ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾಪಕರ ವೇತನಕ್ಕೆ ಕತ್ತರಿ ಬೇಡ

ಸರ್ಕಾರಕ್ಕೆ ಬರಗೂರು ಆಗ್ರಹ
Last Updated 3 ಜುಲೈ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕ್ಷಣ ಕ್ಷೇತ್ರವನ್ನು ಅನು­ತ್ಪಾ­ದಕವೆಂದು  ನಿರ್ಲಕ್ಷಿಸಿ, ಶಿಕ್ಷಣ ವಿರೋಧಿ ಅಧಿನಿಯಮದ ಮೂಲಕ   ಅಧ್ಯಾ­­ಪಕರ ವೇತನಕ್ಕೆ ಕತ್ತರಿ ಹಾಕಲು ಮುಂದಾಗಿರುವ ಸರ್ಕಾರ ಕೂಡಲೇ ಅಧಿನಿಯಮ­ವನ್ನು ಹಿಂದಕ್ಕೆ ಪಡೆಯ­ಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಏರ್ಪಡಿಸಿದ್ದ ‘ಖಾಸಗಿ ಅನು­ದಾ­ನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ 2014’ ಕುರಿತ ಪದವಿ ಕಾಲೇಜು ಅಧ್ಯಾಪಕ ಮತ್ತು ಅಧ್ಯಾಪಕೇತರರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಆದ್ಯತೆ ಪಡೆಯಬೇಕಿದ್ದ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರನ್ನು ನಿರ್ಲಕ್ಷಿಸಿ, ಅತಾರ್ಕಿಕ ಮತ್ತು ಅತಾತ್ವಿಕ ಅಧಿನಿಯಮ ಜಾರಿ­ಗೊಳಿಸಲು ಮುಂದಾಗಿರುವ ಸರ್ಕಾ­ರದ ಕ್ರಮ ಪ್ರಜಾಪ್ರಭುತ್ವ ವಿರೋಧಿ­ಯಾಗಿದೆ. ಈ ವಿಚಾರದಲ್ಲಿ ಅಧ್ಯಾ­ಪಕರ ಹೋರಾಟಕ್ಕೆ ನನ್ನ ನೈತಿಕ ಬೆಂಬಲ­ವಿದೆ’ ಎಂದು ಅವರು ಹೇಳಿದರು.

‘ಅಧ್ಯಾಪಕರ ಪರವಾಗಿ ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾ­ಲಯಗಳು ನೀಡಿದ ತೀರ್ಪು­ಗಳನ್ನು ಉಲ್ಲಂ­ಘಿಸಿ ಸರ್ಕಾರ ಭಂಡತನದಿಂದ ಅಧಿ­ನಿಯಮವನ್ನು ಜಾರಿಗೊಳಿಸಲು ಮುಂದಾ­ಗಿದೆ. ಇದೇ ಧೈರ್ಯವನ್ನು ಮಾತೃಭಾಷೆ ಮಾಧ್ಯಮ ಕುರಿತ ಅಧಿನಿಯಮ ತರುವಲ್ಲಿ ತೋರಲಿ’ ಎಂದು ಸವಾಲು ಹಾಕಿದರು.

‘ಸ್ವಾತಂತ್ರ್ಯೋತ್ತರ ಭಾರತದಲ್ಲಿ  ಸೆರೆಯಲ್ಲಿದ್ದ ಶಿಕ್ಷಣ ಬಂಧಮುಕ್ತ­ಗೊಂಡು ಆದ್ಯತೆ ಪಡೆದಿತ್ತು. ಬದಲಾದ ಸನ್ನಿವೇಶದಲ್ಲಿ ಉದಾರೀಕರಣ ಮತ್ತು ಖಾಸಗೀ­ಕರಣದ ಪ್ರಭಾವದಿಂದಾಗಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಅನು­ತ್ಪಾ­ದಕ­ಎಂದು ಪರಿಗಣಿಸಿ ನಿರ್ಲ­ಕ್ಷಿಸು­ತ್ತಿ­ರುವುದು ವಿಷಾದನೀಯ’ ಎಂದರು.

‘ಜೀವವಿರೋಧಿ ಗ್ಯಾಟ್‌ ಒಪ್ಪಂದದ ತರುವಾಯ ಸರ್ಕಾರಗಳ ಮನೋ­ಧರ್ಮ­ದೊಂದಿಗೆ ಶಿಕ್ಷಣದ ಪರಿ­ಭಾಷೆಯೇ ಬದಲಾಗಿದೆ. ಇಂದು ಶಿಕ್ಷಣ ಕ್ಷೇತ್ರವನ್ನು ಲಾಭದಾಯಕ ಉದ್ಯಮ­ವೆಂದು, ಶಿಕ್ಷಕರನ್ನು ಕೆಲಸಗಾರ­ರೆಂದು, ವಿದ್ಯಾರ್ಥಿಗಳನ್ನು ಗಿರಾಕಿಗಳೆಂದು ಭಾವಿಸ­ಲಾಗುತ್ತಿದ್ದು, ಇದರ ಲಾಭ­ವನ್ನು ಖಾಸಗಿ ಬಂಡವಾಳ­ಶಾಹಿಗಳು ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವ­ರಾಜ ಹೊರಟ್ಟಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾ­ಗಲೆಲ್ಲ ಶಿಕ್ಷಕರ ತಲೆ ಮೇಲೆ ಇಂತಹ ತೂಗುಕತ್ತಿ ಇರಿಸುತ್ತದೆ. ಅನ್ನ­ಭಾಗ್ಯ, ಸಾಲಮನ್ನಾ ಮೊದಲಾದ ಯೋಜನೆ­ಗಳಿಗೆ ಸಾವಿರಾರು ಕೋಟಿ ನೀಡುವ ಸರ್ಕಾರ, ಶಿಕ್ಷಕರ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದೆ’ ಎಂದು ಹೇಳಿದರು.

‘ನಾವು 14 ಜನ ಪರಿಷತ್‍ ಸದಸ್ಯರು ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.  ಆದಾಗ್ಯೂ, ಸರ್ಕಾರ ಮೊಂಡುತನ ತೋರಿದರೆ ಶಿಕ್ಷಕರು ಶಾಲೆ, ಕಾಲೇಜುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಇಳಿಯಬೇಕು’ ಎಂದು ಕರೆ ನೀಡಿದರು.

‘ಶಿಕ್ಷಕ ಸಂಘಟನೆಗಳು ರೂಪುರೇಷೆ ತಯಾ­­ರಿಸಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದಾಗ  ಮಾತ್ರ ಸರ್ಕಾರ ಮಣಿಯುತ್ತದೆ.  ನಿಮ್ಮ ಹೋರಾ­ಟಕ್ಕೆ ಸದಾ ಬೆಂಗಾವಲಾಗಿ ನಾವಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿ­ತಿಬ್ಬೇ­ಗೌಡ, ಕ್ಯಾಪ್ಟನ್‍ ಗಣೇಶ್ ಕಾರ್ಣಿಕ್, ಅರುಣ ಶಹಾಪುರ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಮಹಾಂತೇಶ ಕೌಜಲಗಿ, ಪ್ರೊ.ಎಸ್.­ವಿ.­ಸಂಕನೂರ, ಆರ್‍.­ಚೌಡ­ರೆಡ್ಡಿ, ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಎಚ್.­ಮುರಿ­ಗೇಂದ್ರಪ್ಪ, ಪ್ರಧಾನ ಕಾರ್ಯ­ದರ್ಶಿ ಪ್ರೊ.ಕೆ.ಎಂ.ನಾಗರಾಜ್. ಸಂಚಾಲಕರಾದ ಡಾ.ಎ.ಎಂ.ನರಹರಿ, ಡಾ.ಬಿ.ಜಿ.ಭಾಸ್ಕರ್, ಡಾ.ಕೆ.ಜಿ. ಹಾಲಸ್ವಾಮಿ ಮತ್ತು ಡಿ.ಟಿ.ಗೋಪಾಲ್ ರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT