರಿಸಿರುವ  ಎಂ. ಮಹದೇವ ತಮ್ಮ ವಯೋಹಿರಿತನದ ಆಧಾರದ ಮೇಲೆ ಹಂಗಾಮಿ ಅಧ್ಯಕ್ಷರಾಗಿ ‘ಕಾರ್ಯ’ ನಿರ್ವಹಿಸುತ್ತಿದ್ದಾರೆ.

ಇಷ್ಟೆಲ್ಲಾ ಹಗರಣಗಳು ತುಂಬಿಕೊಂಡಿದ್ದರೂ, 2014ರ ಸಾಲಿನ 464 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಈಗ ಸುಮಾರು 1389 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಹುಶಃ ಈ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿಂದೆ ರದ್ದಾದ 2011ರ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳೂ ಇದ್ದಾರೆ. ಕೆಪಿಎಸ್‌ಸಿಯ ಕಳಂಕಿತ ಸದಸ್ಯರಿಗೆ ಹಿಂದಿನ ಪಾವತಿಲೆಕ್ಕ ಚುಕ್ತಾ ಮಾಡಲು ಇದು ಇನ್ನೊಂದು ಅವಕಾಶ ಎಂದು ಸಂಶಯಿಸದೇ ಇರಲು ಸಾಧ್ಯವೇ? ಈಗಾಗಲೆ ಹತ್ತು ವರ್ಷಗಳಿಂದ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 1998, 1999 ಮತ್ತು 2004ರ ಸಾಲಿನ ಅಧಿಕಾರಿಗಳೂ ಹೈಕೋರ್ಟಿನ ತೂಗುಕತ್ತಿಯ ಕೆಳಗಿದ್ದಾರೆ.

2011ರಲ್ಲಿ ಆಯ್ಕೆಪಟ್ಟಿಯಲ್ಲಿದ್ದು, ತಿರಸ್ಕೃತಗೊಂಡಅಭ್ಯರ್ಥಿಗಳೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೆಟ್ಟಿಲು ಹತ್ತಿದ್ದಾರೆ. ಹಾಗೆಯೇ, ಹಾಲಿ ಆರೋಪಿ ಸದಸ್ಯರಿಂದ ಸಂದರ್ಶನ ಎದುರಿಸಿ ಮತ್ತು ಅವರಿಂದ ಆಯ್ಕೆಯಾಗದ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲು ಹತ್ತಿ ಅಂತಿಮ ಆಯ್ಕೆಪಟ್ಟಿಗೆ ತಡೆಯಾಜ್ಞೆ ತರುವುದು ಗೋಡೆ ಮೇಲಿನ ಬರಹದಷ್ಟೇ ಸುಸ್ಪಷ್ಟ. ಹೀಗೆ ಮುಂಬರುವ ಎಲ್ಲಾ ಸಮಸ್ಯೆಗಳಿಗೆ ನೇರ ಹೊಣೆ ಸರ್ಕಾರವೇ ಆಗಿರುತ್ತದೆ.

ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಬಿಡಿಎ ಆಯುಕ್ತರಾಗಿ ಹಲವು ಅಕ್ರಮಗಳ ಆರೋಪಗಳನ್ನು ಹೊತ್ತಿರುವ, ಬಹುಶಃ ಆ ಕಾರಣದಿಂದಾಗಿಯೇ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಪ್ರಿಯರೂ ಆಗಿರುವ ಶ್ಯಾಂ ಭಟ್ಟರನ್ನು ಕೆಪಿಎಸ್‌ಸಿಯ ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ಆಲೋಚಿಸುತ್ತಿದೆ ಎಂಬ ಗುಸುಗುಸು ಹರಡಿದೆ. ಇಂತಹ ಜನವಿರೋಧಿ ಮತ್ತು ಭ್ರಷ್ಟಾಚಾರಪೋಷಕ ಆಲೋಚನೆಗಳನ್ನು ಬದಿಗಿಟ್ಟು ಸಿದ್ದರಾಮಯ್ಯನವರು ಕಾರ್ಯ ನಿರ್ವಹಿಸಿದರೆ ಮಾತ್ರ ಈಗಾಗಲೆ ರಾಜ್ಯದಲ್ಲಿರುವ ನಿರಾಡಳಿತ, ನಿಧಾನಾಡಳಿತ ಮತ್ತು ದುರಾಡಳಿತಕ್ಕೆ ಕಡಿವಾಣ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT