ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಯಮಿತ ಋತುಸ್ರಾವಕ್ಕೆ ಭಯಬೇಡ

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘35 ವರ್ಷದ ಕಾಂಚನಾ ಏನಿದು ಮೇಡಂ 2-3 ತಿಂಗಳಿಗೊಮ್ಮೆ ಮುಟ್ಟಾಗಿ ತಿಂಗಳುಗಟ್ಟಲೇ ಹೋಗುತ್ತಿರುತ್ತಲ್ಲಾ? ಬಟ್ಟೆ ಬದಲಾಯಿಸಿ ಬೇಜಾರಾಗಿಬಿಟ್ಟಿದೆ ಗರ್ಭಕೋಶನೇ ತೆಗೆದು ಬಿಡಿ ಮೇಡಂ.’

‘ಇದೇನು ಡಾಕ್ಟ್ರೇ, ಪ್ರತಿ ತಿಂಗಳು ಇಷ್ಟೊಂದು ರಕ್ತ, ಇಷ್ಟೊಂದು ದಿನ, ಹೋಗುತ್ತಲ್ಲಾ ಮೈಯಲ್ಲೇ ರಕ್ತ ಇಲ್ಲ ಅಂತಿರೀ ಇಷ್ಟೊಂದು ರಕ್ತ ಎಲ್ಲಿಂದ ಬರುತ್ತೇ’ ಎಂಬುದು ಸುಮಾಳ ಅಳಲು ಹೀಗೆ ಸ್ತ್ರೀರೋಗ ತಜ್ಞರಿಗೆ ಹೊರರೋಗಿ ವಿಭಾಗದಲ್ಲಿ ಶೇಕಡಾ 25-30ಕ್ಕೂ ಹೆಚ್ಚು ಜನ ಋತುಚಕ್ರದ ತೊಂದರೆಯಿಂದ ಅದೂ ಅನಿಯಮಿತ ಸ್ರಾವದಿಂದ ಬಳಲುತ್ತಿರುವವರು ಬರುತ್ತಾರೆ ಇದನ್ನೇ ಅಸಮರ್ಪಕ ಋತುಸ್ರಾವ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಡಿ.ಯು.ಬಿ ಎನ್ನುತ್ತಾರೆ (ಡಿಸ್‌ಫಂಕ್ಷನಲ್ ಯುಟೆರೈನ್ ಬ್ಲೀಡಿಂಗ್)

ಡಿ.ಯು.ಬಿ ಎಂದರೇನು?
ಮಹಿಳೆಗೆ ಋತುಚಕ್ರದಲ್ಲಿ ಏರುಪೇರಾಗಿ ಸಮರ್ಪಕವಲ್ಲದ ಸ್ರಾವವಾಗುತ್ತಿದ್ದು ಆದರೆ ಅವರ ಜನನಾಂಗದಲ್ಲಿ ಯಾವುದೇ ರೀತಿಯ ಗಡ್ಡೆಗಳಿಲ್ಲದೇ ಇದ್ದರೆ (ಉದಾ: ಫೈಬ್ರಾಯ್ಡ್ ಅಥವಾ ನಾರುಗಡ್ಡೆ, ಕ್ಯಾನ್ಸರ್ ಗಡ್ಡೆಗಳಿಲ್ಲದೇ ಇರುವುದು) ಮತ್ತು ಗರ್ಭಕೋಶಕ್ಕೆ ನಂಜಾಗದೇ ಇದ್ದರೆ ಮತ್ತು ಗರ್ಭಿಣಿಯ ಕಾರಣಗಳಲ್ಲದೇ ಅಂದರೆ ಇವು ಮೂರು ತೊಂದರೆ ಇಲ್ಲದೇ ಋತುಚಕ್ರದ ಅಸಮರ್ಪಕತೆ ಇದ್ದಾಗ ಅದನ್ನೇ ಡಿ.ಯು.ಬಿ ಎನ್ನುತ್ತೇವೆ. (ಅಸಮರ್ಪಕ ಋತುಸ್ರಾವ) ಹೀಗೆ ಡಿ.ಯು.ಬಿ ಎಂದು ವೈದ್ಯರು ರೋಗಿಗಳಿಗೆ ತಿಳಿಸಬೇಕಾದರೆ ಅಥವಾ ರೋಗಿಗಳಿಗೆ ಮನದಟ್ಟಾಗಬೇಕಾದರೆ ಅದಕ್ಕೂ ಮೊದಲು ಯೋನಿ ಪರೀಕ್ಷೆ, ಮೂತ್ರ ಪರೀಕ್ಷೆ ಕೆಲವು ಅವಶ್ಯಕ ರಕ್ತಪರೀಕ್ಷೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅವಶ್ಯಬಿದ್ದರೆ ಉದರ ದರ್ಶಕ, ಗರ್ಭದರ್ಶಕ ಇನ್ನಿತರ ಪರೀಕ್ಷೆಗಳ ಮೂಲಕ ಗರ್ಭಕೋಶದಲ್ಲಿ ಯಾವುದೇ ನಾರುಗಡ್ಡೆ, ಅಂಡಾಶಯದ ಗಡ್ಡೆಗಳು ನಂಜು ಗರ್ಭಧಾರಣೆಯಾಗಿಲ್ಲದಿರುವ ಬಗ್ಗೆ ಇವೆಲ್ಲ ಇಲ್ಲವೆಂದು ಖಾತ್ರಿ ಮಾಡಿಕೊಂಡು ನಂತರ ಡಿ.ಯು.ಬಿ ಎನ್ನಬೇಕಾಗುತ್ತದೆ ಮತ್ತು ಮುಟ್ಟಿನಲ್ಲಿ ಹೆಚ್ಚು ರಕ್ತಸ್ರಾವವನ್ನುಂಟು ಮಾಡುವ ಇತರ ಕಾರಣಗಳಾದ ಥೈರಾಯ್ಡ್ ಗ್ರಂಥಿ ತೊಂದರೆ ಯಕೃತ್ತಿನ ತೊಂದರೆ, ರಕ್ತ ಹೆಪ್ಪುಗಟ್ಟುವಿಕೆಯಲ್ಲಿನ ತೊಂದರೆ ಇವು ಯಾವುದೂ ಇಲ್ಲವೆಂದು ಪತ್ತೆ ಮಾಡಿಕೊಂಡ ಮೇಲೆ ಡಿ.ಯು.ಬಿ ಎಂದು ತಿಳಿಯಬೇಕಾಗುತ್ತದೆ.

ಈ ಡಿ.ಯು.ಬಿಯು ಬೇರೆ ಬೇರೆ ವಿಧದಲ್ಲಿ ಕಾಣಿಸಿಕೊಳ್ಳಬಹುದು. ಅಂದರೆ ಹದಿಹರೆಯದಲ್ಲಿ ಹಾಗೂ ಋತುಬಂಧದ ಸಮಯದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಅಸಮರ್ಪಕ ಹಾರ್ಮೋನು ಮಟ್ಟದಿಂದ ಅಂಡಾಣು ಬಿಡುಗಡೆಯಾಗದೆ ಈಸ್ಟ್ರೋಜನ್ ಮಟ್ಟಕ್ಕೆ ತಕ್ಕದಾದ ಪ್ರೊಜೆಸ್ಟ್ರಾನ್ ಹಾರ್ಮೋನು ರಕ್ತದಲ್ಲಿರದೇ ಗರ್ಭಕೋಶದ ಒಳಾವರಣ ಅಥವಾ ಲೊಳೆಪದರ (ಎಂಡೊಮೆಟ್ರಿಯಮ್) ಹೆಚ್ಚು ಹೆಚ್ಚು ಬೆಳೆದು 2-3 ತಿಂಗಳಾದ ಮೇಲೆ ಒಳಾವರಣ ಕಳಚಿ ರಕ್ತಸ್ರಾವವಾಗಲು ಪ್ರಾರಂಭವಾಗಿ ಹಲವು ದಿನಗಳ ಕಾಲ ರಕ್ತಸ್ರಾವ ಆಗುತ್ತದೆ. ಇದರಿಂದ ಮಹಿಳೆಯರು ರೋಸಿ ಹೋಗಿ ಗರ್ಭಕೋಶವೇ ನಮಗಿನ್ನು ಬೇಡ ಎನ್ನುವ ನಿರ್ಧಾರಕ್ಕೂ ಬಂದು ಬಿಡುತ್ತಾರೆ. ಅತೀವ ರಕ್ತಹೀನತೆಯಿಂದಲೂ ಬಳಲುತ್ತಾರೆ. ಆದರೆ ಈಗ ಹಲವು ವೈದ್ಯಕೀಯ ಚಿಕಿತ್ಸಾ ವಿಧಾನಗಳಿಂದ ಗರ್ಭಕೋಶ ತೆಗೆಯದೇ ಈ ಡಿ.ಯು.ಬಿಯನ್ನು ಬಗೆಹರಿಸಿಕೊಳ್ಳಬಹುದು.

ಹಾಗಾದರೆ ಅವು ಯಾವ ವಿಧಾನಗಳು?
ಮೊದಲನೆಯದಾಗಿ ಗರ್ಭಕೋಶದ ಒಳಾವರಣ ಹೆಚ್ಚು ಬೆಳೆದಾಗ ಅದನ್ನು ಡಿ.ಸಿ ಮೂಲಕ ಸಂಪೂರ್ಣವಾಗಿ ಹೊರತೆಗೆದು ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷೆಗೆ ಕಳಿಸಿದರೆ ಇದರಿಂದ ಕಾಯಿಲೆ ಪತ್ತೆ ಮಾಡಲು ಸಾಧ್ಯ ಆಗುತ್ತದೆ ಹಾಗೂ ಚಿಕಿತ್ಸೆಯೂ ಆಗುತ್ತದೆ. ಎಷ್ಟೋ ಬಾರಿ ಕೇವಲ ಡಿಸಿಯಿಂದಲೇ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.

ಹಿಸ್ಟರೋಸ್ಕೋಪಿ ಮೂಲಕ ಗರ್ಭಕೋಶದ ಪದರವನ್ನು ಪೂರ್ಣವಾಗಿ ಹೊರ ತೆಗೆಯುವ ವಿಧಾನವು ಇದೆ.

ಇನ್ನೊಂದು ಬಲೂನ್ ಥೆರಪಿ ವಿಧಾನದಲ್ಲಿ ವಿಶೇಷ ಬಲೂನ್‌ನನ್ನು ಅರವಳಿಕೆ ಕೊಟ್ಟು ಗರ್ಭಾಶಯದೊಳಗೆ ತೂರಿಸಿ 85-87 ಡಿಗ್ರಿ ಉಷ್ಣತೆಯ ನೀರನ್ನು ತುಂಬಿ ಹಾಗೆಯೇ 7-8 ನಿಮಿಷ ಬಿಟ್ಟಾಗ ಗರ್ಭಕೋಶದ ಪೊರೆ ಮಂದಗೊಳ್ಳುತ್ತದೆ. ನಂತರ ರೋಗಿಯು ಮುಟ್ಟಾಗುವುದು ನಿಲ್ಲಬಹುದು ಇಲ್ಲವೇ ಕಡಿಮೆ ಆಗಬಹುದು. 6-8 ಗಂಟೆಗೆ ರೋಗಿ ಮನೆಗೆ ಹೊಗಬಹುದು.

ಹಿಸ್ಟರೋಸ್ಕೋಪಿಯ ಮೂಲಕ ಗರ್ಭಕೋಶದ ಪದರವನ್ನು ಪೂರ್ಣವಾಗಿ ಹೊರ ತೆಗೆಯುವ ವಿಧಾನವು ಹಾಗೂ ಬಲೂನು ಥೆರಪಿ ಸುರಕ್ಷಿತ ವಿಧಾನಗಳಾದರೂ ಎಲ್ಲರಿಗೂ, ಎಲ್ಲಾ ಸ್ಥಳಗಳಲ್ಲೂ ಸುಲಭವಾಗಿ ಕೈಗೆಟುಕುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲಿವೊನಾರ್ಜಸ್ಟಿರಾಲ್ ಐಯುಡಿ (LNG –IUD) ಎನ್ನುವ ಕೃತಕ ಪ್ರೊಜೆಸ್ಟ್ರಾನ್ ಹಾರ್ಮೋನನ್ನು ನಿಯಮಿತವಾಗಿ ಬಿಡುಗಡೆಗೊಳಿಸುವ ಗರ್ಭಾಶಯದೊಳಗೆ ಅಳವಡಿಸುವ ಕಾಪರ್‌ ಟಿ ಯಂತಹ ಸಾಧನವು ಭಾರತ ಸರ್ಕಾರದಿಂದ 2011 ರಿಂದ ಒಪ್ಪಿಗೆ ಪಡೆಯಲ್ಪಟ್ಟು ಹಲವು ವೈದ್ಯರು ಉಪಯೋಗಿಸುತ್ತಿದ್ದಾರೆ. ಹಳ್ಳಿ ಪಟ್ಟಣವೆಂಬ ಭೇದವಿಲ್ಲದೆ ಎಲ್ಲ ತಜ್ಞ ವ್ಯೆದ್ಯರು ಉಪಯೋಗಿಸಬಹುದಾದಂತಹ ಸಾಧನವಾಗಿದೆ.

ಅತ್ಯಂತ ಪರಿಣಾಮಕಾರಿಯಾಗಿದೆ. ಬೆಲೆಯೂ ಕಡಿಮೆ, ಬಡ ಹಾಗೂ ಮಧ್ಯಮ ವರ್ಗದವರರಿಗೂ ಕೈಗೆಟಕುವ ಬೆಲೆಗೆ ಈ ಚಿಕಿತ್ಸೆ ಪಡೆಯುವುದರಿಂದ ರಕ್ತಸ್ರಾವ ಕಡಿಮೆಯಾಗಿ ಮಹಿಳೆ ಗರ್ಭಕೋಶ ತೆಗೆಸುವ ನಿರ್ಧಾರ ಕೈಬಿಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಯಾವ ಸಂದರ್ಭದಲ್ಲಿ ಯಾರಿಗೆ ಹಾಕಬೇಕು ಎನ್ನುವುದನ್ನು ವೈದ್ಯರ ಕೆಲವು ಅವಶ್ಯ ಪೂರಕ ಪರೀಕ್ಷೆಗಳನ್ನು ಮಾಡಿ ನಿರ್ಧರಿಸುತ್ತಾರೆ. ಎಲ್ಲವೂ ವೈದ್ಯರ ಮೇಲ್ವಿಚಾರಣೆಯಲ್ಲೆ ಆಗಬೇಕು. ಮೂರು ವರ್ಷಗಳ ಅವಧಿಯಲ್ಲಿ ಎಷ್ಟೋ ಜನರಿಗೆ ಮುಟ್ಟೇ ನಿಂತು ಹೋಗಬಹುದು ಇಲ್ಲದೇ ಅತಿಕಡಿಮೆ ಆಗಲೂಬಹುದು. ಆದರೆ ಗರ್ಭಕೋಶ ತೆಗೆಸಿದಾಗ ಆಗುವ ಮೂಳೆಸೆವೆತ, ಹೆಚ್ಚುವ ಹೃದಯ ದೌರ್ಬಲ್ಯ, ಇವುಗಳ ಸಮಸ್ಯೆ ಇರುವುದಿಲ್ಲ.

ಡಿ.ಯು.ಬಿ ಸಮಸ್ಯೆಗೆ ಕೃತಕ ಪ್ರೋಜೆಸ್ಟ್ರಾನ್ ಮಾತ್ರೆಗಳನ್ನು ಚಿಕಿತ್ಸೆಗಾಗಿ ಕೊಟ್ಟರೆ ಎಷ್ಟೋ ಬಾರಿ ಪರಿಣಾಮಕಾರಿಯಾಗಬಹುದು. ಇನ್ನೊಂದು ತರಹದ ಒರ್ಮಿಲಾಕ್ಸಿಪೆನ್ ಎನ್ನುವ ಹಾರ್ಮೋನಲ್ಲದ ಮಾತ್ರೆಯಿಂದಲೂ ರಕ್ತಸ್ರಾವ ಹೆಚ್ಚಿನ ಸಂದರ್ಭಗಳಲ್ಲಿ ಕಡಿಮೆಯಾಗುತ್ತದೆ.

ಒಟ್ಟಿನಲ್ಲಿ ಡಿ.ಯು.ಬಿ  ತಿಳಿಯಲ್ಪಟ್ಟರೆ ಒಮ್ಮೆಲೆ ಬೇಸತ್ತು ಗರ್ಭಕೋಶ ತೆಗೆಸಲು ಮುಂದಾಗದೆ ಚಿಕಿತ್ಸಾ ವಿಧಾನಗಳನ್ನು ತಿಳಿದು ವೈದ್ಯರೊಡನೆ ಚರ್ಚಿಸಿ ಉತ್ತಮ ಚಿಕಿತ್ಸೆ ಪಡೆದು ಕೃತಕ ಋತುಬಂಧ ತಪ್ಪಿಸಿಕೊಂಡು ಉತ್ತಮ ಪ್ರಜನನ ಆರೋಗ್ಯದ ಜೊತೆಗೆ ಮಹಿಳೆಯರು ಹೃದಯದ ಆರೋಗ್ಯ ಹಾಗೂ ಮೂಳೆಗಳನ್ನು ಗಟ್ಟಿಪಡಿಸಿಕೊಳ್ಳಲಿ. ಮಹಿಳೆಯರು ಈ ಬಗ್ಗೆ ಹೆಚ್ಚಿನ ಅರಿವು ಹೊಂದಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT