ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಲಾಬಿ: ಆರೋಪ

ಅರ್ಕಾವತಿ ನದಿ ಪುನಶ್ಚೇತನದಲ್ಲಿ ಜನರ ಕಾರ್ಯಯೋಜನೆ ಕುರಿತು ಸಭೆ
Last Updated 30 ನವೆಂಬರ್ 2015, 11:17 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಕರೆ ಹಾಗೂ ನದಿ ಮೂಲಗಳ ಅಭಿವೃದ್ಧಿ ಹೆಸರಿನಲ್ಲಿ ಇಂದು ಸರ್ಕಾರ ಲಾಬಿ ಮಾಡುತ್ತಿದೆ’ ಎಂದು ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿ ನೇತೃತ್ವದಲ್ಲಿ ಭಾರತದ ನದಿಗಳ ದಿನ ಅಂಗವಾಗಿ ನಡೆದ ಅರ್ಕಾವತಿ ನದಿ ಪುನಶ್ಚೇತನ ಜನರ ಕಾರ್ಯಯೋಜನೆ ಕುರಿತ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಅಭಿವೃದ್ದಿಗೆ ಹೊಸ ರೂಪವನ್ನು ಜನರೇ ಕೊಡಬೇಕಾದ ಅನಿವಾರ್ಯತೆ ಇದೆ’ ಎಂದು ಅವರು ತಿಳಿಸಿದರು. ಗ್ರಾಮಸ್ಥರು ಪಕ್ಷ, ಜಾತಿಯನ್ನು ಮೀರಿ ಸಮುದಾಯದ ಹೊಣೆಗಾರಿಕೆ ಪ್ರದರ್ಶಿಸಬೇಕು. ನದಿ, ಕೆರೆಗಳು ನಮ್ಮ ಬದುಕಿನ ಮೂಲ. ಇವುಗಳ ಮೇಲೆ ನಡೆದಿರುವ ದಬ್ಬಾಳಿಕೆ ನಿಲ್ಲಬೇಕು.

ಹಳ್ಳಿಗಳ ಬದುಕಿನ ಪ್ರಶ್ನೆಯಾಗಿರುವ ಕೆರೆ- ಕುಂಟೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಬೆಟ್ಟ, ನೀರು ಮತ್ತು ಅರಣ್ಯ ಮನುಷ್ಯ ಬದುಕಿನ ಅವಿನಾಭಾವ ಸಂಬಂಧಕ್ಕೆ ಬೆಸುಗೆ ಹಾಕುತ್ತವೆ. ಆದರೆ ನದಿ ಪಾತ್ರದಲ್ಲಿಯೇ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಮರಳು ಫಿಲ್ಟರ್‌ ದಂಧೆಗೆ ಕಡಿವಾಣ ಹಾಕಬೇಕು’ ಎಂದರು.

ಅರ್ಕಾವತಿ ನದಿ ಕಾವಲು ಸಮಿತಿಯ ಜನಾರ್ಧನ ಕೆಸರಗದ್ದೆ ಮಾತನಾಡಿ, ‘ಅರ್ಕಾವತಿ ನದಿ ಜಲಾನಯನದ ಈಗಿನ ಸ್ಥಿತಿ, ಪುನಶ್ಚೇತನದ 10 ವರ್ಷಗಳ ಅನುಭವ, ಜನಸಮುದಾಯದ ಜ್ಞಾನ ಮತ್ತು ತಜ್ಞರ ಯೋಚನೆಗಳನ್ನು ಒಂದೆಡೆ ದಾಖಲಿಸಿ ಸಾರ್ವಜನಿಕರು ಮತ್ತು ಸರ್ಕಾರದ ಮುಂದಿಡುವುದು ಯೋಜನೆ ಉದ್ದೇಶ. ಮಳೆಕೊಯಿಲು, ಜಲ ಮರುಪೂರಣ, ಕೊಳಚೆ ನೀರು ಶುದ್ಧೀಕರಣ, ಸ್ಥಳೀಯ ಜಲಾನಯನ ಪುನಶ್ಚೇತನ, ಅರ್ಕಾವತಿ ಜಲಾನಯನ ಸಂಸ್ಥೆ ಸ್ಥಾಪನೆ ಮುಂತಾದ ಮಹತ್ತರ ವಿಚಾರಗಳನ್ನು ಸಮಿತಿ ಒಳಗೊಂಡಿದೆ’ ಎಂದರು.

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಹನುಮಂತರಾಯಪ್ಪ ಮಾತನಾಡಿ, ‘ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಾಕಷ್ಟು ಹಣ ಬಿಡುಗಡೆಯಾಗಿದೆ. ಆದರೆ ಅದು ಪುನಶ್ಚೇತನಕ್ಕೆ ಹೇಗೆ ವಿನಿಯೋಗವಾಗಿದೆ ಎಂಬುದೇ ದೊಡ್ಡ ಪ್ರಶ್ನೆ. ಸಮಿತಿ ಇದ್ದರೂ ಈ ಭಾಗದಲ್ಲಿ ಅಕ್ರಮ ನಿಂತಿಲ್ಲ. ಅದನ್ನು ತಡೆಯಲೂ ಆಗಿಲ್ಲ.

ಹೀಗಿರುವಾಗ ಬದಲಾವಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅರ್ಕಾವತಿ ಪುನಶ್ಚೇತನ ಯೋಜನೆ ಗುತ್ತಿಗೆದಾರರಿಗೆ ಲಾಭವಾಗಿದೆಯೇ ಹೊರತು ನದಿ ಸಂರಕ್ಷಣೆಗಲ್ಲ. ಅಲ್ಲದೆ ಈ ಕುರಿತ ಸರ್ಕಾರದ ಯೋಜನೆಗಳು ಅಧಿಕಾರಿಗಳ ಜೇಬು ತುಂಬಿಸುತ್ತಿದೆ. ಅದನ್ನು ಬಿಟ್ಟು  ಕೆರೆ-ಕುಂಟೆ, ನದಿಮೂಲಗಳು ಅಭಿವೃದ್ಧಿಗೊಂಡಿಲ್ಲ. ಈ ಹಂತದಲ್ಲಿ ಈ ಕುರಿತು ಜನಾಂದೋಲನ ಆಗಬೇಕು’ ಎಂದರು.

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಎನ್.ಸಿ.ಲಕ್ಷ್ಮಿ ಮಾತನಾಡಿ, ‘ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಅವೈಜ್ಞಾನಿಕವಾಗಿದೆ. ಎಲ್ಲೆಲ್ಲೂ ಕಸದ ರಾಶಿ ಕಾಣುತ್ತಿದ್ದೇವೆ. ವಡ್ಡರಪಾಳ್ಯದ ಬಳಿಯ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ರಾಶಿ ಹಾಕಲಾಗುತ್ತಿದೆಯೇ ವಿನಃ ವೈಜ್ಞಾನಿಕ ವಿಲೇವಾರಿ ಆಗುತ್ತಿಲ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಜನ ಸಮುದಾಯ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಂವಾದ ನಡೆಯಿತು. ಜಲ ಮೂಲಗಳ ರಕ್ಷಣೆ ಹೋರಾಟಗಾರರಾದ ಅರದೇಶಹಳ್ಳಿ ಸೀತಾರಾಮ್, ನೆಲಮಂಗಲದ ಬಾಳೇಕಾಯಿ ನಾಗರಾಜ್, ಎಪಿಎಂಸಿ ಅಧ್ಯಕ್ಷ ಟಿ.ರಂಗರಾಜು, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಸಿದ್ದಬೈರೇಗೌಡ, ಕಾಂಗ್ರೆಸ್ ಮುಖಂಡ ಕೆ.ಜಿ.ಅಶೋಕ್, ಪ್ರಾಧ್ಯಾಪಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ರಾಜ್ಯ ರೈತ ಸಂಘದ ಕೆ.ಸುಲೋಚನಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT