ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆಯಲ್ಲಿ ಐಫೋನ್‌ ರಿಂಗಣ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆರ್ಥಿಕ ವ್ಯವಸ್ಥೆ ಕುರಿತು ನಿರಾಶಾದಾಯಕ ಸುದ್ದಿ ಬರುತ್ತಿರಬಹುದು. ಷೇರು ಸೂಚ್ಯಂಕ ಮೇಲೆ–ಕೆಳಗೆ ಹೊಯ್ದಾಡುತ್ತಿರಬಹುದು. ಆದರೆ, ಆ್ಯಪಲ್‌ನ ಐಫೋನ್‌ಗಳು ಮಾರುಕಟ್ಟೆಗೆ ಸಿಹಿ ಸುದ್ದಿಯನ್ನೇ ತರುತ್ತಿವೆ. ಐಫೋನ್‌–6 ಮತ್ತು ಐಫೋನ್‌–6 ಪ್ಲಸ್‌ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಿದ್ದು ಸೆಪ್ಟೆಂಬರ್‌ 19ರಂದು. ಅಂದಿನಿಂದ ಬರುತ್ತಿರುವ ಗ್ರಾಹಕರ ಬೇಡಿಕೆ ಈ ಸ್ಮಾರ್ಟ್‌ ಫೋನುಗಳನ್ನು ಪೂರೈಸಲು ಸಾಧ್ಯವಾಗದಷ್ಟಿದೆ.

ಇದರ ಪರಿಣಾಮ ಅರ್ಥವ್ಯವಸ್ಥೆಯಲ್ಲೆಲ್ಲ ಕಂಡುಬರುತ್ತಿದೆ. ಇದು ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ‘ಐಫೋನ್‌ಗಳ ಪರಿಣಾಮ ಅರಿವಿಗೆ ಬರುತ್ತಿದೆ’ ಎಂದು ಜೆಪಿ ಮಾರ್ಗನ್‌ ಚೇಸ್‌ ಸಂಸ್ಥೆಯ ಅರ್ಥಶಾಸ್ತ್ರಜ್ಞ ಮೈಕಲ್‌ ಫೆರೊಲಿ ಹೇಳುತ್ತಾರೆ.
‘ಇದು ಪುಟ್ಟ ಎಲೆಕ್ಟ್ರಾನಿಕ್‌ ಸಾಧನ. ಆದರೆ ಇದರ ಬೆಲೆ ತುಂಬಾ ಹೆಚ್ಚು. ಇಷ್ಟಿದ್ದರೂ, ಎಲ್ಲರ ಬಳಿಯೂ ಇದು ಇರುವಂತೆ ಭಾಸವಾಗುತ್ತಿದೆ’ ಎಂದು ಅವರು ಹೇಳುತ್ತಾರೆ. ಐಫೋನ್‌ಗಳ ಮಾರಾಟವು ಅಮೆರಿಕದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ವಾರ್ಷಿಕ ಹೆಚ್ಚಳದಲ್ಲಿ ಶೇಕಡ 25ರಿಂದ ಶೇ 33ರಷ್ಟು ಪಾಲು ಹೊಂದಿದೆ ಎಂದು ಅವರು ಅಂದಾಜಿಸಿದ್ದಾರೆ.

ಐಫೋನ್ ಎಂಬುದು ಹಣಕಾಸಿನ ಶಕ್ತಿ ಕೇಂದ್ರವೆಂದು ಜನ ಭಾವಿಸದೇ ಇರಬಹುದು. ಎಷ್ಟೆಂದರೂ, ಐಫೋನ್‌ ಎಂಬುದು ಒಂದು ಗ್ರಾಹಕ ಉತ್ಪನ್ನ. ಅದರ ಉಪಯೋಗಗಳು ಬಹಳ, ಅಷ್ಟೆ. ಐಫೋನ್‌ನ ಹೊಸ ಆವೃತ್ತಿಯನ್ನು ಆ್ಯಪಲ್‌ ಕಂಪೆನಿ ಪ್ರತಿ ಎರಡು ವರ್ಷಕ್ಕೊಮ್ಮೆ ಹೊರತಂದಾಗ, ಮಾರಾಟ ತೀವ್ರ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತದೆ. ನಾವು ಈಗ ತಯಾರಿಸಿರುವ ಸ್ಮಾರ್ಟ್‌ಫೋನ್‌ಗಳು ಇಲ್ಲಿಯವರೆಗಿನ ಐಫೋನ್‌ಗಳಲ್ಲೇ ಅತ್ಯುತ್ತಮ. ಗ್ರಾಹಕರು ಅವನ್ನು ಖಂಡಿತ ಇಷ್ಟಪಡುತ್ತಾರೆ ಎಂದು ಆ್ಯಪಲ್‌ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಟಿಮೊತಿ ಕುಕ್‌ ಹೇಳುತ್ತಾರೆ.

ಐಫೋನ್‌ಗಳನ್ನು ನೀವು ಇಷ್ಟಪಡಿ ಅಥವಾ ಇಷ್ಟಪಡದಿರಿ, ಅವು ಆರ್ಥಿಕ ಶಕ್ತಿ ಎಂಬುದನ್ನು ಗುರುತಿಸಲು ಇದು ಸಕಾಲ. ಐಫೋನ್‌ಗಳ ಮಾರಾಟದಿಂದ ಆ್ಯಪಲ್‌ ಕಂಪೆನಿ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಕಂಪೆನಿಯು ವಿವಿಧ ಶ್ರೇಣಿಯ ಐಫೋನ್‌ಗಳನ್ನು ಸರಾಸರಿ ₨ 37,700ಗೆ ಮಾರಾಟ ಮಾಡುತ್ತಿದೆ.

ಐಫೋನ್‌ಗಳ ಆರಂಭಿಕ ಕನಿಷ್ಠ ಬೆಲೆ ₨ 12,139 ಎಂದು ಆ್ಯಪಲ್‌ ಹೇಳುತ್ತದೆಯಾದರೂ, ಸರಾಸರಿ ಮಾರಾಟ ಬೆಲೆ ಇದರ ಸನಿಹ ಕೂಡ ಇಲ್ಲ. ಇನ್ನುಳಿದ ಮೊತ್ತವನ್ನು ಅಮೆರಿಕದ ಗ್ರಾಹಕರು, ಮೊಬೈಲ್‌ ಸೇವೆ ಒದಗಿಸುವ ಕಂಪೆನಿಗಳ ಮೂಲಕ ಪಾವತಿಸುತ್ತಾರೆ.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಐಫೋನ್‌ಗಳ ಕನಿಷ್ಠ ಬೆಲೆ ಆರಂಭವಾಗುವುದು ₨ 39,500ರಿಂದ. ಹೆಚ್ಚಿನ ಸ್ಮರಣ ಶಕ್ತಿ ಮತ್ತು ದೊಡ್ಡ ಪರದೆ ಇರುವ ಫೋನ್‌ಗಳಿಗೆ ಬೆಲೆ ಇನ್ನೂ ಹೆಚ್ಚು.

ಬೆಲೆಯನ್ನು ಹೀಗೆ ನಿಗದಿ ಮಾಡುವುದರಲ್ಲಿ ಆ್ಯಪಲ್‌ಗೆ ಲಾಭವಿದೆ. ‘ಐಫೋನ್‌ ಅನ್ನು ಸಿದ್ಧಪಡಿಸಲು ಆ್ಯಪಲ್‌ಗೆ ₨ 12,200 ಬೇಕಾಗುತ್ತದೆ’ ಎಂದು ಐಎಚ್‌ಎಸ್‌ ಟೆಕ್ನಾಲಜಿಯ ಆ್ಯಂಡ್ರೂ ರಾಸ್‌ವೇಲರ್‌ ಹೇಳುತ್ತಾರೆ. ಆದರೆ ಇದರಲ್ಲಿ, ಸಂಶೋಧನೆ ಮತ್ತು ಮಾರುಕಟ್ಟೆ ವೆಚ್ಚ ಒಳಗೊಂಡಿಲ್ಲ. ಐಪ್ಯಾಡ್‌ಗಳ ಮಾರಾಟದಿಂದ ಬರುವ ಲಾಭಕ್ಕಿಂತ ಎರಡು ಪಟ್ಟು ಹೆಚ್ಚು ಲಾಭ ಐಫೋನ್‌ಗಳಿಂದ ಹೇಗೆ ಬರುತ್ತದೆ ಎಂಬುದನ್ನು ಇದು ವಿವರಿಸುತ್ತದೆ.

‘ಒಂದು ಐಫೋನ್‌ನ ಮಾರುಕಟ್ಟೆ ಬೆಲೆಯ ಶೇಕಡ 50ರಷ್ಟು ಆ್ಯಪಲ್‌ ಕಂಪೆನಿಗೆ ಲಾಭದ ರೂಪದಲ್ಲಿ ಸಂದಾಯವಾಗುತ್ತದೆ. ಏಕೆಂದರೆ ಐಫೋನ್‌ಗಳು ಆ್ಯಪಲ್‌ನ ಅತ್ಯಂತ ಜನಪ್ರಿಯ ಉತ್ಪನ್ನ. ಕಳೆದ ತ್ರೈಮಾಸಿಕದಲ್ಲಿ 39 ದಶಲಕ್ಷಕ್ಕಿಂತ ಹೆಚ್ಚು ಐಫೋನ್‌ಗಳು ಮಾರಾಟವಾಗಿವೆ. ಆ್ಯಪಲ್‌ ಕಂಪೆನಿಯ ಒಟ್ಟು ಲಾಭದಲ್ಲಿ ಶೇ 60ರಿಂದ 70ರಷ್ಟು ಐಫೋನ್‌ ಮಾರಾಟದಿಂದಲೇ ಬರುತ್ತದೆ’ ಎಂದು ಆರ್ಥಿಕ ವಿಶ್ಲೇಷಕ ಟೋನಿ ಸ್ಯಾಕ್ಕೊನಾಗಿ ಹೇಳುತ್ತಾರೆ.

ಐಫೋನ್‌ಗಳ ಯಶಸ್ಸು, ಒಂದಕ್ಕೊಂದು ಪೂರಕವಾಗುವ ಹಲವು ಉತ್ಪನ್ನಗಳು ಮತ್ತು ಸೇವೆಗಳ ಹುಟ್ಟಿಗೆ ಕಾರಣವಾಗುತ್ತಿವೆ. ಡಿಜಿಟಲ್‌ ಕೈಗಡಿಯಾರಗಳು, ಹಣ ಪಾವತಿಸುವ ಹೊಸ ವ್ಯವಸ್ಥೆ, ಹೊಸ ಸ್ವರೂಪದ ಐಪ್ಯಾಡ್‌ಗಳನ್ನು ಆ್ಯಪಲ್‌ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಎಲ್ಲ ಉತ್ಪನ್ನಗಳು, ಸೇವೆಗಳು ಮಾರುಕಟ್ಟೆಯಲ್ಲಿ ಯಶಸ್ಸು ಕಂಡರೂ, ಮುಂದಿನ ಒಂದು ಅಥವಾ ಎರಡು ವರ್ಷದ ಅವಧಿಯಲ್ಲಿ ಐಫೋನ್‌ಗೆ ಸರಿಸಾಟಿಯಾದ ಪ್ರಭಾವವನ್ನು ಅವು ಬೀರುವುದಿಲ್ಲ. ಸದ್ಯದ ಮಟ್ಟಿಗೆ ಐಫೋನ್‌ಗಳು ಆ್ಯಪಲ್‌ನ ಹೃದಯವಿದ್ದಂತೆ ಎಂದು ಅವರು ವಿವರಿಸುತ್ತಾರೆ.

ಈ ಕಾರಣದಿಂದ, ಷೇರು ಮಾರುಕಟ್ಟೆಯ ಹೃದಯ ಕೂಡ ಐಫೋನ್‌ಗಳೇ ಆಗಿವೆ. ಏಕೆಂದರೆ, ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಆ್ಯಪಲ್‌ ಜಗತ್ತಿನ ಅತಿ ದೊಡ್ಡ ಕಂಪೆನಿ. ಷೇರು ಮಾರುಕಟ್ಟೆ ಉತ್ಸಾಹದಿಂದ ವರ್ತಿಸದೇ ಇದ್ದಾಗಲೂ ಆ್ಯಪಲ್‌ನ ಷೇರುಗಳ ಮೌಲ್ಯ ಹೆಚ್ಚುತ್ತಿದೆ. ಹಾಗಾಗಿ, ಸ್ಟಾಂಡರ್ಡ್‌ ಅಂಡ್‌ ಪೂರ್‌ ಸಂಸ್ಥೆಯ ಸೂಚ್ಯಂಕ ಈಚೆಗೆ ಏರಿಕೆ ಕಂಡಿದ್ದರಲ್ಲಿ ಶೇಕಡ 18ರಷ್ಟು ಪಾಲು ಆ್ಯಪಲ್‌ ಕಂಪೆನಿಯದ್ದಾಗಿತ್ತು ಎಂದು ಬೆಸ್ಪೋಕ್‌ ಬಂಡವಾಳ ಸಮೂಹದ ಸಹ ಸಂಸ್ಥಾಪಕ ಪಾಲ್‌ ಹಿಕ್ಕಿ ಹೇಳುತ್ತಾರೆ.

ಐಫೋನ್‌ಗಳನ್ನು ಬೇರೆ ದೇಶದಲ್ಲಿ ಉತ್ಪಾದಿಸಿ, ಜಗತ್ತಿನ ಎಲ್ಲೆಡೆ ಮಾರಾಟ ಮಾಡುವ ಕಾರಣ, ಪೂರ್ವ ಏಷ್ಯಾ ಸೇರಿದಂತೆ ಜಗತ್ತಿನ ಬೇರೆ ಬೇರೆ ಭಾಗಗಳ ಆರ್ಥಿಕ ವ್ಯವಸ್ಥೆಗೆ ಹುರುಪು ನೀಡುವ ಕೆಲಸವನ್ನು ಈ ಸ್ಮಾರ್ಟ್‌ಫೋನ್‌ ಮಾಡುತ್ತಿದೆ ಎಂದು ಫೆರೋಲಿ ಅಭಿಪ್ರಾಯಪಡುತ್ತಾರೆ. ಜನರಲ್‌ ಮೋಟಾರ್ಸ್‌ ಕಂಪೆನಿ ನಿರ್ದಿಷ್ಟ ತ್ರೈಮಾಸಿಕದಲ್ಲಿ ಉತ್ತಮ ವಹಿವಾಟು ನಡೆಸಿದಂತಲ್ಲ ಆ್ಯಪಲ್‌ ವ್ಯವಹಾರ.

ಆ್ಯಪಲ್‌ನ ವಹಿವಾಟು ಹೆಚ್ಚಾದಂತೆ ಅಮೆರಿಕದ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ ಎಂದಲ್ಲ. ನಾವೀಗ ಬಾಳುತ್ತಿರುವುದು ತೀರಾ ಸಂಕೀರ್ಣವಾದ ಜಗತ್ತಿನಲ್ಲಿ. ಆ ನಿಟ್ಟಿನಲ್ಲಿ ನೋಡಿದರೆ, ಸಂಕೀರ್ಣ ಜಗತ್ತಿನ ಒಂದು ಪ್ರತಿನಿಧಿಯಂತೆ ಆ್ಯಪಲ್‌ ಕಾಣುತ್ತದೆ ಎಂದು ಫೆರೋಲಿ ಹೇಳುತ್ತಾರೆ. ಅಮೆರಿಕದಲ್ಲಿ ಆ್ಯಪಲ್‌ನ ಪ್ರಭಾವ ದಟ್ಟವಾಗಿದೆ. ಕಳೆದ ತಿಂಗಳು ಎಲೆಕ್ಟ್ರಾನಿಕ್‌ ಮತ್ತು ಗೃಹೋಪಯೋಗಿ ಮಾರುಕಟ್ಟೆಯು ಶೇ 3.4ರಷ್ಟು ಬೆಳವಣಿಗೆ ಕಂಡಿತು. ಆದರೆ ಇದೇ ಅವಧಿಯಲ್ಲಿ ಬಟ್ಟೆ ವ್ಯಾಪಾರ ಶೇ 1.2ರಷ್ಟು ಕುಸಿಯಿತು ಎಂದು ಅಮೆರಿಕದ ವಾಣಿಜ್ಯ ಇಲಾಖೆಯ ಅಂಕಿ–ಅಂಶಗಳು ಹೇಳುತ್ತವೆ.

‘ಜನ ಒಂದು ಹಂತದ ಮಟ್ಟಿಗೆ ಪ್ರತಿಷ್ಠೆಯ ಸಂಕೇತವಾಗಿ ಐಫೋನ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಆ ರೀತಿಯಲ್ಲಿ ಬಟ್ಟೆ ಖರೀದಿಸುತ್ತಿಲ್ಲ’ ಎಂದು ಫೆರೋಲಿ ಹೇಳಿದ್ದಾರೆ. ರಜಾ ಕಾಲ ಮತ್ತು ಶಾಪಿಂಗ್‌ ಕಾಲ ಹತ್ತಿರ ಬರುತ್ತಿದೆ. ಐಫೋನ್‌ಗಳು ಅಂಗಡಿಯಿಂದ ಹಾರಿ ಗ್ರಾಹಕರ ಕಿಸೆಗೆ ಬೀಳುತ್ತವೆ. ಈ ಮೂಲಕ ಆ್ಯಪಲ್‌ ಕಂಪೆನಿ ಜಗತ್ತು ಮುನ್ನಡೆಯುವಂತೆ ನೋಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT