ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಲಾಟರಿ: ವರದಿ ಪಡೆದ ವಜುಭಾಯಿ

ಬಿಜೆಪಿಯಿಂದ ರಾಜ್ಯಪಾಲರ ಭೇಟಿ:ಸಿಬಿಐ ತನಿಖೆಗೆ ಪಟ್ಟು
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಲಾಟರಿ ದಂಧೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು,  ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರಿಂದ ಸೋಮವಾರ ವರದಿ ತರಿಸಿಕೊಂಡಿದ್ದಾರೆ.

ನಾಲ್ಕು ಪುಟಗಳ ಈ ವರದಿಯಲ್ಲಿ, ಅಕ್ರಮ ದಂಧೆ ಮತ್ತು ಅದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ಇದೆ.ತನಿಖೆಯ ಪ್ರಗತಿಯ ವಿವರ, ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಜರುಗಿಸಲಾಗುವುದು ಎಂಬ ಅಂಶ ಕೂಡ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ‘ಹಿರಿಯ ಪೊಲೀಸ್‌ ಅಧಿಕಾರಿಗಳೂ ಶಾಮೀಲಾಗಿರುವ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಬಿಜೆಪಿ ಮತ್ತು ಜೆಡಿಎಸ್‌ ಒತ್ತಾಯಿಸಿವೆ.

ಆದರೆ, ‘ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಕೋರಲಾಗುವುದು. ಸಿಬಿಐಗೆ ವಹಿಸಲು ಸಾಧ್ಯವಿಲ್ಲ’ ಎಂದು ಗೃಹಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.‘ಅಕ್ರಮ ಹಣದ ವಹಿವಾಟಿನ ಬಗ್ಗೆ ತನಿಖೆ ನಡೆಸುವ ಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯಕ್ಕೆ ಇದೆ. ತನಿಖೆ ಆರಂಭಿಸಲು ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಕೂಡ ಬೇಕಿಲ್ಲ. ಆದರೂ ನಾನು ತನಿಖೆ ನಡೆಸುವಂತೆ ನಿರ್ದೇಶನಾಲಯಕ್ಕೆ ಮನವಿ ಮಾಡುತ್ತೇನೆ’ ಎಂದು ಜಾರ್ಜ್‌  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಮನವಿ: ರಾಜ್ಯಪಾಲರನ್ನು ಸಂಜೆ ಭೇಟಿ ಮಾಡಿದ ಆರ್‌. ಅಶೋಕ ನೇತೃತ್ವದ ಬಿಜೆಪಿ ಶಾಸಕರ ನಿಯೋಗ, ‘ಅಕ್ರಮ ಲಾಟರಿ ದಂಧೆಯ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿತು.

‘ನೆರೆ ರಾಜ್ಯಗಳಿಗೂ ವ್ಯಾಪಿಸಿರುವ ಅಕ್ರಮ ಲಾಟರಿ ದಂಧೆಯ ಅಗಾಧತೆ ಪರಿಗಣಿಸಿದರೆ ಇದು  ಸಿಬಿಐ ತನಿಖೆಗೆ ವಹಿಸಲು ಅರ್ಹವಾದ  ಪ್ರಕರಣ. ಪಾರಿರಾಜನ್‌ ತೋರಿಕೆಗೆ ಮಾತ್ರ ಈ ದಂಧೆಯ ಪ್ರಮುಖ ಆರೋಪಿ. ಇದರ ಹಿಂದೆ ಬೇರೆಯೇ ವ್ಯಕ್ತಿಗಳ ಕೈವಾಡ ಇದೆ.  ಸಿಬಿಐ ತನಿಖೆಯಿಂದ ಮಾತ್ರ  ಈ ಕುರಿತ ಹೆಚ್ಚಿನ ವಿಚಾರಗಳು ಬೆಳಕಿಗೆ ಬರಲು ಸಾಧ್ಯ’ ಎಂದು ನಿಯೋಗ  ಹೇಳಿದೆ.  

ಠಾಣಾ ಮುಖ್ಯಸ್ಥರೇ ಹೊಣೆ: ಅಬಕಾರಿ ಮತ್ತು ಲಾಟರಿ ಜಾಗೃತ ದಳವನ್ನು ರದ್ದು ಪಡಿಸಿ, ಪೊಲೀಸ್‌ ಇಲಾಖೆಯೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸಚಿವ ಜಾರ್ಜ್‌ ಪ್ರಕಟಿಸಿದರು.ಬೆಂಗಳೂರಿನಲ್ಲಿ ಸಿಸಿಬಿ ಇರುವಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಅಪರಾಧ ವಿಭಾಗ ಸ್ಥಾಪಿಸಲಾಗುವುದು. ಅದಕ್ಕಾಗಿ ಪೊಲೀಸ್‌ ಅಧಿಕಾರಿಗಳ ತಂಡ ರಚಿಸಲಾಗುವುದು. ಈ ತಂಡವು ಅಕ್ರಮ ಲಾಟರಿ ದಂಧೆ ಮೇಲೆ ನಿಗಾ ಇಡಲಿದೆ. ಒಂದು ವೇಳೆ ಎಲ್ಲಿಯಾದರೂ ಪ್ರಕರಣಗಳು ಬೆಳಕಿಗೆ ಬಂದರೆ ಅದಕ್ಕೆ ಆಯಾ ಠಾಣೆಗಳ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು’ ಎಂದರು.

ಅಲೋಕ್‌ಕುಮಾರ್‌ ಹೆಸರು ಮಾತ್ರ
‘ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಕೊಟ್ಟಿರುವ ಮಧ್ಯಂತರ ವರದಿಯಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಹೆಸರು ಮಾತ್ರ ಇದೆ. ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ  ಕಂಡು ಬಂದಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ. ಈ ದಂಧೆಯಲ್ಲಿ ಎಷ್ಟು ಹಣದ ವ್ಯವಹಾರ ನಡೆದಿದೆ ಎಂಬ ಬಗ್ಗೆ ವರದಿಯಲ್ಲಿ ಮಾಹಿತಿ ಇಲ್ಲ’ ಎಂದು  ಜಾರ್ಜ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT