ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಕೇವಲ ಕೇಂದ್ರದ್ದಲ್ಲ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದೇಶದ ಅಭಿವೃದ್ಧಿ ಸಾಧಿಸಬೇಕಾದರೆ ಪ್ರಧಾನಿ­ಯೊಬ್ಬರೇ ಸಾಕು, ಕೇಂದ್ರ ಸರ್ಕಾರವೇ ಅಭಿ­ವೃದ್ಧಿಯ ಹರಿಕಾರ ಎಂಬ ಮೇಲ್ಮಟ್ಟದ ಹೇಳಿಕೆ­ಗಳು, ಅಭಿಪ್ರಾಯಗಳೇ ಒಟ್ಟು ಸಾರ್ವಜನಿಕ ಅಭಿ­ಪ್ರಾಯದಂತೆ ಮಂಡಿತವಾಗುತ್ತಿವೆ.

ವಾಸ್ತವ­ವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿ­ಸಲು ಮುಖ್ಯಮಂತ್ರಿಗಳ (ರಾಜ್ಯ ಶಾಸನಸಭೆಯ ನಾಯಕ ಆಗಿರುವುದರಿಂದ ಮುಖ್ಯ­ಮಂತ್ರಿ ಎಂದರೆ ಒಟ್ಟು ಶಾಸನಸಭೆ ಎಂಬ ಅರ್ಥ ಬರು­ತ್ತದೆ) ಪಾತ್ರ ಬಹಳ ಮಹತ್ವದ್ದಾಗಿದೆ ಎಂಬ ಅಂಶ­ವನ್ನು ಗುರುತಿಸಿದ ‘ಪ್ರಗತಿಗೆ ಮುಖ್ಯ­ಮಂತ್ರಿಗಳ ಪಾತ್ರವೂ ಮುಖ್ಯ’  ಎಂಬ ಲೇಖನ  (ಪ್ರ.ವಾ., ಗುಹಾಂಕಣ, ಸೆ. 19) ಮಹತ್ವಪೂರ್ಣ ಚರ್ಚೆ­ಯೊಂದನ್ನು ಮುಂಚೂಣಿಗೆ ತಂದಿದೆ.

ಇಲ್ಲಿ ಚರ್ಚೆ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಬದಲಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಂಬಂತೆ ನಿರ್ವಚಿಸಿದ್ದರೆ ಇನ್ನೂ ಉತ್ತಮ-­ವಾದ ಒಳನೋಟಗಳು ಸಿಗುತ್ತಿದ್ದವು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿ­ಕಾರ ಹಂಚಿಕೆಯ ಚರ್ಚೆ ಇಂದು ನಿನ್ನೆಯ­ದಲ್ಲ.

ಇದಕ್ಕೆ ಬಹಳ ದೊಡ್ಡ ಇತಿಹಾಸವೇ ಇದೆ. ಈ ಕುರಿತಂತೆ ೧9೮೩ರಲ್ಲಿ ರಚಿತವಾದ ಸರ್ಕಾರಿಯಾ ಆಯೋಗ ‘ಜನತಂತ್ರ ವ್ಯವಸ್ಥೆ­ಯಲ್ಲಿ ಅಧಿಕಾರದ ವಿಕೇಂದ್ರೀಕರಣ ಮತ್ತು ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾದವುಗಳು’ ಎಂಬ ಅಂಶವನ್ನು ಪ್ರಸ್ತಾ­ಪಿ­ಸುತ್ತಾ ಕೇಂದ್ರ ಸರ್ಕಾರ ತನ್ನ ಅಧಿಕಾರ­ವನ್ನು ರಾಜ್ಯಗಳಿಗೆ ಹಂಚುವ ಕೆಲಸ ಮಾಡಬೇಕು ಎಂಬ ಮಹತ್ವಪೂರ್ಣ ಅಂಶವನ್ನು ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಇತ್ಯಾದಿ ಮಹತ್ವಪೂರ್ಣ ವಿಷಯಗಳ ಕುರಿತು ನೀತಿ ನಿರೂಪಣೆ ಮಾಡುವ ಮುಖ್ಯಮಂತ್ರಿ, ರಾಜ್ಯಗಳ ಅಭಿವೃದ್ದಿಯಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಾರೆ. ಇದರ ಅರ್ಥ, ವಾಸ್ತವವಾಗಿ ಅಭಿವೃದ್ಧಿ­ಯನ್ನು ಸಾಧಿಸುವುದು ರಾಜ್ಯ ಶಾಸನಸಭೆಯೇ ಆಗಿದೆ. ಕೇಂದ್ರ ಅದಕ್ಕೆ ಬೇಕಾಗುವ ನೆರವನ್ನು ಒದಗಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಕೊಂಡಿಯಂತೆ ಕೆಲಸ ಮಾಡಬೇಕಿದೆ. ಆದರೆ ಈಗ ನಡೆಯುತ್ತಿ­ರುವ  ಚರ್ಚೆಗಳು, ಕೇಂದ್ರವೇ ನೇರವಾಗಿ ಅಭಿ­ವೃದ್ಧಿ­  ಕಾರ್ಯಗಳನ್ನು ಕೈಗೊಳ್ಳುತ್ತದೆ ಎಂಬರ್ಥ­ದಲ್ಲಿ ನಿರ್ವಹಣೆ­ಯಾಗುತ್ತಿವೆ.
 
ಸಾಂವಿಧಾನಿಕವಾಗಿ ನೋಡಿದರೂ ಈ ನಿಲುವನ್ನು ಒಪ್ಪಲು ಸಾಧ್ಯವಿಲ್ಲ. ಈಗ ಮುಂಚೂಣಿಗೆ ಬರುತ್ತಿರುವ ಈ ವಾದವನ್ನು ನಾವು ಸರಿಯಾಗಿ ಅರ್ಥೈಸದಿದ್ದರೆ ಮುಂದೆ ಇದು ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳ ಮಹತ್ವವನ್ನೇ ಕಡೆಗಣಿಸುವ, ಆ ಮೂಲಕ ಕೇಂದ್ರದ ದೊಡ್ಡಣ್ಣನ ಧೋರಣೆಯನ್ನು ರಾಜ್ಯಗಳ ಮೇಲೆ ಹೇರುವ ಪ್ರಯತ್ನವೂ ಆಗಬಹುದು. ಇದು ಹೀಗೇ ಮುಂದು­ವ­ರಿದರೆ ಭವಿಷ್ಯದಲ್ಲಿ ಭಾರತದ ಪ್ರಜಾ­ಪ್ರಭುತ್ವದ ಆಧಾರವಾದ ಒಟ್ಟಾರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ.
–ಡಾ.ಕಿರಣ್ ಎಂ. ಗಾಜನೂರು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT