ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ಸಭೆ ವಿಫಲ

ಮೇಲ್ಮನೆ ಚುನಾವಣೆ: ಇಬ್ಬರನ್ನು ಕಣಕ್ಕಿಳಿಸಲು ನಿರ್ಧಾರ
Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬಿಜೆಪಿ ಪ್ರಮುಖರ ಸಭೆ ವಿಫಲವಾಯಿತು.

ಚುನಾವಣೆಯು ಜೂನ್‌ 10ರಂದು ನಡೆಯಲಿದೆ. ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಪ್ರಮುಖರ ಸಭೆಯು ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬ ನಿರ್ಧಾರ ಕೈಗೊಂಡಿದೆ.

ವಿಧಾನಸಭೆಯಲ್ಲಿ 47 ಸದಸ್ಯರನ್ನು ಹೊಂದಿರುವ ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಎರಡನೆಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬಿಜೆಪಿಯು ಜೆಡಿಎಸ್‌ ಅಥವಾ ಪಕ್ಷೇತರ ಶಾಸಕರ ಬೆಂಬಲ ಪಡೆಯಬೇಕಾಗುತ್ತದೆ.

ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಮಜ್ದೂರ್ ಸಂಘದ ನಾಯಕ ಡಿ.ಕೆ. ಸದಾಶಿವ ಅಥವಾ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಒಂದನೆಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಸಭೆ ಚರ್ಚಿಸಿತು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಥವಾ ಪರಿಷತ್ತಿನ ಹಾಲಿ ಸದಸ್ಯ ಲೆಹರ್ ಸಿಂಗ್ ಅವರನ್ನು ಎರಡನೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಆದರೆ ಒಂದನೆಯ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಒಮ್ಮತ ವ್ಯಕ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಪಾಲ್ಗೊಂಡಿದ್ದರು.

ಸೋಮಣ್ಣಗೆ  ಯಡಿಯೂರಪ್ಪ ಬೆಂಬಲ ಇಲ್ಲ: ಯಡಿಯೂರಪ್ಪ ಅವರು ಸೋಮಣ್ಣ ಪರ ಒಲವು ವ್ಯಕ್ತಪಡಿಸಲಿಲ್ಲ. ಆದರೆ ಸದಾನಂದ ಗೌಡ, ಅನಂತ ಕುಮಾರ್ ಅವರು ಸೋಮಣ್ಣ ಪರ ಮಾತನಾಡಿದರು ಎಂದು ಗೊತ್ತಾಗಿದೆ. ಇನ್ನೊಮ್ಮೆ ಸಭೆ ಸೇರಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಮಣ್ಣ ಪರ ಇರುವ ನಾಯಕರು, ಪ್ರಮುಖರ ಸಮಿತಿಯ ಸಭೆಯ ನಂತರ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಸೋಮಣ್ಣ ಹಾಗೂ ಕಟ್ಟಾ ಅವರ ಹೆಸರನ್ನು ಒಂದನೆಯ ಮತ್ತು ಎರಡನೆಯ ಅಭ್ಯರ್ಥಿ ಸ್ಥಾನಕ್ಕೆ ಸೂಚಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ತಮ್ಮ ನಿಲುವನ್ನು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ತೀರ್ಮಾನವನ್ನೂ ಅವರು ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT