ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಪೇಕ್ಷಿತ ಬೆಳವಣಿಗೆ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆರ್ಥಿಕ ಪ್ರಗತಿಗೆ ಪೂರಕವಾದ ಚರ್ಚೆ, ಸಮಾಲೋಚನೆಗಳನ್ನು ನಡೆಸು­ವುದು   ಜಿ–20 ಶೃಂಗಸಭೆಯ ಮೂಲ ಉದ್ದೇಶ. ಆದರೆ ಆಸ್ಟ್ರೇಲಿ­ಯಾದ ಬ್ರಿಸ್ಬೇನ್‌ನಲ್ಲಿ   ನಡೆದ ಶೃಂಗಸಭೆ, ರಷ್ಯಾ ಅಧ್ಯಕ್ಷರ ವಿರುದ್ಧ ಪಾಶ್ಚಿ­ಮಾತ್ಯ ನಾಯಕರು ಆಕ್ರೋಶ ವ್ಯಕ್ತಪಡಿಸುವುದಕ್ಕೆ ವೇದಿಕೆಯಾಗಿದ್ದು ದುರ­ದೃಷ್ಟಕರ. ಭದ್ರತೆ, ಭೌಗೋಳಿಕ ಅಥವಾ ರಾಜಕೀಯ ಸಂಗತಿಗಳ ಚರ್ಚೆಗೆ ಇಲ್ಲಿ ಆಸ್ಪದವಿಲ್ಲ.

ಆದರೆ ಪಾಶ್ಚಿಮಾತ್ಯ ನಾಯಕರು ಮಾತ್ರ, ಉಕ್ರೇನ್‌ ವಿವಾದ­ದಲ್ಲಿ ರಷ್ಯಾದ ಪಾತ್ರವನ್ನು ಖಂಡಿಸಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಹಣಿಯುವುದನ್ನೇ ಗುರಿಯಾಗಿ ಇಟ್ಟುಕೊಂಡು ಬಂದವರಂತೆ ವರ್ತಿ­ಸಿದರು. ಅಧಿಕೃತ ಕಾರ್ಯಸೂಚಿಯಲ್ಲಿ ಉಕ್ರೇನ್‌ನ ಪ್ರಸ್ತಾಪವೇ ಇರ­ದಿದ್ದರೂ ಶೃಂಗಸಭೆಯುದ್ದಕ್ಕೂ ಪುಟಿನ್‌ ವಿರುದ್ಧ ಅಬ್ಬರಿಸಿದರು. ಯಾರೊ­ಬ್ಬರೂ ಕನಿಷ್ಠ ರಾಜತಾಂತ್ರಿಕ ವಿವೇಚನೆಯನ್ನೂ ತೋರಲಿಲ್ಲ.

ಆತಿಥೇಯ ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೊಟ್‌ ಅವರಂತೂ ಪುಟಿನ್ ವಿರುದ್ಧ ಬಳಸಿದ ಭಾಷೆ  ಅವರ ಸ್ಥಾನಮಾನಕ್ಕೆ  ತಕ್ಕುದಾಗಿರಲಿಲ್ಲ. ನಂತರ, ರಷ್ಯಾ ಅಧ್ಯಕ್ಷ­ರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಕಿರಿಯ ಸಚಿವ­ರೊಬ್ಬರನ್ನು ಪ್ರಧಾನಿ ಕಳಿಸಿದ್ದರು. ಹಾಗೆಯೇ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್‌, ‘ಉಕ್ರೇನ್‌ ಬಿಟ್ಟು ತೊಲಗಿ’ ಎಂದು ಪುಟಿನ್‌ಗೆ ಹೇಳಿದ್ದರು.

ಇತರ ನಾಯಕರ ವರ್ತನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಉಕ್ರೇನ್ ಸಂಘರ್ಷ, ರಷ್ಯಾದಲ್ಲಿ ಕ್ರಿಮಿಯಾ ವಿಲೀನ ಇತ್ಯಾದಿ ವಿಚಾರಗಳಲ್ಲಿ ಪುಟಿನ್ ಅವರು ಆಕ್ರಮಣಕಾರಿ ಧೋರಣೆ ತೋರಿರಬಹುದು. ಆದರೆ ಆ ವಿಚಾರಗಳ ಚರ್ಚೆಗೆ  ಜಿ–20 ಶೃಂಗಸಭೆ  ವೇದಿಕೆಯಲ್ಲ ಎಂಬುದನ್ನು ಈ ನಾಯಕರು ಅರಿತಿ­ರಬೇಕಿತ್ತು.

ಇಷ್ಟಾದರೂ ವಿಶ್ವ ವೇದಿಕೆಯಲ್ಲಿ ಪುಟಿನ್‌ ಅವರನ್ನು ಏಕಾಂಗಿ­ಯನ್ನಾಗಿ ಮಾಡಬೇಕೆಂಬ ಈ ನಾಯಕರ ಉದ್ದೇಶಕ್ಕೆ ಸಂಪೂರ್ಣ ಯಶ ಸಿಗಲಿಲ್ಲ. ಭಾರತ, ಚೀನಾ, ಬ್ರೆಜಿಲ್‌ ಒಳಗೊಂಡ ಇತರ ಹಲವು ರಾಷ್ಟ್ರ­ಗಳು ಆರ್ಥಿಕ ಕಾರ್ಯಸೂಚಿಯತ್ತ ಗಮನ ಕೇಂದ್ರೀಕರಿಸಿ ಪ್ರಬುದ್ಧತೆ ಮೆರೆದವು.  

ಶೃಂಗಸಭೆಯಿಂದ ಪುಟಿನ್‌ ದಿಢೀರನೆ ಹೊರನಡೆದದ್ದು ಪಶ್ಚಿಮದ ಮಾಧ್ಯಮ­ಗಳಿಗೆ ವಿನೋದದ ಸಂಗತಿಯಾಯಿತು. ಆದರೆ ಯಾರಿಗೂ ಒಳ್ಳೆ­ಯದು ಮಾಡದ ಇಂತಹ ಬೆಳವಣಿಗೆ ಸರಿಯಲ್ಲ. ಉಕ್ರೇನ್‌ ವಿಚಾರದಲ್ಲಿ ರಷ್ಯಾ ತನ್ನ  ನಿಲುವನ್ನು ಮತ್ತಷ್ಟು  ಬಿಗಿಗೊಳಿಸಲು ಇದು ಪ್ರಚೋದನೆ ನೀಡಿದೆ.

ಶೃಂಗಸಭೆಯಲ್ಲಿ ಎದೆಗುಂದದ ಪುಟಿನ್‌ ತಾವೂ ಆಕ್ರಮಣ­ಕಾರಿ­ಯಾಗಿಯೇ ಪ್ರತಿಕ್ರಿಯಿಸಿದ್ದು ತಾಯ್ನಾಡಿನಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈ­ಗೊಳ್ಳಲು ಅವರಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ.

ಪುಟಿನ್‌ಗೆ ತಕ್ಕ ಶಾಸ್ತಿ ಮಾಡಿ­ದ್ದಾಗಿ ಪಾಶ್ಚಿಮಾತ್ಯ ನಾಯಕರು ಈಗ ಬೀಗುತ್ತಿದ್ದಾರೆ. ಆದರೆ ಅವರದು ಮೂರ್ಖತನದ ನಡವಳಿಕೆಯಲ್ಲದೆ ಬೇರೇನೂ ಅಲ್ಲ. ಇದರ ಪರಿಣಾಮ ಪಶ್ಚಿಮದ ದೇಶಗಳು ಮತ್ತು ರಷ್ಯಾದ ನಡುವೆ ಹೊಸ ಶೀತಲ ಸಮರಕ್ಕೆ ನಾಂದಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT