ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗೆ ನಾಲಿಗೆಯೇ ಕಣ್ಣಾದರೆ!

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಅಂಧರು ನಾಲಿಗೆಯಿಂದ ನೋಡಬಹುದು! ಇಂತಹ ಕುತೂಹಲಕಾರಿ ಸಂಶೋಧನೆಯೊಂದು ಈಗ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಅಂಧರು ಬಳಸುವ ವಿಶೇಷವಾದ ಕನ್ನಡಕಕ್ಕೆ ಅಳವಡಿಸುವ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದ್ದು, ನಾಲಿಗೆ ಮೂಲಕ ವಿವಿಧ ವಸ್ತುಗಳ ಆಕಾರ, ಗಾತ್ರ ಗುರುತಿಸಲು ಇದು ಅಂಧರಿಗೆ ನೆರವಾಗಲಿದೆ.

‘ಬ್ರೇನ್‌ಪೋರ್ಟ್‌ ವಿ100’ ಎನ್ನುವ ಬ್ಯಾಟರಿ ಚಾಲಿತ ಉಪಕರಣವನ್ನು ‘ವಿಕ್ಯಾಬ್‌’ ಕಂಪೆನಿ ತಯಾರಿಸಿದ್ದು, ಅಮೆರಿಕದ ಆಹಾರ ಮತ್ತು ಡ್ರಗ್‌ ಆಡಳಿತ ಇಲಾಖೆ ಬಳಕೆಗೆ ಅನುಮತಿ ನೀಡಿದೆ.

ಕಪ್ಪು ಕನ್ನಡಕದಲ್ಲಿ ವಿಡಿಯೊ ಕ್ಯಾಮೆರಾ ಹೊಂದಿರುವ ಈ ಉಪಕರಣಕ್ಕೆ ಎಲೆಕ್ಟ್ರೋಡ್‌ಗಳನ್ನು ಅಳವಡಿಸಲಾಗಿದೆ. ಸಂದೇಶಗಳನ್ನು ರವಾನಿಸಲು ಅನುಕೂಲ ಕಲ್ಪಿಸುವ ಈ ಎಲೆಕ್ಟ್ರೋಡ್‌ಗಳ ಮೂಲಕ ಸುಲಭವಾಗಿ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಇಟ್ಟುಕೊಳ್ಳಲು ಚಿಕ್ಕ ಗಾತ್ರದ ಲೋಹವನ್ನು ಕನ್ನಡಕದ ಜತೆ ಜೋಡಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಉಪಕರಣದಲ್ಲಿ ಅಳವಡಿಸಿರುವ ವಿಶೇಷ ಸಾಫ್ಟ್‌ವೇರ್ ವಿಡಿಯೊ ಕ್ಯಾಮೆರಾ ಸೆರೆ ಹಿಡಿಯುವ ದೃಶ್ಯಾವಳಿಗಳನ್ನು ಎಲೆಕ್ಟ್ರಿಕಲ್‌ ಸಂದೇಶಗಳಾಗಿ ಪರಿವರ್ತಿಸುತ್ತದೆ. ವೈರ್‌ಗಳ ಮೂಲಕ ಸಾಗುವ ಸಂದೇಶಗಳು ಬಳಕೆದಾರರ ನಾಲಿಗೆಯನ್ನು ಅಲುಗಾಡಿಸುತ್ತದೆ. ಈ ಮೂಲಕ ಬಳಕೆದಾರರು ವಸ್ತುಗಳ ಬಿಂಬಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ತರಬೇತಿ ಮತ್ತು ಅನುಭವದ ಆಧಾರ ಮೇಲೆ ಬಳಕೆದಾರರು ಸಂದೇಶಗಳನ್ನು ವಿಶ್ಲೇಷಿಸಿ ವಸ್ತುಗಳಿರುವ ಸ್ಥಳ, ಗಾತ್ರ, ಆಕಾರಗಳನ್ನು ಗುರುತಿಸುತ್ತಾರೆ. ಜತೆಗೆ ವಸ್ತುಗಳು ಚಲಿಸುತ್ತಿವೆಯೇ ಅಥವಾ ಸ್ಥಿರವಾಗಿಯೇ ಎನ್ನುವುದನ್ನು ಸಹ ನಿರ್ಧರಿಸಲು ಸಾಧ್ಯವಾಗುತ್ತದೆ.

‘ಇಂತಹ ವೈದ್ಯಕೀಯ ಉಪಕರಣಗಳ ಅವಿಷ್ಕಾರದಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಅಂಧರಿಗೆ ಸಾಕಷ್ಟು ರೀತಿ
ಯಲ್ಲಿ ಉಪಯೋಗವಾಗಲಿದೆ’ ಎಂದು ಅಮೆರಿಕದ ಆಹಾರ ಮತ್ತು ಡ್ರಗ್‌ ಆಡಳಿತ ಇಲಾಖೆಯ ಉಪಕರಣ ಮತ್ತು ರೆಡಿಯೋಲಾಜಿಕಲ್‌ ಆರೋಗ್ಯ ವಿಭಾಗದ ಮುಖ್ಯ ವಿಜ್ಞಾನಿ ವಿಲಿಯಂ ಮೈಸೆಲ್‌ ಹೇಳಿದ್ದಾರೆ.

‘ಬ್ರೈನ್‌ಪೋರ್ಟ್‌ ವಿ100’ ಉಪಕರಣವನ್ನು ಹಲವಾರು ಬಾರಿ ಪರಿಶೀಲಿಸಲಾಗಿದೆ. ವಸ್ತುಗಳ ಗುರುತಿಸುವಿಕೆ, ಶಬ್ದಗಳ ಗ್ರಹಿಕೆ, ಬಾಯಿ ಆರೋಗ್ಯ ಪರೀಕ್ಷೆ ಸೇರಿದಂತೆ ವಿವಿಧ ರೀತಿಯಲ್ಲಿ ಉಪಕರಣದ ಸಾಧಕ–ಬಾಧಕಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಈಗಾಗಲೇ ಹಲವರಿಗೆ ಪ್ರಯೋಗಾರ್ಥ ಈ ಉಪಕರಣ ಅಳವಡಿಸಿ ತರಬೇತಿ ನೀಡಲಾಗಿದೆ. ಕೆಲವರಿಗೆ ಲೋಹದ ರುಚಿಯ ಅನುಭವಾಗಿದ್ದರೆ, ಕೆಲವರಿಗೆ ಉರಿತ ಕಂಡು ಬಂದಿದೆ. ಆದರೆ ಗಂಭೀರ ಸಮಸ್ಯೆ ಯಾರಲ್ಲೂ ಕಂಡು ಬಂದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಮಿಡ್ಲಟನ್‌ನ ‘ವಿಕ್ಯಾಬ್‌ ಇಂಕ್‌’ ಕಂಪೆನಿ ಅಭಿವೃದ್ಧಿಪಡಿಸಿರುವ ಈ ಉಪಕರಣ ದುಬಾರಿಯಾಗಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆದಿವೆ. ಇದರ ಮೌಲ್ಯ 10 ಸಾವಿರ ಡಾಲರ್‌ (ಸುಮಾರು ₨6. 30 ಲಕ್ಷ ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT