ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದ ಶಾಸಕರಿಗಾಗಿ ಯೋಜನೆ!

Last Updated 23 ನವೆಂಬರ್ 2014, 19:06 IST
ಅಕ್ಷರ ಗಾತ್ರ

ಜನರಿಂದ ಜನಗಳಿಗಾಗಿ ಯೋಜನೆ. ಇದು ಅಧಿಕಾರ ವಿಕೇಂದ್ರೀಕರಣ ಪ್ರಯೋ­ಗ­ದಲ್ಲಿ ಅಡಕವಾಗಿರುವ ಒಂದು ಮುಖ್ಯ ತತ್ವ. ಯೋಜನಾ ಪ್ರಕ್ರಿಯೆ ಮೇಲಿನಿಂದ ತಯಾರಾಗಿ ಕೆಳಗೆ ಹರಿದು ಬರುವ ಮೊದಲು, ಕೆಳಮಟ್ಟ­ದಿಂದ ತಯಾರಾಗಿ ಊರ್ಧ್ವಗಾಮಿ­ಯಾದರೆ  ಜನರ ಮಟ್ಟಿಗೆ ಇದು ಅರ್ಥ­ಪೂರ್ಣ. ಆದುದರಿಂದ  ಗ್ರಾಮ ಪಂಚಾ­ಯಿತಿಯ ಮಟ್ಟದಲ್ಲಿ ಶುರುವಾದ ಪ್ರಕ್ರಿಯೆ ರಾಜ್ಯ ಮಟ್ಟಕ್ಕೆ ತಲುಪಿ ಅದು ರಾಜ್ಯದ ವಾರ್ಷಿಕ ಯೋಜನೆಯ ಅಂಗವಾಗಬೇಕು..

ಹೀಗಾಗಬೇಕು ಎನ್ನುವುದು ಬರೀ ವಿಕೇಂದ್ರೀ­ಕರಣ ಪ್ರತಿಪಾದಕರ ಸದಿಚ್ಛೆ­ಯಷ್ಟೇ ಅಲ್ಲ. ಇದು ಸಂವಿಧಾನದ ಆಶ­ಯವೂ ಹೌದು. ಪ್ರತಿಯೊಂದು ಜಿಲ್ಲೆಗೆ ಜಿಲ್ಲಾ ಯೋಜನಾ ಸಮಿತಿ ರಚನೆಯನ್ನು ಕಡ್ಡಾಯವಾಗಿ ಮಾಡಬೇಕು (ಸಂವಿ­ಧಾನದ ಕಲಂ 243 ZD).  ಇದು ಹೇಗಿರ­ಬೇಕು, ಅದರ ಸದಸ್ಯತ್ವದ ಕಾರ್ಯ­­­ವಿಧಾನದ ವಿವರ ಮೊದ­ಲಾದ­ವು­­ಗಳನ್ನು ನಿರ್ಧರಿಸು­ವುದಷ್ಟೇ ರಾಜ್ಯ ಸರ್ಕಾರಗಳಿಗೆ ಬಿಟ್ಟ ಕೆಲಸ. ಜಿಲ್ಲೆ­ಗಳಲ್ಲಿರುವ ಪಂಚಾಯತ್ ರಾಜ್ ಸಂಸ್ಥೆ­ಗಳು, ನಗರ ಸ್ಥಳೀಯ ಸಂಸ್ಥೆಗಳ ಅಭಿ­ಪ್ರಾಯ­­ಗಳನ್ನು ಕ್ರೋಢೀಕರಿಸಿ, ಈ ಸಮಿತಿ­ಯು ಒಂದು ಸಮಗ್ರ ಜಿಲ್ಲಾ ಕರಡು ಅಭಿವೃದ್ಧಿ ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು ಎಂಬ ಶಾಸನವಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಿರುವ ಈ ಸಾಂವಿಧಾನಿಕ ಸೌಲಭ್ಯದ ಮಹತ್ವ ಏನೆಂದರೆ ಇಂಥ­ದ್ದೊಂದು ರಕ್ಷಣೆ ಯೋಜನಾ ಆಯೋ­ಗಕ್ಕೂ ಇಲ್ಲ, ಯೋಜನಾ ಆಯೋಗವು ಸರಕಾರಿ ಆಜ್ಞೆಯ ಮೆಲೆ ಜನ್ಮ ತಾಳಿದ ಸಂಸ್ಥೆ­ಯಾದುದರಿಂದಲೇ ಅದನ್ನು ರದ್ದು ಮಾಡುವ ನಿರ್ಧಾರವನ್ನು ಮೋದಿ ಧುರೀ­ಣತ್ವ­ಲ್ಲಿರುವ ಕೇಂದ್ರ ಸರ್ಕಾರ ತೆಗೆದು­ಕೊಂಡಿದೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥದ್ದೊಂದು ಸಂವಿಧಾನ ತಿದ್ದುಪಡಿ ಬಂದು ಎರಡೂ­ವರೆ ದಶಕಗಳೇ ಕಳೆದಿದ್ದರೂ ಪಂಚಾ­ಯತ್ ರಾಜ್ ಸಂಸ್ಥೆಗಳಿಗೆ ಅದರ ಫಲ ಇನ್ನೂ ದೊರೆತಿಲ್ಲ.

೧೯೯೪ರಿಂದ ಇಂದಿನವರೆಗೆ ಐದು ಚುನಾವಣೆಗಳು ನಡೆದು, ಆರು  ಸರ್ಕಾರಗಳು (೨೦೦೪ರ ಅವಧಿಯಲ್ಲಿನ ಎರಡು ಸಮ್ಮಿಶ್ರ ಸರ್ಕಾರಗಳನ್ನು ಒಳ­ಗೊಂಡು) ರಾಜ್ಯವನ್ನು ಆಳಿವೆ. ಸಂವಿ­ಧಾನ ತಿದ್ದುಪಡಿಯನ್ನು ತರಲು ಮುತು­ವರ್ಜಿ ವಹಿಸಿ, ಅಧಿಕಾರ ವಿಕೇಂದ್ರಿ­ಕರಣವು ತನ್ನ ರಾಷ್ಟ್ರೀಯ ಗುರಿ ಎಂದು ಸಾರಿದ ಕಾಂಗ್ರೆಸ್  ಏಳೂವರೆ ವರ್ಷ (ಸ್ವಂತ­ಬಲದಿಂದ ಐದು ವರ್ಷ ಮತ್ತು ಸಮ್ಮಿಶ್ರ ಸರ್ಕಾರದ ಮೂಲಕ ಎರಡೂ­ವರೆ ವರ್ಷ) ಅಳಿ ಮತ್ತೆ ಈಗ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈ ಪ್ರಯೋಗ­ವನ್ನು ಜಾರಿಗೆ ತಂದ ಖ್ಯಾತಿ­ಯನ್ನು ಪಡೆದ ಅವಿಭಜಿತ ಜನತಾದಳ ತನ್ನ ೧೯೯೪ರಲ್ಲಿನ ಐದು ವರ್ಷ ಆಳಿದ ನಂತರ ರಾಜಕೀಯವಾಗಿ ನಾಮಶೇಷ­ವಾಗಿದೆ. ಆದರೆ ಈ ಪಕ್ಷದ ವಾರಸು­­ದಾರಿಕೆ ತಮ್ಮದೆಂದು ಹೇಳಿಕೊಳ್ಳುವ ಜಾತ್ಯತೀತ ಜನತಾದಳ ಎರಡು ಸಮ್ಮಿಶ್ರ ಸರ್ಕಾರಗಳಲ್ಲಿ ಭಾಗಿಯಾಗಿ ಅಧಿಕಾರ ಅನುಭವಿಸಿತ್ತು. ಹಾಗೆಯೇ ವಿಕೇಂದ್ರೀ­ಕರಣ ಪ್ರಯೋಗದ ಜೊತೆಗೆ ಅಂಥ­ದ್ದೇನೂ ಸಂಬಂಧವಿಲ್ಲದ ಬಿಜೆಪಿ ಕೂಡಾ ಹೆಚ್ಚೂ ಕಡಿಮೆ ಏಳೂವರೆ ವರ್ಷಗಳ ಅಧಿಕಾರ ಅನುಭವಿಸಿತ್ತು.

ಮೂರೂ ಪಕ್ಷಗಳ ನಡುವಿರುವ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವಿಕೇಂದ್ರೀಕರಣ ವಿಷಯದ ನಿರಾ­ಸಕ್ತಿ­ಯಲ್ಲಿ ಎಲ್ಲರೂ ಸಮಾನರು. 1994ರ ದೇವೇಗೌಡರ ನೇತೃತ್ವದಲ್ಲಿನ ಅವಿಭ­ಜಿತ ಜನತಾದಳದ ಸರ್ಕಾರ  ಜಿಲ್ಲಾ ಯೋಜನಾ ಸಮಿತಿಗಳನ್ನು ಸ್ಥಾಪಿ­ಸು­ವದಕ್ಕೆ ಉತ್ಸುಕತೆಯನ್ನು ತೋರಿ­ಸಿತ್ತು. ಅದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆ­ಗಳಿಂದಲೂ, ನಗರ ಸ್ಥಳೀಯ ಸಂಸ್ಥೆ­ಗಳಿಂದಲೂ ಪ್ರತಿನಿಧಿ­ಗಳನ್ನು ಆಯ್ಕೆ ಮಾಡಲು ಚುನಾ­ವಣೆಯನ್ನೂ ನಡೆಸಿತು.  ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷರಾಗಿ, ಮಹಾನಗರ ಪಾಲಿಕೆಯ ಮೇಯರರು ಉಪಾಧ್ಯಕ್ಷರಾಗಿರುವ ಜಿಲ್ಲಾ ಯೋಜನಾ ಸಮಿತಿ­ಯನ್ನು ರಚಿಸುವುದಕ್ಕೆ ಕಾರ್ಯೋನ್ಮುಖ­ವಾಗುವಂತೆ ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಕೊನೆ­ಗಳಿಗೆಯಲ್ಲಿ ಕೈಬಿಟ್ಟಿತು. ಈ ಹಿಂಜರಿಕೆಗೆ ಕಾರಣ­ಗಳೇನು? ಆಡಳಿತಾತ್ಮಕ ತೊಂದ­ರೆಯೇ ಅಥವಾ ರಾಜಕೀಯ ತೊಂದ­ರೆಯೇ ಎನ್ನುವುದನ್ನು ಆ ಅವಧಿಯಲ್ಲಿ ಮುಖ್ಯ­ಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ದೇವೇಗೌಡ­ರಾಗಲೀ, ಜೆ. ಎಚ್ ಪಟೇಲ­ರಾಗಲೀ, ಅಥವಾ ಸಂಬಂಧಿತ ಮಂತ್ರಿ­ಗಳಾದ ಎಂ.ಪಿ.­­ಪ್ರಕಾಶರಾಗಲೀ ಕೊನೆಯ ತನ­ಕವೂ ಹೇಳಲಿಲ್ಲ. ಅವರಿಂದ ಒಂದು ಉತ್ತರವನ್ನು ಯಾರೂ ಬಯಸಲೂ ಇಲ್ಲ.

ಎಪ್ಪತರ ದಶಕದ ಕಾಲದ ದೇವರಾಜ ಅರಸರ ಆಳ್ವಿಕೆಯಲ್ಲಿ ಹೆಸರಾಂತ ಆರ್ಥಿಕ ತಜ್ಞ ನಂಜುಂಡಪ್ಪನವರು ಯೋಜನಾ ಸಲಹೆಗಾರ ಮತ್ತು ನಂತರ ಯೋಜನಾ ಕಾರ್ಯದರ್ಶಿಗಳಿದ್ದಾಗ ಜಿಲ್ಲಾ ಮಟ್ಟದ ಯೋಜನೆ ತಯಾ­ರಿಸುವ ಪ್ರಯತ್ನ ಶುರು­ವಾಯಿತು. ಇದಕ್ಕಾಗಿ ಪ್ರತಿ­ಯೊಂದು ಜಿಲ್ಲೆಯಲ್ಲಿ ಯೋಜನಾ ಘಟಕಗಳನ್ನೂ ರಚಿಸ­ಲಾಯಿತು. ಕಾರಣಾಂತರಗಳಿಂದ ಹೆಚ್ಚಿನ ಪ್ರಗತಿಯಾಗಲಿಲ್ಲ. ರಾಜ್ಯ ಮಟ್ಟದ ಕಾರ್ಯಕ್ರಮಗಳಿಗಿರುವ ಹಣ­ವನ್ನೇ ಜಿಲ್ಲೆಗಳ ನಡುವೆ ಹಂಚಿಹಾಕುವ ಮಟ್ಟಕ್ಕೆ ಅದು ಸೀಮಿತವಾಗಿತ್ತು. ಆಗ ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯೂ ಸಾಕಾರ­ಗೊಂಡಿರಲಿಲ್ಲ. ಆದರೆ ಅದು ಕೆಳಮಟ್ಟದಿಂದ ಯೋಜನಾ ಪ್ರಕ್ರಿಯೆ ಶುರು­ವಾಗಬೇಕೆಂಬ ಸದಿಚ್ಛೆಯ ಮೊದಲ ಹೆಜ್ಜೆಯಾಗಿತ್ತು. ಇದು ಪಂಚಾ­ಯತ್ ರಾಜ್ ವ್ಯವಸ್ಥೆಯೊಂದಿಗೆ ಹೆಚ್ಚು ಪ್ರಬಲ­ವಾಗಿ ಕಾರ್ಯರೂಪಕ್ಕೆ ಬರ­ಬೇಕಿತ್ತು. ಆದರೆ ರಾಜ್ಯ ಸರ್ಕಾರಗಳ ನಿರಾಸಕ್ತಿ­ಯಿಂದ ಏನೂ ಆಗದೆ ಉಳಿದುಕೊಂಡಿದೆ.

ಯೋಜನೆಗಳನ್ನು ರೂಪಿಸುವ ಪ್ರಕ್ರಿಯೆ ಕೆಳಗಿನಿಂದ ಮೇಲಕ್ಕೆ ಸಾಗಬೇಕು ಎಂಬ ಆಶಯ­ದೊಂದಿಗೆ ಸಂವಿಧಾನ ತಿದ್ದುಪಡಿ­ಯಾಗಿದೆ. ಪ್ರತಿಯೊಂದು ಜಿಲ್ಲೆಗೆ ಯೋಜನಾ ಸಮಿತಿ ಇರಬೇಕು. ಅದರಲ್ಲಿ ಸ್ಥಳೀಯ ಸರ್ಕಾರಗಳ ಸದಸ್ಯರಿರಬೇಕು. ಅವರ ಮೂಲಕ ರಾಜ್ಯ ಮಟ್ಟದಲ್ಲಿ ಯೋಜನೆ ರೂಪುಗೊಳ್ಳಬೇಕು. ಆದರೆ ಅದೀಗ ಅಧಿಕಾರಿಗಳು ಶಾಸಕರ ಮೂಗಿನ ನೇರಕ್ಕೆ ರೂಪಿಸುವ ಯೋಜನೆಯಾಗಿದೆ.

ರಾಜ್ಯ ವಾರ್ಷಿಕ ಯೋಜನೆ ತಯಾರಿ­ಕೆಯ ಪೂರ್ವಭಾವಿಯಾಗಿ ಜಿಲ್ಲೆಗಳಿಗೆ ಪ್ರಸ್ತಾಪಗಳನ್ನು ವೇಳಾ­ಪಟ್ಟಿಗೆ ಅನುಸಾರ­ವಾಗಿ ಕಳಿಸಲು ಸರ್ಕಾರ­ದಿಂದ ಜಿಲ್ಲೆಗಳಿಗೆ ಸೂಚನೆ ಬರುತ್ತದೆ. ಇದ್ದ ಕಾರ್ಯಕ್ರಮ­ಗಳನ್ನು ಮುಂದು­ವರಿಸು­ವುದಕ್ಕೆ ಪ್ರಾಶಸ್ತ್ಯ.  ಜಿಲ್ಲಾ ಪಂಚಾ­ಯಿತಿಯ ಅನುಮೋದನೆ ಪಡೆದು ಕಳಿಸ­ಬೇಕೆಂ­ದಿದ್ದರೂ, ವಾಸ್ತವ­ವಾಗಿ ಹಾಗೆ ಆಗುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಪಂಚಾ­ಯಿತಿಯ ಸಭೆ ತಿಂಗಳು­ಗಟ್ಟಲೆ ನಡೆಯು­ವುದೇ ಇಲ್ಲ. ಒಂದು ವೇಳೆ ನಡೆದರೂ ಯೋಜನಾ ಪ್ರಸ್ತಾಪ­ಗಳ ಕುರಿತ ಚರ್ಚೆ ನಡೆಯದೇ ಅಧಿಕಾರಿ­ಗಳು ನೀಡುವ ಪ್ರಸ್ತಾವನೆಯೇ ಸರ್ಕಾರಕ್ಕೆ ರವಾನೆಯಾಗುತ್ತದೆ.

ಮಂಜೂರಾಗಿ ಬಂದ ಕಾರ್ಯ­ಕ್ರಮಗಳ ಅನುಷ್ಠಾನದ ಸಂದರ್ಭ­ದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಗೊಂದಲಗಳು ಎದುರಾಗು­ತ್ತವೆ. ಮಂಜೂ­­­ರಾ­ದವು­ಗಳೆಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳು. ಈ ಕಾರ್ಯಕ್ರಮಗಳೊಂದಿಗೆ ತಳುಕು ಹಾಕಿಕೊಂಡೇ ಅನುದಾನ ಬಂದಿರುವುದ­ರಿಂದ ಅವುಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಬೇರೆ ಕಾರ್ಯಕ್ರಮ­ಗಳಿಗೆ ಬಳಸಲೂ ಸಾಧ್ಯವಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ತಮ್ಮದೇ ಆದ ಸಂಪನ್ಮೂಲ ಕ್ರೋಢಿಕರಿಸಿ ಕಾರ್ಯಕ್ರಮ ರೂಪಿಸುವ ಅಧಿಕಾರವಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಈ ಅಧಿಕಾರವಿದೆ. ಆದರೆ ಸರಿಯಾದ ಉಪಯೋಗ ಮಾಡಿ­ದರೆ ಗ್ರಾಮಗಳ ಬೇಡಿಕೆ ಈಡೇರಿಸಲು ಸಾಧ್ಯವಾದೀತು.

ಈ ರೀತಿ ಹಳಿ ತಪ್ಪಿದ ಯೋಜನಾ ಪ್ರಕ್ರಿಯೆಯನ್ನು ಸರಿ ಮಾಡುವ ತನಕ ಚುನಾಯಿತ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ತಮ್ಮ ಹೊಣೆಯ ಕುರಿತ ಅಸ್ಪಷ್ಟತೆ ನಿವಾರಣೆ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT