ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳುಗುಪ್ಪೆಎಲೆ ಮರೆಯ ಅಲರು

Last Updated 15 ಮೇ 2015, 19:30 IST
ಅಕ್ಷರ ಗಾತ್ರ

ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಿದೆ. ಕುಟುಂಬದವರೊಡನೆ ಪ್ರವಾಸ ಹೋಗಲು ಈಗ ಸರಿಯಾದ ಸಮಯ. ಅದರಲ್ಲೂ, ಬೆಂಗಳೂರಿಗರಿಗೆ ನಗರದ ಪ್ರತಿನಿತ್ಯದ ಒತ್ತಡ ಮತ್ತು ಗದ್ದಲಗಳಿಂದ ಸ್ವಲ್ಪ ದೂರದ ಪ್ರಶಾಂತವಾದ ಸ್ಥಳಗಳಿಗೆ ಹೋಗುವುದೆಂದರೆ ಅತ್ಯಂತ ಆಪ್ಯಾಯಮಾನವಾದದ್ದು. ಆದರೆ ರಜಾ ಸಮಯದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಎಲ್ಲಾ ಪ್ರವಾಸಿ ತಾಣಗಳಲ್ಲೂ ಜನವೋ ಜನ! ಬೆಂಗಳೂರಿನಿಂದ ಸ್ವಲ್ಪ ದೂರದಲ್ಲೇ (125ಕಿ.ಮೀ) ಪ್ರವಾಸಿಗರ ಗಮನಕ್ಕೇ ಬರದ, ಹೆಚ್ಚು ಪ್ರಚಾರ ಪಡೆಯದ ಒಂದು ಸುಂದರವಾದ ಸ್ಥಳವಿದೆ. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುವ ಈ ಸುಂದರ ತಾಣವೇ ಅರಳುಗುಪ್ಪೆ.

ಬೆಂಗಳೂರಿನಿಂದ ತುಮಕೂರು-ಹೊನ್ನಾವರ ಮಾರ್ಗದಲ್ಲಿ ಗುಬ್ಬಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಸಿಗುವ ಸದ್ದುಗದ್ದಲಗಳಿಲ್ಲದ ಸಣ್ಣಹಳ್ಳಿ ಅರಳುಗುಪ್ಪೆ. ಮುಖ್ಯರಸ್ತೆಯಿಂದ ಸ್ವಲ್ಪ ದೂರದಲ್ಲಿ, ಹೊಲ-ಗದ್ದೆ-ತೋಟಗಳ ತಂಪಾದ ವಾತಾವರಣದ ನಡುವೆ ಇರುವ ಈ ಪುಟ್ಟ ಊರಲ್ಲಿ ಹೊಯ್ಸಳರ ಕಾಲದ ಚೆನ್ನಕೇಶವನ ದೇವಾಲಯವಿದೆ.

ಸುಮಾರು ಕ್ರಿ.ಶ. 1250ರಲ್ಲಿ, ಹೊಯ್ಸಳ ವಂಶದ ವೀರ ಸೋಮೇಶ್ವರನ ಕಾಲದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆಯೆಂಬ ಮಾಹಿತಿ ದೆವಸ್ಥಾನದ ಮುಂದಿರುವ ಭಾರತೀಯ ಪುರಾತತ್ವ ಇಲಾಖೆಯ ಫಲಕದಲ್ಲಿ ಕಂಡುಬರುತ್ತದೆ. ಹೊಯ್ಸಳರ ಕಾಲದ ಎಲ್ಲಾದೇವಾಲಯಗಳಂತೆಯೇ ಇದನ್ನೂ 16 ಮೂಲೆಗಳ ನಕ್ಷತ್ರದಾಕಾರದ ಸುಮಾರು 4 ಅಡಿ ಎತ್ತರದ ಜಗಲಿಯ ಮೇಲೆ, 16 ಮೂಲೆಗಳ ಏಕಕೂಟ ಗೋಪುರದ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಬೇಲೂರು-ಹಳೇಬೀಡಿನಲ್ಲಿ ಇರುವಂತೆಯೇ, ದೇವಸ್ಥಾನದ ಸುತ್ತಲಿನ ಹೊರಗೋಡೆಯಲ್ಲಿ ಆರು ಸಾಲಿನ ಸುಂದರವಾದ ಕೆತ್ತನೆಗಳಿರುವ ಪಟ್ಟಿಕೆಗಳಿವೆ. ಎಲ್ಲಕ್ಕಿಂತ ಕೆಳಗಿನ ಸಾಲಿನಲ್ಲಿ ಆನೆಗಳು, ಎರಡನೇ ಸಾಲಿನಲ್ಲಿ ಕುದುರೆಗಳು, ಮೂರನೇ ಸಾಲಿನಲ್ಲಿ ಬಳ್ಳಿಗಳ ತೋರಣ, ನಾಲ್ಕನೇ ಸಾಲಿನಲ್ಲಿ ರಾಮಾಯಣ ಮತ್ತು ಭಾಗವತದ ದೃಶ್ಯಗಳು, ಐದನೇ ಸಾಲಿನಲ್ಲಿ ಮಕರ ಮತ್ತು ಆರನೇ ಸಾಲಿನಲ್ಲಿ ಹಂಸಗಳ ಶಿಲ್ಪಗಳನ್ನು ನೋಡಬಹುದು. ಈ ಚಿಕ್ಕ ಚಿಕ್ಕ ಶಿಲ್ಪಗಳೆಲ್ಲವೂ ಒಂದಕ್ಕಿ೦ತ ಒಂದು ಮನೋಹರವಾಗಿವೆ.

ಪಟ್ಟಿಕೆಗಳ ಮೇಲೆ, ದೇವಾಲಯದ ಸುತ್ತಲೂ ವಿಷ್ಣುವಿನ ಅವತಾರಗಳು ಮತ್ತು ಇತರ ದೇವತೆಗಳ ಮನಮೋಹಕ ವಿಗ್ರಹಗಳಿವೆ. ಅದರಲ್ಲೂ ನರಸಿಂಹ, ನಾಟ್ಯ ಗಣಪತಿ ಮತ್ತು ಕೊಳನೂದುವ ಕೃಷ್ಣನ  ವಿಗ್ರಹಗಳ ಸೌಂದರ್ಯ ಮನಸೂರೆಗೊಳ್ಳುವಂತಿದೆ. ಪ್ರತಿಯೊಂದು ವಿಗ್ರಹದ ಮೇಲೂ ಸಣ್ಣ ಸಣ್ಣ ಗೋಪುರದ ಮಾದರಿಯನ್ನು ಮಾಡಿರುವುದರಿಂದ, ಇದು ಹಲವು ಸಣ್ಣ ದೇವಾಲಯಗಳನ್ನು ಸೇರಿಸಿ ಮಾಡಿದ ಗುಚ್ಛದಂತೆ ಕಾಣುತ್ತದೆ. ಕೆಲವು ಶಿಲ್ಪಗಳ ಅಡಿಯಲ್ಲಿ, ಇವುಗಳನ್ನು ಕೆತ್ತನೆ ಮಾಡಿರುವನೆನ್ನಲಾದ ’ಹೊನ್ನಾಜ’ ಎಂಬ ಶಿಲ್ಪಯ ಹೆಸರನ್ನೂ ಹಳೆಗನ್ನಡದಲ್ಲಿ ಕೆತ್ತಲಾಗಿದೆ. ಕೆಲವು ಕಡೆ ‘ಹೊ’ ಎಂದು ಮಾತ್ರ ಕೆತ್ತಲಾಗಿದೆ.

ಇನ್ನು ದೇವಾಲಯದ ಒಳಭಾಗದಲ್ಲಿ ನುಣುಪಾದ ವಿವಿಧ ಆಕೃತಿಗಳನ್ನುಳ್ಳ ಹಲವಾರು ಕಂಬಗಳಿವೆ. ಒಂದೊಂದು ಕಂಬದ ಮೇಲೂ ಬಗೆಬಗೆಯ ಕುಸುರಿ ಕೆತ್ತನೆಗಳಿವೆ. ಒಂದು ಕಂಬದ ಮೇಲ್ಭಾಗದಲ್ಲಿ ಹೆಬ್ಬೆರಳಿನ ಗಾತ್ರದ ಕಡಲೆಕಾಳು ಗಣಪತಿಯನ್ನು ನೋಡಲು ಮರೆಯದಿರಿ. ದೇವಸ್ಥಾನದ ಒಳಗೆ ಬಲಬದಿಯಲ್ಲಿ, ಭಿನ್ನಗೊಂಡಿರುವ ಸುಮಾರು 6 ಅಡಿ ಎತ್ತರದ ಮುದ್ದಾದ ಚೆನ್ನಕೇಶವನ ಮೂಲ ವಿಗ್ರಹವನ್ನು ಇರಿಸಲಾಗಿದೆ. ಭಿನ್ನವಾಗಿರುವುದರಿಂದ ಈ ವಿಗ್ರಹಕ್ಕೆ ಪೂಜೆ ಮಾಡಲಾಗುತ್ತಿಲ್ಲ. ಇದರ ಬದಲು, ಗರ್ಭಗುಡಿಯಲ್ಲಿ ಸ್ವಲ್ಪ ಚಿಕ್ಕದಾದ (ಸುಮಾರು 4 ಅಡಿ) ಚೆನ್ನಕೇಶವನ ಇನ್ನೊಂದು ಮೂರ್ತಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ.

ಗರ್ಭಗುಡಿಯ ಹೊರಗೆ ದ್ವಾರದ ಬದಿಗಳಲ್ಲಿ, ಗಣಪತಿ ಮತ್ತು ಚಾಮುಂಡಿದೇವಿಯ ಶಿಲ್ಪಗಳಿವೆ. ಮಹಿಷ ಮರ್ದಿನಿಯ ರೂಪದಲ್ಲಿರುವ ದೇವಿಯ ವಿಗ್ರಹದಲ್ಲಿಯಂತೂ, ಶಿಲ್ಪಿಯ ಕುಸುರಿ ಕೆತ್ತನೆಯ ಸೂಕ್ಷ್ಮತೆ ಮತ್ತು ನಾಜೂಕಿನ ಕಾರ್ಯ ನಮ್ಮನ್ನು ಮಂತ್ರಮುಗ್ಧವಾಗಿಸುತ್ತದೆ. ದೇವಿಯ ಕಾಲ ಬಳಿಯಿರುವ ಮಹಿಷ ಮತ್ತು ಮಹಿಷಾಸುರನ ಕೆತ್ತನೆಯನ್ನು ನೋಡಲು ಸಂತೋಷವಾಗುತ್ತದೆ. ನಕ್ಷತ್ರ ಮತ್ತು ಹೂಬಳ್ಳಿಯಾಕಾರದಲ್ಲಿ ಹಲವಾರು ಆಕೃತಿಗಳನ್ನುಳ್ಳ ಮಾಡಿನಲ್ಲಿರುವ ಕೆತ್ತನೆಗಳೂ ಸುಂದರವಾಗಿವೆ.

ದೇವಸ್ಥಾನದ ಒಂದೇ ಒಂದು ದೃಷ್ಟಿಬೊಟ್ಟಿನಂತೆ ಕಾಣುವುದೆಂದರೆ, ಹೊರಗೆ ಒಂದು ಬದಿಯ ಗೋಡೆಯನ್ನು ಆವರಿಸಿ ಕಟ್ಟಲಾಗಿರುವ ನರಸಿಂಹ ದೇವಾಲಯ. ಈ ದೇವಸ್ಥಾನದಲ್ಲಿ ವಿಶೇಷವಾದ ಯಾವ ಕೆತ್ತನೆಗಳೂ ಇಲ್ಲ. ಇದನ್ನು ಯಾವಾಗ ಮತ್ತು ಏಕೆ ಹೀಗೆ ಕಟ್ಟಲಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.

ದೇವಾಲಯದ ಸುತ್ತಲೂ ಸುಂದರವಾದ ಚಿಕ್ಕ ಉದ್ಯಾನವಿದೆ. ದೇವಸ್ಥಾನದ ಒಳಗೂ ಮತ್ತು ಹೊರಗೂ ಸ್ವಚ್ಛತೆಯನ್ನು ಕಾಪಾಡಿರುವುದಕ್ಕೆ ಸಂಬಂಧಪಟ್ಟವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ದೇವಸ್ಥಾನದ ಹೊರಜಗಲಿಯಲ್ಲಿ, ಪ್ರಶಾಂತ ವಾತಾವರಣದಲ್ಲಿ ಸ್ವಲ್ಪಹೊತ್ತು ಕುಳಿತರೆ, ದೇವಲೋಕದಿಂದ ಕೆಳಗಿಳಿದು ಬಂದ ತೇರಿನಲ್ಲಿ ಕುಳಿತಂತಹ ಅನುಭವವಾಗುತ್ತದೆ!

ಚೆನ್ನಕೇಶವನ ದೇವಾಲಯದ ಸಮೀಪದಲ್ಲೇ, ದೊಡ್ಡ ಕೆರೆಯ ಪಕ್ಕದಲ್ಲಿ ಪುರಾತನವಾದ ಕಲ್ಲೇಶ್ವರ ಷಡ್ಲಿಂಗ ದೇವಸ್ಥಾನಗಳ ಸಮೂಹವಿದೆ. ಈ ದೇವಾಲಯ ಸಮೂಹವನ್ನು ಸುಮಾರು 9ನೇ ಶತಮಾನದಲ್ಲಿ, ನೊಳಂಬ ರಾಜನಾದ 2ನೇ ರಾಚಮಲ್ಲನು ನಿರ್ಮಿಸಿದನೆಂದು ತಿಳಿದುಬರುತ್ತದೆ. ದೇವಾಲಯದ ಸಮೀಪದಲ್ಲಿ ಹಲವಾರು ಹಳೆಗನ್ನಡದ ಶಿಲಾಶಾಸನಗಳು ಮತ್ತು ವೀರಗಲ್ಲುಗಳಿವೆ. ಇಲ್ಲಿನ ನಂದಿ ವಿಗ್ರಹದ ಕೆತ್ತನೆ ತುಂಬಾ ಚೆನ್ನಾಗಿದೆ. ಈ ದೇವಾಲಯಗಳ ನವೀಕರಣ ಕಾರ್ಯ ಈಗ ನಡೆಯುತ್ತಿದೆ.
ಈ ರಜೆಯಲ್ಲಿ, ಮರೆಯಲ್ಲಿ ಅಡಗಿರುವ ಅರಳುಗುಪ್ಪೆಯ ಚೆನ್ನಕೇಶವನ ದೇವಸ್ಥಾನವನ್ನು ನೋಡಲು ಮರೆಯಬೇಡಿ.

ಹೋಗುವುದು ಹೀಗೆ...


ಬೆಂಗಳೂರಿನಿಂದ ತುಮಕೂರು-ಗುಬ್ಬಿ ಮಾರ್ಗವಾಗಿ ಹೊನ್ನಾವರದ (ರಾ.ಹೆ. 206) ರಸ್ತೆಯಲ್ಲಿ ಸಾಗಿ, ನಿಟ್ಟೂರು, ಕಿಬ್ಬನಹಳ್ಳಿ ಕ್ರಾಸ್ ದಾಟಿದರೆ ಬಿಳಿಗೆರೆ ಎಂಬ ಸಣ್ಣ ಊರು ಸಿಗುತ್ತದೆ. ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಮುಖ್ಯರಸ್ತೆಯಿಂದ ಎಡಗಡೆಗೆ, ಸಣ್ಣ ರಸ್ತೆಗೆ ತಿರುಗಿ.

ಇಲ್ಲಿ ಯಾವುದೇ ನಾಮಫಲಕ ಇಲ್ಲವಾದ್ದರಿಂದ ಯಾರನ್ನಾದರೂ ವಿಚಾರಿಸಿ. ಈ ದಾರಿಯಲ್ಲಿ 7 ಕಿ.ಮೀ. ಸಾಗಿ, ರೈಲ್ವೆ ಸೇತುವೆಯನ್ನು ದಾಟಿದರೆ ಅರಳುಗುಪ್ಪೆ ಸಿಗುತ್ತದೆ. ಊರನ್ನು ಪ್ರವೇಶಿಸಿದ ತಕ್ಷಣ ಎಡಬಾಗಕ್ಕೆ ಕಲ್ಲೇಶ್ವರನ ದೇವಸ್ಥಾನ ಮತ್ತು ಬಲಭಾಗದಲ್ಲಿ ಚೆನ್ನಕೇಶವನ ದೇವಸ್ಥಾನಗಳಿವೆ. ರಸ್ತೆ ಚೆನ್ನಾಗಿದೆ. ಊಟ ತಿಂಡಿಗೆ ಹತ್ತಿರದ ಗುಬ್ಬಿ, ತಿಪಟೂರು, ತುಮಕೂರುಗಳಲ್ಲಿ ಹೋಟೆಲುಗಳಿವೆ. ದಾರಿಯಲ್ಲಿ ಸಿಗುವ ಗುಬ್ಬಿಯಲ್ಲಿ, ಮುಖ್ಯರಸ್ತೆಯ ಎಡಗಡೆಯಲ್ಲಿರುವ ಗೋಸಲ ಚೆನ್ನಬಸವೇಶ್ವರ ದೇವಸ್ಥಾನವನ್ನೂ ನೋಡಲು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT