ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಯಾಗೆ ಅಕ್ಕನ ಶಹಬ್ಬಾಸ್‌ಗಿರಿ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಿರ್ದೇಶಕಿ ಪೂಜಾ ಭಟ್, ತಂಗಿ ಅಲಿಯಾ ಭಟ್‌ ಚಿತ್ರರಂಗದಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೂಕ್ತ ಸಂದರ್ಭ ಬಂದಾಗ ಅವರು ತಂಗಿಗಾಗಿಯೇ ಒಂದು ಚಿತ್ರವನ್ನು ನಿರ್ಮಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

‘ಚಿಕ್ಕವಳಿದ್ದಾಗಿನಿಂದಲೂ ಅಲಿಯಾ ನಟಿಯಾಗುವ ಕನಸು ಕಂಡಿದ್ದಳು. ಮುಂದೆ ತಾನು ಯಾವ ವೃತ್ತಿಯಲ್ಲಿ ಮುಂದುವರಿಯಬೇಕು ಎಂಬುದರ ಬಗ್ಗೆ ಅವಳ ನಿರ್ಧಾರ ಸ್ಪಷ್ಟವಾಗಿತ್ತು. ಅಲಿಯಾಳನ್ನು ಈಗ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೆ ನನಗೆ ತುಂಬ ಸಂತಸವಾಗುತ್ತದೆ. ಚಿತ್ರದಿಂದ ಚಿತ್ರಕ್ಕೆ ಆಕೆಯ ಅಭಿನಯ ಸಾಮರ್ಥ್ಯ ಪಕ್ವಗೊಳ್ಳುತ್ತಿದೆ. ಅವಳು ನನ್ನ ಮುದ್ದಿನ ಮಗಳಿದ್ದಂತೆ. ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ತಮ್ಮ ಮಲ ಸಹೋದರಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ ಪೂಜಾ.

‘ಅಲಿಯಾ ಭಟ್‌ಗಾಗಿ ನಾನೊಂದು ಸಿನಿಮಾ ಮಾಡಬೇಕು ಎಂದು ಅನೇಕರು ಬಯಸುವುದು ಸಹಜ. ಆದರೆ, ನಮ್ಮ ಕುಟುಂಬದ ಯಾರೊಬ್ಬರಿಗೂ ಈಗಾಗಲೇ ಜನಪ್ರಿಯತೆ ಗಳಿಸಿರುವ ನಟರ ತಾರಾಪಟ್ಟವನ್ನು ಬಳಸಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳುವ ಉದ್ದೇಶ ಇಲ್ಲ’ ಎಂದಿದ್ದಾರೆ ಪೂಜಾ.

‘ಜಿಸ್ಮ್‌’ ನಿರ್ದೇಶಕಿ ಪೂಜಾ, ಅಲಿಯಾ ಭಟ್‌ಗೆ ಸಿಗುತ್ತಿರುವ ಯಶಸ್ಸನ್ನು ಕಂಡು ಪುಳಕಿತಗೊಂಡಿರುವುದಷ್ಟೇ ಅಲ್ಲದೆ ಆಕೆಯ ಯಶಸ್ಸನ್ನು ತಾವು 1990ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಸಿಕ್ಕ ಗೆಲುವಿನೊಂದಿಗೆ ತುಲನೆ ಮಾಡಿ ನೋಡಿದ್ದಾರೆ.

‘21ರ ಹರೆಯದ ಅಲಿಯಾ ಒಂದರ ಹಿಂದೆ ಒಂದರಂತೆ ಹಿಟ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಆಕೆಯ ಸರಣಿ ಗೆಲುವುಗಳು ನನಗೆ ನಾನು ಚಿತ್ರರಂಗಕ್ಕೆ ಕಾಲಿಟ್ಟ ಸಮಯವನ್ನು ನೆನಪಿಸುತ್ತಿವೆ. ನಾನು ನಟಿಯಾಗಿ ಚಿತ್ರರಂಗ ಪ್ರವೇಶಿಸಿದಾಗ ಸತತವಾಗಿ ಮೂರು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದೆ. ‘ಡ್ಯಾಡಿ’, ‘ದಿಲ್‌ ಹೈ ಕಿ ಮಾನ್ತಾ ನಹೀ’ ಮತ್ತು ‘ಸಡಕ್‌’ ಚಿತ್ರಗಳು ನನಗೆ ಹೆಚ್ಚು ಹೆಸರು ತಂದುಕೊಟ್ಟವು’ ಎಂದಿದ್ದಾರೆ 42 ವರ್ಷದ ಪೂಜಾ ಭಟ್‌.

ಸನ್ನಿ ಲಿಯಾನ್‌ ನಟಿಸಿದ್ದ ‘ಜಿಸ್ಮ್‌ 2’ ಚಿತ್ರವನ್ನು ಪೂಜಾ ಭಟ್‌ ನಿರ್ದೇಶಿಸಿದ್ದರು. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಅಷ್ಟೇನೂ ಸದ್ದು ಮಾಡಿರಲಿಲ್ಲ. ಪೂಜಾ ಈಗ ಸಿನಿಮಾ ನಿರ್ದೇಶನಕ್ಕಿಂತ ಹೆಚ್ಚಾಗಿ, ಉತ್ತಮ ಪ್ರತಿಭೆಗಳಿಗೆ ಅವಕಾಶ ನೀಡುವ ಚಿಂತನೆಯಲ್ಲಿದ್ದಾರೆ.

‘ಜಿಸ್ಮ್‌ 2 ಚಿತ್ರದ ನಂತರ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಉತ್ತಮ ಕಲಾವಿದರು, ಒಳ್ಳೆ ಕತೆಯ ಮೇಲೆ ಹಣ ಹೂಡಿಕೆ ಮಾಡುವ ನಿರ್ಧಾರ ತಳೆದಿದ್ದೇನೆ. ‘ಶೈತಾನ್‌’, ‘ಹೇಟ್‌ ಸ್ಟೋರಿ’ ಚಿತ್ರದಲ್ಲಿ ನಟಿಸಿರುವ ಗುಲ್ಶನ್‌ ದೇವಯ್ಯ ಅತ್ಯುತ್ತಮ ಪ್ರತಿಭೆ. ಅದನ್ನು ನಾನು ಅವರಲ್ಲಿ ಗುರ್ತಿಸಿದ್ದೇನೆ. ಈ ಒಂದು ಕಾರಣದಿಂದಲೇ ನಾನು ಆತನಿಗೆ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ನೀಡುತ್ತಿದ್ದೇನೆ. ನಿರ್ದೇಶನಕ್ಕಿಂತಲೂ ಇದು ನನಗೆ ಹೆಚ್ಚು ಖುಷಿ ಕೊಡುತ್ತದೆ’ ಎಂದಿದ್ದಾರೆ ಪೂಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT