ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಪ್ರಾಯಗಳು...

Last Updated 20 ಫೆಬ್ರುವರಿ 2015, 19:49 IST
ಅಕ್ಷರ ಗಾತ್ರ
ADVERTISEMENT

ನ್ಯಾಯಮೂರ್ತಿಗಳ ಕರ್ತವ್ಯ
ಪ್ರಕರಣದ ಆರೋಪ, ಪ್ರತ್ಯಾರೋಪಗಳನ್ನು ಗಮನಿಸಿ ನ್ಯಾಯದಾನ ಮಾಡುವುದು ನ್ಯಾಯಮೂರ್ತಿಗಳ ಆದ್ಯತೆಯಾಗಬೇಕು. ನ್ಯಾಯಮೂರ್ತಿಗಳೂ ಸಮಾಜದಲ್ಲಿ ಇರುವವರೇ. ಹಾಗಾಗಿ ತಮ್ಮ ಮುಂದೆ ಬರುವ ಪ್ರಕರಣಗಳಲ್ಲಿ ಪರಿಚಯ­ದವರು ಇದ್ದೇ ಇರುತ್ತಾರೆ. ಹಾಗೆಂದು ಸಾರಾ­ಸಗಟಾಗಿ ವಿಚಾರಣೆಯಿಂದಲೇ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಂಗದ ಬಗ್ಗೆ ಬೇರೆ ಯೋಚನೆ ಬರಬಹುದು. ಆದಷ್ಟೂ, ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ನ್ಯಾಯದಾನ ಮಾಡಬೇಕಾದುದು ನ್ಯಾಯಮೂರ್ತಿಗಳ ಪವಿತ್ರ ಕರ್ತವ್ಯ.
–ಎಸ್‌.ಸಿ.ಸರದೇಶಪಾಂಡೆ
ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಧಾರವಾಡ


ನೈತಿಕತೆ ಪ್ರಶ್ನೆ
ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಾಗ ಅವರ ನೈತಿಕತೆ ಬಗ್ಗೆ ಜನರಲ್ಲಿ ಅನುಮಾನ ಮೂಡುತ್ತದೆ. ಧರ್ಮ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಷಯಗಳು ಸೂಕ್ಷ್ಮವಾಗಿರು­ವುದರಿಂದ ಅವುಗಳ ಬಗ್ಗೆ ನಿರ್ಧಾರ ಪ್ರಕಟಿಸಲು  ಅಂತರಾತ್ಮ ಒಪ್ಪದವರು ವಿಚಾರಣೆಯನ್ನು ಕೈಬಿಟ್ಟು ಹೊರಗೆ ಬರುತ್ತಾರೆ ಅಥವಾ ಅದಕ್ಕೆ ಇನ್ನೂ ಬೇರೆ ಏನಾದರೂ ಕಾರಣ ಇರಬಹುದು. ಆದರೆ ನ್ಯಾಯಾಧೀಶರಿಂದ ಜನರು ಸದಾಕಾಲ ಕರ್ತವ್ಯ ಬದ್ಧತೆಯನ್ನು ನಿರೀಕ್ಷಿಸುತ್ತಾರೆ.
ಶೇಕ್‌ ಶಫಿ ಅಹ್ಮದ್‌
ಮಾಹಿತಿ ಹಕ್ಕು ಕಾರ್ಯಕರ್ತ, ಕಲಬುರ್ಗಿ


ತಪ್ಪು ನಿರ್ಧಾರ
ನ್ಯಾಯಾಧೀಶರು ತಮಗೆ ನ್ಯಾಯ ಒದಗಿಸುತ್ತಾರೆ ಎನ್ನುವ ನಂಬಿಕೆಯಿಂದ ಜನರು ನ್ಯಾಯಾಲಯಕ್ಕೆ ಬರುತ್ತಾರೆ. ಹೀಗಾಗಿ ಯಾವುದೇ ನ್ಯಾಯಾಧೀಶರು ವಿಚಾರಣೆಯಿಂದ ಹಿಂದಕ್ಕೆ ಸರಿಯುವುದು ತಪ್ಪು ನಿರ್ಧಾರ. ನ್ಯಾಯಾಲಯದ ಮೇಲಿರುವ ಜನರ ನಂಬಿಕೆ ಕುಸಿಯಬಾರದು. ಏನೇ  ವಿಷಯವಿದ್ದರೂ ಸೂಕ್ತ ತನಿಖೆ ಆಧರಿಸಿ ವಿಚಾರಣೆ ಕೈಗೊಳ್ಳಬೇಕು; ಅನ್ಯಾಯವಾದವರಿಗೆ ನ್ಯಾಯ ಒದಗಿಸಿಕೊಡಬೇಕು.
–ಸೂರ್ಯಕಾಂತ ಆರ್‌.ಭೀಮಳ್ಳಿ ಅಧ್ಯಕ್ಷರು, ಕಲಬುರ್ಗಿ ಜಿಲ್ಲಾ ವಕೀಲರ ಸಂಘ


ಒತ್ತಡವಿದ್ದರೆ ಬಹಿರಂಗಪಡಿಸಲಿ
ಇತ್ತೀಚೆಗೆ ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯಿಂದ ಹೈಕೋರ್ಟ್‌ನ ಐವರು ನ್ಯಾಯಮೂರ್ತಿಗಳು ಹಿಂದಕ್ಕೆ ಸರಿದಿರುವ ಬೆಳವಣಿಗೆ ಅಚ್ಚರಿ ಮೂಡಿಸು­ವಂತಹದ್ದು. ಯಾವುದೇ ರೀತಿಯ ಪಕ್ಷಪಾತ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಏನೇ ಒತ್ತಡವಿದ್ದರೂ ಅದಕ್ಕೆ ತಲೆಬಾಗದೆ ನ್ಯಾಯ­ವನ್ನು ಎತ್ತಿಹಿಡಿಯ­ಬೇಕಾದುದು ಪ್ರತಿಯೊಬ್ಬ ನ್ಯಾಯ­ಮೂರ್ತಿಯ ಕರ್ತವ್ಯ.

ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ­ಗಳು ಹಿಂದಕ್ಕೆ ಸರಿಯು­ತ್ತಾರೆ ಎಂದರೆ, ಅವರು ಪ್ರಮಾಣವಚನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲ ಎಂದೇ ಅರ್ಥ. ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ನಡೆ ನಿಜಕ್ಕೂ ಪ್ರಶ್ನಾರ್ಹವಾದುದು. ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಾದ ಕೊನೇ ಕ್ಷಣದಲ್ಲಿ ಕೆಲವು ನ್ಯಾಯಮೂರ್ತಿಗಳು ಹಿಂದಕ್ಕೆ ಸರಿದಿದ್ದಾರೆ. ಇದು ಒಟ್ಟಾರೆಯಾಗಿ ನ್ಯಾಯದಾನ ವ್ಯವಸ್ಥೆಯ ಬಗ್ಗೆಯೇ ಸಾರ್ವಜನಿಕರಲ್ಲಿ ಸಂಶಯ ಮೂಡುವುದಕ್ಕೆ ಕಾರಣವಾಗಿದೆ.

ನ್ಯಾಯಮೂರ್ತಿಗಳ ವಿರುದ್ಧ ವಕೀಲರು ದೂರು ನೀಡಿದರೆ ಅಥವಾ ಆರೋಪ ಮಾಡಿದರೆ ಅಂತಹ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಿ­ದ್ದರು. ಆದರೆ, ಈ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹಿಂದೆ ಸರಿದ ಎಲ್ಲ ನ್ಯಾಯಮೂರ್ತಿಗಳ ವಿರುದ್ಧ ಯಾರೂ ಬೊಟ್ಟುಮಾಡಿರಲಿಲ್ಲ.

ಅವರು ಹಿಂದೆ ವಕೀಲರಾಗಿದ್ದಾಗ ಆರೋಪಿ ಸ್ಥಾನದಲ್ಲಿ ರುವ ವ್ಯಕ್ತಿಯ ಪರ ವಾದಿಸಿದ್ದರೆ ಪ್ರಕರಣದ ವಿಚಾರಣೆ ಯಿಂದ ಹಿಂದಕ್ಕೆ ಸರಿಯುವುದಕ್ಕೆ ಅವರಿಗೆ ನೈತಿಕತೆ ಇರು ತ್ತದೆ. ಆದರೆ ಈ ಪ್ರಕರಣದಲ್ಲಿ ವಿಚಾರಣೆಯಿಂದ ಹಿಂದಕ್ಕೆ ಸರಿಯಲು ಏನು ಕಾರಣ ಎಂಬುದನ್ನು ಕೆಲವು ನ್ಯಾಯ ಮೂರ್ತಿಗಳು ಸ್ಪಷ್ಟಪಡಿಸಿಲ್ಲ. ಅವರ ಮೇಲೆ ಯಾವು ದಾದರೂ ಒತ್ತಡ ಇದ್ದರೆ ಅದನ್ನು ಅವರು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಜನರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ.
ಎಸ್‌.ಪಿ.ಚೆಂಗಪ್ಪ
ಅಧ್ಯಕ್ಷರು, ಮಂಗಳೂರು ವಕೀಲರ ಸಂಘ

ಹಿಂಜರಿಕೆ ಬೇಡ
ನ್ಯಾಯಮೂರ್ತಿಗಳ ಕಣ್ಣಿಗೆ ನ್ಯಾಯದ ಹೊರ­ತಾಗಿ ಬೇರೇನೂ ಕಾಣಬಾರದು. ‘ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಅವರು ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಹಾಗಾಗಿ, ಸಕಾರಣ­ವಿಲ್ಲದೇ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದನ್ನು ಅವರು ಹೇಗೆ ಸಮರ್ಥಿಸಿ­ಕೊಳ್ಳಲು ಸಾಧ್ಯ?

ಸ್ವಹಿತ ಇರುವ ಕಡೆ ಆ ವ್ಯಕ್ತಿ ನ್ಯಾಯ­ಮೂರ್ತಿಯಾಗಿ ಇರಬಾರದು ಎಂಬುದು ಸಹಜ ನಿಯಮ. ಆದರೆ, ಸ್ವಹಿತ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯೆ ಇಲ್ಲ. ಹೀಗಾಗಿ ಯಾವುದು ಸ್ವಹಿತ ಎಂದು ನಿರ್ಧರಿಸುವುದು ಕಷ್ಟ. ಹಣ ಮತ್ತು ಮಾಲೀಕತ್ವದ ವಿಚಾರ ಬಂದಾಗ ಸ್ವಹಿತ ಎಂದು ಪರಿಗಣಿಸುತ್ತೇವೆ. ಸ್ವಹಿತ ಎಂಬುದು ಮೇಲ್ನೋಟಕ್ಕೆ ಕಾಣುವಂತಿರಬೇಕು.

ಸಣ್ಣಪುಟ್ಟ ವಿಷಯಗಳನ್ನು ಮುಂದಿಟ್ಟು­ಕೊಂಡು ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಹಿಂದೆ ಸರಿದರೆ ಆರೋಪಿಗಳು ನ್ಯಾಯಾಧೀಶರ ಮೇಲೂ ಪ್ರಭಾವ ಬೀರಬಹುದು ಎಂಬ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ತಾವು ಏಕೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂಬ ಬಗ್ಗೆ ಆ ನ್ಯಾಯಮೂರ್ತಿಗಳು ನೇರ ಮತ್ತು ಸ್ಪಷ್ಟವಾದ ಕಾರಣ ತಿಳಿಸಬೇಕು.

ನ್ಯಾಯಮೂರ್ತಿಗಳು ನ್ಯಾಯ ಕೊಟ್ಟರಷ್ಟೇ ಸಾಲದು, ನ್ಯಾಯದಾನ ಸರಿಯಾದ ರೀತಿಯಲ್ಲಿ ಆಗುತ್ತಿದೆ ಎಂಬುದು ಗೊತ್ತಾಗುವಂತೆ ಮಾಡಬೇಕು ಎಂಬ ಮಾತಿದೆ. ಸಂಸ್ಥೆಯೊಂ­ದಿಗೆ ಒಡನಾಟ ಇತ್ತು, ಕುಲ–ಪಂಗಡದಿಂದ ಅಪವಾದ ಸಾಧ್ಯತೆ, ವೈಯಕ್ತಿಕ ಮುಜುಗರ ಉಂಟಾಗುತ್ತದೆ ಎಂಬಂ­ತಹ ಕಾರಣಗಳನ್ನು ನೀಡಿ ವಿಚಾರಣೆಯಿಂದ ಹಿಂದೆ ಸರಿಯುವುದು ಸರಿಯಲ್ಲ. ನ್ಯಾಯಾಧೀಶರ ಇಂತಹ ನಿಲುವು ಪ್ರಕರಣಗಳ ವಿಚಾರಣೆ ವಿಳಂಬವಾಗಲು ಎಡೆಮಾಡಿ­ಕೊಡುತ್ತದೆ. ಹೀಗಾಗಿ ಹಿಂಜರಿಕೆ ಇರುವವರು ನ್ಯಾಯಾಧೀಶರ ಹುದ್ದೆಯನ್ನೇ ಅಲಂಕರಿಸ­ಬಾರದು.
–ಕೆ.ಎಸ್‌.ಸುರೇಶ್‌
ಪ್ರಾಂಶುಪಾಲರು, ಜೆಎಸ್‌ಎಸ್‌ ಕಾನೂನು ವಿದ್ಯಾಲಯ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT