ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ಡಾರ್ಲಿಂಗ್

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

*ನಿರ್ದೇಶನ ಹೇಗನ್ನಿಸ್ತಿದೆ?
ನಿರ್ದೇಶನದ ಅನುಭವಗಳ ಕುರಿತು ಒಂದು ಪುಸ್ತಕವನ್ನೇ ಬರೆಯಬಹುದು, ಅಷ್ಟು ಅನುಭವಗಳು. ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿನಿಮಾಗಳ ಕುರಿತು ಮಾತನಾಡುವುದಷ್ಟೇ ಗೊತ್ತಿತ್ತು. ನಾನೇ ನಿರ್ದೇಶಕನಾದಾಗ ಇಲ್ಲಿನ ಕಷ್ಟಗಳು ಕಾಣಿಸುತ್ತಿವೆ. ಇದೊಂಥರ ಸವಾಲಿನ ಕೆಲಸ. ಅಷ್ಟೇ ಅವಕಾಶಗಳೂ ಇವೆ. ತುಂಬ ಆಸಕ್ತಿಯಿಂದ ಮಾಡುತ್ತಿರುವುದರಿಂದ ನನಗೆ ಅಷ್ಟೇನೂ ಕಷ್ಟವೆನಿಸುತ್ತಿಲ್ಲ.

*ಚಿತ್ರದ ಎಳೆಯೇನು?
ಸಿನಿಮಾ ನಾಯಕನಾಗಲೆಂದು ಬರುವ ಹುಡುಗನ ಕಥೆ ಇದು. ಅವನ ಸ್ನೇಹಿತನೊಬ್ಬ ನಿರ್ದೇಶಕನಾಗುತ್ತೇನೆಂದು ಬಂದಿರುತ್ತಾನೆ. ಅವರ ಜೊತೆ ಸಂಗೀತ ನಿರ್ದೇಶಕ ಹಾಗೂ ಕ್ಯಾಮೆರಾಮನ್ ಕಥೆ ಕೂಡ ತಳಕು ಹಾಕಿಕೊಂಡಿರುತ್ತದೆ. ನಾಯಕಿಯಾಗಬೇಕೆಂದು ಬರುವ ಹುಡುಗಿ ಐಟಂ ಡಾನ್ಸರ್ ಆಗಿರ್ತಾಳೆ (ಸಂಜನಾ ಗಾಂಧಿ). ಹೀಗೆ ಏನೋ ಆಗಬೇಕೆಂದುಕೊಂಡು ಬಂದವರು ಇನ್ನೇನೋ ಆಗುತ್ತಾರೆ. ಅದಕ್ಕೆ ಇಲ್ಲಿನ ವ್ಯವಸ್ಥೆಯೇ ಕಾರಣ ಎಂದಲ್ಲ.

ಅವರವರಲ್ಲಿಯೇ ಏನೇನೋ ದೌರ್ಬಲ್ಯಗಳಿರುತ್ತವೆ. ಹೀಗೆ ಕಷ್ಟಪಡುವವರ ಬದುಕು ಮುಂದೆ ಹೇಗೆ ಸಾಗುತ್ತದೆ ಎನ್ನುವುದು ಚಿತ್ರದ ಎಳೆ. ಅಲ್ಲದೇ ಸಿನಿಮಾದಿಂದಾಗಿಯೇ ಸಮಾಜ ಹಾಳಾಗ್ತಿದೆ ಅನ್ನೋರೂ ಸಮಾಜದಲ್ಲಿದ್ದಾರೆ. ಚಿತ್ರದಲ್ಲಿಯೂ ಅವರಿದ್ದಾರೆ. ಒಟ್ಟಾರೆ ಸ್ಯಾಂಡಲ್‌ವುಡ್ ಕಥೆಯನ್ನೇ ಕಟ್ಟಿ ಸಿನಿಮಾ ಮಾಡಲು ಹೊರಟಿದ್ದೇನೆ.

*ಸಿನಿಮಾದವರ ಕಥೆಯನ್ನೇ ಸಿನಿಮಾ ಆಗಿಸುವ ಕಾರಣವೇನು?
ನಾನು ಸಿನಿಮಾ ಮಂದಿಯೊಂದಿಗೆ ಸತತ ಸಂಪರ್ಕವಿಟ್ಟುಕೊಂಡಿದ್ದವನು. ಸಾಕಷ್ಟು ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ನಟನಟಿಯರು, ಅವರಿವರನ್ನು ಭೇಟಿ ಮಾಡಿಸಿ ಎಂದು ಬರುವ ಅನಾಮಿಕ ವ್ಯಕ್ತಿಗಳನ್ನೆಲ್ಲ ಭೇಟಿಯಾದಾಗ ಕಂಡಿದ್ದೇನೆಂದರೆ– ಪ್ರತಿಯೊಬ್ಬರು ಇನ್ನೊಬ್ಬರನ್ನು ದೂರುತ್ತಲೇ ಇರುತ್ತಾರೆ. ಆದರೆ ಯಾರೂ ಇಲ್ಲಿಂದ ಹೊರ ಹೋಗಲು ಬಯಸುವುದಿಲ್ಲ. ಏಕೆಂದರೆ ಸಿನಿಮಾ ಒಂದು ಫ್ಯಾಷನ್. ಸಿನಿಮಾ ಅವರೆಲ್ಲರ ‘ಡಾರ್ಲಿಂಗ್’. ನಾನೂ ಈ ಪಾತ್ರಗಳ ಜೊತೆಗೇ ಬದುಕಿದ್ದೀನಿ. ಅದನ್ನು ತೋರಿಸುವ ಪ್ರಯತ್ನವಿದು.

*ಚಿತ್ರದಲ್ಲಿ ಏನು ಹೇಳಲು ಹೊರಟಿದ್ದೀರಿ?
ಸಹಾಯಕ ನಿರ್ದೇಶಕನಾಗಿದ್ದ ನನ್ನ ಸ್ನೇಹಿತನೊಬ್ಬ ಎಷ್ಟು ವರ್ಷ ಕಷ್ಟ ಪಟ್ಟರೂ ಇಲ್ಲಿ ನೆಲೆಯೂರಲು ಸಾಧ್ಯವೇ ಆಗಿಲ್ಲ. ಈಗ ಯಾವುದೋ ಉದ್ಯೋಗ ಮಾಡಿಕೊಂಡು ಚೆನ್ನಾಗಿದ್ದಾನೆ. ಹೀಗೆ ಇಲ್ಲಿ ಎಲ್ಲರ ಕನಸುಗಳು ಹಸನಾಗುವುದಿಲ್ಲ. ಇಂಥ ಹಲವರ ಕಥೆಗಳನ್ನು ತೆರೆಯ ಮೇಲೆ ತರುವುದಷ್ಟೇ ನನ್ನ ಮುಂದಿರುವುದು. ಆದರೆ ಕಥೆ ಕೇಳಿದ ಯಾರೋ ಹೇಳಿದ್ದರು; ‘ನಿಮ್ಮ ಸಿನಿಮಾ ನೋಡಿದ ನಂತರ ಗಾಂಧಿನಗರಕ್ಕೆ ಕಾಲಿಡುವ ಹೊಸಬರು ಒಂದು ಕ್ಷಣ ಯೋಚಿಸಿ ಮುಂದರಿಯುತ್ತಾರೆ. ಏಕಾಏಕಿ ವಿಚಾರವಿಲ್ಲದೇ ಇಲ್ಲಿಗೆ ಬರುವ ಸಾಹಸಕ್ಕೆ ಕೈ ಹಾಕುವುದಿಲ್ಲ’ ಎಂದು.

*ನಿಮ್ಮ ಸಿನಿಮಾ ವಿಭಿನ್ನ ಎನ್ನುತ್ತೀರಾದರೆ ಅದು ಹೇಗೆ?
ನನ್ನ ಸಿನಿಮಾ ವಿಭಿನ್ನ ಅಂತ ಹೇಳೋಕೆ ಹೋಗಲ್ಲ. ತುಂಬಾ ನಾರ್ಮಲ್ ಆಗಿರೋ ಕಮರ್ಷಿಯಲ್ ಸಿನಿಮಾ. ಒಳ್ಳೆಯ ಹಾಡು, ಫೈಟ್ ಎಲ್ಲವೂ ಇದೆ. ಇದೇ ಸಂದರ್ಭದಲ್ಲಿ ಕೆಲವೊಂದು ಕ್ಲೀಷೆಗಳನ್ನು ಮೀರಲು ಪ್ರಯತ್ನಿಸಿದ್ದೇನೆ. ನಾಯಕನನ್ನು ವೈಭವೀಕರಿಸುವುದು, ಅವನ ಪಕ್ಕದಲ್ಲಿರುವವರನ್ನು ಡಮ್ಮಿ ಪಾತ್ರಗಳನ್ನಾಗಿ ಬಿಂಬಿಸುವುದು; ಇಂಥದ್ದೆಲ್ಲ ಇಲ್ಲಿಲ್ಲ. ಇಲ್ಲಿ ಯಾವ ಪಾತ್ರಗಳೂ ನಗಣ್ಯ ಅಲ್ಲ. ಪಾತ್ರಗಳು ಎಷ್ಟು ಹೊತ್ತು ತೆರೆಯ ಮೇಲೆ ಇರುತ್ತವೆ ಎನ್ನುವುದಕ್ಕಿಂತ ಇದ್ದಷ್ಟು ಹೊತ್ತು ಅವು ಹೇಗೆ ವರ್ತಿಸುತ್ತವೆ ಎನ್ನುವುದು ಮುಖ್ಯ. ಆ ದೃಷ್ಟಿಯಿಂದ ಭಿನ್ನ ಅಂತ ಹೇಳಬಹುದೇನೋ.

*ಹೊಸ ತಂಡದೊಂದಿಗೆ ಗೇಮ್ ಶುರು ಮಾಡಿದ್ದೀರಿ. ಅಳುಕು ಇಲ್ವ?
ಖಂಡಿತ ಇಲ್ಲ. ಹೊಸಬರಲ್ಲಿ ಸಿನಿಮಾದ ಬಗ್ಗೆ ಒಂದು ಮೋಹ ಇರತ್ತೆ. ಏನೋ ಸಾಧಿಸುವ ಹಂಬಲ ಇರತ್ತೆ. ಹಾಗಿದ್ದವರು ಉಡಾಫೆ ಮನೋಭಾವ ತೋರುವುದಿಲ್ಲ. ಸರಿಯಾದ ಸಮಯಕ್ಕೆ ಬರುತ್ತಾರೆ. ಹೇಗೆ ಬೇಕೋ ಹಾಗೆ ಕೆಲಸ ತೆಗೆಸಿಕೊಳ್ಳಬಹುದು. ಜೊತೆಗೆ, ಚಿತ್ರರಂಗಕ್ಕೆ ಹೊಸದಾಗಿ ಬರುವವರ ಕಥೆ ಇದಾಗಿರುವುದರಿಂದ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಯಿತು.

*ಚಿತ್ರೀಕರಣ ಎಲ್ಲಿಗೆ ಬಂದಿದೆ?
ಬೆಂಗಳೂರು ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಒಂದು ಡುಯೆಟ್ ಹಾಡನ್ನು ಉತ್ತರ ಕನ್ನಡ, ಕೊಡಚಾದ್ರಿ, ಉತ್ತರ ಕರ್ನಾಟಕದ ಪರಿಸರದಲ್ಲಿ ಶೂಟ್ ಮಾಡುವ ಪ್ಲಾನ್ ಇದೆ. ಎರಡು ಶೆಡ್ಯೂಲ್‌ನ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಶೆಡ್ಯೂಲನ್ನು ಐದರಿಂದ ಆರು ದಿನಗಳಿಗೆ ಮಾತ್ರ ಸೀಮಿತಗೊಳಿಸುತ್ತಿದ್ದೇನೆ. ಈಗಾಗಲೇ ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ಒಟ್ಟಾರೆ ಜನವರಿ ಉತ್ತರಾರ್ಧದಲ್ಲಿ ಚಿತ್ರ ಸಿದ್ಧವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT