ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಕ್ರಿಕೆಟ್‌ ಭಾರತ ವಿಶ್ವವಿಜೇತ...

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ವಂಶಪರಂಪರೆಯಿಂದ ಕಾಡಿದ ಅಂಧತ್ವ ಎನ್ನುವ ಶಿಕ್ಷೆಯನ್ನು ಹುಟ್ಟಿನಿಂದಲೇ ಅನುಭವಿಸಬೇಕಾಯಿತು. ಕಣ್ಣು ಕಾಣುವುದಿಲ್ಲ ಎನ್ನುವ ವೇದನೆ ಆರಂಭದ ಹಲವು ವರ್ಷಗಳಲ್ಲಿ ನನ್ನನ್ನು ಬಲವಾಗಿ ಕಾಡಿತು. ನಾನು ಕಣ್ಣಿಲ್ಲದೇ ಬದುಕಿದ್ದೇನೆ ನಿಜ. ಆದರೆ, ಕನಸುಗಳಿಲ್ಲದೇ ಯಾವತ್ತೂ ಬದುಕಿಲ್ಲ. ಪ್ರತಿದಿನವೂ ಏನಾದರೂ ಹೊಸದನ್ನು ಸಾಧಿಸಬೇಕೆನ್ನುವ ಛಲವೇ ನನ್ನ ಬದುಕಿಗೆ ಬೆಳಕಾಗಿದೆ...’
ಭಾರತ ಅಂಧರ ಕ್ರಿಕೆಟ್‌ ತಂಡದ ನಾಯಕ ಶೇಖರ್‌ ನಾಯ್ಕ ತಮ್ಮ ಸಾಧನೆಯ ಗುಟ್ಟನ್ನು ಬಿಚ್ಚಿಟ್ಟಿದ್ದು ಹೀಗೆ. ಇದಕ್ಕೆ ಧ್ವನಿಗೂಡಿಸಿದ್ದು ವೀರೇಶ್‌ ಹಂಚಿನಮನೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಆಗಿದ್ದು  ಗೊತ್ತೇ ಇದೆ. ಇದು ಭಾರತ ಏಕದಿನ ವಿಶ್ವಕಪ್‌ನಲ್ಲಿ ಗೆದ್ದ ಚೊಚ್ಚಲ ಟ್ರೋಫಿ. ಚಾಂಪಿಯನ್‌ ತಂಡವನ್ನು ಶೇಖರ್‌ ಮುನ್ನಡೆಸಿದ್ದರು. ಚಿತ್ರದುರ್ಗದ ವೀರೇಶ್ ಹಾಗೂ ಚನ್ನಪಟ್ಟಣದ ಪ್ರಕಾಶ್‌ ಜಯರಾಮಯ್ಯ ವಿಶ್ವಕಪ್ ವಿಜೇತ ತಂಡದಲ್ಲಿದ್ದರು.

ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಭಾರತ ಈ ಸಾಧನೆ ಮಾಡಲು ಪ್ರಕಾಶ್‌ ಫೈನಲ್‌ನಲ್ಲಿ ತೋರಿದ ಅಪೂರ್ವ ಆಟ ಕಾರಣವಾಯಿತು. ಅವರು ಕೇವಲ 38 ಎಸೆತಗಳಲ್ಲಿ 81 ರನ್‌ ಬಾರಿಸಿದ್ದರು. ಈ ಮೂಲಕ ಭಾರತ ಹಿಂದೆ ಅನುಭವಿಸಿದ್ದ ನಿರಾಸೆಗೆ ಸೇಡು ತೀರಿಸಿಕೊಂಡಿತು.

1998ರಲ್ಲಿ ಮೊದಲ ಬಾರಿಗೆ ಅಂಧರ ವಿಶ್ವಕಪ್‌ ಭಾರತದಲ್ಲಿ ನಡೆದಿತ್ತು. ಆಗ ಆತಿಥೇಯರನ್ನು ನಿರಾಸೆಗೊಳಿಸಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿತ್ತು. ಈಗ ಹರಿಣಗಳ ನಾಡಿನಲ್ಲಿಯೇ ಭಾರತ ವಿಶ್ವವಿಜೇತವಾಗಿ ಹೊರಹೊಮ್ಮಿದೆ. ಇದೆಲ್ಲಾ ಆಟದ ಮಾತಾಯಿತು ಬಿಡಿ. ಆದರೆ, ಪ್ರತಿಯೊಬ್ಬ ಆಟಗಾರನ ಬದುಕಿನ ಕಥೆ ಅತ್ಯಂತ ಕುತೂಹಲವಾಗಿದೆ. ಜತೆಗೆ ಅಷ್ಟೇ ರೋಚಕವೂ ಆಗಿದೆ. ಸಾಧನೆ ಮಾಡುವ ಕನಸು ಹೊಂದಿರುವ ಪ್ರತಿಯೊಬ್ಬರಿಗೂ ಈ ಮೂವರ ಬದುಕಿನ ಹೆಜ್ಜೆಗಳು ಸ್ಫೂರ್ತಿಯಾಗಬಲ್ಲವು.

ಶಿವಮೊಗ್ಗ ಜಿಲ್ಲೆಯ ಹರಕೆರೆ ತಾಂಡಾದ ಶೇಖರ್‌ ಅವರಿಗೆ ವಂಶಪರಂಪರೆಯಿಂದಲೂ ಅಂಧತ್ವದ ಸಮಸ್ಯೆ ಕಾಡುತ್ತಲೇ ಬಂದಿದೆ. ಶೇಖರ್ ತಾಯಿ ಜಮೀಲಾಬಾಯಿ ಕೂಡಾ ಅಂಧರು. ಜಮೀಲಾಬಾಯಿ ಅವರಿಗೆ ಐದು ಜನ ಅಕ್ಕತಂಗಿಯರು. ಅವರೆಲ್ಲರ ಬದುಕು ಕತ್ತಲೆಯೇ!

ನಂತರದ ಹಲವು ವರ್ಷಗಳ ಬಳಿಕ ಶೇಖರ್‌ ಕಣ್ಣಿಗೆ ಆಪರೇಷನ್‌ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ನಾಲ್ಕರಿಂದ ಆರು ಮೀಟರ್‌ಗಳವರೆಗಿನ ದೂರದ ಚಿತ್ರಣವನ್ನಷ್ಟೇ ನೋಡಲು ಅವರಿಗೆ ಸಾಧ್ಯವಾಗುತ್ತಿದೆ. ಅಂಧತ್ವದ ಸಂಕಷ್ಟದ ಜೊತೆಗೆ ಪಾಲಕರೂ ಬೇಗನೆ ತೀರಿಹೋದರು. ಆದ್ದರಿಂದ ಶೇಖರ್‌ ಬದುಕು ಒಂದರ್ಥದಲ್ಲಿ ಬೀದಿಗೆ ಬಂದು ಬಿದ್ದಿತ್ತು. ನಂತರ ಶಿವಮೊಗ್ಗದಲ್ಲಿ ಏಳನೇ ತರಗತಿವರೆಗೆ ಓದಿ ಮೈಸೂರಿಗೆ ತೆರಳಿದರು. ಬಳಿಕ ಬೆಂಗಳೂರು ಸೇರಿದ ಮೇಲೆ ಬದುಕು ಬದಲಾಯಿತು. ಸಮರ್ಥನಂ ಸಂಸ್ಥೆ ಕೈ ಹಿಡಿದು ನಡೆಸಿತು. ಶೇಖರ್‌ 12 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿದ್ದಾರೆ. 2004 ಹಾಗೂ 2011ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಿದ್ದಾರೆ. ಇವರ ನಾಯಕತ್ವದಲ್ಲಿಯೇ ಭಾರತ ಎರಡು (ಏಕದಿನ ಮತ್ತು ಟ್ವೆಂಟಿ-20) ವಿಶ್ವಕಪ್‌ ಜಯಿಸಿದೆ.

ಬದುಕಿನ ದುರಂತ ಕಥೆ
ಪ್ರಕಾಶ್ ಜಯರಾಮಯ್ಯ ಅವರದು ಬದುಕಿನ ಇನ್ನೊಂದು ದುರಂತ ಕಥೆ. ಸದ್ಯ ಬಿಡದಿಯಲ್ಲಿ ಕೆಲಸ ಮಾಡುತ್ತಿರುವ ಪ್ರಕಾಶ್‌ ಎಂಟು ವರ್ಷದವರಿದ್ದಾಗ ನಡೆದ ಘಟನೆ ಬದುಕನ್ನು ಕತ್ತಲ ಕೂಪಕ್ಕೆ ದೂಡಿತು. ಕಬ್ಬಿಣದ ಕಡ್ಡಿಯೊಂದು ಆಕಸ್ಮಿಕವಾಗಿ ಕಣ್ಣಿಗೆ ಬಡಿದ ಕಾರಣ ಅವರು ಅಂಧತ್ವಕ್ಕೆ ಬಲಿಯಾಗಬೇಕಾಯಿತು.

‘ಬಾಲ್ಯದಲ್ಲಿ ಘಟಿಸಿದ ದುರಂತ ಬದುಕಿನ ಖುಷಿಯನ್ನೇ ಕಸಿದುಕೊಂಡು ಬಿಡಬಹುದು ಎನ್ನುವ ಆತಂಕಕ್ಕೆ ಸಿಲುಕಿದ್ದೆ. ಆದರೆ, ಗೆಳೆಯರ ನೆರವಿನಿಂದ ಹೊರಗಡೆ ತುಂಬಾ ಸುತ್ತಾಡಿದೆ. ಸಾಕಷ್ಟು ಜನರ ಪರಿಚಯವಾಯಿತು. ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿಯೇ ಶತಕ ಗಳಿಸಿದ್ದೆ. ಆದ್ದರಿಂದ ಕ್ರಿಕೆಟ್‌ನಲ್ಲಿಯೇ ದೊಡ್ಡ ಸಾಧನೆ ಮಾಡಬಹುದು ಎನ್ನುವ ವಿಶ್ವಾಸ ಮೂಡಿತ್ತು. ಆದ್ದರಿಂದ ಎರಡು ವಿಶ್ವಕಪ್ ಗೆದ್ದ ತಂಡದಲ್ಲಿರಲು ಸಾಧ್ಯವಾಯಿತು’ ಎಂದು ಪ್ರಕಾಶ್‌ ಹೇಳಿದರು.

ಅಮ್ಮನ ಆಸೆ ಈಡೇರಿಸಿದ ಖುಷಿ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನ ವೀರೇಶ್‌ ಹುಟ್ಟಿನಿಂದಲೇ ಪೂರ್ಣ ಅಂಧರು. ಕಣ್ಣು ಕಾಣದ ಕಾರಣ ಮಗ ಮನೆ ಬಿಟ್ಟು ಎಲ್ಲೂ ಹೋಗದಿರಲಿ ಆತನ ಬದುಕಿಗೆ ನಾವೇ ನೆರಳಾಗಿ ನಿಲ್ಲಬೇಕು ಎಂಬುದು ವೀರೇಶ್ ಪೋಷಕರ ಆಸೆಯಾಗಿತ್ತು.
ಶೇಖರ್‌ ಮತ್ತು ಪ್ರಕಾಶ್‌ ಜೊತೆ ಉತ್ತಮ ಗೆಳೆತನ ಹೊಂದಿದ್ದ ವೀರೇಶ್‌ ಕ್ರಿಕೆಟ್ ಆಡುವ ಸಲುವಾಗಿ ಬೆಂಗಳೂರಿಗೆ ಬಂದರು. ವಿಶ್ವಕಪ್‌ಗೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಎಲ್ಲರ ಗಮನ ಸೆಳೆದರು. ಹೀಗಾಗಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿತು. ಕಣ್ಣಿಲ್ಲದಿದ್ದರೂ ಮಗ ಸ್ವತಂತ್ರವಾಗಿ ಓಡಾಡಬಲ್ಲ ಎನ್ನುವುದು ವೀರೇಶ್‌ ಪೋಷಕರಾದ ರುದ್ರಪ್ಪ ಮತ್ತು ಶರಣಮ್ಮ ಅವರಿಗೆ ಖಾತ್ರಿಯಾಯಿತು. ವೀರೇಶ್‌ ಕಲಾ ವಿಭಾಗದಲ್ಲಿ ಪದವಿ ಪಡೆದು ಈಗ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

‘ನನ್ನ ಬದುಕಿನಲ್ಲಿ ಇದುವರೆಗೂ ಬರೀ ಸೋಲುಗಳೇ ಎದುರಾಗಿವೆ. ನಾನು ಗೆದ್ದಿದ್ದೇನೆ ಎಂದು ಹೇಳಲು ಮೊದಲ ಬಾರಿಗೆ ಅವಕಾಶ ಲಭಿಸಿದೆ. ವಿಶ್ವಕಪ್‌ ಗೆದ್ದ ದಿನವೇ ಅಮ್ಮನ ಜೊತೆ ಮಾತನಾಡಿದೆ. ಅಮ್ಮಾ ನಾನು ಗೆದ್ದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದೆ. ಮಗ ಗೆಲ್ಲಬೇಕು ಎನ್ನುವುದು ಅಮ್ಮನ ಆಸೆಯಾಗಿತ್ತು. ಅವರ ಆಸೆ ಈಡೇರಿಸಿದ್ದೇನೆ’ ಎಂದು ವೀರೇಶ್‌ ಖುಷಿ ಹಂಚಿಕೊಂಡರು.

ರಾಜ್ಯದಲ್ಲಿ ಭರವಸೆಯ ಹೆಜ್ಜೆ
ಭಾರತ ಅಂಧರ ತಂಡ ವಿಶ್ವ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡುತ್ತಿದೆ. ಈ ಕ್ರಿಕೆಟ್‌ನ ಮುಖ್ಯ ಕೇಂದ್ರ ಎನಿಸಿರುವ ಕರ್ನಾಟಕದಲ್ಲಿ

ಅಂಧರ ಕ್ರಿಕೆಟ್‌ ಉತ್ತಮ ಬೆಳವಣಿಗೆ ಕಾಣುತ್ತಿದೆ. ವೈಕಲ್ಯದ ನಡುವೆಯೂ ಸಾಧನೆಯ ಶಿಖರವೇರುವ ಹೆಗ್ಗುರಿ ಹೊತ್ತು ಸಾಕಷ್ಟು ಆಟಗಾರರು ಮುಂದೆ ಬರುತ್ತಿದ್ದಾರೆ.

1998ರಲ್ಲಿ ಮೊದಲ ಬಾರಿಗೆ ಅಂಧರ ಏಕದಿನ ವಿಶ್ವಕಪ್‌ ನಡೆದಿತ್ತು. ಆಗ ರಾಜ್ಯದ ವಿಶಾಲ್‌, ವಿವೇಕ್‌, ಚಂದ್ರಶೇಖರ್‌, ಮಹೇಶ್‌ ತಂಡದಲ್ಲಿದ್ದರು. ಚಂದ್ರಶೇಖರ್, ವಿಶಾಲ್ ಮತ್ತು ಮಹೇಶ್‌ 2002ರ ವಿಶ್ವಕಪ್‌ನಲ್ಲೂ ಆಡಿದ್ದರು. ಮಂಜುನಾಥ್‌, ಮಲ್ಲಿಕಾರ್ಜುನ್‌ ಮತ್ತು ಶಿವಮೊಗ್ಗದ ಶೇಖರ್‌ಗೂ ಸ್ಥಾನ ಲಭಿಸಿತ್ತು. ಪ್ರತಿ ವಿಶ್ವಕಪ್‌ ಟೂರ್ನಿಗೂ ರಾಜ್ಯದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿಯೇ ಆಯ್ಕೆಯಾಗುತ್ತಿದ್ದಾರೆ.

ವಲಯವಾರು ಮತ್ತು ರಾಜ್ಯದಲ್ಲಿ ಆಗಾಗ್ಗೆ ಅಂಧರ ಕ್ರಿಕೆಟ್‌ ಚಟುವಟಿಕೆಗಳು ಕ್ರೀಯಾಶೀಲವಾಗಿರುವ ಕಾರಣ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯವಾಗುತ್ತಿದೆ. ಆದರೆ, ಸರ್ಕಾರದ ಆರ್ಥಿಕ ಸಹಾಯ ಸಿಕ್ಕರೆ ತಂಡವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಆಟಗಾರರ ಬದುಕು ಹಸನಾಗಲು ನೆರವಾಗಬಹುದು. ಇದಕ್ಕೆ ಸರ್ಕಾರದ ಶ್ರೀರಕ್ಷೆ ಬೇಕಿದೆ.
* * *

ಇವರು ನಮ್ಮವರು

ಕರ್ನಾಟಕ ಮತ್ತು ಭಾರತದಲ್ಲಿ ಅಂಧರ ಕ್ರಿಕೆಟ್‌ ಬೆಳವಣಿಗೆಗೆ ಸಮರ್ಥನಂ ಸಂಸ್ಥೆ ಸಾಕಷ್ಟು ಕೆಲಸ ಮಾಡುತ್ತಿದೆ. ರಾಜ್ಯದ ಆಟಗಾರರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅಂಧರ ತಂಡದಲ್ಲಿ ಆಡಲು ಸಂಸ್ಥೆ ಬೆನ್ನುಲುಬಾಗಿ ನಿಂತಿದೆ. ಜೊತೆಗೆ, ಉದ್ಯೋಗವನ್ನೂ ನೀಡಿ ಬದುಕಿಗೆ ಆಸರೆಯಾಗಿದೆ. ಭಾರತ ಅಂಧರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ನಾಗೇಶ್‌ ಮತ್ತು ಕಾರ್ಯದರ್ಶಿ ಜಿ.ಕೆ. ಮಹಾಂತೇಶ್ ಅವರು ಸಮರ್ಥನಂ ಸಂಸ್ಥೆಯ ಸಂಸ್ಥಾಪಕರು. ಅಚ್ಚರಿಯೆಂದರೆ ಇವರಿಬ್ಬರೂ ಅಂಧರು.

ಕಣ್ಣು ಕಾಣುವುದಿಲ್ಲ ಎಂದಾಕ್ಷಣ ಬದುಕೇ ಕತ್ತಲು ಎಂದು ಯಾರಿಗೂ ಅನ್ನಿಸಬಾರದು ಎನ್ನುವ ಕಾರಣಕ್ಕಾಗಿ ನಾಗೇಶ್‌ ಮತ್ತು ಮಹಾಂತೇಶ್‌ ಅವರು ಈ ಸಂಸ್ಥೆ ಕಟ್ಟಿದರು. ಇವರು ಬಾಲ್ಯದಿಂದಲೂ ಗೆಳೆಯರು. 18 ವರ್ಷಗಳ ಹಿಂದೆ ಸಮರ್ಥನಂ ಸಂಸ್ಥೆ ಹುಟ್ಟುಹಾಕಿದರು. ಈಗ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಭಾರತದ ಹಲವು ರಾಜ್ಯಗಳಲ್ಲಿ ಕೇಂದ್ರಗಳನ್ನೂ ಹೊಂದಿದೆ. ಅಂಧ ಮಕ್ಕಳ ಪ್ರತಿಭೆಗೆ ನೆರವಾಗುವ ಜೊತೆ ಭಾರತದಲ್ಲಿ ಅಂಧರ ಕ್ರಿಕೆಟ್‌ಗೆ ಸಂಸ್ಥೆ ಸಾಕಷ್ಟು ಕೊಡುಗೆ ನೀಡಿದೆ.

ಎಸ್‌. ರವಿ ಅವರಂಥ ಪ್ರತಿಭಾನ್ವಿತ ಆಟಗಾರರಿಗೆ ವೇದಿಕೆ ಒದಗಿಸಿದೆ. 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಆಗ ರವಿ ತಂಡದಲ್ಲಿದ್ದರು. ಆದ್ದರಿಂದ ಈ ಸಂಸ್ಥೆಗೆ 2014ರಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯ ಗೌರವವೂ ಒಲಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT