ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ಸಾಹದ ಮತದಾನ

Last Updated 24 ಏಪ್ರಿಲ್ 2014, 20:42 IST
ಅಕ್ಷರ ಗಾತ್ರ

ದೆಹಲಿ (ಪಿಟಿಐ): ಹಲವಾರು ಕಾರಣ­ಗಳಿಗಾಗಿ ಮಹತ್ವದ್ದು ಎನಿಸಿದ, 117 ಸ್ಥಾನಗಳಿಗೆ ಗುರುವಾರ  ನಡೆದ ಆರನೇ ಹಂತದ ಲೋಕಸಭಾ ಚುನಾ­ವಣೆಯಲ್ಲಿ ಜನತೆ ಉತ್ಸಾಹ­ದಿಂದ ಮತ ಚಲಾಯಿ­ಸಿದ್ದು, ಎರಡು ಹಿಂಸಾ­ತ್ಮಕ ಘಟನೆಗಳಲ್ಲಿ ಆರು ಜನ ಹತ್ಯೆಗೀಡಾ­­ಗಿದ್ದಾರೆ.

ಮುಂಬೈ ನಗರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆ­ಗಿಂತ ಹೆಚ್ಚಿನ ಮತದಾನವಾಗಿದೆ. ಇದ­ರೊಂದಿಗೆ, ಮುಂಚಿನ ಐದು ಹಂತಗಳಲ್ಲಿ ಹಿಂದಿನ ಬಾರಿಗಿಂತ ಹೆಚ್ಚಿ­ಗಿದ್ದ ಮತ ಪ್ರಮಾಣ ಆರನೇ ಹಂತದಲ್ಲೂ ಅದೇ ಗತಿಯಲ್ಲಿ ಮುಂದು­ವರೆಯಿತು.

ಆರು ಜನರ ಹತ್ಯೆ: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಚುನಾವಣಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಶಂಕಿತ ನಕ್ಸಲರು ಸ್ಫೋಟಿಸಿದ ದುಷ್ಕೃತ್ಯ­ದಲ್ಲಿ ಕನಿಷ್ಠ ಐವರು ಸಿಬ್ಬಂದಿ ಹತ್ಯೆ­ಗೀಡಾಗಿ ಕೆಲವರು ಗಾಯಗೊಂಡರು.

ಅಸ್ಸಾಂನ ಕೋಕ್ರಝಾರ್‌ ಜಿಲ್ಲೆ­ಯಲ್ಲಿ ಜನರ ಗುಂಪು ಮತಗಟ್ಟೆಯನ್ನು ವಶ­ಪಡಿಸಿ­ಕೊಳ್ಳಲು ಯತ್ನಿಸಿದಾಗ ಗಡಿ ಭದ್ರತಾ ಪಡೆ ಯೋಧರು ಹಾರಿಸಿದ ಗುಂಡಿನಿಂದ ಒಬ್ಬ ಪೊಲೀಸ್‌ ಹತ್ಯೆಗೀ­ಡಾದ. ಈ ಘಟನೆಗಳನ್ನು ಹೊರತು­ಪಡಿಸಿ­ದರೆ ಎಲ್ಲೆಡೆ ಶಾಂತಿ­ಯುತ ಬಿರುಸಿನ ಮತದಾನ ನಡೆಯಿತು.

ಮತದಾನ ನಡೆದ 117 ಕ್ಷೇತ್ರಗಳು 11 ರಾಜ್ಯಗಳು ಮತ್ತು ಒಂದು ಕೇಂದ್ರಾ­ಡಳಿತ ಪ್ರದೇಶಕ್ಕೆ ಸೇರಿದ್ದವು. ಕಣದಲ್ಲಿ 2100 ಅಭ್ಯರ್ಥಿಗಳಿದ್ದರೆ,  18 ಕೋಟಿ ಮತದಾರರಿಗೆ ಮತ ಚಲಾವ­ಣೆಯ ಅಧಿಕಾರ ಇತ್ತು.

ಪುದುಚೇರಿಯಲ್ಲಿ ಅಧಿಕ: ಪುದು­ಚೇರಿ ಏಕೈಕ ಕ್ಷೇತ್ರದಲ್ಲಿ ಅತ್ಯಧಿಕ ಶೇ 83ರಷ್ಟು ಮತ ಚಲಾವಣೆಯಾಗಿದ್ದರೆ, ಪಶ್ಚಿಮ ಬಂಗಾಳದ 6 ಕ್ಷೇತ್ರಗಳಿಗೆ

ಶೇ 82, ತಮಿ­ಳು­ನಾಡಿನ 39 ಕ್ಷೇತ್ರಗಳಿಗೆ ಒಂದೇ ದಿನ ನಡೆದ ಚುನಾವಣೆಯಲ್ಲಿ ಶೇ 73ರಷ್ಟು ಮತದಾರರು  ಗುಂಡಿ ಒತ್ತಿದರು.

ಜಮ್ಮು ಕಾಶ್ಮೀರದ 1 ಕ್ಷೇತ್ರ ಶೇ 28, ರಾಜಸ್ತಾ­ನದಲ್ಲಿ 5 ಕ್ಷೇತ್ರಗಳಿಗೆ ಶೇ 59.2 ಮತ್ತು ಮಹಾರಾಷ್ಟ್ರ­ದಲ್ಲಿ 19 ಕ್ಷೇತ್ರಗಳಿಗೆ ಶೇ 55.33– ಇಲ್ಲಿ ಮಾತ್ರ ಶೇ 60ಕ್ಕಿಂತ ಕಡಿಮೆ ಮತದಾನ­ವಾಯಿತು.

ಜಮ್ಮು ಕಾಶ್ಮೀರದ ಅನಂತನಾಗ್‌ ಕ್ಷೇತ್ರದಲ್ಲಿ ಕೇವಲ ಶೇ 28ರಷ್ಟು ಮತ ಚಲಾವಣೆಯಾದರೂ ಇದು ಕೂಡ ಹಿಂದಿನ ಚುನಾವಣೆಯ ಶೇ 26.9ಕ್ಕಿಂತ ಅಧಿಕವೇ ಇದೆ. ಮುಂಬೈ ನಗರದ 6 ಕ್ಷೇತ್ರಗಳಲ್ಲಿ ಶೇ 53ರಷ್ಟು ಮತದಾನವಾ­ಗಿದ್ದು ಇಲ್ಲಿ ಹಿಂದಿನ ಚುನಾವಣೆಯಲ್ಲಿ ಕೇವಲ ಶೇ 41.43ರಷ್ಟು ಮತ ಚಲಾವಣೆ ಆಗಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌ (ಕಾಂಗ್ರೆಸ್‌), ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ (ಬಿಜೆಪಿ), ಬಿಜೆಪಿಯ ಷಹನವಾಜ್‌ ಹುಸೇನ್‌, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪುತ್ರ ಅಭಿಜಿತ್‌ (ಕಾಂಗ್ರೆಸ್‌) ಗುರುವಾರ ಚುನಾವಣೆ ಎದುರಿಸಿದ ಪ್ರಮುಖರಲ್ಲಿ ಸೇರಿದ್ದಾರೆ.

6ನೇ ಹಂತದ  ಮತಚಲಾವಣೆ ಮುಗಿಯು­ವುದರೊಂದಿಗೆ 543 ಕ್ಷೇತ್ರಗಳ ಪೈಕಿ 347 ಕ್ಷೇತ್ರಗಳಲ್ಲಿ ಮತ ಪ್ರಕ್ರಿಯೆ ಮುಗಿದಿದೆ. ಉಳಿದ 216 ಕ್ಷೇತ್ರಗಳಿಗಾಗಿ ಮೂರು ಹಂತಗಳ ಚುನಾವಣೆ ಬಾಕಿ ಉಳಿದಿದೆ.

ಮತ ಹಾಕಿದ ಗಣ್ಯರು
ನಟರಾದ ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌, ಧರ್ಮೇಂದ್ರ, ರೇಖಾ, ವಿದ್ಯಾಬಾಲನ್‌, ಸನ್ನಿ ಡಿಯೋಲ್‌, ಸೋನಂ ಕಪೂರ್‌, ಉದ್ಯಮಿ ಅನಿಲ್‌ ಅಂಬಾನಿ.ಗುರುವಾರ ಹುಟ್ಟುಹಬ್ಬದ ಸಂಭ್ರಮ­ದಲ್ಲಿದ್ದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮತ್ತು ಪತ್ನಿ ಅಂಜಲಿ ಬಾಂದ್ರಾ ಉಪನಗರದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT