ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಳಕೆಗೂ ಹಿಂದೇಟು!

ಕೃಷಿ ಭಾಗ್ಯ ಯೋಜನೆಯ ರೂ 20 ಕೋಟಿಯಲ್ಲಿ ಕೇವಲ ರೂ 75 ಲಕ್ಷ ಖರ್ಚು
Last Updated 30 ಜೂನ್ 2015, 11:17 IST
ಅಕ್ಷರ ಗಾತ್ರ

ರಾಮನಗರ: ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಗೆ ರೂ20 ಕೋಟಿ ಮಂಜೂರಾಗಿದ್ದರೂ, ಅಧಿಕಾರಿಗಳು ಕೇವಲ ರೂ 75 ಲಕ್ಷ ಖರ್ಚು ಮಾಡಿದ್ದಾರೆ. ಹೀಗಾದರೆ ಕೃಷಿ ಅಭಿವೃದ್ಧಿ ಹೇಗೆ ಸಾಧಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎ. ಇಕ್ಬಾಲ್‌ ಹುಸೇನ್‌ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ರಾಮನಗರ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆಯ ಹಲವಾರು ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಕೃಷಿ ಅಧಿಕಾರಿಗಳು ತಾತ್ಸಾರ ತೋರಿದ್ದಾರೆ ಎಂದು ಅವರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕರಿಬಸವಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕರಿಬಸವಯ್ಯ ಅವರು, ಶೀಘ್ರದಲ್ಲಿಯೇ ಹೋಬಳಿ ಮಟ್ಟದಲ್ಲಿ ಕೃಷಿ ಅಭಿಯಾನ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಇದರ ಜತೆಗೆ ಸಂವಾದಗಳು ನಡೆಯಲಿದ್ದು, ಇಲಾಖೆಯ ಕಾರ್ಯಕ್ರಮಗಳ ಪ್ರಚಾರ ಕೈಗೊಳ್ಳಲಾಗುವುದು ಎಂದರು.

ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರಿಂಗ್‌ ವಿಭಾಗದಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದೇ ವೇಗದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ಕಾಮಗಾರಿ ಏಕೆ ನಡೆಯುತ್ತಿಲ್ಲ. ಇದರ ಹಿಂದೆ ಇರುವ ಗುಟ್ಟೇನು ಎಂದು ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಅವರು ಎಂಜಿನಿಯರಿಂಗ್‌ ವಿಭಾದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಪಡೆಗೆ ರೂ 50 ಲಕ್ಷ: ಸರ್ಕಾರವು 2015–-16ನೇ ಸಾಲಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ರಾಮನಗರ ತಾಲ್ಲೂಕಿ ರೂ 50 ಲಕ್ಷ  (ಕಾರ್ಯಪಡೆಗೆ) ಬಿಡುಗಡೆ ಮಾಡಿದೆ ಎಂದು ಅಧ್ಯಕ್ಷರು ಇದೇ ವೇಳೆ ಸಭೆಯ ಗಮನಕ್ಕೆ ತಂದರು. ಸ್ವಚ್ಛ ಬಾರತ್ ಅಭಿಯಾನದಡಿಯಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ನಿಗದಿತಿ ಗುರಿ ತಲುಪದ ಪಿಡಿಒಗಳ ವಿರುದ್ಧ ಹರಿಹಾಯ್ದರು. ಆಯಾದಿನವೇ ಕಾಮಗಾರಿ ಪ್ರಗತಿಯನ್ನು ‘ಅಪ್ ಲೋಡ್’ ಮಾಡುವಂತೆ ಕಂಪ್ಯೂಟರ್ ಆಪರೇಟರ್‌ಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಲಕ್ಷ್ಮಣ ಕುಮಾರ್, ಜಿ.ಪಂ ಉಪ ಕಾರ್ಯದರ್ಶಿ ಆರ್.ಲತಾ, ಯೋಜನಾಧಿಕಾರಿ ಧನುಷ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ. ತಿಮ್ಮಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT