ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ತೆರವಿಗೆ ಕಾರ್ಯಪಡೆ

ರಾಷ್ಟ್ರೀಯ ಸಮಾವೇಶದಲ್ಲಿ ವಕ್ಫ್‌ ಆಸ್ತಿ ಕುರಿತು ಸಚಿವ ಖಮರುಲ್‌ ಇಸ್ಲಾಂ ಹೇಳಿಕೆ
Last Updated 25 ಜುಲೈ 2015, 20:35 IST
ಅಕ್ಷರ ಗಾತ್ರ

ಬೆಂಗಳೂರು: ‘ವಕ್ಫ್‌ ಆಸ್ತಿ ಸಂರಕ್ಷಣೆ ಮತ್ತು ಅತಿಕ್ರಮಣ ತೆರವಿಗೆ ಶೀಘ್ರದಲ್ಲೇ ಕಾರ್ಯಪಡೆ ರಚಿಸಲಾಗುವುದು’ ಎಂದು ಸಚಿವ ಖಮರುಲ್‌ ಇಸ್ಲಾಂ ತಿಳಿಸಿದರು. ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ, ಕೆ.ಕೆ. ಎಜುಕೇಷನಲ್‌ ಅಂಡ್‌ ಚಾರಿಟಬಲ್‌ ಟ್ರಸ್ಟ್‌ ಮತ್ತು ನವದೆಹಲಿಯ ‘ಇನ್‌ಸ್ಟಿಟ್ಯೂಟ್‌ ಆಫ್‌ ಆಬ್ಜೆಕ್ಟಿವ್‌ ಸ್ಟಡೀಸ್‌’ನಿಂದ ಜಂಟಿಯಾಗಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ವಕ್ಫ್‌’ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

‘ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಾಗೂ ಬೆಂಗಳೂರಿನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ  ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ’ ಎಂದರು. ‘ವಕ್ಫ್‌ ಆಸ್ತಿ ವಿವಾದ ಪರಿಹರಿಸುವ ಸಂಬಂಧ ನ್ಯಾಯಮಂಡಳಿ ರಚಿಸಲಾಗುವುದು. ಈ ಕುರಿತ ಕರಡು ಈಗಾಗಲೇ ಸಿದ್ಧವಾಗಿದೆ. ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಬರಲಿದೆ’ ಎಂದು ಹೇಳಿದರು. ‘ರಾಜ್ಯದ ಕಲಬುರ್ಗಿ ಮತ್ತು ಬೆಂಗಳೂರಿನಲ್ಲಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಚಿಂತನೆ ಇದೆ’ ಎಂದು ತಿಳಿಸಿದರು.

‘ವಕ್ಫ್‌ ಆಸ್ತಿ ಸರ್ವೇ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಕಂದಾಯ ಕಾಯ್ದೆಯಂತೆ ರಾಜ್ಯದಲ್ಲಿ ಶೇ 80ರಷ್ಟು ಸರ್ವೇ  ಮುಗಿದಿದೆ. ಉಳಿದ ಕೆಲಸವನ್ನು ಸಂಬಂಧಿಸಿದ ತಹಸೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳು ಮಾಡಲಿದ್ದಾರೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಒಟ್ಟು 29 ಸಾವಿರ ವಕ್ಫ್‌ ಸಂಸ್ಥೆಗಳಿವೆ. ವಕ್ಫ್‌ ಮಂಡಳಿ ಆರಂಭವಾದ 60 ವರ್ಷಗಳ ನಂತರ ಕಾಯಂ ಸಿಬ್ಬಂದಿ ಯನ್ನು ನೇಮಕ ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ 250 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

‘ಇನ್ನು 73 ‘ಡಿ’ ನೌಕರರ ನೇಮಕಾತಿಗೆ ಇಷ್ಟರಲ್ಲೇ ಚಾಲನೆ ನೀಡಲಾಗುವುದು. ಅಲ್ಪಸಂಖ್ಯಾತರಲ್ಲಿ ಹಿಂದುಳಿದವರಿಗೆ ಶೇ 4ರಷ್ಟು ಮೀಸಲಾತಿ  ನೀಡಲಾಗುವುದು’ ಎಂದರು. ‘ಮೌಲ್ವಿ ಮತ್ತು ಇತರರಿಗೆ ಗೌರವ ಧನ ಕೊಡಲು ₹36 ಕೋಟಿ ಮೀಸಲಿಡಲಾಗಿದೆ. ಪ್ರತಿ ತಿಂಗಳು ₹2.10 ಕೋಟಿ ಇದಕ್ಕಾಗಿ ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 7,811 ಜನ ಮೌಲ್ವಿಗಳು ಇದ್ದಾರೆ’ ಎಂದು ವಿವರಿಸಿದರು.
*
‘ಮುಸ್ಲಿಮರಿಂದಲೇ ಒತ್ತುವರಿ
‘ಮುಸ್ಲಿಂ ಸಮುದಾಯದವರಿಂದಲೇ ಹೆಚ್ಚಿನ ವಕ್ಫ್‌ ಆಸ್ತಿ ಅತಿಕ್ರಮಣಕ್ಕೆ ಒಳಗಾಗಿದೆ’ ಎಂದು ಸಂಸದ ಕೆ. ರೆಹಮಾನ್‌ ಖಾನ್‌ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಕ್ಫ್‌ ಆಸ್ತಿ ಕಬಳಿಸಿದವರ ವಿರುದ್ಧ ಮೌಲ್ವಿಗಳು ಏಕೆ ಸುಮ್ಮನಿದ್ದಾರೆ ಗೊತ್ತಾಗುತ್ತಿಲ್ಲ’ ಎಂದರು.

‘ವಕ್ಫ್‌ ಆಸ್ತಿ ಸಂರಕ್ಷಣೆಯ ಜವಾಬ್ದಾರಿ ಸರ್ಕಾರ ಹಾಗೂ ಮಂಡಳಿಯ ಜೊತೆಗೇ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಹೇಳಿದರು. ‘ವಕ್ಫ್‌ಗೆ ಸೇರಿದ ಒಂದೊಂದು ಆಸ್ತಿ ಯೂ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿದೆ. ಆದರೆ ಅದರಿಂದ ಸಂಗ್ರಹಿಸುತ್ತಿರುವ ಬಾಡಿಗೆ ಬಹಳ ಕಡಿಮೆಯಾಗಿದೆ’ ಎಂದರು.

‘ರಾಜ್ಯ ಸರ್ಕಾರ ವಕ್ಫ್‌ ಮಂಡಳಿಗೆ ಹಣ ನೀಡಿದೆ. ಆದರೆ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕನಿಷ್ಠ ₹1 ಕೋಟಿ ಕೂಡ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ವಕ್ಫ್‌ ಆಸ್ತಿಯನ್ನು ಅಭಿವೃದ್ಧಿ ಪಡಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
*
ರೆಹಮಾನ್‌ ಖಾನ್‌ ಆಹ್ವಾನಕ್ಕೆ ಆಕ್ಷೇಪ
ಬೆಂಗಳೂರು: ಸಂಸದ ಕೆ. ರೆಹಮಾನ್‌ ಖಾನ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಕ್ಫ್‌ ರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದ ಘಟನೆಗೆ ಸಮಾವೇಶ ಸಾಕ್ಷಿಯಾಯಿತು.

ಅಮಾನತ್‌ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಶಾಮಿಲಾಗಿರುವ ಆರೋಪ ಎದುರಿಸುತ್ತಿರುವ ರೆಹಮಾನ್‌ ಖಾನ್‌ ಅವರನ್ನು ಸಮಾವೇಶಕ್ಕೆ ಕರೆಸಿದ್ದು ಸರಿಯಲ್ಲ ಎಂದು ಆರೋಪಿಸಿ ವಕ್ಫ್‌ ರಕ್ಷಣಾ ಸಮಿತಿಯ ಕಾರ್ಯಕರ್ತರು  ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಯೋಜಕರು ಹಾಗೂ ಸಮಿತಿಯ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಸಮಿತಿಯ ಕಾರ್ಯಕರ್ತರನ್ನು ಬಲವಂತವಾಗಿ ಕಾರ್ಯಕ್ರಮದ ಸ್ಥಳದಿಂದ ಹೊರಗೆ ಕಳುಹಿಸಲು ಮುಂದಾಗುತ್ತಿದ್ದಂತೆ ಸಮಿತಿ ಸದಸ್ಯರು ಇದನ್ನು ಪ್ರತಿಭಟಿಸಿ ಸಂಘಟಕರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಆದರೆ ಈ ವೇಳೆಗಾಗಲೇ ಉದ್ಘಾಟನಾ ಸಮಾರಂಭ ಮುಗಿದು ಕೆ. ರೆಹಮಾನ್‌ ಖಾನ್‌ ಅವರು ಸೇರಿದಂತೆ ಇತರ ಗಣ್ಯರು ವೇದಿಕೆಯಿಂದ ನಿರ್ಗಮಿಸಿದ್ದರು. ‘ರೆಹಮಾನ್‌ ಖಾನ್‌ ವಿರುದ್ಧ ಅಮಾನತ್‌ ಬ್ಯಾಂಕ್‌ ಹಗರಣದ ಜೊತೆಗೇ ವಕ್ಫ್‌ ಆಸ್ತಿ ಕಬಳಿಸಿದ ಆರೋಪವೂ ಇದೆ. ಹೀಗಿರುವಾಗ ಅಂತಹವರನ್ನು ಕರೆಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಕಾರ್ಯಕ್ರಮ ಹಾಳು ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ’ ಎಂದು ಸಮಿತಿಯ ಸದಸ್ಯ ಮಹಮ್ಮದ್‌ ಇಲಿಯಾಸ್‌  ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT