ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಶು, ಸಂಜೀವ್‌ಗೆ ಮ್ಯಾಗ್ಸೆಸೆ ಗೌರವ

ಸಮಾಜ ಸೇವಕ, ಪ್ರಾಮಾಣಿಕ ಅಧಿಕಾರಿಗೆ ಏಷ್ಯಾದ ಅತ್ಯುನ್ನತ ಪುರಸ್ಕಾರ lಆಗಸ್ಟ್‌ 31ರಂದು ಪ್ರಶಸ್ತಿ ಪ್ರದಾನ
Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್/ಪಿಟಿಐ): ಈ ಸಾಲಿನ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಇಬ್ಬರು ಭಾರತೀಯರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅಂಶು ಗುಪ್ತಾ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಸಂಜೀವ್ ಚತುರ್ವೇದಿ ಸೇರಿ ಐವರಿಗೆ ಈ ಸಾಲಿನ ಮ್ಯಾಗ್ಸೆಸೆ ಗೌರವ ಸಂದಿದೆ.

‘ಭಾರತದ ದಾನದ ಸಂಸ್ಕೃತಿಯನ್ನು ಪರಿವರ್ತಿಸಿ ಅದಕ್ಕೆ ಅಂಶು ಗುಪ್ತಾ ಅವರು ಹೊಸ ಆಯಾಮ ನೀಡಿದ್ದಾರೆ. ಉಳ್ಳವರಿಂದ ಬಳಸಿದ ಬಟ್ಟೆಯನ್ನು ಪಡೆದು ಬಡವರಿಗೆ ಹಂಚುತ್ತಿದ್ದಾರೆ’ ಎಂದು ದ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ ಹೇಳಿದೆ. 

‘ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಬೆಂಬಿಡದೆ ಹೋರಾಡುತ್ತಿರುವ ಹಾಗೂ ಸರ್ಕಾರ ಜನರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಿರುವ ಸಂಜೀವ್ ಚತುರ್ವೇದಿ ಅವರ ಛಲ, ಧೃಡನಿಶ್ಚಯಕ್ಕೆ ಈ ಗೌರವ ಸಲ್ಲಿಸಲಾಗುತ್ತಿದೆ’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ ಹೇಳಿದೆ.

ಇವರಿಬ್ಬರಲ್ಲದೆ ಲಾವೋಸ್‌ನ ಕೊಮ್ಮಲೇ ಚಂತ್ವಾವೊಂಗ್, ಫಿಲಿಪ್ಪೀನ್ಸ್‌ನ  ಲಿಗಯಾ ಫರ್ನಾಂಡೊ ಅಮಿಲ್ಬಂಗ್ಸಾ ಹಾಗೂ ಮ್ಯಾನ್ಮಾರ್‌ನ ಕ್ಯಾವ್‌ ತು ಅವರಿಗೂ ಈ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ. ಫಿಲಿಪ್ಪೀನ್ಸ್‌ನಲ್ಲಿ ಆಗಸ್ಟ್‌ 31ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪುರಸ್ಕೃತ ಭಾರತೀಯರು: ಕರ್ನಾಟಕದ ರಂಗ ಕರ್ಮಿ ಕೆ.ವಿ. ಸುಬ್ಬಣ್ಣ, ನಿವೃತ್ತ ಪೊಲೀಸ್‌ ಅಧಿಕಾರಿ ಕಿರಣ್‌ ಬೇಡಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಾಮಾಜಿಕ ಹೋರಾಟಗಾರ್ತಿ ಅರುಣಾ ರಾಯ್‌, ಜಲಜಾಗೃತಿ ಹೋರಾಟಗಾರ ರಾಜೇಂದ್ರ ಸಿಂಗ್‌ ಮುಂತಾದವರು ಈ ವರೆಗೆ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾಗಿರುವ ಪ್ರಮುಖ ಭಾರತೀಯರು.

12 ಬಾರಿ ವರ್ಗ: 2002ನೇ ಸಾಲಿನಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಸಂಜೀವ್ ಚತುರ್ವೇದಿ (40), ಈಗ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ 5 ವರ್ಷಗಳಲ್ಲಿ ಚತುರ್ವೇದಿ ಅವರನ್ನು ಸರ್ಕಾರ 12 ಬಾರಿ ವರ್ಗಾವಣೆ ಮಾಡಿದೆ. ಈ ಹಿಂದೆ ಏಮ್ಸ್‌ನಲ್ಲಿ ಮುಖ್ಯ ಜಾಗೃತ ಅಧಿಕಾರಿಯಾಗಿದ್ದಾಗ ಅಲ್ಲಿ ನಡೆದಿದ್ದ ಅವ್ಯವಹಾರಗಳನ್ನು ಸಂಜೀವ್ ಬಯಲಿಗೆಳೆದಿದ್ದರು. ತದನಂತರ ಅವರನ್ನು ಆ ಹುದ್ದೆಯಿಂದ ವಜಾ ಮಾಡಲಾಗಿತ್ತು. ಸಂಜೀವ್ ಅವರನ್ನು ದೆಹಲಿ ಸರ್ಕಾರದ ವಿಶೇಷಾಧಿಕಾರಿಯಾಗಿ ನೇಮಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಆರೋಗ್ಯ ಸಚಿವಾಲಯ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ರದ್ದಿಯಿಂದ ಪರ್ಯಾಯ ಆರ್ಥಿಕತೆ: ಸಾಮಾಜಿಕ ಕಾರ್ಯಕರ್ತ ಅಂಶು ಗುಪ್ತಾ (45) ‘ಗೂಂಜ್‌‌’  ಎಂಬ ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಶು ಗುಪ್ತಾ, ಆ ಕೆಲಸವನ್ನು ತೊರೆದು 1999ರಲ್ಲಿ ‘ಗೂಂಜ್‌’  ಸ್ಥಾಪಿಸಿದ್ದರು. ಬಳಸಿದ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಮರುಬಳಕೆಗೆ ಸಿದ್ಧವಾಗಿಸುವ ಕೆಲಸವನ್ನು ಗೂಂಜ್‌ ಮಾಡುತ್ತದೆ. ಅಂತಹ ವಸ್ತುಗಳನ್ನು ನಿರ್ಗತಿಕರಿಗೆ ನೀಡುವಲ್ಲಿ ಸಂಸ್ಥೆ ಸಕ್ರಿಯವಾಗಿದೆ. ಇದನ್ನು ‘ರದ್ದಿ ಆಧರಿಸಿದ  ಪರ್ಯಾಯ ಆರ್ಥಿಕತೆ’ ಎಂದು ಬಣ್ಣಿಸಲಾಗಿದೆ.

ಏಷ್ಯಾದ ನೊಬೆಲ್: ರೇಮನ್ ಮ್ಯಾಗ್ಸೆಸೆ ಏಷ್ಯಾದ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದನ್ನು ಏಷ್ಯಾದ ನೊಬೆಲ್ ಎಂದು ಕರೆಯಲಾಗುತ್ತದೆ. ದ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಸಂಸ್ಥೆ 1957ರಿಂದ ಮ್ಯಾಗ್ಸೆಸೆ ಪ್ರಶಸ್ತಿ ನೀಡುತ್ತಿದೆ.

ಪ್ರಧಾನಿ ಕಚೇರಿ ಬಗ್ಗೆ ಅಸಮಾಧಾನ
ಪ್ರಧಾನಿ ಕಚೇರಿಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ  ಸಂಜೀವ್ ಚತುರ್ವೇದಿ, ‘ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇದ್ದುದ್ದರಿಂದ ಮಾತ್ರ ನಾನು ಉಳಿದಿದ್ದೇನೆ’ ಎಂದಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧ ಅಸಹನೆ ಇರಬೇಕೇ ಹೊರತು ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಅಲ್ಲ. ಪ್ರಧಾನಿ ಅವರ ಭ್ರಷ್ಟಾಚಾರದ ವಿರುದ್ಧ ಅಸಹನೆ  ನೀತಿಯನ್ನು ನಾನು ಮನಪೂರ್ವಕವಾಗಿ ಪಾಲಿಸಿದ್ದೇನೆ. ಇದರಿಂದಲೇ ಏಮ್ಸ್‌ನಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆಯಲು ನಾನು ಸಾಕಷ್ಟು ತೊಂದರೆಗಳನ್ನು ಮೈಮೇಲೆ ಎಳೆದುಕೊಂಡೆ. ಆದರೆ ಇದಕ್ಕೆ ಪತ್ರಿಕ್ರಿಯೆಯಾಗಿ ಪ್ರಧಾನಿಗಳ ಕಚೇರಿಯ ನಡೆಯಿಂದ ನನಗೆ ತೀರಾ ಬೇಸರವಾಗಿದೆ’ ಎಂದು ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿಯವರ ‘ನಾ ಖಾವೂಂಗಾ, ನಾ ಖಾನೆ ದೂಂಗಾ (ತಿನ್ನುವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ)’ ಘೋಷವಾಕ್ಯದಿಂದ ಪ್ರೇರಣೆ ಪಡೆದು ಏಮ್ಸ್‌ನಲ್ಲಿ ನಡೆದಿದ್ದ ಅವ್ಯವಹಾರಗಳನ್ನು ಬಯಲಿಗೆಳೆದಿದ್ದೆ. ಅವುಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದಾಖಲೆಗಳನ್ನು ಪ್ರಧಾನಿಯವರ ಕಚೇರಿಗೆ  ಸಲ್ಲಿಸಿದ್ದೆ. ಆದರೆ ಈವರೆಗೆ ಏನೂ ಆಗಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ನಮ್ಮ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರೇ ನನಗೆ ಮಾದರಿ. ಅವರ ನಿಸ್ವಾರ್ಥ ವ್ಯಕ್ತಿತ್ವ ಮತ್ತು ದೇಶಕ್ಕೆ ಅವರು ಸಲ್ಲಿಸಿದ ಸೇವೆಯಿಂದ ನಾನು ಪ್ರೇರಿತನಾಗಿದ್ದೆ’ ಎಂದು ಚತುರ್ವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT