ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿ ಪದಚ್ಯುತಿ ಯತ್ನಕ್ಕೆ ಹೆಚ್ಚುತ್ತಿರುವ ಆಕ್ರೋಶ

Last Updated 26 ನವೆಂಬರ್ 2015, 19:42 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್‌ ಅಡಿ ಅವರ ಪದಚ್ಯುತಿ ಪ್ರಯತ್ನಕ್ಕೆ ಕಾಂಗ್ರೆಸ್‌ನ ಅನೇಕ ಶಾಸಕರು ಮತ್ತು ಕೆಲ ಹಿರಿಯ ವಕೀಲರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇದರ ನಡುವೆಯೇ, ಅಡಿಯವರ ಪದಚ್ಯುತಿಗೆ ಸಹಿ ಮಾಡಿದ ವೀರಶೈವ ಶಾಸಕರ ಮುಖಕ್ಕೆ ಮಸಿ ಬಳಿಯುವುದಾಗಿ ಅಖಿಲ ಭಾರತ ವೀರಶೈವ ಜಾಗೃತಿ ವೇದಿಕೆ ಎಚ್ಚರಿಸಿದೆ.

ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪ: ಅಡಿ ಅವರನ್ನು ಪದಚ್ಯುತಗೊಳಿಸಲು ಪಕ್ಷದ ವತಿಯಿಂದ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿರುವುದಕ್ಕೆ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಉತ್ತರ ಕರ್ನಾಟಕದ ಕೆಲವು ಶಾಸಕರು ಈ ಬಗ್ಗೆ ಅಸಮಾಧಾನ ತೋಡಿಕೊಂಡರು.

‘ಉಪಲೋಕಾಯುಕ್ತರ ವಿರುದ್ಧ ಗಂಭೀರ ಆರೋಪಗಳಿರುವ ಬಗ್ಗೆ  ಸಾರ್ವಜನಿಕವಾಗಿ ಚರ್ಚೆ ಆಗಿಲ್ಲ. ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಏನಿಲ್ಲ. ಇಂತಹ ಸಂದರ್ಭದಲ್ಲಿ ಅವರ ಪದಚ್ಯುತಿಗೆ ಒತ್ತಾಯಿಸಿರುವುದರಿದ ಪಕ್ಷದ ಬಗ್ಗೆಯೇ ಸಂದೇಹ ಮೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪದಚ್ಯುತಿ ಪ್ರಸ್ತಾವಕ್ಕೆ ಪಕ್ಷದ ಮುಖ್ಯ ಸಚೇತಕರು ಸಹಿ ಹಾಕಲು ಸೂಚಿಸಿದ್ದಕ್ಕಾಗಿ ನಾವು ಸಹಿ ಹಾಕಿದ್ದೇವೆ’ ಎಂದು ಕೆಲವು ಶಾಸಕರು ತಿಳಿಸಿದರು.

‘ಉಪಲೋಕಾಯುಕ್ತರ ವಿರುದ್ಧ ಅಧಿಕಾರ ದುರುಪಯೋಗದ ಗಂಭೀರ ಆರೋಪಗಳಿರುವುದರಿಂದ ಅವರ ಪದಚ್ಯುತಿಗೆ ಒತ್ತಾಯಿಸಿದ್ದೇವೆ. ಆರೋಪಗಳಿಗೆ ಪೂರಕ ದಾಖಲೆಗಳನ್ನು ಸಭಾಧ್ಯಕ್ಷರಿಗೆ ಒದಗಿಸಿದ್ದೇವೆ. ಹಾಗಾಗಿ ಶಾಸಕರು ಈ ಬಗ್ಗೆ ಆತಂಕಪಡಬೇಕಿಲ್ಲ’ ಎಂದು ಸಚಿವರೊಬ್ಬರು ಸ್ಪಷ್ಟಪಡಿಸಿದರು.

ವಕೀಲರ ಕೋಪ: ‘ಲೋಕಾಯುಕ್ತ ವೈ.ಭಾಸ್ಕರ ರಾವ್‌ ಪದಚ್ಯುತಿಯಾದರೆ ಅವರ ಜವಾಬ್ದಾರಿ ಉಪ ಲೋಕಾಯುಕ್ತರ ಹೆಗಲಿಗೆ ವರ್ಗವಾಗುತ್ತದೆ ಎಂಬ ಆತಂಕದಿಂದ ಉಪ ಲೋಕಾಯುಕ್ತ ಸುಭಾಷ್‌ ಅಡಿ ಅವರ ಪದಚ್ಯುತಿಗೆ ಯತ್ನಿಸಲಾಗುತ್ತಿದೆ’ ಎಂದು ಹೈಕೋರ್ಟ್‌ನ ಕೆಲ ಹಿರಿಯ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

‘ಅಡಿ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ಸದನದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಬಾರದು’ ಎಂದು   ಸ್ಪೀಕರ್‌ ಅವರಿಗೆ ಮನವಿ ಪತ್ರ ನೀಡಲು ಹಿರಿಯ ವಕೀಲರ ಸಮೂಹ ಮುಂದಾಗಿದೆ.

‘ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅನುಸಾರ ಲೋಕಾಯುಕ್ತ ಸ್ಥಾನ ತೆರವಾದರೆ ಅದರ ಜವಾಬ್ದಾರಿಯನ್ನು ಉಪ ಲೋಕಾಯುಕ್ತರೇ ವಹಿಸಿಕೊಳ್ಳುತ್ತಾರೆ. ಹೀಗಾಗಿ ಅಡಿ ಅವರು ಈ ಜವಾಬ್ದಾರಿ ವಹಿಸಿಕೊಳ್ಳುವುದನ್ನು ತಡೆಯುವ ಏಕೈಕ ಉದ್ದೇಶದಿಂದಲೇ ಅವರ ಪದಚ್ಯುತಿಗೆ ಪ್ರಯತ್ನ ನಡೆದಿದೆ’ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

‘ಅಡಿ ಅವರು, ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿ ಕಳಂಕರಹಿತ ಹಿನ್ನೆಲೆ ಹೊಂದಿದ್ದಾರೆ.  ತಮ್ಮ ಉತ್ತಮ ನಡವಳಿಕೆಯಿಂದ ಉಪ ಲೋಕಾಯುಕ್ತ ಕಚೇರಿಯ ಘನತೆಯನ್ನು  ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಪದಚ್ಯುತ ಕ್ರಮಕ್ಕೆ ಮುಂದಾಗಿರುವುದು ಅತ್ಯಂತ ದುರದೃಷ್ಟಕರ’ ಎಂದು ಈ ಮನವಿ ಪತ್ರದಲ್ಲಿ ಹೇಳಲಾಗಿದೆ.

‘ಭಾಸ್ಕರರಾವ್‌ ಮತ್ತು ಅವರ ಪುತ್ರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.  ಇವರ ಪ್ರಕರಣಕ್ಕೆ ಸುಭಾಷ್‌ ಅಡಿ ಅವರನ್ನು ಸಮೀಕರಣ ಮಾಡಿ ನೋಡಲು ಸಾಧ್ಯವೇ ಇಲ್ಲ. ಹೀಗಾದರೆ ಲೋಕಾಯುಕ್ತ ಸಂಸ್ಥೆಗೆ ಭರಿಸಲಾಗದ ನಷ್ಟ ಉಂಟುಮಾಡುತ್ತದೆ’ ಎಂದು ಪತ್ರದಲ್ಲಿ ಆತಂಕ ವ್ಯಕ್ತ ಪಡಿಸಲಾಗಿದೆ.

ಈ ಪತ್ರಕ್ಕೆ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ಜಯಕುಮಾರ್‌ ಪಾಟೀಲ, ಎಚ್.ಸುಬ್ರಮಣ್ಯ ಜೋಯಿಸ, ಕೆ.ಸುಬ್ಬರಾವ್‌, ಡಿ.ಎನ್‌.ನಂಜುಂಡ ರೆಡ್ಡಿ, ಉದಯ ಹೊಳ್ಳ, ಸಜನ್‌ ಪೂವಯ್ಯ, ಆರ್‌.ಎಲ್‌.ಪಾಟೀಲ, ಎಂ.ಶಿವಪ್ಪ, ಡಿ.ಎಲ್‌.ಎನ್.ರಾವ್‌್, ಸಿ.ಎಚ್‌.ಜಾಧವ್, ಸಿ.ವಿ.ನಾಗೇಶ್‌ ಮತ್ತು ಬಿ.ಎಂ.ಶ್ಯಾಮ ಪ್ರಸಾದ್ ಸಹಿ ಮಾಡಿದ್ದಾರೆ.

ಶುಕ್ರವಾರ ಅಥವಾ ಶನಿವಾರ ಈ ಮನವಿ ಪತ್ರವನ್ನು ಸ್ಪೀಕರ್‌ ಅಥವಾ ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT