ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಸಣ್ಣ ಶಾಲೆಗಳ ಸವಾಲುಗಳು...

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಿರಿಯ ಪ್ರಾಥಮಿಕ ಶಾಲೆಯೊಂದರ ದೃಶ್ಯ­ವನ್ನು ಕಲ್ಪಿಸಿಕೊಳ್ಳಿ. ೧ರಿಂದ ೫ನೇ ತರಗತಿ­ವರೆಗೆ ೧೮ ಮಕ್ಕಳು ದಾಖಲಾಗಿದ್ದು, ಅದರಲ್ಲಿ  ತರಗತಿ ೧ ರಿಂದ ೫ರವರೆಗೆ ಕ್ರಮವಾಗಿ ೫, ೪, ೪, ೩, ೨ ಮಕ್ಕಳಿದ್ದು, ಸರಾಸರಿ ಒಟ್ಟು ೧೫ ಮಕ್ಕಳು ಹಾಜರಾಗುತ್ತಿದ್ದಾರೆ. ಶಾಲೆಯಲ್ಲಿ  ಇಬ್ಬರು ಶಿಕ್ಷಕರಿದ್ದು, ೫ ತರಗತಿಗಳ ಮಕ್ಕಳಿಗೆ ವಿಷಯ­ಗಳನ್ನು ಹಂಚಿಕೊಂಡು ಬೋಧಿಸುತ್ತಿ­ದ್ದಾರೆ. ಒಬ್ಬ ಶಿಕ್ಷಕ ರಜೆ ಅಥವಾ ತರಬೇತಿ ಅಂತಲೋ ಅಥವಾ ಇನ್ನಾವುದೇ ಕಾರಣಕ್ಕೋ  ಶಾಲೆಯಲ್ಲಿ ಇಲ್ಲ ಎಂದಾದರೆ, ಆ ಶಾಲೆಯ ಉಳಿದಿರುವ ಒಬ್ಬನೇ ಶಿಕ್ಷಕ ೫ ತರಗತಿಗಳಿಗಿರುವ ಎಲ್ಲಾ ೨೦ ವಿಷಯಗಳನ್ನೂ ಬೋಧಿಸಬೇಕು.

ಇದೇ ರೀತಿಯಲ್ಲಿ ೧ರಿಂದ ೭ನೇ ತರಗತಿವರೆಗೆ ಇರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೪೫ ಮಕ್ಕಳಿದ್ದು, ಸರಾಸರಿ ೪೦ ಮಕ್ಕಳು ಹಾಜ­ರಾ­­ಗುತ್ತಿದ್ದು, ಶಾಲೆಯಲ್ಲಿರುವ ೫ ಶಿಕ್ಷಕರು  ಎಲ್ಲಾ ತರಗತಿಗಳ ಒಟ್ಟು ೩೮ ವಿಷಯಗಳನ್ನು ಬೋಧಿಸಬೇಕು.

ಸಣ್ಣ ಶಾಲೆಗಳ ಕುರಿತಂತೆ ಪ್ರತ್ಯೇಕವಾದ ನೀತಿ ನಮ್ಮ ರಾಷ್ಟ್ರದ ಹಂತದಲ್ಲಾಗಲೀ ಅಥವಾ ರಾಜ್ಯದ ಹಂತದಲ್ಲಾಗಲೀ ಇಲ್ಲ. ಶಿಕ್ಷಣ ಇಲಾ­ಖೆಯ ೨೦೧೩-–೧೪ನೇ ಸಾಲಿನ ಅಧಿಕೃತ ಅಂಕಿ-–ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ೨೬,೦೫೮ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ೧೪,೫೪೮ ಶಾಲೆಗಳಲ್ಲಿ (ಶೇ ೫೫.೮) ಮಕ್ಕಳ ದಾಖಲಾತಿ ೩೦ಕ್ಕಿಂತ ಕಡಿಮೆ ಇದ್ದು, ಸಣ್ಣ ಗಾತ್ರದ ಶಾಲೆಗಳಾಗಿವೆ. ಈ ಶಾಲೆಗಳ ಪೈಕಿ ತಲಾ ೫ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳು ೪೫೬ ಇದ್ದು, ೬ ರಿಂದ ೧೦ ಮಕ್ಕಳಿರುವ ಶಾಲೆ­ಗಳು ಒಟ್ಟು ೧,೯೨೩ ಇವೆ. ಅಂದರೆ ರಾಜ್ಯದ ಒಟ್ಟು ೨,೩೭೯ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇಂತಹ ಶಾಲೆಗಳನ್ನು ಅತೀ ಸಣ್ಣ ಶಾಲೆಗಳೆನ್ನಬಹುದು.

ಇನ್ನು ರಾಜ್ಯದಲ್ಲಿರುವ ಒಟ್ಟು ೩೪,೪೨೭ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ತಲಾ ೭೦ ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ಒಟ್ಟು ಶಾಲೆ­ಗಳು ೭,೧೨೮ (ಶೇ ೨೦.೭೦). ರಾಜ್ಯದ ಒಟ್ಟು ೧,೮೮೯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ೩೫ ಮಕ್ಕಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದು, ಇವು ಅತಿ ಸಣ್ಣ ಶಾಲೆಗಳಾಗಿವೆ.

ಪ್ರೌಢಶಾಲಾ ಹಂತದಲ್ಲಿ ರಾಜ್ಯದಲ್ಲಿರುವ ಒಟ್ಟು ೧೪,೪೦೯ ಶಾಲೆಗಳ ಪೈಕಿ ತಲಾ ೮೦ ಮಕ್ಕ­ಳಿ­ಗಿಂತ ಕಡಿಮೆ ಇರುವ ೫,೪೬೭ (ಶೇ ೩೭.೭೮) ಪ್ರೌಢಶಾಲೆಗಳನ್ನು ಸಣ್ಣ ಶಾಲೆಗಳೆನ್ನ­ಬಹುದು. ಇದೇ ರೀತಿ ಒಟ್ಟು ಮಕ್ಕಳ ದಾಖಲಾತಿ ೪೦ಕ್ಕಿಂತ ಕಡಿಮೆ ಇರುವ ಪ್ರೌಢಶಾಲೆಗಳು ೧,೦೨೭ (ಶೇ ೭) ಇದ್ದು, ಇವುಗಳನ್ನು ಅತಿ ಸಣ್ಣ ಶಾಲೆಗಳೆನ್ನ­ಬಹುದು.
ಸರ್ಕಾರಿ ಒಡೆತನದ ಶಾಲೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಶಾಲೆಗಳ ಸಂಖ್ಯೆ ಹೆಚ್ಚಿದೆ. ಹಾಸನ, ಚಿಕ್ಕ­ಮಗಳೂರು, ಉತ್ತರ ಕನ್ನಡ, ಶಿರಸಿ, ಶಿವ­ಮೊಗ್ಗ, ಬೆಂಗಳೂರು ಗ್ರಾಮಾಂತರ, ರಾಮ­ನಗರ, ಚಿಕ್ಕ­ಬಳ್ಳಾಪುರ, ಕೊಡಗು, ಕೋಲಾರ, ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ಶಾಲೆಗಳು ಹೆಚ್ಚಾಗಿವೆ.

‘ಸಣ್ಣದು ಸುಂದರ’ ಎಂಬ ಮಾತಿದೆ. ಈ ಮಾತು ಸಣ್ಣ ಶಾಲೆಗಳ ವಿಷಯಕ್ಕೂ ಅನ್ವಯಿಸ­ಬಹುದು. ಆದರೆ ಶಿಕ್ಷಕರಿಗೆ ಕಲಿಸುವ ವಿಷಯಗಳ ಹೊರೆ ಹೆಚ್ಚಾಗಿ ಎಲ್ಲ ಪಠ್ಯ ವಿಷಯಗಳನ್ನು ಕಲಿ­ಸು­ವುದು ಕಠಿಣವಾಗುತ್ತದೆ. ಇದು ಗುಣಮಟ್ಟದ ಕಲಿಕೆಗೂ ಅಡ್ಡಿಯಾಗುವ ಸಾಧ್ಯತೆಯಿದೆ.

ಸಣ್ಣ ಶಾಲೆಗಳ ಕುರಿತಾದ ಸಮಸ್ಯೆ ಬರೀ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂಗ್ಲೆಂಡ್ ಹಾಗೂ ಅಮೆರಿಕದಲ್ಲೂ ಈ ಸಮಸ್ಯೆ ಇದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಕೆಲವು ಶಾಲೆಗಳನ್ನು ಮಕ್ಕಳ ಕೊರತೆಯ ಕಾರಣ­ದಿಂದ ವಿಲೀನ ಮಾಡಿದಾಗ ಬಂದಂತಹ ಪ್ರತಿ­ರೋಧ ವಿದೇಶಗಳಲ್ಲೂ ಕಂಡುಬಂದಿದೆ. ಆದರೆ ನಮ್ಮ ದೇಶದಲ್ಲಿ ಇರುವಷ್ಟು ಪ್ರಮಾಣದಲ್ಲಿ ಸಣ್ಣ ಶಾಲೆಗಳ ಸಂಖ್ಯೆ ಅಲ್ಲಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶವು ಪ್ರಮುಖವಾಗಿ ಹಳ್ಳಿಗಳ ದೇಶವಾಗಿದೆ. ಅರಣ್ಯ, ಗುಡ್ಡಗಾಡು ಪ್ರದೇಶ, ವಿರಳ ಅಥವಾ ಚದುರಿದ ಜನವಸತಿ ಪ್ರದೇಶ­ಗಳಲ್ಲಿ ಸಾಮಾನ್ಯವಾಗಿ ಜನಸಂಖ್ಯೆ ಕಡಿಮೆ­ಯಿರುವ ಕಾರಣ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ.

ಮಕ್ಕಳ ವಾಸಸ್ಥಳಕ್ಕೆ ಹತ್ತಿರದಲ್ಲಿಯೇ ಶಾಲೆ­ಗಳಿ­ದ್ದಲ್ಲಿ ಮಕ್ಕಳು ಯಾವುದೇ ತೊಂದರೆಯಿಲ್ಲದೆ ಶಿಕ್ಷಣವನ್ನು ಪಡೆಯಲು ಸಾಧ್ಯವಿದೆ. ಈ ಕಾರಣ­ಕ್ಕಾಗಿ ಆರ್.ಟಿ.ಇ ಕಾಯ್ದೆಯಂತೆ ಮಕ್ಕಳ ವಾಸ­ಸ್ಥಳದ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಕಿರಿಯ ಪ್ರಾಥ­ಮಿಕ ಶಾಲೆ ಹಾಗೂ ೩ ಕಿ.ಮೀ. ವ್ಯಾಪ್ತಿ­ಯೊಳಗೆ ಹಿರಿಯ ಪ್ರಾಥಮಿಕ ಶಾಲೆಯಿರ­ಬೇಕೆಂದು ಹಾಗೂ ನದಿ, ಬೆಟ್ಟ, ಗುಡ್ಡಗಳಂತಹ ನೈಸರ್ಗಿಕ ಅಡೆ ತಡೆಗಳಿದ್ದಲ್ಲಿ ಈ ನಿಯಮಕ್ಕೆ ವಿನಾಯಿತಿ ಇದೆ. ಈ ನಿಯಮದಡಿಯಲ್ಲಿಯೇ ಈ ಶೈಕ್ಷಣಿಕ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿ­ಯಾ­ನದಡಿಯಲ್ಲಿ ೧೨ ಜಿಲ್ಲೆಗಳ ೭,೧೦೦ ಶಾಲಾ ಮಕ್ಕ­ಳಿಗೆ ಪ್ರತಿ ಮಗುವಿಗೆ ಮಾಸಿಕ  ₨ ೧೫೦  ಸಾರಿಗೆ ಭತ್ಯೆ ನೀಡಲಾಗುತ್ತಿದೆ.

ಇಲ್ಲಿ ಸಮಸ್ಯೆಯಿರುವುದು ಅತಿ ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳದ್ದು. ೧೦ಕ್ಕಿಂತ ಕಡಿಮೆ ಮಕ್ಕಳಿರುವ ೨,೩೭೯ ಶಾಲೆಗಳಲ್ಲಿ ಉತ್ತಮ ರೀತಿಯ ಶಿಕ್ಷಣ ನೀಡುವುದು ಕಠಿಣ­ವಾಗುತ್ತದೆ. ಆರ್.ಟಿ.ಇ ಕಾಯ್ದೆಯಂತೆ ಇಂತಹ ಶಾಲೆಗಳಿಗೆ ಇಬ್ಬರು ಶಿಕ್ಷಕರು ಇರಲೇಬೇಕು ಎಂದರೂ ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ­ಯಿಂದ ಒಬ್ಬರೇ ಶಿಕ್ಷಕರು ಅನಿವಾರ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಶಾಲೆಗ­ಳನ್ನು ಮುಚ್ಚಿ ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿ­ಸಿದರೆ ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಣಾಸಕ್ತರಿಂದ ತೀವ್ರ ರೀತಿಯ ವಿರೋಧ ಎದು­ರಿಸಬೇಕಾಗುತ್ತದೆ.

ಅಂತಹ ಶಾಲೆಗಳ ಸಮಸ್ಯೆ­ಗಳಿಗೆ ಸಂಬಂಧಿಸಿದಂತೆ ಸಮೀಕ್ಷೆಯಾಗಲೀ  ಅಥವಾ ವಿಸ್ತೃತ ಯೋಜನೆಯಾಗಲೀ ರೂಪಿತ­ವಾಗಿಲ್ಲ. ಸಣ್ಣ ಹಾಗೂ ಅತಿ ಸಣ್ಣ ಶಾಲೆಗಳ ಸವಾಲು­ಗಳಿಗೆ ಪರಿಹಾರವೇನು? ಹೆಚ್ಚಿನವರು ಮಕ್ಕಳ ವಾಸ­ಸ್ಥಳಕ್ಕೆ ಹತ್ತಿರದಲ್ಲಿರುವ ದೊಡ್ಡ ಶಾಲೆಗೆ ಮಕ್ಕಳನ್ನು ದಾಖಲಿಸಿ, ಉಚಿತ ಸಾರಿಗೆ ಸೌಲಭ್ಯ ನೀಡುವುದು ಒಳಿತು ಎನ್ನುತ್ತಾರೆ. ಪ್ರತೀ ಗ್ರಾಮ ಪಂಚಾಯಿತಿಗೆ ಒಂದು ಸುಸಜ್ಜಿತ ಶಾಲೆ ತೆರೆದು ಹತ್ತಿರದ ಹಳ್ಳಿಗಳ ಮಕ್ಕಳನ್ನು ಆ ಶಾಲೆಗೆ ದಾಖಲು ಮಾಡಿದಲ್ಲಿ ಗುಣಾತ್ಮಕ ಶಿಕ್ಷಣ ದೊರೆ­ಯಬಹುದು ಎಂಬ ಚಿಂತನೆಯೂ ಇದೆ.

ಸಣ್ಣ ಶಾಲೆಗಳನ್ನು ಉಳಿಸಿಕೊಂಡು, ಗುಣಾ­ತ್ಮಕ­ವಾಗಿ ನಡೆಸುವುದೇ ಸದ್ಯಕ್ಕೆ ಇರುವ ಏಕೈಕ ಪರಿಹಾರವೆನ್ನಬಹುದು. ಈ ಕಾರ್ಯಕ್ಕಾಗಿ ಸಣ್ಣ ಮತ್ತು ಅತಿ ಸಣ್ಣ ಶಾಲೆಗಳ ಕುರಿತಂತೆ ಒಂದು ಕಾರ್ಯ­ನೀತಿ ರೂಪಿಸುವ ಅಗತ್ಯವಿದೆ. ಈ ಕಾರ್ಯ­ನೀತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಶಾಲೆ­ಗಳು ಕುರಿತಂತೆ ವ್ಯಾಖ್ಯೆಯನ್ನು ನೀಡುವ ಜೊತೆ ಅಂತಹ ಶಾಲೆಗಳಲ್ಲಿನ ಪಠ್ಯಕ್ರಮವನ್ನು ಅಲ್ಲಿನ ವ್ಯವಸ್ಥೆಗೆ ತಕ್ಕಂತೆ ಮಾರ್ಪಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು.

ಸಣ್ಣ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನು ನೀಡಲು ಸಾಧ್ಯವಾಗದಿರುವುದರಿಂದ ಆ ಶಾಲೆಗಳ ಹಳ್ಳಿ­ಗಳ­ಲ್ಲಿ­ರುವ ಸ್ಥಳೀಯ ಸಮುದಾಯದ ವಿದ್ಯಾ­ವಂತ­ರನ್ನು ಶಾಲಾ ಬೋಧನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕುರಿತಂತೆ ಚಿಂತಿಸಬಹುದು. ಇದರ ಜೊತೆ ಸಣ್ಣ ಶಾಲೆಗಳಿಗೆ ಹಲವು ವಿಶೇಷ ಸಂಪನ್ಮೂಲಗಳನ್ನು ಒದಗಿಸ­ಬೇಕು. ಸಣ್ಣ ಶಾಲೆಗಳ ಕಾರ್ಯನಿರ್ವಹಿಸುವಿಕೆ, ಅವುಗಳ ಗುಣಮಟ್ಟದ ಕುರಿತು ತೀವ್ರ ರೀತಿಯ ಮೇಲುಸ್ತುವಾರಿ ಇರುವಂತೆ ನೋಡಿಕೊಳ್ಳುವು­ದರ ಜೊತೆ ಅವುಗಳಿಗೆ ಅಗತ್ಯ ಬೆಂಬಲವನ್ನೂ ಒದಗಿಸಬೇಕು.

ಅಂತಹ ಶಾಲೆಗಳಲ್ಲಿ ಕಾರ್ಯ­ನಿರ್ವಹಿಸುವ ಶಿಕ್ಷಕರಿಗೆ  ಪ್ರೋತ್ಸಾಹಧನ ನೀಡುವ ಕುರಿತು ಆಲೋಚಿಸಬಹುದು. ಒಟ್ಟಿ­ನಲ್ಲಿ ಸಣ್ಣ ಮತ್ತು ಅತಿ ಸಣ್ಣ ಶಾಲೆಗಳಲ್ಲಿನ ಗುಣ­ಮಟ್ಟದ ಶಿಕ್ಷಣದ ಕುರಿತಂತೆ ಸಮಗ್ರ ಪರಾಮರ್ಶೆ ಹಾಗೂ ನಿರಂತರ ಗಮನ ನೀಡುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT