ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಕಾ ಮುಟ್ಟಿದ್ದೆಲ್ಲ ಚಿನ್ನ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅನುಷ್ಕಾ ಶೆಟ್ಟಿ. ಇವರು ಒಂದು ಚಿತ್ರಕ್ಕೆ ಈಗ ₹2.5 ಕೋಟಿ ಸಂಭಾವನೆ ಪಡೆಯುತ್ತಾರೆ.

ಅಕ್ಕಿನೇನಿ ನಾಗಾರ್ಜುನ ಅಭಿನಯದ ತೆಲುಗು ಸಿನಿಮಾ ‘ಸೂಪರ್‌’ (2005) ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಖಾತೆ ತೆರೆದ ಅನುಷ್ಕಾಗೆ ನವೆಂಬರ್‌ 7ಕ್ಕೆ 33 ತುಂಬುತ್ತದೆ. ನಿರ್ದೇಶಕ ಪುರಿ ಜಗನ್ನಾಥ್‌ ತಮ್ಮ ಹೊಸ ಚಿತ್ರಕ್ಕೆ ಹೊಸಮುಖದ ಹುಡುಕಾಟದಲ್ಲಿದ್ದಾಗ ಸಿಕ್ಕ ಚೆಲುವೆ ಅನುಷ್ಕಾ ಈಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ.

ಅನುಷ್ಕಾ ತಮ್ಮ ಮೊದಲ ಚಿತ್ರಕ್ಕೆ ಪಡೆದುಕೊಂಡ ಸಂಭಾವನೆ ₹20 ಲಕ್ಷ. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಈಕೆ ಕಂಪ್ಯೂಟರ್‌ ಅಪ್ಲಿಕೇಷನ್‌ನಲ್ಲಿ ಪದವಿ ಕಲಿಯುತ್ತಿದ್ದರು. ಹಾಗೆಯೇ, ಭರತ್‌ ಠಾಕೂರ್‌ ಅವರ ಬಳಿ ಯೋಗ ಕೂಡ ಕಲಿತಿದ್ದರು.

2006ರಲ್ಲಿ ಈಕೆ ಅಭಿನಯಿಸಿದ ಚಿತ್ರಗಳು ಒಂದರ ಹಿಂದೆ ಒಂದು ತೆರೆಕಂಡವು.  ಸ್ಟಾರ್‌ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ವಿಕ್ರಮಾರ್ಕುಡು’ ಈಕೆಗೆ ಬ್ರೇಕ್‌ ಕೊಟ್ಟ ಸಿನಿಮಾ. ಅನುಷ್ಕಾ ಅಭಿನಯಿಸಿದ ‘ಅಸ್ತ್ರಂ’ ಸಿನಿಮಾ ಕೂಡ ಅವರ ಚಿತ್ರಜೀವನಕ್ಕೆ ಒಳ್ಳೆಯ ಮೈಲೇಜ್‌ ಕೊಟ್ಟಿತು.

ಅದೇ ವರ್ಷ ಅನುಷ್ಕಾ ಕಾಲಿವುಡ್‌ಗೂ ಎಂಟ್ರಿ ಕೊಟ್ಟರು. ತಮಿಳಿನ ‘ರೆಂಡು’ ಚಿತ್ರದಲ್ಲಿ ಈಕೆ ಮಾಧವನ್‌ ಜೊತೆ ತೆರೆಹಂಚಿಕೊಂಡರು. ಆನಂತರ ತೆರೆಕಂಡ ‘ಒಕ್ಕ ಮಗಾಡು’, ‘ಸ್ವಾಗತಂ’ ಸಿನಿಮಾಗಳೇನೂ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. 2008ರಲ್ಲಿ ತೆರೆಕಂಡ ‘ಶೌರ್ಯಂ’ ಸಿನಿಮಾ ಸೂಪರ್‌ಹಿಟ್‌ ಆಯಿತು.

ಅನುಷ್ಕಾ ಚಿತ್ರ ಜೀವನದಲ್ಲಿ 2009 ಮರೆಯಲಾರದ ವರ್ಷ ಎಂದು ಹೇಳಬಹುದು. ‘ಅರುಂಧತಿ’ ಸಿನಿಮಾ ಈಕೆಗೆ ಲೇಡಿ ಸೂಪರ್‌ಸ್ಟಾರ್‌ ಪಟ್ಟ ತಂದುಕೊಟ್ಟಿತು. ಅಲ್ಲಿಂದ ಈಕೆ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ನಾಯಕಿ ಪ್ರಧಾನ ಸಿನಿಮಾ ‘ಅರುಂಧತಿ’ಯಲ್ಲಿ ಅನುಷ್ಕಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿನ ಆಕೆಯ ಅದ್ಭುತ ಅಭಿನಯ ಸಿನಿಪ್ರಿಯರ ಹೃದಯ ಗೆದ್ದಿತು.

ಬಾಕ್ಸ್‌ಆಫೀಸ್‌ನಲ್ಲಿ ಹಣದ ಹೊಳೆ ಹರಿಸಿತ್ತು. ಚಿತ್ರ ವಿಮರ್ಶಕರು ಅನುಷ್ಕಾ ಅಭಿನಯವನ್ನು ‘ಬ್ರಿಲಿಯೆಂಟ್‌ ಅಂಡ್‌ ಬ್ರೆಥ್‌ಟೇಕಿಂಗ್‌’ ಎಂದು ಹಾಡಿ ಹೊಗಳಿದ್ದರು. ಈ ಸಿನಿಮಾದಲ್ಲಿನ ನಟನೆಗಾಗಿ ಅನುಷ್ಕಾ ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು.

‘ಅರುಂಧತಿ’ ಚಿತ್ರದ ನಂತರ ಅನುಷ್ಕಾ ವೃತ್ತಿ ಜೀವನದಲ್ಲಿ ಶುಕ್ರದೆಸೆ ಆರಂಭವಾಗುವುದರೊಂದಿಗೆ ಆಕೆ ಪ್ರತಿ ಚಿತ್ರದಲ್ಲೂ ಅದ್ಭುತ ನಟನೆ ತೋರುತ್ತಾ ಪಕ್ವ ನಟಿಯಾಗತೊಡಗಿದರು. 2010ರಲ್ಲಿ ತೆರೆಕಂಡ ‘ವೇದಂ’ ಸಿನಿಮಾ ಈಕೆಗೆ ಮತ್ತಷ್ಟು ಪ್ರಶಸ್ತಿಗಳನ್ನು ತಂದುಕೊಟ್ಟಿತು.

‘ವೇದಂ’ ಸಿನಿಮಾ ನಂತರ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದ ಪ್ರಿನ್ಸ್‌ ಮಹೇಶ್‌ ಬಾಬು ಜೊತೆಗೆ ‘ಖಲೇಜಾ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು. 2010 ಈಕೆಗೆ ಅಷ್ಟೇನೂ ಹೆಸರು ತಂದುಕೊಡಲಿಲ್ಲ. ಅದೇ ವೇಳೆಗೆ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ಸೂರ್ಯ ಅಭಿನಯದ ‘ಸಿಂಗಂ’ ಚಿತ್ರದ ತಯಾರಿ ನಡೆಯುತ್ತಿತ್ತು. ಈ ಚಿತ್ರಕ್ಕೆ ನಾಯಕಿಯಾಗಿ ಅನುಷ್ಕಾ ಆಯ್ಕೆಯಾದರು.

ಈ ಸಿನಿಮಾದಲ್ಲಿ ಸೂರ್ಯ ಅವರು ಸೂಪರ್‌ಕಾಪ್‌ ಪಾತ್ರದಲ್ಲಿ ಮಿಂಚಿ, ದಕ್ಷಿಣ ಚಿತ್ರರಂಗದವರೆಲ್ಲಾ ಹುಬ್ಬೇರುವಂತೆ ಮಾಡಿದರು. ಈ ಸಿನಿಮಾ ಬ್ಲಾಕ್‌ಬಸ್ಟರ್‌ ಆಯ್ತು. ‘ಸಿಂಗಂ’ ಸರಣಿ ಚಿತ್ರಗಳ ತಯಾರಿಗೂ ಮುನ್ನುಡಿ ಬರೆಯಿತು.

ತಾನು ಯಾವ ಪಾತ್ರಕ್ಕೆ ಬೇಕಾದರೂ ಜೀವ ತುಂಬಬಲ್ಲೆ ಎನ್ನುವುದನ್ನು ಅನುಷ್ಕಾ ಶೆಟ್ಟಿ ‘ವಾನಂ’ ಸಿನಿಮಾದ ಮೂಲಕ ನಿರೂಪಿಸಿದರು. ಈ ಸಿನಿಮಾದಲ್ಲಿ ಆಕೆ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

‘ದೇವಿಕಾ ತಿರುಮಗಳ್‌’ ಸಿನಿಮಾದಲ್ಲಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತ ಅಭಿನಯ ತೋರಿದ ಅನುಷ್ಕಾ, ಆ ಚಿತ್ರದಲ್ಲಿನ ನಟನೆಗಾಗಿ ಪ್ರೇಕ್ಷಕರಿಂದ ಅಪಾರ  ಮೆಚ್ಚುಗೆಗೆ ಪಾತ್ರವಾದರು. ಇಲ್ಲಿಂದ ಮುಂದಕ್ಕೆ ಬಿಗ್‌ ಬಜೆಟ್‌ ಸಿನಿಮಾಗಳಿಗೆ ಅನುಷ್ಕಾ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳತೊಡಗಿದರು. ಅಕ್ಕಿನೇನಿ ನಾಗಾರ್ಜುನ ಅಭಿನಯದ ‘ಡಮರುಗಂ’ ಚಿತ್ರದಲ್ಲಿ ಅನುಷ್ಕಾ ಮತ್ತು ಅಕ್ಕಿನೇನಿ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್‌ ಆಯಿತು.

2013ರಲ್ಲಿ ಅನುಷ್ಕಾ ‘ಅಲೆಕ್ಸ್ ಪಾಂಡಿಯನ್‌’ ಸಿನಿಮಾದಲ್ಲಿ ಕಾರ್ತಿ ಜೊತೆ ಕಾಣಿಸಿಕೊಂಡರು. ಈ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಆನಂತರ ಪ್ರಭಾಸ್‌ ಅಭಿನಯದ ‘ಮಿರ್ಚಿ’ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದೂ ಬ್ಲಾಕ್‌ಬಸ್ಟರ್‌ ಸಿನಿಮಾ ಆಗಿ ದಾಖಲೆ ಬರೆಯಿತು. ಆಮೇಲೆ ತೆರೆಕಂಡ ‘ಸಿಂಗಂ 2’ ಚಿತ್ರ ಕೂಡ ಸೂಪರ್‌ಹಿಟ್‌ ಆಯಿತು.

ಆದರೆ, ಇದರಲ್ಲಿ ಅನುಷ್ಕಾ  ಪಾತ್ರಕ್ಕೆ   ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ಇದು ಆಕೆಯ ಅಭಿಮಾನಿಗಳಿಗೆ ಬೇಸರ ತರಿಸಿತು. 2014ರಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಜೊತೆ ‘ಲಿಂಗ’ ಚಿತ್ರದಲ್ಲಿ ಕಾಣಿಸಿಕೊಂಡ ಅನುಷ್ಕಾಗೆ ಈ ಸಿನಿಮಾ ಕೂಡ ಅಂತ ಹೆಸರನ್ನೇನೂ ತಂದುಕೊಡಲಿಲ್ಲ. 2015 ಮತ್ತೆ ಅನುಷ್ಕಾಗೆ ಅದೃಷ್ಟ ತಂದು ಕೊಟ್ಟ ವರ್ಷ.

ರಾಜಮೌಳಿ ನಿರ್ದೇಶನದ ‘ಬಾಹುಬಲಿ ದಿ ಬಿಗಿನಿಂಗ್‌’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸತೊಂದು ಇತಿಹಾಸ ಬರೆಯಿತು. ಅನುಷ್ಕಾ ಅಭಿನಯದ ಮತ್ತೊಂದು ಮಹತ್ವದ ಸಿನಿಮಾ ಕೂಡ ಇದೇ ವಾರ ತೆರೆಕಾಣಲಿದೆ. ‘ರುದ್ರಮದೇವಿ’ ಚಿತ್ರ ವೀಕ್ಷಣೆಗಾಗಿ ಆಕೆಯ ಅಭಿಮಾನಿಗಳು ಎರಡು ವರ್ಷಗಳಿಂದ ತುದಿಗಾಲಿನಲ್ಲಿ ಕಾಯ್ದು ಕುಳಿತಿದ್ದಾರೆ.

ಈ ಸಿನಿಮಾದಲ್ಲಿ ಅನುಷ್ಕಾ ವಾರಿಯರ್‌ ಕ್ವೀನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸೈಜ್‌ ಝೀರೊ’, ‘ಹೂಪಿರಿ’, ‘ಬಾಹುಬಲಿ’ ಪಾರ್ಟ್‌ 2 ಮತ್ತು ‘ಸಿಂಗಂ 3’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ರಜನಿಕಾಂತ್‌ ಅಭಿನಯದ ‘ಪಡೆಯಪ್ಪ’ ಸಿನಿಮಾದ ಸೀಕ್ವೆಲ್‌ನಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ.

32 ವರ್ಷದ ಚೆಲುವೆ ಅನುಷ್ಕಾ ಶೆಟ್ಟಿ ಇನ್ನೂ ಮದುವೆಯಾಗಿಲ್ಲ. ಆಗಿಂದಾಗ್ಗೆ ಈಕೆಯ ಹೆಸರು ಹಲವು ನಟರ ಜೊತೆಗೆ ತಳುಕು ಹಾಕಿಕೊಂಡಿದ್ದರೂ ಗಾಸಿಪ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಹಾಗಾಗಿಯೇ, ಈಕೆ ತಮ್ಮ ಚಿತ್ರಜೀವನದಲ್ಲಿ ತ್ರಿವಿಕ್ರಮನಂತೆ ದಿನೇ ದಿನೇ ಬೆಳೆಯುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT