ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ ಬದುಕು ಅರಸುತ್ತಾ...

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಅಪೂರ್ವ ಪ್ರಸಾದ್‌
ಇಂಗ್ಲಿಷ್‌ ನಿಯತಕಾಲಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಪತ್ರಕರ್ತ ಅಪೂರ್ವ ಪ್ರಸಾದ್‌ ಜೀವನಶೈಲಿ ಮತ್ತು ಸಾಹಸ ಕ್ರೀಡೆಗಳಿಗಾಗಿಯೇ ಪತ್ರಿಕೆ ಮತ್ತು ವೆಬ್‌ ಜಾಲತಾಣ ಆರಂಭಿಸಿದ ಯಶಸ್ವಿ ಕಥೆ ಇದು.

ಹರಿಯಾಣದ ಅಪೂರ್ವ ಪ್ರಸಾದ್‌ಗೆ ಸಾಹಸ ಕ್ರೀಡೆಗಳ ಬಗ್ಗೆ ವರದಿ ಮಾಡುವುದೆಂದರೆ ಅಚ್ಚು ಮೆಚ್ಚು. ಪ್ರಸಾದ್‌ ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಇಂಥ ವರದಿಗಳಿಗೆ ಪ್ರಾಶಸ್ತ್ಯ ಸಿಗುತ್ತಿರಲಿಲ್ಲ. ಇದರಿಂದ ಬೇಸರಗೊಂಡಿದ್ದರು. ತಮ್ಮ ಆಲೋಚನೆಗಳಿಗೆ ಬೆಲೆ ಇಲ್ಲದಿರುವ ಕಡೆ ಸಂಬಳಕ್ಕಾಗಿ ಕೆಲಸ ಮಾಡುವುದು ಪ್ರಸಾದ್‌ಗೆ ಇಷ್ಟವಾಗಲಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. 2002ರಲ್ಲಿ ಸಾಹಸ ಕ್ರೀಡೆಗಳಿಗಾಗಿಯೇ ‘ಕ್ಲೈಮ್‌ಬಿಂಗ್‌ ಇಂಡಿಯಾ’ ಎಂಬ ವೆಬ್‌ ತಾಣ ಆರಂಭಿಸಿದರು. ಈ ವೆಬ್‌ಸೈಟ್‌ನಿಂದ ಹೆಸರು ಬಂತೇ ವಿನಾ ಲಾಭ ಬರಲಿಲ್ಲ. ನಷ್ಟದಲ್ಲೇ 11 ವರ್ಷ  ವೆಬ್‌ಸೈಟ್‌ ನಡೆಸಿದರು. ಈ ನಡುವೆ ಸಾಹಸ ಕ್ರೀಡಾಪಟುಗಳಿಗೆ ಸರ್ಕಾರ ಮತ್ತು ಸರ್ಕಾರೇತರ ವಿಮಾ ಕಂಪೆನಿಗಳು ಜೀವವಿಮಾ ಸೌಲಭ್ಯ ನೀಡುತ್ತಿಲ್ಲ ಎಂದು ದೇಶದ ಗಮನ ಸೆಳೆದರು. ಈ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದರು. ದೇಶ ಸುತ್ತಿ ಕ್ರೀಡಾಪಟುಗಳನ್ನು ಸಂಘಟಿಸಿ ಹೋರಾಟದ ವೇದಿಕೆ ರೂಪಿಸಿದರು.

2013ರ ವೇಳೆಗೆ ಸಾಹಸ ಕ್ರೀಡಾಪಟುಗಳ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದರು. ಅದೇ ವರ್ಷ ಏಪ್ರಿಲ್‌ನಲ್ಲಿ ‘ಕ್ಲೈಮ್‌ಬಿಂಗ್‌ ಇಂಡಿಯಾ’, ‘ದಿ ಔಟ್‌ಡೋರ್‌ ಜರ್ನಲ್‌’ (ಟಿಒಜೆ) ಎಂಬ ಹೆಸರಿನಲ್ಲಿ ಪುನಶ್ಚೇತನಗೊಂಡಿತ್ತು. ಇದೇ ಹೆಸರಲ್ಲಿ ನಿಯತಕಾಲಿಕೆಯೊಂದು ಆರಂಭವಾಯಿತು. ಇಂದು ಟಿಒಜೆ ವೆಬ್‌ಸೈಟ್‌ಗೆ ಪ್ರತಿನಿತ್ಯ 50 ಸಾವಿರ ಜನರು ಭೆಟಿ ನೀಡುತ್ತಿದ್ದಾರೆ. ವಿಶ್ವದ ಹನ್ನೊಂದು ಭಾಷೆಗಳಲ್ಲಿ ಈ ವೆಬ್‌ಸೈಟ್‌ ಲಭ್ಯ. ವಿದೇಶಗಳಿಗೂ ಪತ್ರಿಕೆಗಳನ್ನು ಕಳುಹಿಸಿಕೊಡಲಾಗುತ್ತಿದ್ದು ಅಮೆರಿಕದಲ್ಲಿ 2000ಕ್ಕೂ ಹೆಚ್ಚು ಪತ್ರಿಕೆಗಳು ಮಾರಾಟವಾಗುತ್ತಿವೆ.

ಚಾರಣ, ಸಾಹಸಕ್ರೀಡೆಗಳ ತರಬೇತಿ, ಆರೋಗ್ಯ, ಜೀವನಶೈಲಿ ಕುರಿತಂತೆ ಕಾರ್ಯಾಗಾರಗಳು ಮತ್ತು ಚಾರಣಗಳನ್ನು ಏರ್ಪಡಿಸುತ್ತಿರುವ ಪ್ರಸಾದ್‌ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ.
http://www.outdoorjournal.in/

ರಿತೇಶ್‌ ಗರ್ಗ್‌
‘ಹಿಮಾಲಯದ ತಪ್ಪಲಿನಲ್ಲಿ ಹರಿಯುವ ನೀರು ಉಪಯೋಗಕ್ಕೆ ಬಾರದೇ ಪೋಲಾಗುವಂತೆ ಯುವಕರೂ ಹಳ್ಳಿಗಳನ್ನು ತೊರೆದು ನಗರಗಳಿಗೆ ವಲಸೆ ಹೊಗುತ್ತಿದ್ದಾರೆ. ಈ ಎರಡು ಅಮೂಲ್ಯ ಸಂಪನ್ಮೂಲಗಳಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಸರ್‌’.
–ಹಿಮಾಲಯದ ತಪ್ಪಲಿನಲ್ಲಿರುವ ಹಳ್ಳಿಯೊಂದರ ಯಜಮಾನ ರಿತೇಶ್‌ ಗರ್ಗ್‌ ಅವರಿಗೆ ಹೇಳಿದ ಮಾತಿದು.

ರಿತೇಶ್‌ ‘ಯುವ ಪ್ರೇರಣಾ ಯಾತ್ರೆ’ಯ ಪ್ರವರ್ತಕ. ಹಿಮಾಲಯ ಭಾಗದಲ್ಲಿ ಪರಿಸರ ರಕ್ಷಿಸಿ ಅಭಿಯಾನ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಜತೆಗೆ  ಯುವಕರು ವಲಸೆ ಹೋಗದಂತೆ ತಡೆಯಲು ಅವರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲೂ ನಿರತರಾಗಿದ್ದಾರೆ. ಮೂರು ಬಾರಿ ನಾಗರೀಕ ಸೇವಾ ಪರೀಕ್ಷೆಯ (ಐಎಎಸ್‌) ಸಂದರ್ಶನ ಎದುರಿಸಿದರೂ ಅಧಿಕಾರಿಯಾಗಿ ನೇಮಕವಾಗಲಿಲ್ಲ. ಈ ಸೋಲಿನಿಂದ ವಿಚಲಿತರಾಗದ ರಿತೇಶ್‌ ಪರಿಸರ ಹೋರಾಟಕ್ಕೆ ಮುಂದಾದರು.

ಪ್ರೇರಣಾ ಯಾತ್ರೆಯ ಮೂಲಕ ನೂರಾರು ಯುವಕ ಯುವತಿಯರ ತಂಡ ಕಟ್ಟಿಕೊಂಡು ಹಿಮಾಲಯದಲ್ಲಿ ಸಸಿಗಳನ್ನು ನೆಡುತ್ತಿದ್ದಾರೆ. ಅಲ್ಲದೆ ಪರಿಸರ, ಆರೋಗ್ಯ, ಶಿಕ್ಷಣ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರೂರ್‌ಕೆಲಾದ ರಿತೇಶ್‌ ಎಂಬಿಎ ಪದವೀಧರ. ಐಎಎಸ್‌ ಪರೀಕ್ಷೆ ತಯಾರಿಗಾಗಿ ದೆಹಲಿಗೆ ಬಂದರು. ಇಲ್ಲಿನ ಸ್ಥಳೀಯ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಒಮ್ಮೆ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ‘ನೀವು ಭವಿಷ್ಯದಲ್ಲಿ ಏನಾಗುತ್ತೀರಾ’ ಎಂದು ಕೇಳುತ್ತಿದ್ದಾಗ, ವಿದ್ಯಾರ್ಥಿನಿಯೊಬ್ಬಳು ಸರ್‌ ನೀವು ಏನಾಗಬೇಕು ಎಂದು ಬಯಸಿದ್ದಿರೀ ಎಂದು ಪ್ರಶ್ನೆ ಮಾಡಿದ್ದಳಂತೆ. ಆಗ ಅಚಾನಕ್ಕಾಗಿ ಬಾಯಿಗೆ ಬಂದದ್ದು ಪರಿಸರ ಹೋರಾಟಗಾರ ಎಂಬ ಮಾತು. 

ಐಎಎಸ್‌ ಅಧಿಕಾರಿಯಾಗುವ ಕನಸು ಭಗ್ನವಾದ ಬಳಿಕ ಪರಿಸರ ಹೋರಾಟದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಜತೆಗೆ ಯುವ ಪ್ರೇರಣಾ ಯಾತ್ರೆ ಆರಂಭಿಸಿದರು. ಒಂದು ವರ್ಷದಲ್ಲಿ 1 ಲಕ್ಷ ಕಿ.ಮೀ ಸುತ್ತಿರುವ ರಿತೇಶ್‌ ತಂಡ ಲಕ್ಷಾಂತರ ಸಸಿಗಳನ್ನು  ನೆಡುವ ಮೂಲಕ ದಾಖಲೆ ಬರೆದಿದೆ. ಕಂಡ ಕನಸು ನನಸಾಗದಿದ್ದರೂ ಹಸಿರು ಉಳಿಸುವ ಅಭಿಯಾನದಲ್ಲಿ ಸಾಧನೆ ಮಾಡುತ್ತಿದ್ದಾರೆ.
http://yuvaprernayatra.org

ಅರ್ಘ್ಯ ಬ್ಯಾನರ್ಜಿ
ಹೋರಾಟಗಳು ಮತ್ತು ಸಾಧನೆಗಳು ಯಾವಾಗಲೂ ವಿಭಿನ್ನವಾಗಿರುತ್ತವೆ ಎಂಬುದಕ್ಕೆ ಪಶ್ಚಿಮ ಬಂಗಾಳದ ಅರ್ಘ್ಯ ಬ್ಯಾನರ್ಜಿ ಅತ್ಯುತ್ತಮ ಉದಾಹರಣೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗ ಮಾಡುವುದು ಸಾಮಾನ್ಯದ ಮಾತಲ್ಲ. ಇದಕ್ಕೆ ಸರ್ಕಾರದ ಅನುಮತಿ ಅತ್ಯಗತ್ಯ. ಮೂಲತಃ ರಿಯಲ್‌ ಎಸ್ಟೇಟ್‌ ಉದ್ಯಮಿ ಯಾಗಿರುವ ಬ್ಯಾನರ್ಜಿಗೆ ಶಿಕ್ಷಣದಲ್ಲಿ ಅತೀವ ಆಸಕ್ತಿ. ವಿಶ್ವವಿದ್ಯಾಲಯಗಳು ನಿರುದ್ಯೋಗವನ್ನು ಸೃಷ್ಟಿಸುವ ಕಾರ್ಖಾನೆಗಳು, ಡಿಗ್ರಿ ಪಡೆದು ಹೊರಬಂದ ಬಳಿಕ ನಿರುದ್ಯೋಗದ ಉಡುಗೊರೆ ಸಿಗುತ್ತದೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಹಳೆಯ ಶಿಕ್ಷಣ ಪದ್ಧತಿ ಎನ್ನುವುದು ಬ್ಯಾನರ್ಜಿ ಆಪಾದನೆ. ಈ ವ್ಯವಸ್ಥೆ ಬದಲಾಗಬೇಕು, ಪದವಿ ಪಡೆದು ಹೊರ ಬಂದ ಕೂಡಲೇ ಉದ್ಯೋಗ ದೊರೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದು ಅವರ ಕನಸು.

ಯುರೋಪ್‌ ಮತ್ತು ಅಮೆರಿಕದಲ್ಲಿರುವಂತಹ ಶಿಕ್ಷಣ ಪದ್ಧತಿ  ಇಲ್ಲಿಯೂ ಜಾರಿಯಾಗಬೇಕು ಎಂಬುದು ಅವರ ಒತ್ತಾಸೆ. ಮಕ್ಕಳಲ್ಲಿರುವ ಬುದ್ಧಿಮತ್ತೆ ಗ್ರಹಿಸಿ ಅವರಿಗೆ ಎಂತಹ ಶಿಕ್ಷಣ ಕೊಡಬಹುದು ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ನಿರ್ಧರಿಸಿ ಅದಕ್ಕೆ ಪೂರಕವಾದ ಶಾಲೆಗೆ ಸೇರಿಸಬೇಕು ಎನ್ನುತ್ತಾರೆ ಬ್ಯಾನರ್ಜಿ.  ಕೋಲ್ಕತ್ತ ಸಮೀಪದ ಸುರಿ ಎಂಬ ಹಳ್ಳಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಲೆವೆಲ್‌ಫೀಲ್ಡ್‌’ ಶಾಲೆ ತೆರೆದಿದ್ದಾರೆ. ಇಲ್ಲಿ ಅಮೆರಿಕ ಮತ್ತು ಯುರೋಪ್‌ ಮಾದರಿಯ ಶಿಕ್ಷಣ ನೀಡಲಾಗುತ್ತಿದ್ದು, ಪ್ರಸ್ತುತ ಮುನ್ನೂರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಪರೀಕ್ಷೆ ನಡೆಸಿ ಅಂಕಗಳನ್ನು ನೀಡುವ  ಬದಲಿಗೆ ಪ್ರಾಯೋಗಿಕ ತರಗತಿಗಳ ಮೂಲಕ ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುವುದು. ಅಂತಿಮವಾಗಿ  ಆ ವಿದ್ಯಾರ್ಥಿ ಉತ್ತಮ ನಾಗರೀಕನಾಗುವ ಮೂಲಕ ತನ್ನ ಕಾಲ ಮೇಲೆ ತಾನು ನಿಲ್ಲುವುದೇ ಈ ಶಿಕ್ಷಣ ಪದ್ಧತಿಯ ವೈಶಿಷ್ಟ್ಯ. ಈ ಪ್ರಯೋಗ ಯಶಸ್ವಿಯಾದರೆ ಭಾರತದ ಶಿಕ್ಷಣ ಪದ್ಧತಿಯೇ ಬದಲಾಗಲಿದೆ ಎಂಬ ವಿಶ್ವಾಸ ಬ್ಯಾನರ್ಜಿ ಅವರದ್ದು.
http://levelfieldschool.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT