ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ 3,000 ಎಕರೆ ಭೂಮಿ ಮಂಜೂರು

ಬಗರ್‌ ಹುಕುಂ ಯೋಜನೆಯಲ್ಲಿ ಅಕ್ರಮ: ಆಗಿನ ಶಾಸಕರತ್ತಲೂ ಬೆಟ್ಟು
Last Updated 1 ಆಗಸ್ಟ್ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ 3,000 ಎಕರೆಯಷ್ಟು ಸರ್ಕಾರಿ ಭೂಮಿ ಬಗರ್‌ ಹುಕುಂ ಯೋಜನೆ ಮೂಲಕ ಅನರ್ಹ ಫಲಾನುಭವಿಗಳ ಪಾಲಾ­ಗಿದ್ದು, ಸದ್ಯ ಈ ಪ್ರಕರಣಗಳನ್ನು ಸ್ವತಃ ಹೈಕೋರ್ಟ್‌ ನಿರ್ವಹಿಸುತ್ತಿದೆ’ ಎಂದು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಎಡಿಜಿಪಿ ಆರ್‌.ಪಿ. ಶರ್ಮಾ ತಿಳಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತ­ನಾಡಿದರು. ಶರ್ಮಾ ಅವರನ್ನು ಬಿಎಂಟಿ­ಎಫ್‌ನಿಂದ ರೈಲ್ವೆ ಪೊಲೀಸ್‌ಗೆ ವರ್ಗಮಾಡಿ ಸರ್ಕಾರ ಗುರುವಾರವಷ್ಟೇ ಆದೇಶ ಹೊರಡಿಸಿದೆ. 

‘1999ರಿಂದ 2003ರ ಅವಧಿಯಲ್ಲಿ ಬಗರ್‌ ಹುಕುಂ ಯೋಜನೆ ಮೂಲಕ ಸಾವಿರಾರು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅದ­ರಲ್ಲಿ ಅನರ್ಹ ಫಲಾನುಭವಿಗಳೂ ನುಸುಳಿದ್ದಾರೆ. ಬೆಂಗಳೂರು ದಕ್ಷಿಣ ವಲಯದ ಉತ್ತರಹಳ್ಳಿ ಭಾಗ­ದಲ್ಲಿ ಹೆಚ್ಚಿನ ಅಕ್ರಮ­ಗಳು ನಡೆದಿವೆ’ ಎಂದರು.

‘ಭೂಮಿ ಮಂಜೂರಾತಿ ಸಮಿತಿಗೆ ವಿವಿಧ ಅವಧಿ­ಯಲ್ಲಿ ಅಸಿಸ್ಟೆಂಟ್‌ ಕಮಿಷ­ನರ್‌, ತಹಶೀಲ್ದಾರ್‌ ಹಾಗೂ ಸ್ಥಳೀಯ ಶಾಸ­ಕರು ಅಧ್ಯಕ್ಷರಾಗಿದ್ದರು. ಆದರೆ, ಹೆಚ್ಚಿನ ಅಕ್ರಮ­ಗಳು ಆಗಿನ ಶಾಸಕರು ಅಧ್ಯಕ್ಷ­ರಾಗಿದ್ದ ಅವಧಿ­ಯಲ್ಲೇ ನಡೆದಿವೆ’ ಎಂದು ಸ್ಪಷ್ಟ­ಪಡಿಸಿದರು.

‘ಬಗರ್‌ ಹುಕುಂ ಯೋಜ­­ನೆ­ಯಲ್ಲಿ ನಡೆದ ಅಕ್ರಮ ಕುರಿತಂತೆ ಬಿಎಂಟಿ­ಎಫ್‌ಗೆ 2012ರಲ್ಲಿ ಮೊದಲ ಪ್ರಕರಣ ದಾಖಲಾ­ಯಿತು. ಆ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆ­ಯಾಜ್ಞೆ ನೀಡಿತು’ ಎಂದು ಅವರು ವಿವರಿಸಿದರು. ‘ಆ ಪ್ರಕರಣ ಮಾಜಿ ಮೇಯರ್‌ ಡಿ. ವೆಂಕಟೇಶ­ಮೂರ್ತಿ ಅವರದೇ’ ಎಂಬ ಪ್ರಶ್ನೆಗೆ ಶರ್ಮಾ ಅವರು ನೇರ ಉತ್ತರ ನೀಡಲಿಲ್ಲ. ‘ನಾನು ಹೌದು ಎನ್ನ­ಲಾರೆ, ನಿರಾಕರ­ಣೆ­ಯನ್ನೂ ಮಾಡಲಾರೆ’ ಎಂದು ಹೇಳಿದರು.

‘ಬಗರ್‌ ಹುಕುಂ ಯೋಜನೆ ಮೂಲಕ ಅನರ್ಹ ಫಲಾನುಭವಿಗಳಿಗೆ ಹಂಚಿಕೆಯಾದ ಭೂಮಿಯನ್ನು ಬಿಎಂಟಿಎಫ್‌ ಗುರುತಿಸಿದೆ. ಅಕ್ರಮದ ಲಾಭವನ್ನು ಎಷ್ಟು ಜನ ಫಲಾನುಭವಿಗಳು ಪಡೆದಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಈ ಯೋಜನೆಯಲ್ಲಿ ಒಬ್ಬರಿಗೆ ಗರಿಷ್ಠ 2 ಹೆಕ್ಟೇರ್‌ ಭೂಮಿಯನ್ನು ನೀಡ­ಲಷ್ಟೇ ಸಾಧ್ಯವಿದೆ’ ಎಂದು ಮಾಹಿತಿ ನೀಡಿದರು.

‘ಬಿಎಂಟಿಎಫ್‌ನಿಂದ ಕಳೆದ ವರ್ಷ 135 ಪ್ರಕ­ರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ವರ್ಷ ಇದುವರೆಗೆ 63 ಪ್ರಕರಣಗಳು ಮಾತ್ರ ದಾಖಲಾ­ಗಿವೆ. ಖಾಸಗಿ ಕಟ್ಟಡಗಳ ಅಕ್ರಮಕ್ಕೆ ಸಂಬಂಧಿಸಿ­ದಂತೆ ದೂರು ದಾಖಲು ಮಾಡಿಕೊಳ್ಳದಂತೆ ಹೈಕೋರ್ಟ್‌ 2013ರ ಅಕ್ಟೋಬರ್‌ 10ರಂದು ಸೂಚನೆ ನೀಡಿದೆ. ಅಂತಹ ದೂರುಗಳನ್ನು ಸ್ವೀಕರಿ­ಸದ ಕಾರಣ ಪ್ರಕರಣಗಳ ಸಂಖ್ಯೆ ಇಳಿಮುಖವಾ­ಗಿದೆ’ ಎಂದು ಹೇಳಿದರು.

‘ಒತ್ತುವರಿಯಾದ ಸರ್ಕಾರಿ ಭೂಮಿಗೆ ಸಂಬಂಧಿ­ಸಿ­ದಂತೆ 2013ರಲ್ಲಿ 1,199 ಅರ್ಜಿಗಳು ಬಂದಿ­ದ್ದವು. ರೂ. 80.69 ಕೋಟಿ ಮೌಲ್ಯದ 2 ಎಕರೆ, 20 ಗುಂಟೆ ಭೂಮಿಯನ್ನು ಅತಿಕ್ರಮಣ­ದಿಂದ ಮುಕ್ತಗೊಳಿಸಲಾಗಿದೆ’ ಎಂದು ವಿವರಿಸಿದರು.

ಶೆಟ್ಟರ್‌ ಪ್ರಕರಣ: ‘ಸ್ವಾತಂತ್ರ್ಯ ಹೋರಾಟಗಾರ­ರೊಬ್ಬರ ಪುತ್ರನಿಗೆ ನಿಯಮ ಉಲ್ಲಂಘನೆ ಮಾಡಿ ಭೂಮಿ ಮಂಜೂರು ಮಾಡಿದ ಆರೋಪದ ಮೇಲೆ ಗುರುವಾರ ಪ್ರಕರಣವೊಂದು ದಾಖಲಾ­ಗಿದ್ದು ನಿಜ. ತನಿಖಾ ಸಂಸ್ಥೆಯ ಮುಖ್ಯಸ್ಥನಾಗಿ ಯಾರ ವಿರುದ್ಧ ದೂರು ದಾಖಲಾಗಿದೆ ಎಂಬ ವಿವರ ಬಹಿರಂಗ ಮಾಡುವುದಿಲ್ಲ. ಪ್ರಥಮ ಮಾಹಿತಿ ವರದಿಯು (ಎಫ್‌ಐಆರ್‌) ಒಂದು ಸಾರ್ವ­ಜನಿಕ ದಾಖಲೆಯಾಗಿದ್ದು ಯಾರು ಬೇಕಾ­ದರೂ ಅದನ್ನು ನೋಡುವ ಹಕ್ಕಿದೆ’ ಎಂದು ಶರ್ಮಾ ಹೇಳಿದರು.

‘ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿ­ಸ­ಲಾ­ಗುವುದೇ’ ಎಂಬ ಪ್ರಶ್ನೆಗೆ, ‘ನಿಮಗೆ ತುಂಬಾ ಆತುರ. ಸಿಕ್ಕ ಮಾಹಿತಿ ವಿಶ್ಲೇಷಣೆಗೆ 24 ಗಂಟೆಗಳ ಅವಕಾಶ ಇದೆ. ಬಳಿಕ ತನಿಖೆಗೆ ಆರು ತಿಂಗಳ ಸಮಯ ಇದೆ. ವಿಶೇಷ ಪ್ರಕರಣವಾದರೆ ಈ ಅವಧಿ­ಯನ್ನು ಇನ್ನೂ ವಿಸ್ತರಣೆ ಮಾಡಲು ಸಾಧ್ಯ­ವಿದೆ. ತನಿಖೆಯಲ್ಲಿ ಸೂಕ್ತ ಪುರಾವೆಗಳು ಸಿಕ್ಕರೆ ಮಿಕ್ಕ ಪ್ರಕ್ರಿಯೆಗಳು ನಡೆಯಲಿವೆ’ ಎಂದು ಉತ್ತರಿಸಿದರು.

‘ಬಿಎಂಟಿಎಫ್‌ಗೆ ಮಂಜೂರಾದ ಹುದ್ದೆಗಳು 76. ಆದರೆ, ಸದ್ಯ 49 ಸಿಬ್ಬಂದಿ ಬಲ ಮಾತ್ರ ಇದೆ. ತನಿಖಾ ಕೆಲಸ ನಿಧಾನಗತಿಯಲ್ಲಿ ಸಾಗಲು ಸಿಬ್ಬಂದಿ ಕೊರತೆಯೂ ಕಾರಣ. ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಪ್ರಕರಣಗಳ ತನಿಖೆ ಚುರುಕುಗೊಳಿಸಲು ಸರ್ವೆ ಕಾರ್ಯ ಅಡ್ಡಿಯಾಗಿದೆ. ಸರ್ವೇಯರ್‌ಗಳ ಕೊರತೆಯಿಂದ ಸಮೀಕ್ಷಾ ಕಾರ್ಯಗಳು ಬಲು ನಿಧಾನವಾಗಿ ಸಾಗಿವೆ’ ಎಂದು ಹೇಳಿದರು.

‘ಬಿಎಂಟಿಎಫ್‌ನಲ್ಲಿ ನನ್ನ ಕಾರ್ಯ ನಿರ್ವಹಣೆ ಅರೆತೃಪ್ತಿಯಿಂದ ಕೂಡಿತ್ತು. ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿ­ಸಲು ಆಗದ ಅತೃಪ್ತಿಯೂ ಇದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಉಳಿಸಿದ ತೃಪ್ತಿಯೂ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT