ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ದಮನ ಆತಂಕಕಾರಿ

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ಅಲ್ ಜಜೀರಾ ಟಿ.ವಿ. ಇಂಗ್ಲಿಷ್ ಸುದ್ದಿವಾಹಿನಿಯ ಮೂವರು ಪತ್ರ­ಕರ್ತರಿಗೆ ಈಜಿಪ್ಟ್‌ನ ಕೈರೊದ ನ್ಯಾಯಾಲಯವೊಂದು ಸೆರೆವಾಸದ ಶಿಕ್ಷೆ  ನೀಡಿದೆ. ಇವರಲ್ಲಿ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟೆ ಹಾಗೂ ಈಜಿಪ್ಟ್ ಸಂಜಾತ ಕೆನಡಾ ಪ್ರಜೆ ಮೊಹಮದ್ ಫಾಹ್ಮಿಗೆ ಏಳು ವರ್ಷ ಸೆರೆವಾಸ ವಿಧಿ­ಸ­ಲಾಗಿದ್ದು ಈಜಿಪ್ಟ್‌ನ ಬಹೇರ್ ಮೊಹಮ್ಮದ್‌ಗೆ 10 ವರ್ಷಗಳ ಜೈಲು­­ಶಿಕ್ಷೆ ವಿಧಿಸಲಾಗಿದೆ.

ಪ್ರತಿಭಟನಾ ಪ್ರದರ್ಶನವೊಂದರಲ್ಲಿ ಹಾರಿಸ­ಲಾ­ಗಿದ್ದ ಗುಂಡೊಂದನ್ನು ಸ್ಮರಣಿಕೆಯಾಗಿ ಆತ ತನ್ನ ಬಳಿ ಇರಿಸಿಕೊಂಡಿದ್ದೇ ಈ ಹೆಚ್ಚು­ವರಿ ಶಿಕ್ಷೆಗೆ ಕಾರಣ. ವರದಿಗಾರಿಕೆಯ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಈ ಪತ್ರಕರ್ತರು ಈ ಶಿಕ್ಷೆಗೆ ಗುರಿಯಾಗಿರುವುದು ಎಲ್ಲಾ ಬಗೆಯ ಪ್ರತಿ­ರೋಧಗಳನ್ನೂ ಹತ್ತಿಕ್ಕುವ ಹೊಸ ಪ್ರಯತ್ನ.

ಈಜಿಪ್ಟ್‌ನಲ್ಲಿ ಅಂತರ್ಯುದ್ಧ ನಡೆ­­ಯುತ್ತಿದೆ ಎಂಬಂತಹ ಸುಳ್ಳು ಚಿತ್ರಣಗಳನ್ನು ನೀಡಲಾಗಿದೆ ಎಂಬ ಆರೋ­ಪ­ವನ್ನು ಈ ಪತ್ರಕರ್ತರ ವಿರುದ್ಧ ಹೊರಿಸಲಾಗಿದೆ. ಅಲ್ಲದೆ ಭಯೋತ್ಪಾದನೆ ಸಂಬಂಧದಲ್ಲಿ ಬಹಿಷ್ಕೃತಗೊಂಡಿರುವ ಮುಸ್ಲಿಂ ಬ್ರದರ್‌ಹುಡ್‌ಗೆ ಬೆಂಬಲ ನೀಡಿದ್ದಾರೆಂದೂ ಆರೋಪಿಸಲಾಗಿದೆ. ಆದರೆ ಈ ಪತ್ರಕರ್ತರಿಗೆ ಶಿಕ್ಷೆ ವಿಧಿ­ಸಲು ಒದಗಿಸಲಾದ ಸಾಕ್ಷ್ಯಗಳು ಅಸಂಗತವಾಗಿರುವುದಲ್ಲದೆ ಹಾಸ್ಯಾಸ್ಪ­ದವೂ ಆಗಿವೆ ಎಂಬಂಥ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆ ಕೇವಲ ಪತ್ರಕರ್ತರಿಗೆ ಮಾತ್ರ ಆತಂಕಕಾರಿಯಾದುದಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ­ವನ್ನು ಹತ್ತಿಕ್ಕುವ ಈ ಕ್ರಮ ಈಜಿಪ್ಟ್ ನಾಗರಿಕರಲ್ಲೂ ಕಳವಳ ಉಂಟುಮಾ­ಡು ವಂತಹದ್ದು. ಈಗಾಗಲೇ 16,000ಕ್ಕೂ ಹೆಚ್ಚು ಜನರು ರಾಜಕೀಯ ಕಾರಣ­ಗಳಿಗಾಗಿ ಈಜಿಪ್ಟ್‌ನಲ್ಲಿ ಜೈಲುಗಳಲ್ಲಿದ್ದಾರೆ. 

ಕಳೆದ ಡಿಸೆಂಬರ್‌ನಿಂದ  ಈ ಪತ್ರಕರ್ತರು  ಈಜಿಪ್ಟ್‌ನಲ್ಲಿ ಸೆರೆವಾಸದಲ್ಲೇ ಇದ್ದಾರೆ. ‘ಪತ್ರಿಕೋದ್ಯಮ ಅಪರಾಧವಲ್ಲ’ ಎಂದು ಘೋಷಿಸಿ  ಬಂಧಿತ  ಪತ್ರ­ಕರ್ತರ ಬಿಡುಗಡೆಗಾಗಿ ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯದ ಬೆಂಬಲಿಗರು ಕಳೆದ ಆರು ತಿಂಗಳಿಂದಲೂ ಪ್ರಚಾರಾಂದೋಲನ ನಡೆಸಿದ್ದರು. ಬಂಧಿತ ಪತ್ರ­ಕರ್ತರ ಪರವಾಗಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಪುಟವೊಂದನ್ನು ಖಾಲಿ ಬಿಟ್ಟು ಪ್ರತಿಭಟನೆ ಸೂಚಿಸಿದೆ. ಖಾಲಿ ಬಿಟ್ಟ ಪುಟದ ಕೆಳಗಡೆ ಹೀಗೆ ಬರೆಯ­ಲಾಗಿದೆ: ‘ಮುಕ್ತ ಪತ್ರಿಕೋದ್ಯಮದ ದನಿ ಉಡುಗಿದಲ್ಲಿ ಏನಾಗುತ್ತದೆ  ಎಂಬು­­­ದರ ಸೂಚಕ ಇದು’. ನಿಜ. ಬಂಧಿತರು ಮೇಲ್ಮನವಿ ಸಲ್ಲಿಸಲು ಅವ­ಕಾಶ­­ವಿದೆ. ಆದರೆ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಅನೇಕ ವರ್ಷಗಳು ಹಿಡಿ­ಯು­­ತ್ತವೆ. ಈಜಿಪ್ಟ್‌ನ ಮಿಲಿಟರಿ ಬೆಂಬಲಿತ ಸರ್ಕಾರಕ್ಕೆ ಬೆಂಬಲ ನೀಡಿರುವ ಅಮೆ­­ರಿ­ಕವೂ ಈ ತೀರ್ಪನ್ನು ಖಂಡಿಸಿ ಆತಂಕ ವ್ಯಕ್ತಪಡಿಸಿದೆ.  ಈಜಿಪ್ಟ್‌ನ ತಳ­­ಮಳಕ್ಕೆ ಮುಕ್ತಾಯವೇ ಇಲ್ಲ ಎಂಬಂತಾಗಿರುವುದು ಶೋಚನೀಯ.

 ಸರ್ವಾ­­­ಧಿಕಾರಿ ಹೊಸ್ನಿ ಮುಬಾರಕ್ ಅವನತಿಯ ನಂತರ ಅಧಿಕಾರ ವಹಿಸಿ­ಕೊಂಡ ಮೊರ್ಸಿ ಆಡಳಿತವೂ ಜನರಿಗೆ ನೆಮ್ಮದಿ ತರಲಿಲ್ಲ. ಕಳೆದ ವರ್ಷ ನಡೆದ ಕ್ಷಿಪ್ರಕ್ರಾಂತಿಯ ನೇತೃತ್ವ ವಹಿಸಿ, ಈಗ ಮೇ ತಿಂಗಳಲ್ಲಿ ನಡೆದ ಚುನಾ­ವ­ಣೆ­ಯಲ್ಲಿ ಪುನರಾಯ್ಕೆ ಆಗಿರುವ ಅಧ್ಯಕ್ಷ  ಅಬ್ದುಲ್ ಫತಾ ಅಲ್ – ಸಿಸಿ, ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯನ್ನು ಬಗ್ಗುಬಡಿಯುವ ಉದ್ದೇಶ ಹೊಂದಿ­ರುವುದು ಸ್ಪಷ್ಟ. ಈ ಪ್ರಕ್ರಿಯೆಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿ­ಕ್ಕು­ವ­ಂತಹ  ಇಂತಹ ಬೆಳವಣಿಗೆಗಳು ಅಪಾಯಕಾರಿ ಎಂಬುದನ್ನು ಅಂತರ­ರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT