ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಾಹಿತ್ಯ ಬೇಡ'

Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: `ಸಾಮಾಜಿಕ ನ್ಯಾಯಕ್ಕೆ ಭಂಗ ತರುವ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುವ ಹಾಗೆ ಸಾಹಿತ್ಯ ರಚಿಸುವುದು ಸರಿಯಲ್ಲ' ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹೇಳಿದರು.

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, `ಸಾಹಿತ್ಯ ರಚನೆಯ ಆಶಯ ಜನಹಿತದಿಂದ ಕೂಡಿರಬೇಕು. ಅರಿವು ವಿಸ್ತಾರಕ್ಕೆ ಭಾಷೆ ಮತ್ತು ಸಾಹಿತ್ಯ ಎರಡೂ ನೆರವಾಗಬೇಕು. ಆದರೆ, ಗದ್ಯದಂತೆ ಪದ್ಯವೂ ಜಟಿಲವಾಗುತ್ತ ಸಾಗುತ್ತಿರುವುದು ದುರಂತ' ಎಂದರು.

`ದೇಶ ಏಕೀಕರಣವಾದರೂ ಭಾಷೆಯ ಏಕೀಕರಣ ಆಗಿಲ್ಲ. ಶಿಕ್ಷಣದಲ್ಲಿ ರಾಷ್ಟ್ರೀಯ ಭಾಷಾ ನೀತಿ ರೂಪಿಸಬೇಕು. ಆಗ ಮಾತ್ರ ಈಗ ಎದುರಾಗಿರುವ ದ್ವಂದ್ವ ನಿವಾರಣೆಯಾಗಿ ಮಕ್ಕಳು ಸರಿಯಾದ ವಿದ್ಯೆ ಪಡೆಯಲು ಸಹಕಾರಿಯಾಗುತ್ತದೆ' ಎಂದು ಹೇಳಿದರು.

`ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ನಡೆಸುವವರು ಹೇಳುತ್ತಿದ್ದರೂ ಈ ವರ್ಷ 200 ಕನ್ನಡ ಶಾಲೆಗಳು ಮುಚ್ಚಿವೆ. ಇನ್ನೊಂದೆಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಖೊಟ್ಟಿ ದಾಖಲೆ ಸೃಷ್ಟಿಸಿ 200 ಸಂಸ್ಕೃತ ಶಾಲೆಗಳನ್ನು ಮುಂದುವರೆಸಲಾಗಿದೆ. ಇದು ತಾರತಮ್ಯದ ನೀತಿ' ಎಂದು ಖಂಡಿಸಿದರು.

ಶಾಸ್ತ್ರೀಯ ಸ್ಥಾನಮಾನ:`ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು ಎಂದು ನಾವು ವಿಜಯೋತ್ಸವ ಆಚರಿಸಿ ಆ ಮ್ಯಾಲೆ ತಣ್ಣಗಾದೆವು. ಮುಂದೆ ಏನೂ ಮಾಡಲಿಲ್ಲ. ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ಹೊಣೆಯನ್ನು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನಕ್ಕೆ ವಹಿಸಲಾಗಿದ್ದು, ಅದನ್ನು ಸ್ವತಂತ್ರಗೊಳಿಸಬೇಕು' ಎಂದು ಒತ್ತಾಯಿಸಿದರು.

`ಇತಿಹಾಸದಲ್ಲಿ ನಾವು ಮಾಡುತ್ತ ಬಂದ ತಪ್ಪುಗಳೇ ನಮ್ಮೆಲ್ಲ ಈಗಿನ ಸಮಸ್ಯೆಗಳಿಗೆ ಕಾರಣ. ಮೊದಲು ಧಾರ್ಮಿಕವಾಗಿ ನಂತರ ರಾಜಕೀಯವಾಗಿ ನಾವು ಉತ್ತರ ಭಾರತದವರಿಗೆ ಸೋಲುತ್ತ ಬಂದೆವು. ಇದರಿಂದಾಗಿ ನಮ್ಮ ಅಸ್ಮಿತೆ-ಸ್ವಾಭಿಮಾನ ಮತ್ತು ಅಸ್ತಿತ್ವ ನಾಶವಾಯಿತು. ಅನ್ಯರಿಗೆ ವಿಧೇಯರಾಗುತ್ತ ಬರುವುದು ಅನಿವಾರ್ಯವಾಯಿತು' ಎಂದು ಹಿನ್ನೋಟ ಬೀರಿದರು.

`ವೈದಿಕ ಮತ್ತು ಜೈನ ಧರ್ಮದ ಪ್ರಭಾವ ನಮ್ಮ ಅಸ್ಮಿತೆಯನ್ನು ಮರೆಯುವಷ್ಟು ಗಾಢವಾಯಿತು. ನಮ್ಮಲ್ಲಿ ಕೀಳರಿಮೆ, ಉತ್ತರ ಭಾರತದ ಕಾವ್ಯವೇ ಶ್ರೇಷ್ಠ ಎಂಬ ಭಾವನೆ ಬಂದಿತ್ತು. ಪಂಪನ ಯುಗದಲ್ಲಿ ಕನ್ನಡಿಗರ ಸ್ವಾಭಿಮಾನ ವಿಸ್ಮೃತಿ ಆಗಿದ್ದರೆ, ಬಸವನ ಕಾಲದಲ್ಲಿ ಜಾಗೃತಿಗೊಂಡಿತ್ತು' ಎಂದು ಹೇಳಿದರು.

`ಬಿಜೆಪಿ ಸರ್ಕಾರದ ಮುಜರಾಯಿ ಸಚಿವರು ಗಂಗಾಜಲ ತರಿಸಿ ನಮ್ಮ ದೇವಾಲಯಗಳಲ್ಲಿ ಹಂಚಿಸಿದರು. ಗಂಗಾಜಲವೇ ಏಕೆ ಪವಿತ್ರ? ನಮ್ಮೂರಿನ ಹಳ್ಳದ ನೀರು ಅದಕ್ಕಿಂತ ಪವಿತ್ರ ಎಂಬ ಭಾವನೆ ನಮ್ಮಲ್ಲಿ ಬರಬೇಕು. ತಿರುಪತಿಯಿಂದ ಲಾಡು ತಂದು ವಿತರಿಸಲಾಯಿತು. ಇಂತಹ ನೀತಿಗಳಿಂದ ನಮ್ಮ ಸ್ವಾಭಿಮಾನ ಕುಗ್ಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.

ಶ್ರೀರಾಮ ಪ್ರಜ್ಞೆ : `ಕನ್ನಡಿಗರು ಭಕ್ತ ಹನುಮಂತ ಆಗ್ತಾ ಬಂದರು. ಶ್ರೀರಾಮನಾಗಿ ಬೆಳೆಯಲಿಲ್ಲ' ಎಂದು ಕೆಂಗಲ್ ಹನುಮಂತಯ್ಯ ಹೇಳಿದ್ದರು. ನಾವು ಬಜರಂಗ ಪ್ರಜ್ಞೆ ಬಿಟ್ಟು ಶ್ರೀರಾಮ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ನಿಜವಾದ ಕನ್ನಡಿಗರು ಆಗುತ್ತೇವೆ' ಎಂದು ಪ್ರತಿಪಾದಿಸಿದರು.
ಸರ್ಕಾರ ಹೆಚ್ಚು ನೆರವು ನೀಡಬೇಕು- ಕೋ.ಚೆ

`ದೇಶದ ಅಭಿವೃದ್ಧಿ ಮಟ್ಟ ಅಳೆಯಲು ಸಾಕ್ಷರತೆ ಮಾನದಂಡವಾಗಬೇಕು. ಶಿಕ್ಷಣ ಮತ್ತು ಸಂಸ್ಕೃತಿ ವಲಯಕ್ಕೆ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು' ಎಂದು ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸಪ್ಪ ಸಲಹೆ ನೀಡಿದರು.

`ನಾನು ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ವಿಜಾಪುರ ಜಿಲ್ಲೆಯವರಾದ ಹರ್ಡೇಕರ ಮಂಜಪ್ಪ ಅವರ ಸ್ಫೂರ್ತಿಯೇ ಕಾರಣ. ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರು ತುಳಿದ ಮೆಟ್ಟಿಲುಗಳಿರುವ ಕೋರ್ಟ್ ಹಾಲ್‌ನಲ್ಲಿಯೇ ನಾನು ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೆ. ವಿಜಾಪುರ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದು ನನ್ನ ಪುಣ್ಯ' ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT