ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕರೆಯಿಂದಿರಲಿ ಆರೈಕೆ

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ನನಗೆ ಡಿಪ್ರೆಷನ್ ಬಂದು ಬಿಟ್ರೆ ಅಂತ ಹೆದರಿಕೆ. ನಿದ್ದೆ ಬರಲ್ಲ, ಮನಸ್ಸಿಗೆ ಏನೋ ಬೇಸರ, ಸದಾ ತಲೆನೋವು ಅಂದಿದ್ದಕ್ಕೆ ನಮ್ಮ ಮನೇ ಹತ್ರ ಇರೋ ಡಾಕ್ಟ್ರು ಔಷಧಿ ಕೊಟ್ರು.  ಆಮೇಲೆ ಕಡಿಮೆಯಾಗದೇ ಇದ್ದಾಗ ಅವರು ಏನಂದ್ರು ಗೊತ್ತೆ?” ನೋಡಿ ಹೀಗೆ ಆದ್ರೆ ನೀವು ಸೈಕಿಯಾಟ್ರಿಸ್ಟ್ ಹತ್ರ ಹೋಗ್ಬೇಕಾಗತ್ತೆ’ ಅಂತ!. ಆದ್ರೆ ಏನ್ಮಾಡೋದು, ನನಗೆ ಸಮಸ್ಯೆಗಳು ಕಡಿಮೆಯಾಗ್ಲೇ ಇಲ್ಲ. ಅದಕ್ಕೇ ನಮ್ಮೂರು ಬಿಟ್ಟು, ಬೇರೆ ಊರಿನಲ್ಲಿರೋ ಮನೋವೈದ್ಯರು ಯಾರಾದ್ರೂ ಇದಾರ ಅಂತ ಹುಡುಕಿ ಇಲ್ಲಿಗೆ ಬಂದಿರೋದು. ನಮಗೆ ಮನೇಲಿ ಏನೂ ಸಮಸ್ಯೆ ಇಲ್ಲ. ನಂಗೆ ಏನೂ ಡಿಪ್ರೆಷನ್ ಇರೋಕೆ ಸಾಧ್ಯ ಇಲ್ಲ ಅಲ್ವಾ ಡಾಕ್ಟ್ರೆ?”

‘ನನ್ನ ಮಗುವಿಗೆ ಬುದ್ಧಿಮಾಂದ್ಯತೆಯಿದೆ ಡಾಕ್ಟ್ರೇ. ನನ್ನ ಪರಿಸ್ಥಿತಿ ಯಾವ ಶತ್ರುವಿಗೆ ಬೇಡ. ನನ್ನ ಮಗನನ್ನು ಕರ್‌ಕೊಂಡು ಎಲ್ಲೇ ಹೋದ್ರೂ ಎಲ್ಲರ ದೃಷ್ಟಿನೂ ನಮ್ಮ ಕಡೆ.  ಒಂದೋ ಹೆದರಿಕೆ-ಅಸಹ್ಯ ಇಲ್ಲ, ‘ಅಯ್ಯೋ ಪಾಪ’ ಎನ್ನುವ ಅನುಕಂಪ. ನಮಗೂ ಒಂದು ಜೀವನವಿದೆ, ಗೌರವದಿಂದ ಬಾಳೋ ಹಕ್ಕಿದೆ ಅಂತ ಯಾರಿಗೂ ಅನ್ನಿಸಲ್ಲ’.

“ನೀವು ಹೇಳ್ತೀರಿ ಡಾಕ್ಟ್ರೇ, ಇದು ‘ಡಿಪ್ರೆಷನ್’ ಅಷ್ಟೆ. ಸಕ್ಕರೆ ಕಾಯಿಲೆ ತರಾನೇ ಔಷಧಿ ತೊಗೋಬೇಕು, ಮೈಗೆ-ಮನಸ್ಸಿಗೆ ವ್ಯಾಯಾಮ ಬೇಕು ಅಂತ. ನಾನೂ ಒಪ್ತೀನಿ ಇದನ್ನ. ಆದರೆ ನಮ್ಮ ಮನೆಯವ್ರು? ಸಕ್ಕರೆ ಕಾಯಿಲೆ ಅಂದ್ರೆ ರಕ್ತಪರೀಕ್ಷೆ ತೋರಿಸಬಹುದು, ಒಣಗ್ದೇ ಇರೋ ಗಾಯ ತೋರಿಸ್ಬಹುದು, ಜಾಸ್ತಿ ಆಗೋದ್ರೆ ಕಿಡ್ನಿ-ಕಣ್ಣು ಕೆಟ್ಟು ಹೋಗುತ್ತೆ ಅಂತ ಹೆದರಿಸಬಹುದು, ಪ್ರಾಣ ಹೋಗುತ್ತೆ ಅಂತ ಹೆದರಿಕೇಲಾದ್ರೂ  ಔಷಧಿ ಕೊಡಿಸಲೇಬೇಕಾಗುತ್ತೆ. ಆದರೆ ‘ಅಯ್ಯೋ ನಂಗೆ ಬೇಸರ ಆಗುತ್ತೆ, ಮನಸ್ಸಿಗೆ ದುಃಖ, ಮೈಕೈ ನೋವು, ನಿದ್ದೆ ಬರಲ್ಲ’ ಅಂದ್ರೆ? ‘ಏಯ್ ಸೋಮಾರಿತನ ಮಾಡ್ಬೇಡ, ಚುರುಕಾಗಿ ಕೆಲಸ ಮಾಡು. ಅದಕ್ಕಾಕೆ ಮಾತ್ರೆ. ಸುಮ್ನೇ ದುಡ್ಡು ಖರ್ಚು’ ಅಂತಾರೆ ಡಾಕ್ಟ್ರೇ. ಏನ್ ಮಾಡೋದು, ಅನುಭವಿಸ್ಬೇಕು”.

ಮೇಲಿನ  ಅನುಭವಗಳು ಕೇವಲ ಅವಿದ್ಯಾವಂತರು - ಅಶಿಕ್ಷಿತರು - ಅನಕ್ಷರಸ್ಥರಿಗೆ ಸಂಬಂದಿಸಿದ್ದಲ್ಲ.  ಸಮಾಜದ ಎಲ್ಲಾ ಸ್ತರಗಳಲ್ಲಿ ಜಾತಿ-ಲಿಂಗ-ಧರ್ಮ-ವಿದ್ಯೆಯ ಭೇದ ವಿಲ್ಲದೆ ಪ್ರಚಲಿತವಿರುವ (ಮನೋವೈದ್ಯೆ, ಮನಃಶಾಸ್ತ್ರಜ್ಞರನ್ನು ಹೊರತುಪಡಿಸಿ ವೈದ್ಯರನ್ನು ಒಳಗೊಂಡಂತೆ) ಮಾನಸಿಕ ಆರೋಗ್ಯ ಕ್ಷೇತ್ರದ ಬಗ್ಗೆ, ಮನೋರೋಗಿಗಳ ಬಗೆಗೆ ಇರುವ ತಪ್ಪು ನಂಬಿಕೆಗಳಿಗೆ ಸಂಬಂಧಿಸಿದ್ದು.

‘ಮನಸ್ಸು’ ಎಂದ ತಕ್ಷಣ ಒಂದು ರೀತಿಯ ಆಕರ್ಷಣೆ, ಏನೋ ಗೊಂದಲ, ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳ ಬಗೆಗೂ ಅಷ್ಟೆ. ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಅದನ್ನು ಅಧ್ಯಯನ ಮಾಡಿದ, ದಿನನಿತ್ಯ ನೂರಾರು ರೋಗಿಗಳನ್ನು ನೋಡುವ ಮನೋವೈದ್ಯರಿಗೆ ‘ಮಾನಸಿಕ ಕಾಯಿಲೆ’ ಎಂದರೆ ಏನು? ಎಂಬುದರ ತಿಳುವಳಿಕೆಯಿದ್ದರೂ, ರೋಗಿಗಳಿಗೆ, ಅವರ ಮನೆಯವರಿಗೆ, ಸಾಮಾನ್ಯ ಜನರಿಗೆ ಅದೇ ರೀತಿಯಲ್ಲಿ ತಿಳುವಳಿಕೆ ಹೇಗೆ ಉಂಟಾಗಲು ಸಾಧ್ಯ?. ಇದರ ನೇರ ಪರಿಣಾಮ ಮನೋರೋಗಿಗಳ ಬಗೆಗಿನ ಸಮಾಜದ ವಿಚಿತ್ರ ದೃಷ್ಟಿ, ಕನಿಕರ-ಅನುಕಂಪಗಳ ‘ಅಯ್ಯೊ’ ಎಂಬ ಭಾವ. ಇದು ಕಾಯಿಲೆ ಉಂಟಾದ ಸಮಯದಿಂದ, ಮನೋವೈದ್ಯರ ಬಳಿಗೆ ಬರುವ ಸಮಯದ ಅಂತರವನ್ನು ಹೆಚ್ಚಿಸುತ್ತದೆ. ಈ ಅಂತರ ಹೆಚ್ಚಾದಷ್ಟೂ ಕಾಯಿಲೆ ಗುಣವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT