ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಹಣಕಾಸು ವ್ಯವಹಾರ ನಿಯಂತ್ರಿಸಿ

ರೈತರ ಆತ್ಮಹತ್ಯೆ ತಡೆ: ಪೂರ್ವಭಾವಿ ಸಭೆ
Last Updated 25 ಜುಲೈ 2015, 20:26 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿರುವ ಅಧಿಕ ಬಡ್ಡಿಯ ಲೇವಾದೇವಿ, ಗಿರವಿ ವ್ಯವಹಾರಗಳು ಸೇರಿದಂತೆ ಅನಧಿಕೃತವಾಗಿ ನಡೆಯುತ್ತಿರುವ ಹಣಕಾಸು ವ್ಯವಹಾರಗಳನ್ನು ತುರ್ತಾಗಿ ನಿಯಂತ್ರಿಸಬೇಕು.

ಬೆಂಗಳೂರು ನಗರ ಜಿಲ್ಲಾಡಳಿತ ನೇತೃತ್ವದಲ್ಲಿ ನಗರದ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಶನಿವಾರ ಆಯೋಜಿಸಿದ್ದ ರೈತರ ಆತ್ಮಹತ್ಯೆ ತಡೆಗಾಗಿ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ ಅಭಿಪ್ರಾಯವಿದು.

ಸಭೆಯಲ್ಲಿ ಮಾತನಾಡಿದ ಸಹಕಾರಿ ಸಂಘಗಳ ಬೆಂಗಳೂರು ವಿಭಾಗದ ಜಂಟಿ ನಿಬಂಧಕ ಡಿ.ಪಾಂಡುರಂಗ ಗರಗ್‌, ‘ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಇರುವ ಅಂಗಡಿ ದಲ್ಲಾಳಿಗಳ ಕಿರುಕುಳವೇ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ. ಆದ್ದರಿಂದ, ಈ ದಲ್ಲಾಳಿಗಳನ್ನು ನಿಯಂತ್ರಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಬೆಂಗಳೂರು ನಗರ ಜಿಲ್ಲೆಯಲ್ಲಿ 5361 ಅಧಿಕೃತ ಲೇವಾದೇವಿಗಾರರರಿದ್ದಾರೆ. ಅವರಲ್ಲಿ ಕೆಲವರು ಸಾಲಗಾರರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರಬಹುದು. ಅಧಿಕ ಬಡ್ಡಿ ನೀಡುವವರೇ ದೂರು ನೀಡಲು ಮುಂದೆ ಬರದಿದ್ದರೆ ಅನಧಿಕೃತ ಹಣಕಾಸು ವ್ಯವಹಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತದೆ’ ಎಂದು ತಿಳಿಸಿದರು.

ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ವ್ಯವಸ್ಥಾಪಕ ಎಚ್.ಬಾಲಶೇಖರ್‌ ಮಾತನಾಡಿ, ‘ಹಳ್ಳಿಗಳಲ್ಲಿ ಪರವಾನಗಿ ಪಡೆಯದ ಲೇವಾದೇವಿ, ಗಿರವಿ ಮತ್ತು ಹಣಕಾಸು ವ್ಯವಹಾರಗಳು ನಡೆಯುತ್ತಿವೆ. ಅನಧಿಕೃತ ಹಣಕಾಸು ವ್ಯವಹಾರ ಮಾಡುವವರಿಗೆ ಐದು ಸಾವಿರ ದಂಡ ವಿಧಿಸುವ ಅಧಿಕಾರ ಮಾತ್ರ ಕಾಯ್ದೆಯಲ್ಲಿದೆ. ಆದ್ದರಿಂದ, ಇಂತಹ ವ್ಯವಹಾರಗಳನ್ನು ಪೊಲೀಸ್‌ ಇಲಾಖೆ ನಿಯಂತ್ರಿಸಬೇಕಿದೆ’ ಎಂದರು.

‘ಭದ್ರತೆ ನೀಡುವ ಸಾಲಕ್ಕೆ ವಾರ್ಷಿಕ ಶೇ 14 ಮತ್ತು ಭದ್ರತೆ ರಹಿತ ಸಾಲಕ್ಕೆ ಶೇ 16 ರಷ್ಟು ಬಡ್ಡಿ ವಿಧಿಸಬಹುದು. ಇದಕ್ಕಿಂತಲೂ ಅಧಿಕ ಬಡ್ಡಿ ವಸೂಲಿ ಮಾಡುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮಕೈಗೊಳ್ಳುವ ಕಾರ್ಯವನ್ನು ಪೊಲೀಸ್‌ ಇಲಾಖೆ ಆರಂಭಿಸಬೇಕು’ ಎಂದರು.

ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಚ್‌.ಸಿ.ಜೋಶಿ ಮಾತನಾಡಿ, ‘ರೈತರಲ್ಲಿ ಹಣಕಾಸು ವ್ಯವಹಾರ ಕುರಿತು ಜಾಗೃತಿ ಮೂಡಿಸಬೇಕಿದೆ. ’ ಎಂದು  ಹೇಳಿದರು.
*
ರೈತರಲ್ಲಿ ಧೈರ್ಯ ತುಂಬಲು ಕೃಷಿ, ತೋಟಗಾರಿಕೆ, ಕಂದಾಯ, ಪೊಲೀಸ್‌ ಇಲಾಖೆಗಳು  ಸಹಕಾರದಿಂದ ಕೆಲಸ ಮಾಡಬೇಕಿದೆ.
– ವೆಂಕಟಾಚಲಪತಿ
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT